ರಾಯಚೂರು: ಮಟನ್ ತಿಂದು ಒಂದೇ ಕುಟುಂಬದ ಐವರ ದುರ್ಮರಣ, ಸಾವಿನ ಬಗ್ಗೆ ಈವರೆಗೂ ಸಿಗದ ಸುಳಿವು..!
ರಾಯಚೂರು ಜಿಲ್ಲೆ ಸಿರವಾರ ತಾಲೂಕಿನ ಕಲ್ಲೂರು ಗ್ರಾಮದಲ್ಲಿ ಆ.2 ರಂದು ಒಂದೇ ಕುಟುಂಬದ ನಾಲ್ವರ ಸಾವು ಆಗಿತ್ತು. ಸಾವಿನ ಬಗ್ಗೆ ನಾನಾ ಕಥೆಗಳು ಕೇಳಿಬರುತ್ತಿವೆ. ಘಟನೆ ನಡೆದು 15 ದಿನಗಳು ಕಳೆದಿದೆ. ಆದ್ರೂ ಸಾವಿನ ಬಗ್ಗೆ ಚಿಕ್ಕ ಸುಳಿವು ಸಹ ಸಿಗುತ್ತಿಲ್ಲ. ಇದು ಆತ್ಮಹತ್ಯೆನಾ ಅಥವಾ ವಿಷಹಾಕಿ ಯಾರಾದರೂ ಕೊಂದರಾ ಎಂಬುವುದೇ ನಿಗೂಢ ರಹಸ್ಯವಾಗಿದೆ.
ವರದಿ: ಜಗನ್ನಾಥ ಪೂಜಾರ್, ಏಷ್ಯಾನೆಟ್ ಸುವರ್ಣ ನ್ಯೂಸ್
ರಾಯಚೂರು(ಆ.13): ಅದೊಂದು ಮಧ್ಯಮವರ್ಗದ ರೈತ ಕುಟುಂಬ. ತಾವು ಆಯ್ತು..ತಮ್ಮ ಕೆಲಸವಾಯ್ತು ಅಂತ ವಾಸ ಮಾಡುವ ಜನರು. ಇಂತಹ ಮನೆಯಲ್ಲಿ ಒಂದು ದುರ್ಘಟನೆ ನಡೆದು ಹೋಗಿದೆ. ಆ ಘಟನೆಗೆ ಕಾರಣವೇನು ಎಂಬುವುದೇ ಇನ್ನೂ ನಿಗೂಢವಾಗಿದೆ.
ರಾಯಚೂರು ಜಿಲ್ಲೆ ಸಿರವಾರ ತಾಲೂಕಿನ ಕಲ್ಲೂರು ಗ್ರಾಮದಲ್ಲಿ ಆ.2 ರಂದು ಒಂದೇ ಕುಟುಂಬದ ನಾಲ್ವರ ಸಾವು ಆಗಿತ್ತು. ಸಾವಿನ ಬಗ್ಗೆ ನಾನಾ ಕಥೆಗಳು ಕೇಳಿಬರುತ್ತಿವೆ. ಘಟನೆ ನಡೆದು 15 ದಿನಗಳು ಕಳೆದಿದೆ. ಆದ್ರೂ ಸಾವಿನ ಬಗ್ಗೆ ಚಿಕ್ಕ ಸುಳಿವು ಸಹ ಸಿಗುತ್ತಿಲ್ಲ. ಇದು ಆತ್ಮಹತ್ಯೆನಾ ಅಥವಾ ವಿಷಹಾಕಿ ಯಾರಾದರೂ ಕೊಂದರಾ ಎಂಬುವುದೇ ನಿಗೂಢ ರಹಸ್ಯವಾಗಿದೆ.
ರಾಯಚೂರು: ರೈತಾಪಿ ಕುಟುಂಬದ ನಾಲ್ವರು ವಿಷಾಹಾರ ಸೇವಿಸಿ ದಾರುಣ ಸಾವು!
ಸಾವಿನ ಹಿಂದಿನ ದಿನಗಳಲ್ಲಿ ನಡೆದಿದ್ದು ಏನು?
ರಾಯಚೂರು ಜಿಲ್ಲೆ ಸಿರವಾರ ತಾ.ಕಲ್ಲೂರು ಗ್ರಾಮದಲ್ಲಿ ಒಂದೇ ಕುಟುಂಬದ ಐವರ ಸಾವು ಆಗಿದೆ. ಆ ಸಾವಿಗೆ ಅವರು ಮಾಡಿದ ಊಟವೇ ಕಾರಣವೆಂದು ಹೇಳಲಾಗುತ್ತಿದೆ. ಅವತ್ತು ಜುಲೈ 31 ಬುಧವಾರದಂದು ಮನೆಯ ಯಜಮಾನ ಭೀಮಣ್ಣ ಶ್ರಾವಣ ಮಾಸ ಬರುತ್ತಿದೆ. ಮುಂದಿನ ಒಂದು ತಿಂಗಳು ಕಾಲ ಮನೆಯಲ್ಲಿ ಮಾಂಸದ ಊಟ ಮಾಡಲ್ಲ. ಹಾಗಾಗಿ ಮಟನ್ ತರುತ್ತೇನೆ ಎಂದು ಹೇಳಿ ಮಟನ್ ತಂದಿದ್ದಾನೆ. ಭೀಮಣ್ಣ ಪತ್ನಿ ಈರಮ್ಮ ಮತ್ತು ಮಗಳು ಪಾರ್ವತಿ ಸೇರಿ ಮಟನ್ ಊಟ ಮತ್ತು ಚಪಾತಿ ಮಾಡಿದ್ದಾರೆ. ಮಟನ್ ತಿನ್ನದೇ ಇರುವರಿಗಾಗಿ ಚವಳಿಕಾಯಿ ಪಲ್ಯ ಸಹ ಮಾಡಿದ್ದಾರೆ. ಎಲ್ಲರೂ ಒಟ್ಟಿಗೆ ಕುಳಿತು ಊಟ ಮಾಡಿದ್ದಾರೆ. ಭೀಮಣ್ಣ ಮತ್ತು ಮಲ್ಲಮ್ಮ ಮಟನ್ ಬದಲಾಗಿ ಚವಳಿಕಾಯಿ ಪಲ್ಯ ಮತ್ತು ಚಪಾತಿ ಊಟ ಮಾಡಿದ್ದಾರೆ. ಇನ್ನುಳಿದ ಮೂವರು ಭೀಮಣ್ಣನ ಪತ್ನಿ ಈರಮ್ಮ, ಮಗ ಮಲ್ಲೇಶ್ ಹಾಗೂ ಮಗಳು ಪಾರ್ವತಿ ಮಟನ್ ಊಟ ಮಾಡಿ ರಾತ್ರಿ ನಿದ್ದೆ ಮಾಡಿದ್ದಾರೆ. ಮಾರನೇ ದಿನ ಭೀಮಣ್ಣನಿಗೆ ಮತ್ತು ಈರಮ್ಮಗೆ ವಾಂತಿ ಆಗಿದೆ. ಸ್ಥಳೀಯವಾಗಿ ಇರುವ ಆರ್ ಎಂಪಿ ವೈದ್ಯರಿಗೆ ತೋರಿಸಿಕೊಂಡು ಮತ್ತೆ ಜಮೀನಿನ ಕೆಲಸಕ್ಕೆ ಹೋಗಿದ್ದಾರೆ. ಅಲ್ಲಿ ಜಾಸ್ತಿ ಸುತ್ತು ಆಗಲು ಶುರುವಾಗಿದಕ್ಕೆ ಖಾಸಗಿ ವೈದ್ಯರ ಬಳಿ ಹೋದಾಗ ನಾಲ್ಕು ಜನರಿಗೆ ರಿಮ್ಸ್ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ.
ಖಾಸಗಿ ಆಸ್ಪತ್ರೆಯಲ್ಲಿ ಮನೆಯ ಯಜಮಾನ ಭೀಮಣ್ಣ ನಾಲ್ಕು ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ಮಾಹಿತಿ ತಿಳಿದು ನೊಂದು (ಹೃದಯಾಘಾತದಿಂದ) ಪ್ರಾಣಬಿಟ್ಟಿದ್ದಾನೆ. ಇನ್ನೂ ಉಳಿದ ನಾಲ್ವರಿಗೆ ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವ ವೇಳೆಯೇ 54 ವರ್ಷದ ಭೀಮಣ್ಣ ಪತ್ನಿ ಈರಮ್ಮ, 19 ವರ್ಷದ ಭೀಮಣ್ಣನ ಮಗ ಮಲ್ಲೇಶ್, 17 ವರ್ಷದ ಭೀಮಣ್ಣನ ಮಗಳು ಪಾರ್ವತಿ ಸಾವು ಆಗಿದ್ರೆ, 23 ವರ್ಷದ ಭೀಮಣ್ಣನ ಇನ್ನೊಬ್ಬಳು ಮಗಳಾದ ಮಲ್ಲಮ್ಮ ಸಾವು ಬದುಕಿನ ಮಧ್ಯೆ ಆಸ್ಪತ್ರೆಯಲ್ಲಿ 7 ದಿನಗಳ ಬಳಿಕ ಚಿಕಿತ್ಸೆ ಫಲಕಾರಿಯಾಗದೇ ಬಹು ಅಂಗಾಂಗಗಳ ವೈಫಲ್ಯದಿಂದ ಜೀವ ಬಿಟ್ಟಿದ್ದಾಳೆ. ಒಂದು ಮನೆಯಲ್ಲಿದ್ದ ಐದು ಜನರ ಪ್ರಾಣಪಕ್ಷಿ ಹಾರಿ ಹೋಗಿದೆ. ಈ ಸಾವುಗಳಿಗೆ ಕಾರಣವೇ ತಿಳಿಯದಂತೆ ಆಗಿದೆ.
ಐದು ಜನರ ಸಾವಿನ ರಹಸ್ಯವೇ ನಿಗೂಢ
ಕಲ್ಲೂರು ಗ್ರಾಮದಲ್ಲಿ ಯಾವತ್ತೂ ಸಹ ನಡೆಯದ ದುರಂತವೊಂದು ಸಂಭವಿಸಿದೆ. ಐದು ಜನರ ಸಾವಿನ ಬಳಿಕ ಸಿರವಾರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಅಲ್ಲದೆ ಮನೆಗೆ ಭೇಟಿ ನೀಡಿದ ಪೊಲೀಸರು ಚಪಾತಿ, ಚಪಾತಿ ಹಿಟ್ಟು ಜೊತೆಗೆ ಮೃತರು ಬಳಕೆ ಮಾಡಿದ ಸುಮಾರು 34ಕ್ಕೂ ಅಧಿಕ ವಸ್ತುಗಳನ್ನ FSL ತನಿಖೆಗೆ ಕಳುಹಿಸಿದ್ದಾರೆ. 14 ದಿನಗಳು ಕಳೆದರೂ ಸಾವಿಗೆ ಏನು ಕಾರಣವೆಂಬುವುದು ಇನ್ನೂ ವರದಿ ಬಂದಿಲ್ಲ.
ಚಪಾತಿ ಹಿಟ್ಟಿನಲ್ಲಿಯೇ ಇತ್ತಾ ವಿಷ!
ಭೀಮಣ್ಣ ಕಲ್ಲೂರು ಗ್ರಾಮದಲ್ಲಿ ಒಬ್ಬ ಸಣ್ಣ ರೈತ..ಆತನಿಗೆ ಐದು ಜನ ಮಕ್ಕಳು.. ಇಬ್ಬರು ದೊಡ್ಡ ಹೆಣ್ಣು ಮಕ್ಕಳಿಗೆ ಮದುವೆ ಮಾಡಿದ, ಮನೆಯಲ್ಲಿ ಇಬ್ಬರು ಹೆಣ್ಣು ಮಕ್ಕಳು, ಒಬ್ಬ ಮಗ ಮತ್ತು ಹೆಂಡತಿ ಜೊತೆಗೆ ವಾಸವಾಗಿದ್ದ, ಮನೆಯಲ್ಲಿ ಯಾವುದೇ ಕಿರಿಕಿರಿ ಇರಲಿಲ್ಲ. ಎಲ್ಲರೂ ಜಮೀನು ಕೆಲಸ ಮಾಡಿಕೊಂಡು ಇದ್ರು. ಭೀಮಣ್ಣನಿಗೆ ವಯಸ್ಸು ಆಗಿದ್ರೂ ಸಹ ಜಮೀನು ಸಣ್ಣ ಪುಟ್ಟ ಕೆಲಸ ಮಾಡಿಕೊಂಡು ಮಗನ ಜೊತೆಗೆ ಇರುತ್ತಿದ್ದ, ಏರಿಯಾದಲ್ಲಿಯೂ ಈ ಕುಟುಂಬ ಯಾರ ಜೊತೆಗೂ ಜಗಳ ಮಾಡಿಕೊಂಡಿಲ್ಲ. ತಾವು ಆಯ್ತು ತಮ್ಮ ಕೆಲಸವಾಯ್ತು ಅಂತ ಆ ಕುಟುಂಬ ಇತ್ತು. ಭೀಮಣ್ಣ ಯಾದಗಿರಿಯಲ್ಲಿ ಇರುವ ಮಗಳ ಮನೆಗೆ ಹೋಗಿದ್ದ, ಮಗಳು ಅಪ್ಪ ಬಂದಿದ್ದೇನೆ ಅಂತ ಚಪಾತಿ ಊಟ ಮಾಡಿದ್ದಳಂತೆ, ಚಪಾತಿ ಊಟ ಭೀಮಣ್ಣನಿಗೆ ರುಚಿ ಅನ್ನಿಸಿದೆ. ಅದಕ್ಕೆ ಯಾದಗಿರಿ ಮಗಳ ಮನೆಯಲ್ಲಿ ಇದ್ದ 5 ಕೆಜಿ ಗೋಧಿ ಹಿಟ್ಟು ತೆಗೆದುಕೊಂಡು ಕಲ್ಲೂರಿಗೆ ತಂದಿದ್ದಾರೆ. ಹಿಟ್ಟು ತಂದು ಎರಡು- ಮೂರು ದಿನಗಳು ಅಷ್ಟೇ ಆಗಿತ್ತು. ಮನೆ ಸ್ವಚ್ಛ ಮಾಡುವ ಮುನ್ನ ಒಮ್ಮೆ ಮಟನ್ ಮಾಡೋಣವೆಂದು ಭೀಮಣ್ಣ ಮಟನ್ ತಂದಿದ್ದಾನೆ. ಹೆಂಡತಿಗೆ ಮಟನ್ ಜೊತೆಗೆ ಯಾದಗಿರಿಯಿಂದ ತಂದಿರುವ ಗೋದಿ ಹಿಟ್ಟಿನಲ್ಲಿ ಚಪಾತಿ ಮಾಡಲು ಹೇಳಿದನಂತೆ, ಚಪಾತಿ ತಿನ್ನುವಾಗ ಭೀಮಣ್ಣ ಹೆಂಡತಿಗೆ ಒಂದು ಬಾರಿ ಯಾಕೋ ಕಹಿ ಅನ್ನಿಸುತ್ತಿದೆ ಚಪಾತಿವೆಂದು ಹೇಳಿದಂತೆ, ಆದ್ರೂ ಏನ್ ಇಲ್ಲ ಅಂತ ಎಲ್ಲರೂ ಊಟ ಮಾಡಿದ್ದಾರೆ. ಮಾರನೇ ದಿನ ಎಲ್ಲರಿಗೂ ವಾಂತಿ ಆಗಲು ಶುರುವಾಗಿದೆ. ಆಗಲೂ ಸಹ ಅವರು ಎಚ್ಚತ್ತುಕೊಂಡು ದೊಡ್ಡ ಆಸ್ಪತ್ರೆಗೆ ದಾಖಲಾಗಿದ್ರೆ ಜೀವ ಉಳಿಸಿಕೊಳ್ಳಬಹುದಿತ್ತು. ಆದ್ರೆ ಬಡ ಕುಟುಂಬ ತಮ್ಮ ಜೀವಕ್ಕೆ ಕೇರ್ ಮಾಡದೇ ಗ್ರಾಮದ ವೈದ್ಯನ ಬಳಿ ತೋರಿಸಿಕೊಂಡು ಜಮೀನು ಕೆಲಸಕ್ಕೆ ಹೋಗಿದ್ದಾರೆ. ವಿಕನೆಸ್ ಹೆಚ್ಚು ಆದಾಗ ಖಾಸಗಿ ಆಸ್ಪತ್ರೆಗೆ ಹೋಗಿ ರಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಷ್ಟೋತ್ತಿಗಾಗಲ್ಲೇ ಎಲ್ಲರಲ್ಲಿ ವಿಷವಸ್ತು ಇಡೀ ದೇಹ ಆವರಿಸಿ ಸಾವು ಆಗಿವೆ.
ಪೆನ್ನು ಕದ್ದಿದ್ದಕ್ಕೆ ಬಾಲಕನಿಗೆ ಮನಬಂದಂತೆ ಥಳಿಸಿದ ಗುರೂಜಿ! ಮಗನ ಸ್ಥಿತಿ ಕಂಡು ತಾಯಿ ಆಘಾತ!
ಒಂದು ವಾರ ಸಾವು- ಬದುಕಿನ ಹೋರಾಟ ನಡೆಸಿ ಉಸಿರು ಚೆಲ್ಲಿದ ಮಲ್ಲಮ್ಮ
ಫುಡ್ ಪಾಯ್ಸನ್ ಆಗಿ ರಿಮ್ಸ್ ಆಸ್ಪತ್ರೆಗೆ ದಾಖಲು ಆಗಿದ್ದ ನಾಲ್ವರಲ್ಲಿ ಮೂವರು ಒಂದೇ ದಿನ ಸಾವನ್ನಪ್ಪಿದರು. ಮೂರು ಸಾವಿನ ಒಂದು ವಾರದ ಬಳಿಕ 23 ವರ್ಷದ ಮಲ್ಲಮ್ಮ ಳಿಗೆ ರಿಮ್ಸ್ ವೈದ್ಯರ ತಂಡ ಮಲ್ಲಮ್ಮಳ ಜೀವ ಉಳಿಸಲು ಹರಸಾಹಸ ಪಟ್ಟರು. ಆದ್ರೂ ಜೀವ ಮಾತ್ರ ಉಳಿಯಲಿಲ್ಲ. ಆಸ್ಪತ್ರೆಗೆ ದಾಖಲಾದ ನಾಲ್ವರು ಸಹ ಒಂದೇ ಒಂದು ಮಾತು ಹೇಳದೇ ಜೀವ ಬಿಟ್ಟಿದ್ದಾರೆ. ಆ ಮಟ್ಟಿಗೆ ತಮ್ಮ ದೇಹದ ಅಂಗಾಂಗಗಳಲ್ಲಿ ಶಕ್ತಿ ಕಳೆದುಕೊಂಡು ನಿಶಕ್ತರಾಗಿ ಜೀವ ಹೋಗಿದೆ.
ಐವರ ದೇಹದಲ್ಲಿ ಹೋದ ವಿಷವೇನು?
ಮನೆಯಲ್ಲಿ ಮಾಡಿದ ಅಡುಗೆ ವಿಷವಾಯ್ತು ಅಂದ್ರೆ ಹೇಗೆ? ಇದು ಎಲ್ಲರಿಗೂ ಕಾಡುವ ಮೂಲ ಪ್ರಶ್ನೆಯಾಗಿದೆ. ಮನೆಯಲ್ಲಿ ಇದ್ದವರೇ ಐದು ಜನರು. ಆ ಐದು ಜನರ ಜೀವವು ಹೋಗಿದೆ. ಎಲ್ಲರೂ ಒಂದೇ ಊಟ ಮಾಡಿದ್ದಾರೆ. ಅವರ ಅಡುಗೆ ವಿಷಹಾಕಿದ್ದು ಯಾರು ಎಂಬುವುದೇ ನಿಗೂಢವಾಗಿದೆ. ಮತ್ತೊಂದು ಕಡೆ ಚಪಾತಿ ಹಿಟ್ಟಿನಲ್ಲಿ ಐದು ಸಾವು ಆಗುವಷ್ಟು ವಿಷ ಇರುತ್ತಾ, ಈ ಬಗ್ಗೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಪೊಲೀಸ್ ತನಿಖೆ ಬಳಿಕವೇ ಐದು ಜನರ ಸಾವಿನ ರಹಸ್ಯ ಬಯಲಾಗಬಹುದು.