ಕೊರೋನಾ ಮಕ್ಕಳ ಪ್ರಾಣಕ್ಕೇನೂ ಕುತ್ತು ತಾರದು ಎಂಬುದು 2ನೇ ಅಲೆಯಲ್ಲೂ ಸಾಬೀತು ದ.ಕ. ಜಿಲ್ಲೆಯೊಂದರಲ್ಲೇ 0-20 ವರ್ಷದೊಳಗಿನ 7 ಸಾವಿರಕ್ಕೂ ಹೆಚ್ಚು ಮಂದಿ ಸೋಂಕಿತರು  ಈವರೆಗೆ 20 ವರ್ಷದ ಒಳಗಿನವರಲ್ಲಿ ಒಂದೇ ಒಂದು ಸಾವು ಸಂಭವಿಸಿಲ್ಲ

ವರದಿ: ಸಂದೀಪ್‌ ವಾಗ್ಲೆ

ಮಂಗಳೂರು (ಜೂ.07):
ರಾಜ್ಯದಲ್ಲಿ ಕೊರೋನಾ ಮಕ್ಕಳ ಪ್ರಾಣಕ್ಕೇನೂ ಕುತ್ತು ತಾರದು ಎಂಬುದು 2ನೇ ಅಲೆಯಲ್ಲೂ ಸಾಬೀತಾಗಿದೆ. ದ.ಕ. ಜಿಲ್ಲೆಯೊಂದರಲ್ಲೇ 0-20 ವರ್ಷದೊಳಗಿನ 7 ಸಾವಿರಕ್ಕೂ ಹೆಚ್ಚು ಮಂದಿ ಸೋಂಕಿತರಾಗಿದ್ದರೂ ಈವರೆಗೆ ಒಂದೇ ಒಂದು ಸಾವು ಸಂಭವಿಸಿಲ್ಲ.

ದ.ಕ.ಜಿಲ್ಲೆಯಲ್ಲಿ ಮಾ.1ರಿಂದ ಜೂ.5ರವರೆಗೆ 45,030 ಒಟ್ಟು ಸೋಂಕಿತರ ಪೈಕಿ 30 ವರ್ಷದೊಳಗಿನ 16,440 ಮಂದಿಗೆ ಸೋಂಕು ತಗುಲಿತ್ತು. ಯುವ ಸಮೂಹ ಇಷ್ಟುದೊಡ್ಡ ಸಂಖ್ಯೆಯಲ್ಲಿ ಸೋಂಕಿತರಾಗಿದ್ದರೂ ಇದುವರೆಗೆ ಮೃತಪಟ್ಟಿದ್ದು ಒಬ್ಬರು ಮಾತ್ರ. ಅಂದರೆ 30 ವರ್ಷದೊಳಗಿನ ಡೆತ್‌ ರೇಟ್‌ ಇರುವುದು ಕೇವಲ ಶೇ.0.006. ಇನ್ನು ವಿದ್ಯಾರ್ಥಿಗಳ ವಯೋಮಾನದಲ್ಲಿ 20 ವರ್ಷದೊಳಗಿನ ಒಟ್ಟು 7,232 ಸೋಂಕಿತರ ಪೈಕಿ ಇದುವರೆಗೂ ಒಂದೇ ಒಂದು ಸಾವು ಕೂಡ ಸಂಭವಿಸಿಲ್ಲದಿರುವುದು ಗಮನಾರ್ಹ. ಪ್ರಸ್ತುತ ಜೂ.5ಕ್ಕೆ ಅನ್ವಯಿಸಿ ಜಿಲ್ಲೆಯಲ್ಲಿ 20 ವರ್ಷದೊಳಗಿನ 1318 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, 20ರಿಂದ 30 ವರ್ಷದೊಳಗಿನ 2,663 ಮಂದಿ ಚಿಕಿತ್ಸೆಯಲ್ಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಫಸ್ಟ್ ಡೋಸ್ ಒಂದು, ಸೆಕೆಂಡ್ ಡೋಸ್ ಇನ್ನೊಂದು ಲಸಿಕೆ ಪಡೆದುಕೊಳ್ಳಬಹುದೆ?

ಮೊದಲ ಅಲೆಯಲ್ಲೂ ಕಡಿಮೆ ಸಾವು: ದ.ಕ. ಜಿಲ್ಲೆಯಲ್ಲಿ ಮೊದಲ ಕೊರೋನಾ ಅಲೆಯಲ್ಲಿ 2020ರ ನ.19ರವರೆಗೆ ಮೃತಪಟ್ಟಒಟ್ಟು 702 ಮಂದಿಯಲ್ಲಿ 5ರಿಂದ 20 ವರ್ಷದೊಳಗಿನವರು ಇಬ್ಬರು ಮಾತ್ರ ಮೃತಪಟ್ಟಿದ್ದರು. 2ನೇ ಅಲೆಯಲ್ಲಂತೂ ಜೂ.5ರವರೆಗೆ ಒಟ್ಟು 205 ಸಾವಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳ ವಯೋಮಾನದವರು ಯಾರೂ ಇಲ್ಲದಿರುವುದು ವಿಶೇಷ.

ಮಕ್ಕಳು, ಯುವ ಸಮೂಹದ ಪ್ರಾಣಕ್ಕೆ ಕೊರೋನಾದಿಂದ ಅಷ್ಟಾಗಿ ತೊಂದರೆಯಾಗಿದ್ದು ಕಂಡುಬಂದಿಲ್ಲ. ಸಹಜವಾಗಿ ಈ ವಯೋಮಾನದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗಿರುವುದು, ಕೊರೋನಾ ಕಾಲದಲ್ಲಿ ಮಕ್ಕಳು ಹೊರಗಿನ ಸಂಪರ್ಕಕ್ಕೆ ಬಾರದೆ ಇರುವುದು ಕೂಡ ಇದಕ್ಕೆ ಕಾರಣವಾಗಿದೆ.

- ಡಾ.ಅಶೋಕ್‌, ಕೋವಿಡ್‌-19 ಜಿಲ್ಲಾ ನೋಡಲ್‌ ಅಧಿಕಾರಿ

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona