ಕೋವಿಡ್‌ ಲಾಕ್ಡೌನ್‌ ಪ್ಯಾಕೇಜ್‌ : ಗಡಿನಾಡ ಕಲಾವಿದರು ಅತಂತ್ರ!

  • ಕೊರೋನಾ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಕರ್ನಾ​ಟಕ ರಾಜ್ಯ ಸರ್ಕಾರ ಕಲಾವಿದರಿಗೆ ತಲಾ 3,000 ರು.ಗಳ ಪರಿಹಾರ
  •   ಬಡ ಕಲಾವಿದರು ಆನ್‌ಲೈನ್‌ ಮೂಲಕ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಅರ್ಜಿ ಸಲ್ಲಿಸಿ ಪಡೆಯಬೇಕು
  • ಕಾಸರಗೋಡು ಜಿಲ್ಲೆಯ ಕಲಾವಿದರು ಪರಿಹಾರ ಪ್ಯಾಕೇಜ್‌ನಿಂದ ವಂಚಿತ
No Covid Relief Packages For Border District kasaragodu Artists snr

ವರದಿ :  ಆತ್ಮಭೂಷಣ್‌

 ಮಂಗಳೂರು (ಜೂ.07):  ಕೊರೋನಾ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಕರ್ನಾ​ಟಕ ರಾಜ್ಯ ಸರ್ಕಾರ ಕಲಾವಿದರಿಗೆ ತಲಾ 3,000 ರು.ಗಳ ಪರಿಹಾರ ಪ್ಯಾಕೇಜ್‌ ಪ್ರಕಟಿಸಿದೆ. ಇದನ್ನು ಪಡೆಯಲು ಬಡ ಕಲಾವಿದರು ಆನ್‌ಲೈನ್‌ ಮೂಲಕ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಅರ್ಜಿ ಸಲ್ಲಿಸಬೇಕು. ಆದರೆ ಗಡಿನಾಡು ಕಾಸರಗೋಡು ಜಿಲ್ಲೆಯ ಕಲಾವಿದರು ಪರಿಹಾರ ಪ್ಯಾಕೇಜ್‌ನಿಂದ ವಂಚಿತಗೊಂಡು ಅತಂತ್ರರಾಗಿದ್ದಾರೆ.

ಕಾಸರಗೋಡು ಜಿಲ್ಲೆಯಲ್ಲಿ ಸುಮಾರು 200ಕ್ಕೂ ಅಧಿಕ ಯಕ್ಷಗಾನ ಹಾಗೂ ರಂಗಭೂಮಿಯ ವೃತ್ತಿಪರ ಕಲಾವಿದರಿದ್ದಾರೆ. ಕರ್ನಾಟಕದ ಸೇವಾಸಿಂಧು ಆ್ಯಪ್‌ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಮುಂದಾದಾಗ ಅವರಿಗೆ ತಾವು ಅತಂತ್ರರಾಗಿರುವುದು ಗೊತ್ತಾಗಿದೆ. ಅರ್ಜಿ ಸಲ್ಲಿಕೆ ವೇಳೆ ಯಾವ ಜಿಲ್ಲೆಯವರು ಎಂಬುದನ್ನು ನಮೂದಿಸಬೇಕು. ಕಾಸರಗೋಡು ಎಂದು ನಮೂದಿಸಲು ಅದರಲ್ಲಿ ಆಯ್ಕೆಗಳಿಲ್ಲ. ಒಂದು ವೇಳೆ ದ.ಕ. ಜಿಲ್ಲೆ ಎಂದು ನಮೂದಿಸಿದರೆ, ಆಧಾರ್‌ ಕಾರ್ಡ್‌ ಅಪ್‌ಲೋಡ್‌ ಮಾಡುವಾಗ ಅದರಲ್ಲಿ ಕಾಸರಗೋಡು ವಿಳಾಸ ಇರುತ್ತದೆ. ಹಾಗಾಗಿ ಹೇಗೆ ಮಾಡಿದರೂ ಕಾಸರಗೋಡಿನ ಕಲಾವಿದರಿಗೆ ಪರಿಹಾರ ಸಿಕ್ಕಿಲ್ಲ.

ಸರ್ಕಾರದಿಂದ 2 ನೇ ಪ್ಯಾಕೇಜ್ ಘೋಷಣೆ, ಯಾರ್ಯಾರಿಗೆ ಎಷ್ಟೆಷ್ಟು ನೆರವು..? ಇಲ್ಲಿದೆ ಡಿಟೇಲ್ಸ್..

ಕಳೆದ ಬಾರಿ ಸಲೀಸು:

ಅತ್ತ ಕೇರಳ ಸರ್ಕಾರವೂ ಗಡಿನಾಡಿನಲ್ಲಿರುವ ಕಲಾವಿದರಿಗೆ ಯಾವುದೇ ಕೋವಿಡ್‌ ಪರಿಹಾರ ಪ್ಯಾಕೇಜ್‌ ಕಳೆದ ವರ್ಷವೂ ಪ್ರಕಟಿಸಿಲ್ಲ. ಕಳೆದ ಬಾರಿ ಕರ್ನಾಟಕ ಸರ್ಕಾರ ಪ್ರಕಟಿಸಿದ ತಲಾ 2 ಸಾವಿರ ರು.ಗಳ ಪರಿಹಾರ ಪ್ಯಾಕೇಜ್‌ನ್ನು ಸುಮಾರು 20 ಮಂದಿ ಕಲಾವಿದರು ಪಡೆದುಕೊಂಡಿದ್ದರು. ಆ ಪ್ಯಾಕೇಜ್‌ ಯಕ್ಷಗಾನ ಬಯಲಾಟ ಅಕಾಡೆಮಿ ಮೂಲಕ ನೇರವಾಗಿ ಕಲಾವಿದರಿಗೆ ಹಂಚಿಕೆಯಾಗಿತ್ತು. ಆದರೆ ಈ ಬಾರಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಆನ್‌ಲೈನ್‌ ಮೂಲಕ ನೇರ ಪಾವತಿಯಾಗುವುದರಿಂದ ಗಡಿನಾಡ ಕಲಾವಿದರು ಅರ್ಜಿ ಸಲ್ಲಿಸುವ ಅವಕಾಶವನ್ನೇ ಕಳೆದುಕೊಂಡಿದ್ದಾರೆ.

ವಯೋಮಿತಿ ಸಂಕಷ್ಟ:

ಈ ಬಾರಿ ಅರ್ಜಿ ಸಲ್ಲಿಸಲು ಕಲಾವಿದರಿಗೆ 35 ವರ್ಷದ ವಯೋಮಿತಿ ವಿಧಿಸಿರುವುದು ಕೂಡ ಬಡ ಕಲಾವಿದರ ಸಂಕಷ್ಟಕ್ಕೆ ಕಾರಣವಾಗಿದೆ. ಕಲಾವಿದರಿಗೆ ಪರಿಹಾರ ನೀಡುವಾಗ ವಯಸ್ಸಿನ ಮಾನದಂಡ ನಿಗದಿಪಡಿಸಿರುವುದಕ್ಕೆ ಕಲಾವಿದರು ಹಾಗೂ ಕಲಾಸಂಘಟನೆಗಳಿಂದಲೇ ವಿರೋಧ ವ್ಯಕ್ತವಾಗಿದೆ. ಈ ಮಾನದಂಡದಿಂದಾಗಿ ಬಡ ಕಲಾವಿದರಿಗೆ ಅರ್ಹತೆ ಇದ್ದರೂ ಪರಿಹಾರ ಪಡೆದುಕೊಳ್ಳದಂತಾಗಿದೆ ಎಂದು ಕಲಾವಿದರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಗಡಿನಾಡ ಕಲಾವಿದರಿಗೆ ನಿವೃತ್ತಿ ವೇತನ, ಅಕಾಡೆಮಿಗಳಲ್ಲಿ ಸದಸ್ಯತ್ವ, ಪ್ರಶಸ್ತಿಗಳಿಗೆ ಪರಿಗಣಿಸುತ್ತಿದೆ. ಆದರೆ ಪರಿಹಾರ ನೀಡುವ ವಿಚಾರದಲ್ಲಿ ಅಡ್ಡಗೋಡೆ ತಂದಿರುವುದು ಕಲಾವಿದರಿಗೆ ಅರ್ಹತೆ ಇದ್ದರೂ ಅವಕಾಶ ಇಲ್ಲ ಎಂಬಂತಾಗಿದೆ. ಈ ಹಿನ್ನೆಲೆಯಲ್ಲಿ ದ.ಕ. ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲು ನಿರ್ಧರಿಸಲಾಗಿದೆ.

-ಸಿರಿಬಾಗಿಲು ರಾಮಕೃಷ್ಣ ಮಯ್ಯ, ಕಾಸರಗೋಡಿನ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ ಸಂಚಾಲಕ, ಯಕ್ಷಗಾನ ಭಾಗವತ

ಹಾರ್ಡ್‌ಕಾಪಿ ಅರ್ಜಿ ನೀಡಬೇಕು ಅಥವಾ ಪೋರ್ಟಲ್‌ನಲ್ಲಿ ತಿದ್ದುಪಡಿ ಮಾಡಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಬೇಕು. ಗಡಿನಾಡಿನ ಕಲಾವಿದರ ಅರ್ಜಿ ಸ್ವೀಕರಿಸುವ ಜೊತೆಗೆ ಪರಿಹಾರ ಸಿಗುವಂತೆ ಸರ್ಕಾರ ವ್ಯವಸ್ಥೆ ಮಾಡಬೇಕು. ಇದರಲ್ಲಿರುವ ತಾಂತ್ರಿಕ ತೊಡಗು ನಿವಾರಿಸಲು ಕ್ರಮ ಕೈಗೊಳ್ಳಬೇಕು.

-ಯೋಗೀಶ್‌ ರಾವ್‌ ಚಿಗುರುಪಾದೆ, ಸದಸ್ಯ, ಯಕ್ಷಗಾನ ಬಯಲಾಟ ಅಕಾಡೆಮಿ ಕರ್ನಾಟಕ

ಈಗಾಗಲೇ ಕೋವಿಡ್‌ ಪರಿಹಾರ ಕೋರಿ 24 ಸಾವಿರ ಕಲಾವಿದರ ಅರ್ಜಿ ಸಲ್ಲಿಕೆಯಾಗಿದೆ. ದ.ಕ.ಜಿಲ್ಲೆಯಿಂದ 1,279 ಅರ್ಜಿ ಸಲ್ಲಿಕೆಯಾಗಿದೆ. ಸರ್ಕಾರ 16 ಸಾವಿರ ಕಲಾವಿದರಿಗೆ ಪರಿಹಾರ ನೀಡುವುದಾಗಿ ಪ್ರಕಟಿಸಿತ್ತು. ಇದರಲ್ಲಿ ಗಡಿನಾಡ ಕಲಾವಿದರು ಬೇರೆ ರಾಜ್ಯದಲ್ಲಿ ಇರುವುದರಿಂದ ಅಲ್ಲಿನ ಜಿಲ್ಲೆಯ ಆಯ್ಕೆಗೆ ಅವಕಾಶ ಇರುವುದಿಲ್ಲ. ಅರ್ಜಿ ಸಲ್ಲಿಕೆ ಅವಧಿ ಜೂ.5ಕ್ಕೆ ಕೊನೆಗೊಂಡಿದೆ.

-ರಾಜೇಶ್‌, ಸಹಾಯಕ ನಿರ್ದೇಶಕ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ದ.ಕ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

Latest Videos
Follow Us:
Download App:
  • android
  • ios