ರಾಜೀನಾಮೆಗೆ ಒತ್ತಡ : ಕಾಂಗ್ರೆಸ್ ಮುಖಂಡೆ ಪದಚ್ಯುತಿಗೆ ವೇದಿಕೆ ಸಜ್ಜು
ಕಾಂಗ್ರೆಸ್ ಮುಖಂಡೆಯೋರ್ವರನ್ನು ಹುದ್ದೆಯಿಂದ ಕೆಳಕ್ಕೆ ಇಳಿಸಲು ಇದೀಗ ಮುಹೂರ್ತ ಫಿಕ್ಸ್ ಆಗಿದೆ. ಪದಚ್ಯುತಿಗೆ ನಿರ್ಧರಿಸಲಾಗಿದೆ.
ಕಾಗತಿ ನಾಗರಾಜಪ್ಪ
ಚಿಕ್ಕಬಳ್ಳಾಪುರ (ಸೆ.24): ಜಿಪಂ ಉಪಾಧ್ಯಕ್ಷೆ ಪಿ. ನಿರ್ಮಲ ಮುನಿರಾಜು ಪದಚ್ಯುತಿಗೆ ಎರಡನೇ ಬಾರಿಗೆ ವೇದಿಕೆ ಸಿದ್ಧವಾಗುತ್ತಿದ್ದು ಅ. 9ರಂದು ಶುಕ್ರವಾರ ಬೆಂಗಳೂರಿನ ಪ್ರಾದೇಶಿಕ ಆಯುಕ್ತರು ಅವಿಶ್ವಾಸ ಮಂಡನೆಗೆ ಜಿಪಂ ಸದಸ್ಯರ ಸಭೆ ಕರೆದಿರುವುದು ಜಿಲ್ಲೆಯ ರಾಜಕೀಯ ವಲಯದಲ್ಲಿ ಸಾಕಷ್ಟುಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.
ಮೊದಲ ಅವಧಿಗೆ 2016ರ ಮೇ ತಿಂಗಳ 7ರಂದು ನಡೆದಿದ್ದ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ಜಿಪಂ ಅಧ್ಯಕ್ಷರಾಗಿ ಪೆರೇಸಂದ್ರದ ಜಿಪಂ ಸದಸ್ಯ ಪಿ.ಎನ್.ಕೇಶವರೆಡ್ಡಿ ಹಾಗೂ ಉಪಾಧ್ಯಕ್ಷರಾಗಿ ಶಿಡ್ಲಘಟ್ಟತಾಲೂಕಿನ ಜಂಗಮಕೋಟೆ ಜಿಪಂ ಸದಸ್ಯೆ ಪಿ. ನಿರ್ಮಲ ಮುನಿರಾಜು ಅವಿರೋಧವಾಗಿ ಆಯ್ಕೆಗೊಂಡಿದ್ದರು.
ಶಿರಾ ಕಾಂಗ್ರೆಸ್ ಅಭ್ಯರ್ಥಿ ಜಯಚಂದ್ರ ವಿರುದ್ಧ ದೂರು ...
ಆದರೆ ಜಿಲ್ಲೆಯಲ್ಲಿ ಬದಲಾದ ರಾಜಕೀಯ ಸನ್ನಿವೇಶಗಳಿಂದ ಕಾಂಗ್ರೆಸ್‌ನ ಒಂದು ಗುಂಪು ಪಿ.ಎನ್.ಕೇಶವರೆಡ್ಡಿ ರಾಜೀನಾಮೆಗೆ ಪಟ್ಟು ಹಿಡಿದು ಹಲವು ಬಾರಿ ಸಾಮಾನ್ಯ ಸಭೆಗಳಿಗೆ ಸದಸ್ಯರು ಬಹಿಷ್ಕರಿಸಿದ್ದರಿಂದ ಕೇಶವರೆಡ್ಡಿ ರಾಜೀನಾಮೆ ನೀಡಿದ್ದರು. ಇದಾದ ಬಳಿಕ 2018ರ ಮಾ. 7ರಂದು ನಡೆದಿದ್ದ ಅಧ್ಯಕ್ಷ ಚುನಾವಣೆಯಲ್ಲಿ ಗೌರಿಬಿದನೂರು ಹೊಸೂರು ಕ್ಷೇತ್ರದ ಜಿಪಂ ಸದಸ್ಯ ಹೆಚ್.ವಿ.ಮಂಜುನಾಥ ಆಯ್ಕೆಗೊಂಡರೂ ಅವರನ್ನು ಪಕ್ಷದ ಹೈಕಮಾಂಡ್ ಒಮ್ಮೆ ರಾಜೀನಾಮೆ ಪಡೆದು ಮತ್ತೆ ಹಿಂಪಡೆದು ಎರಡನೇ ಬಾರಿಗೆ ಕೆಳಗೆ ಇಳಿಸಿ ಪಿ.ಎನ್.ಪ್ರಕಾಶ್‌ರನ್ನು ಅಧ್ಯಕ್ಷರನ್ನಾಗಿ ಮಾಡಲು ಹೊರಟರು ಕಾಂಗ್ರೆಸ್ ಸದಸ್ಯರಾಗಿದ್ದ ಎಂ.ಬಿ.ಚಿಕ್ಕನರಸಿಂಹಯ್ಯ ಪಕ್ಷದ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿ 2019ರ ಅ. 23ರಂದು ಬಹುಮತದೊಂದಿಗೆ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದರು.
ರಾಜೀನಾಮೆ ಕೊಡದ ನಿರ್ಮಲ:
ಈ ಹಿಂದೆಯೆ ಉಪಾಧ್ಯಕ್ಷೆ ನಿರ್ಮಲಗೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಹಲವು ಬಾರಿ ಪಕ್ಷದ ಮುಖಂಡರು ಸೂಚಿಸಿದ್ದರು. ಆದರೆ ಯಾವುದಕ್ಕೂ ಜಗ್ಗದ ನಿರ್ಮಲ ಜಿಪಂ ಉಪಾಧ್ಯಕ್ಷೆಯಾಗಿ ಮುಂದುವರೆದ್ದಾರೆ. ಆದರೆ ಈಗ ಸ್ವಪಕ್ಷಿಯರೇ ನಿರ್ಮಲ ವಿರುದ್ಧ ಅವಿಶ್ವಾಸ ಮಂಡನೆಗೆ ಮುಂದಾಗಿದ್ದು, ಅದಕ್ಕೆ ಪಕ್ಷಬೇಧ ಮರೆತು ಜೆಡಿಎಸ್, ಸಿಪಿಎಂ ಹಾಗೂ ಬಿಜೆಪಿ ಸದಸ್ಯರು ಕೈ ಜೋಡಿಸಿರುವುದರಿಂದ ಅವಿಶ್ವಾಸ ನಿರ್ಣಯ ಸಾಕಷ್ಟುಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ. 28 ಸದಸ್ಯ ಬಲದ ಚಿಕ್ಕಬಳ್ಳಾಪುರ ಜಿಪಂನಲ್ಲಿ ಕಾಂಗ್ರೆಸ್ 21, ಜೆಡಿಎಸ್ 6, ಸಿಪಿಎಂ ಹಾಗೂ ಬಿಜೆಪಿ ತಲಾ 1 ಸದಸ್ಯವನ್ನು ಹೊಂದಿದೆ. ಈಗಾಗಲೇ ನಿರ್ಮಲರನ್ನು ಉಪಾಧ್ಯಕ್ಷ ಸ್ಥಾನದಿಂದ ಕೆಳಗಿಸಲು ಮತ್ತೆ ಜಿಪಂ ಸದಸ್ಯರು ಒಗ್ಗೂಡಿ ತಮ್ಮ ಕಾರ್ಯತಂತ್ರ ಅನುಸರಿಸುತ್ತಿದ್ದು, ಅ. 9ರಂದು ಜಿಪಂ ಉಪಾಧ್ಯಕ್ಷೆ ನಿರ್ಮಲಗೆ ಜಿಪಂ ಉಪಾಧ್ಯಕ್ಷೆ ಉಳಿಯುತ್ತಾ ಅಥವಾ ಉರುಳುತ್ತಾ ಎಂಬುದನ್ನು ಕಾದು ನೋಡಬೇಕಿದೆ.
ಸಚಿವ ಪ್ರಭು ಚವ್ಹಾಣ್ ನಕಲಿ ಜಾತಿ ಪ್ರಮಾಣ ಪತ್ರ ನೀಡಿ ಆಯ್ಕೆ: ಗಂಭೀರ ಆರೋಪ
ಮೊದಲ ಬಾರಿ ಬಚಾವ್ ಆಗಿದ್ದ ನಿರ್ಮಲ
ಈ ಹಿಂದೆ ಮೇ 20ರಂದು ನಿರ್ಮಲ ವಿರುದ್ಧ ಅವಿಶ್ವಾಸ ಮಂಡನೆ ಸಭೆ ಕರೆಯಲಾಗಿತ್ತು. ಆದರೆ ಪಂಚಾಯತ್ ರಾಜ್ಯ ಕಾಯ್ದೆ ಪ್ರಕಾರ ಜಿಪಂ ಅಧ್ಯಕ್ಷರ ಹಾಗೂ ಉಪಾಧ್ಯಕ್ಷರ ವಿರುದ್ಧ ಅವಿಶ್ವಾಸ ಮಂಡನೆಗೆ ಸಂಬಂಧಿಸಿದ ನಿಯಮಗಳು ರಚನೆ ಪ್ರಕ್ರಿಯೆಯಲ್ಲಿ ಇರುವುದರಿಂದ ನಿಯಮಾವಳಿಗಳನ್ನು ಸರ್ಕಾರ ಅನುಮೋದಿಸಬೇಕಿರುವುದರಿಂದ ಸದ್ಯಕ್ಕೆ ಜಿಪಂ ಉಪಾಧ್ಯಕ್ಷೆ ವಿರುದ್ಧ ಅವಿಶ್ವಾಸ ನಿರ್ಣಯ ಕೈಗೊಳ್ಳಲು ಅವಕಾಶ ಇಲ್ಲದ ಕಾರಣ ನೀಡಿ ಪ್ರಾದೇಶಿಕ ಆಯುಕ್ತರು ತಾವೇ ನಿಗದಿಪಡಿಸಿದ್ದ ಅವಿಶ್ವಾಸ ನಿರ್ಣಯ ಸಭೆಯನ್ನು ಮುಂದೂಡಿದ್ದರು. ಈಗ 4 ತಿಂಗಳ ಬಳಿಕ ಮತ್ತೆ ಬೆಂಗಳೂರಿನ ಪ್ರಾದೇಶಿಕ ಆಯುಕ್ತ ನವೀನ್ ರಾಜ್ ಸಿಂಗ್ ಸಭೆ ಕರೆದಿರುವುದು ಸಾಕಷ್ಟುಚರ್ಚೆಗೆ ಗ್ರಾಸವಾಗಿದೆ. ಅದಕ್ಕೂ ಮೊದಲು ಸೆ. 30ಕ್ಕೆ ಜಿಪಂ ಸಾಮಾನ್ಯ ಸಭೆ ನಡೆಯಲಿದೆ.