ಹುಬ್ಬಳ್ಳಿ-ಧಾರವಾಡ: ಕಿಲ್ಲರ್‌ ಹೆದ್ದಾರಿ ಷಟ್ಪಥಕ್ಕೆ ಹಸಿರು ನಿಶಾನೆ

ನವದೆಹಲಿಯಲ್ಲಿ ನಡೆದ ಸಭೆಯಲ್ಲಿ ಕೇಂದ್ರ ಸಚಿವ ಗಡ್ಕರಿ ಒಪ್ಪಿಗೆ| ಬೈಪಾಸ್‌ ಅಗಲೀಕರಣಕ್ಕೆ ಕೇಂದ್ರದಿಂದ 1200 ಕೋಟಿ ಮಂಜೂರು| ಬೈಪಾಸ್‌ ಅಗಲೀಕರಣಕ್ಕೆ ಕೂಡಿಬಂದ ಕಾಲ| ರಸ್ತೆ ನಿರ್ಮಾಣಕ್ಕೆ 33 ಹೆಕ್ಟೇರ್‌ ಭೂ ಸ್ವಾಧೀನ ಅವಶ್ಯ| 

Nitin Gadkari Agreed to Hubballi Dharwad Bypass Road widening grg

ಹುಬ್ಬಳ್ಳಿ(ಫೆ.12): ಕಿಲ್ಲರ್‌ ಹೆದ್ದಾರಿ ಎಂದೇ ಹೆಸರು ಪಡೆದಿರುವ ಹುಬ್ಬಳ್ಳಿ- ಧಾರವಾಡ ಬೈಪಾಸ್‌ ರಸ್ತೆಯನ್ನು ಷಟ್ಪಥ ಮಾಡಲು ಕೇಂದ್ರ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಹಸಿರು ನಿಶಾನೆ ತೋರಿಸಿದ್ದಾರೆ. ಈ ಮೂಲಕ ಸಾರ್ವಜನಿಕರ ಬಹುಬೇಡಿಕೆಯ ರಸ್ತೆ ಅಗಲೀಕರಣಕ್ಕೆ ಕಾಲ ಕೂಡಿ ಬಂದಂತಾಗಿದೆ.

ಈ ಬಗ್ಗೆ ನವದೆಹಲಿಯಲ್ಲಿ ನಡೆದ ಸಭೆಯಲ್ಲಿ ಕೇಂದ್ರ ಸಾರಿಗೆ ಸಚಿವ ನಿತಿನ ಗಡ್ಕರಿ, ಮಹಾನಗರದ ಮಧ್ಯೆ 30 ಕಿಲೋ ಮೀಟರ್‌ ಬೈಪಾಸ್‌ ಅಗಲೀಕರಣಕ್ಕೆ ಟೆಂಡರ್‌ ಕರೆಯುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಈಗಾಗಲೇ ಡಿಪಿಆರ್‌ ತಯಾರಿಸಲಾಗಿದ್ದು, ಸಾರ್ವಜನಿಕರ ಅನುಕೂಲಕ್ಕೆ ತಕ್ಕಂತೆ ಆರ್‌ಒಬಿ ಮತ್ತು ಆರ್‌ಯುಬಿ ನಿರ್ಮಾಣ ಮಾಡಲು ಸೂಚನೆ ನೀಡಿದ್ದು, ನಿರ್ಮಾಣಕ್ಕೆ 33 ಹೆಕ್ಟೇರ್‌ ಭೂ ಸ್ವಾಧೀನ ಅವಶ್ಯವಾಗಿದೆ. ಭೂಮಿ ವಶಪಡಿಸಿಕೊಂಡು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಹಸ್ತಾಂತರಿಸಲು ಅಧಿಕಾರಿಗಳಿಗೆ ಸಚಿವರು ಸೂಚಿಸಿದ್ದಾರೆ.

ಸಚಿವ ಪ್ರಹ್ಲಾದ ಜೋಶಿ, ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್‌, ರಾಷ್ಟ್ರೀಯ ಹೆದ್ದಾರಿ ಮಂತ್ರಾಲಯದ ಕಾರ್ಯದರ್ಶಿಗಳು, ರಾಜ್ಯ ಸರ್ಕಾರದ ಲೋಕೋಪಯೋಗಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಇನ್ನಿತರೆ ಅಧಿಕಾರಿಗಳು ಹಾಜರಿದ್ದರು  ಈ ವಿಷಯವನ್ನು ಸಚಿವ ಪ್ರಹ್ಲಾದ ಜೋಶಿ ಟ್ವೀಟರ್‌ನಲ್ಲೆ ಬರೆದುಕೊಂಡಿದ್ದಾರೆ.

ಧಾರವಾಡದಲ್ಲಿ ಭೀಕರ ಅಪಘಾತಕ್ಕೆ 12 ಮಂದಿ ಬಲಿ: ರಸ್ತೆ ಅಗಲೀಕರಣಕ್ಕೆ ಆಗ್ರಹಿಸಿ ಕಾಂಗ್ರೆಸ್‌ ಪ್ರತಿಭಟನೆ

ಕಿಲ್ಲರ್‌ ಬೈಪಾಸ್‌

ಹುಬ್ಬಳ್ಳಿ ಧಾರವಾಡ ಮಧ್ಯದ ಬೈಪಾಸ್‌ ಬರೀ ದ್ವಿಪಥವಿದೆ. ಇದರಿಂದ ನಿರಂತರ ಅಪಘಾತಗಳು ಸಂಭವಿಸುತ್ತಿದ್ದವು. ಇತ್ತೀಚೆಗಷ್ಟೇ ದಾವಣಗೆರೆ ಮೂಲದ 12 ಜನರು ಅಪಘಾತದಲ್ಲಿ ತೀರಿಕೊಂಡಿದ್ದರು. ಹೀಗಾಗಿ ಇದನ್ನು ಕಿಲ್ಲರ್‌ ಬೈಪಾಸ್‌ ಎಂದೇ ಕರೆಯುತ್ತಿದ್ದರು. ಇದನ್ನು ಅಗಲೀಕರಣ ಮಾಡುವಂತೆ ಹತ್ತಾರು ಸಂಘಟನೆಗಳು ಪ್ರತಿಭಟನೆ ನಡೆಸಿದ್ದುಂಟು. ಇದೀಗ ಬೈಪಾಸ್‌ ಅಗಲೀಕರಣಕ್ಕೆ ಕಾಲ ಕೂಡಿಬಂದಂತಾಗಿದೆ.

ಏಕೆ ಆಗಿರಲಿಲ್ಲ...

ಈ ಬೈಪಾಸ್‌ ನಿರ್ವಹಣೆಗೆ ನಂದಿ ಹೈವೇ ಅವರ ಜವಾಬ್ದಾರಿಯಿತ್ತು. 2024ರ ವರೆಗೆ ಒಪ್ಪಂದವಾಗಿತ್ತು. ಈ ಹಿನ್ನೆಲೆಯಲ್ಲಿ ಅಗಲೀಕರಣ ಮಾಡಲು ಅವರು ಆಕ್ಷೇಪಿಸುತ್ತಿದ್ದರು. ಹೀಗಾಗಿ ನಂದಿ ಹೈವೆ ಅಧಿಕಾರಿಗಳೊಂದಿಗೆ ಸಚಿವರಾದ ಜೋಶಿ ಹಾಗೂ ಶೆಟ್ಟರ್‌ ನಿರಂತರ ಸಭೆ ನಡೆಸಿ ಸಮಸ್ಯೆ ಬಗೆಹರಿಸಿದ್ದರು. ಇದೀಗ ನಂದಿ ಹೈವೇ ಕೂಡ ಅಗಲೀಕರಣಕ್ಕೆ ಒಪ್ಪಿಗೆ ಸೂಚಿಸಿದೆ. ಈ ಬೈಪಾಸ್‌ ಅಗಲೀಕರಣಕ್ಕೆ 1200 ಕೋಟಿ ಕೇಂದ್ರ ಸರ್ಕಾರ ಮಂಜೂರು ಮಾಡಿದೆ. ಸಾರ್ವಜನಿಕರ ಅನುಕೂಲಕ್ಕಾಗಿ ಸರ್ವಿಸ್‌ ರಸ್ತೆಯನ್ನು ಎರಡೂ ಕಡೆ ನಿರ್ಮಿಸಲು ಸೂಚನೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಒಟ್ಟಿನಲ್ಲಿ ಸಾರ್ವಜನಿಕರ ಬಹುಬೇಡಿಕೆಯ ಬೈಪಾಸ್‌ ಅಗಲೀಕರಣಕ್ಕೆ ಕಾಲ ಕೂಡಿ ಬಂದಂತಾಗಿರುವುದು ಸಂತಸಕರ ಎಂದರೆ ತಪ್ಪಾಗಲಾರದು.
 

Latest Videos
Follow Us:
Download App:
  • android
  • ios