ಧಾರವಾಡ(ಮಾ.10): ನಿಗದಿತ 8 ಮಂದಿಗೆ ಬದಲಾಗಿ 11 ಮಂದಿ ಬಳಸಿದ್ದರಿಂದ ಲಿಫ್ಟ್‌ನ ಕೇಬಲ್‌ ಆಕಸ್ಮಿಕವಾಗಿ ಕಟ್‌ ಆಗಿ ಕುಸಿದ ಪರಿಣಾಮ 9 ಮಂದಿಗೆ ತೀವ್ರ ಗಾಯಗಳಾದ ಘಟನೆ ಭಾನುವಾರ ತಡರಾತ್ರಿ ನಗರದ ಖಾಸಗಿ ಹೋಟೆಲ್‌ ಒಂದರಲ್ಲಿ ನಡೆದಿದೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಇಲ್ಲಿನ ಕೃಷಿ ವಿವಿ ಎದುರಿರುವ ಸಾಧೂನವರ ಎಸ್ಟೇಟ್‌ನಲ್ಲಿರುವ ಧ್ವಾರವಾಟಿಕಾ ಹೋಟೆಲ್‌ನಲ್ಲಿ ಈ ದುರ್ಘಟನೆ ನಡೆದಿದ್ದು, ಲಿಫ್ಟ್‌ನಲ್ಲಿದ್ದ 11 ಜನರ ಪೈಕಿ ಒಂಭತ್ತು  ಜನರ ಕಾಲುಗಳಿಗೆ ಪೆಟ್ಟಾಗಿದೆ. ಇವರೆಲ್ಲರೂ ಬೇಲೂರು ಕೈಗಾರಿಕಾ ಪ್ರದೇಶದ ಸ್ಟಾರ್‌ ಕಂಪನಿಯೊಂದರ ಸಿಬ್ಬಂದಿಯಾಗಿದ್ದು, ರಾತ್ರಿ ಊಟ ಮುಗಿಸಿ ಮರಳುವಾಗ ಈ ಘಟನೆ ನಡೆದಿದೆ.  ಅನಿಲ ರಾಮಸಿಂಗ್‌(34), ಆನಂದ ಪವಾರ್‌(32), ಕೆಂಪಯ್ಯ ಪುರಾಣಿಕ(34), ಆಂಟೋನಿ(44), ಬಸೀರ ಅಹಮ್ಮದ್‌ (22) ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಉಳಿದ ನಾಲ್ವರನ್ನು ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ.

8 ರ ಬದಲು 11 ಜನ

ಘಟನೆ ನಡೆದಿರುವ ಹೋಟೆಲ್‌ನಲ್ಲಿ ತಳಮಹಡಿ ಸೇರಿದಂತೆ ಒಟ್ಟು ನಾಲ್ಕು ಮಹಡಿಗಳಿದ್ದು, ಕೊನೆ ಮಹಡಿಯಿಂದ ತಳ ಮಹಡಿಗೆ ಬರುವ ಲಿಫ್ಟ್‌ನ ಕೇಬಲ್‌ ಕಟ್‌ ಆಗಿದೆ. ನಿಗದಿತ ಭಾರಕ್ಕಿಂತ ಹೆಚ್ಚಿನ ಜನರು ಲಿಫ್ಟ್‌ನ್ನು ಬಳಸಿದ್ದೇ ಈ ರೀತಿ ಕೇಬಲ್‌ ಕಟ್‌ ಆಗಲು ಕಾರಣ. ಈ ಲಿಫ್ಟ್‌ನ್ನು ಏಕಕಾಲಕ್ಕೆ 8 ಜನರು ಮಾತ್ರ ಬಳಸಬಹುದು. ಆದರೆ ಈ ಘಟನೆಯಲ್ಲಿ 11 ಮಂದಿ ಲಿಫ್ಟ್‌ನಲ್ಲಿ ಹತ್ತಿರುವುದಕ್ಕೆ ಹೀಗಾಗಿದೆ ಎಂದು ಲಿಫ್ಟ್‌ನ ತಾಂತ್ರಿಕ ಸಿಬ್ಬಂದಿ ಈರಣ್ಣ ಎಂಬುವರು ಮಾಧ್ಯಮಗಳಿಗೆ ಮಾಹಿತಿ ನೀಡಿದರು. ಈ ಕುರಿತು ಉಪ ನಗರ ಪೊಲೀಸರಿಗೆ ಮಾಹಿತಿ ಹೋಗಿದೆ. ಆದರೆ ಈವರೆಗೂ ಪ್ರಕರಣ ದಾಖಲಾಗಿಲ್ಲ.
ಧ್ವಾರವಾಟಿಕಾ ಹೋಟೆಲ್‌ನಲ್ಲಿ ಲಿಫ್ಟ್‌ ಕಟ್‌ ಆಗಿ ನಡೆದಿರುವ ಘಟನೆಯಲ್ಲಿ ಗಾಯಗೊಂಡು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದು.