ಅವಳೆ ನನ್ನ ಕಾಪಾಡಿದ್ದು : ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ
ನನಗೆ ಈ ವಿಚಾರದಲ್ಲಿ ಯಾವುದೇ ಸಂಪರ್ಕ ಇಲ್ಲ. ನನ್ನನ್ನ ಇದರಿಂದ ಕಾಪಾಡಿದ್ದು ಅವಳೆ ಎಂದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ. ಐಎಂಎ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಈ ಹೇಳಿಕೆ ನೀಡಿದ್ದಾರೆ.
ರಾಮನಗರ (ಫೆ.22): ಬಹುಕೋಟಿ ವಂಚಿಸಿರುವ ಐಎಂಎ (ಐ ಮಾನಿಟರಿ ಅಡ್ವೈಸರಿ) ಹಗರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ, ನನ್ನ ಅವಧಿಯಲ್ಲೇ ಹಗರಣ ತನಿಖೆಗೆ ಆದೇಶಿಸಿ ಕಠಿಣ ಕ್ರಮ ತೆಗೆದುಕೊಳ್ಳಲು ಹೇಳಿದ ಮೇಲೆ ಪಾತ್ರ ಏನಿರುತ್ತದೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದರು.
ನಗರದ ಎಂ.ಜಿ. ರಸ್ತೆಯ ಶ್ರೀಮತ್ ಕನ್ನಿಕಾ ಪರಮೇಶ್ವರಿ ಅಮ್ಮನವರ ದೇವಾಲಯದಲ್ಲಿ ಶತಮಾನೋತ್ಸವ ಕಾರ್ಯಕ್ರಮ, ಕುಂಭಾಭಿಷೇಕ ಕಾರ್ಯಕ್ರಮದ ಅಂಗವಾಗಿ ಪತ್ನಿ ಅನಿತಾ ಅವರೊಂದಿಗೆ ಮಿನಿ ರಥಕ್ಕೆ ಚಾಲನೆ ನೀಡಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಕುಮಾರಸ್ವಾಮಿ ಹೆಸರಿನಲ್ಲಿ ಕಲೆಕ್ಷನ್ ಆಗಿದೆ, ಆದರೆ, ಆ ಹಣ ಅವರಿಗೆ ತಲುಪಿಲ್ಲ ಎಂದು ಹೇಳಲಾಗಿದೆ. ನನಗೂ ಅದಕ್ಕೂ ಸಂಬಂಧ ಏನು. ಅದ್ಯಾರು ಕೊಟ್ಟರು, ಯಾರು ತೆಗದುಕೊಂಡರು ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲಿ. ಮುಖ್ಯಮಂತ್ರಿಯಾಗಿ, ಶಾಸಕನಾಗಿ ಅಥವಾ ರಾಜಕೀಯಕ್ಕೆ ಬಂದ ನಂತರ ಜನಸಾಮಾನ್ಯರಿಗೆ ದ್ರೋಹ ಮಾಡುವ ಅಥವಾ ಜನರ ಹಣ ಲೂಟಿ ಮಾಡುವವರಿಗೆ ರಕ್ಷಣೆ ಕೊಟ್ಟವನಲ್ಲ ಎಂದರು.
'ಸಿದ್ದು, ಹೆಚ್‌ಡಿಕೆಯಿಂದ ಮುಸ್ಲಿಮರ ಓಲೈಕೆಗಾಗಿ ತುಷ್ಟೀಕರಣ ರಾಜಕಾರಣ' ...
ಮುಖ್ಯಮಂತ್ರಿ ಆಗಿದ್ದಾಗ, ಈ ಪ್ರಕರಣದಲ್ಲಿ ರಾಜ್ಯ ಸರ್ಕಾರದ ಅಧಿಕಾರಿಗಳು ಸರಿಯಾದ ತನಿಖೆ ನಡೆಸುತ್ತಿಲ್ಲ. ಸಾರ್ವಜನಿಕರ ಹಣ ದುರ್ಬಳಕೆ ಆಗುತ್ತಿದೆ ಎಂದು ಗೊತ್ತಾಯಿತು. ಆಗ ಡಿಜಿಪಿಯವರ ಗಮನ ಸೆಳೆದ ನಂತರ ಗಂಭೀರವಾಗಿ ತನಿಖೆ ಆರಂಭಗೊಂಡಿತು. ಆ ತನಿಖೆ ಪ್ರಾರಂಭವಾದ ಕೂಡಲೇ ಆ ವ್ಯಕ್ತಿ (ಐಎಂಎ ಮಾಲೀಕ) ದುಬೈಗೆ ಪರಾರಿಯಾದ. ಆತ ಎಲ್ಲಿದ್ದಾನೆಂದು ಟ್ರೇಸ್ ಮಾಡಿದ್ದು, ನನ್ನ ಸರ್ಕಾರದಲ್ಲೇ, ದುಬೈನಿಂದ ದೆಹಲಿಗೆ ಬಂದ ಆತನನ್ನು ಇ.ಡಿ ಅಧಿಕಾರಿಗಳು ವಶಕ್ಕೆ ಪಡೆದರು. ಅಲ್ಲಿಂದ ತನಿಖೆ ಆರಂಭವಾಗಿದೆ. ಇದು ಎಲ್ಲಿಗೆ ಹೋಗಿ ನಿಲ್ಲುತ್ತದೆಯೋ ನೋಡೋಣ ಎಂದು ಹೇಳಿದರು.
ಕನ್ನಿಕಾಪರಮೇಶ್ವರಿ ಅಮ್ಮನವರೇ ಕಾಪಾಡಿದರು: ಅದ್ಯಾರೊ ಪೊಲೀಸರಿಗೆ ನೀಡಿರುವ ಹೇಳಿಕೆಯಲ್ಲಿ ಕುಮಾರಸ್ವಾಮಿ ಹೆಸರಲ್ಲಿ ದುಡ್ಡು ತಗೊಂಡಿದ್ದಾರೆ. ಆದರೆ, ಆ ಹಣ ಕುಮಾರಸ್ವಾಮಿಗೆ ತಲುಪಿಲ್ಲ ಎಂದು ಹೇಳಿದ್ದಾನೆ. ವಿಷಯ ಅಲ್ಲಿಗೆ ನಿಂತಿದೆ. ಆ ಕನ್ನಿಕಾಪರಮೇಶ್ವರಿಯೇ ನನ್ನನ್ನು ಕಾಪಾಡಿದ್ದಾಳೆ ಎಂದರು.
ಒಕ್ಕಲಿಗರಿಗೂ ಮೀಸಲಾತಿ ಕೊಡುವಂತೆ ಕೂಗು ಎದ್ದಿರುವ ಬಗ್ಗೆ ಮಾಧ್ಯಮ ಪ್ರತಿನಿಧಿಗಳು ಗಮನ ಸೆಳೆದಾಗ ಪ್ರತಿಕ್ರಿಯಿಸಿದ ಅವರು. ಅದೀಗ ದಾರಿತಪ್ಪಿ ಹೋಗುತ್ತಿರುವ ಸನ್ನಿವೇಶ. ರಾಜಕೀಯವಾಗಿ ಸ್ಥಾನಮಾನ ಪಡೆಯಲು ಒಂದು ವರ್ಗ ಹೊರಟಿದೆ. ಆದರೆ, ನಾನು ಈ ವಿಚಾರದಲ್ಲಿ ಭಾಗಿಯಾವುದಿಲ್ಲ. ಆದರೆ, ವಾಸ್ತವಾಂಶಕ್ಕೆ ಕೆಲವು ತೀರ್ಮಾನಗಳಾಗಬೇಕಾಗಿದೆ ಎಂದರು.
ಒಕ್ಕಲಿಗೆ ಜಾತಿಗೆ ಮೀಸಲಾತಿಯಂತಹ ವಿಷಯಗಳಿಗೆ ಜನರನ್ನು ಇಕ್ಕಟ್ಟಿಗೆ ಸಿಲುಕಿಸಿ ಸಮಾಜದಲ್ಲಿ ಸಂಘರ್ಷಕ್ಕೆ ಎಡೆಮಾಡಿಕೊಡಲು ಹೋಗುವುದಿಲ್ಲ. ಆ ಸಮಯ ಬಂದಾಗ ಚರ್ಚೆ ಮಾಡೋಣ ಎಂದು ಕುಮಾರಸ್ವಾಮಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.