ಮಂಡ್ಯ (ಡಿ.05):  ನಾನು ಮುಖ್ಯಮಂತ್ರಿಯಾಗಿದ್ದಾಗ ಮಂಡ್ಯ ಜಿಲ್ಲೆಗೆ ಘೋಷಿಸಿದ 9 ಸಾವಿರ ಕೋಟಿ ರು. ಹಣ ಸಂತೆಯಲ್ಲಿ ನಿಂತು ಭಾಷಣ ಮಾಡಿದ್ದಲ್ಲ. ಬಜೆಟ್‌ನಲ್ಲಿ ಘೋಷಿಸಿದ್ದು. ಬೇಕಿದ್ದರೆ ಸರ್ಕಾರದ ದಾಖಲೆಗಳನ್ನು ಪರಿಶೀಲಿಸಲಿ ಎಂದು ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಅವರು ಮಾಜಿ ಸಚಿವ ಎನ್‌.ಚಲುವರಾಯಸ್ವಾಮಿ ಆರೋಪಕ್ಕೆ ತಿರುಗೇಟು ನೀಡಿದರು.

ಜಿಲ್ಲೆಯ ಸಮಗ್ರ ಅಭಿವೃದ್ಧಿಯನ್ನು ದೃಷ್ಟಿಯಲ್ಲಿಟ್ಟುಕೊಂಡು 9 ಸಾವಿರ ಕೋಟಿ ರು. ಹಣವನ್ನು ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ನೀಡಿದ್ದೆ. ಮೈಷುಗರ್‌ ಹೊಸ ಕಾರ್ಖಾನೆಗೆ 400 ಕೋಟಿ ರು. ಮೀಸಲಿಟ್ಟಿದ್ದೆ. ಆಗ ಯಾರೂ ಏನು ಮಾತನಾಡಲಿಲ್ಲ. ನಾನು ಬಜೆಟ್‌ನಲ್ಲಿ ಜಿಲ್ಲೆಗೆ ಘೋಷಿಸಿದ ಹಣವನ್ನು ಬಿಜೆಪಿಯವರು ಬೇರೆ ಬೇರೆ ಕಡೆಗೆ ತೆಗೆದುಕೊಂಡು ಹೋದರು. ಅದರ ಬಗ್ಗೆ ಚಕಾರ ಎತ್ತದವರು ನನ್ನನ್ನು ಟೀಕಿಸುತ್ತಾರೆ. ಇವರಿಗೆ ನಾಚಿಕೆಯಾಗಬೇಕು ಎಂದು ಕಿಡಿಕಾರಿದರು.

ಗರಿಗೆದರಿದ ರಾಜಕೀಯ : ಸುಮಲತಾ ಆಯ್ಕೆಗೆ ಹೆಚ್ಚಿದ ಡಿಮ್ಯಾಂಡ್ ...

ರೈತರ ಸಾಲ ಮನ್ನಾಗೆ 25 ಸಾವಿರ ಕೋಟಿ ರು. ಘೋಷಿಸಿದ್ದು ಸುಳ್ಳೇ. ಸರ್ಕಾರದ ಅಂಕಿ-ಅಂಶಗಳನ್ನು ನೋಡಿ ಮಾತನಾಡಬೇಕು. ಎಲ್ಲೋ ಇದ್ದವನನ್ನು ಪಕ್ಷಕ್ಕೆ ಕರೆದುಕೊಂಡು ಬಂದು ಬೆಳೆಸಿದೆವು. ಒಮ್ಮೆ ನಮ್ಮ ಕುಟುಂಬದವರು ಟಿಕೆಟ್‌ ಕೊಟ್ಟು ತಪ್ಪು ಮಾಡಿದರು. ಮತ್ತೊಮ್ಮೆ ಪುಟ್ಟರಾಜು ಒತ್ತಡಕ್ಕೆ ಕಟ್ಟುಬಿದ್ದು ನಾನು ಟಿಕೆಟ್‌ ಕೊಟ್ಟೆ. ಈಗ ಅವರು ನನ್ನನ್ನೇ ಪ್ರಶ್ನೆ ಮಾಡ್ತಾರೆ. ಅವರಿಗೆ ನಾನು ಉತ್ತರ ಕೊಡಬೇಕು. ಇದೆಂಥಾ ವಿಪರ್ಯಾಸ ಎಂದು ಬೇಸರದಿಂದ ನುಡಿದರು.

ಸಂತೆಬಾಚಹಳ್ಳಿ ಕೆರೆಗೆ ದುಡ್ಡುಕೊಟ್ಟಿದ್ದು ಯಡಿಯೂರಪ್ಪನವರಾ. ನಾನೇನೂ ಹಣ ಕೊಟ್ಟಿರಲಿಲ್ಲವಾ. ಉಪ ಚುನಾವಣೆಯಲ್ಲಿ ಗೆದ್ದ ಮಾತ್ರಕ್ಕೆ ಕ್ಷೇತ್ರವೇ ನನ್ನದು ಎನ್ನುತ್ತಿದ್ದಾನೆ. ಚುನಾವಣೆ ಬರಲಿ. ನಾವೇನೂಂತ ತೋರಿಸುತ್ತೇವೆ ಎಂದು ಸಚಿವ ಕೆ.ಸಿ.ನಾರಾಯಣಗೌಡರ ಹೆಸರೇಳದೆ ಕುಟುಕಿದರು.

ಜಿಲ್ಲೆಯಲ್ಲಿ ಜೆಡಿಎಸ್‌ ಅಸ್ತಿತ್ವ ಗಟ್ಟಿಯಾಗಿದೆ. ಮಂಡ್ಯ ನೆಲದ ಜನರು ನಮಗೆ ಎಂದಿಗೂ ದ್ರೋಹ ಮಾಡಿಲ್ಲ. ನಾವು ಬದುಕಿರುವವರೆಗೂ ಇಲ್ಲಿನ ಜನರ ಸೇವೆ ಮಾಡುವುದಕ್ಕೆ ಸಿದ್ಧರಿದ್ದೇವೆ. ಈ ನೆಲದಿಂದ ನನ್ನ ಮಗ ನಿಖಿಲ್‌ ಲೋಕಸಭೆಗೆ ಸ್ಪರ್ಧಿಸಿ ಸೋತಿರಬಹುದು. ಇದೇ ಮಣ್ಣಿನ ಜನರ ಬೆಂಬಲದೊಂದಿಗೆ ಮುಂದೆ ಲೋಕಸಭೆಯನ್ನೂ ಪ್ರವೇಶಿಸಬಹುದು ಎಂದು ಎಚ್‌.ಡಿ.ಕುಮಾರಸ್ವಾಮಿ ವಿಶ್ವಾಸದಿಂದ ಹೇಳಿದರು.

ಶಾಸಕರಾದ ಸಿ.ಎಸ್‌.ಪುಟ್ಟರಾಜು, ಡಿ.ಸಿ.ತಮ್ಮಣ್ಣ, ಕೆ.ಸುರೇಶ್‌ಗೌಡ, ರವೀಂದ್ರ ಶ್ರೀಕಂಠಯ್ಯ, ಡಾ.ಕೆ.ಅನ್ನದಾನಿ, ವಿಧಾನಪರಿಷತ್‌ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ಮಾಜಿ ಶಾಸಕಿ ಕಲ್ಪನಾ ಸಿದ್ದರಾಜು, ಪಿಇಟಿ ಅಧ್ಯಕ್ಷ ವಿಜಯಾನಂದ, ಜೆಡಿಎಸ್‌ ಜಿಲ್ಲಾಧ್ಯಕ್ಷ ಡಿ.ರಮೇಶ್‌ ಇದ್ದರು.