ಜಮೀರ್ ನಾಲಿಗೆ ಹಿಡಿತದಲ್ಲಿಟ್ಟುಕೊಂಡು ಮಾತಾಡಲಿ: ನಿಖಿಲ್
* ಕುಮಾರಸ್ವಾಮಿ 2 ಬಾರಿ ಮುಖ್ಯಮಂತ್ರಿಯಾಗಿದ್ದವರು
* ಗೊಂದಲ ಸೃಷ್ಟಿಸಲು ಕುಮಾರಸ್ವಾಮಿ ವಿರುದ್ಧ ಹೇಳಿಕೆ ನೀಡಿರುವ ಜಮೀರ್
* 15 ವರ್ಷದಿಂದ ಮೇಖ್ರಿ ಸರ್ಕಲ್‌ನ ಅತಿಥಿಗೃಹವನ್ನು ಕುಮಾರಸ್ವಾಮಿ ಬಳಸುತ್ತಿದ್ದರು
ತುಮಕೂರು(ಜೂ.11): ಕಾಂಗ್ರೆಸ್ ಶಾಸಕ ಜಮೀರ್ ಅಹಮದ್ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಬಗ್ಗೆ ಮಾತನಾಡುವಾಗ ನಾಲಿಗೆ ಹಿಡಿತದಲ್ಲಿಟ್ಟುಕೊಳ್ಳಬೇಕು ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅವರು ತಾಲೂಕಿನ ಬಳ್ಳಗೆರೆಯಲ್ಲಿ ಮಾತನಾಡಿ, ಕುಮಾರಸ್ವಾಮಿ 2 ಬಾರಿ ಮುಖ್ಯಮಂತ್ರಿಯಾಗಿದ್ದವರು. ಅಂತವರ ಬಗ್ಗೆ ಸರಿಯಾಗಿ ಮಾತನಾಡಲಿ. ಹದಿನೈದು ವರ್ಷದಿಂದ ಮೇಖ್ರಿ ಸರ್ಕಲ್‌ನ ಅತಿಥಿಗೃಹವನ್ನು ಕುಮಾರಸ್ವಾಮಿ ಬಳಸುತ್ತಿದ್ದರು. ಅದು ಎಲ್ಲರಿಗೂ ಗೊತ್ತಿರುವ ವಿಚಾರ. ಏಳೆಂಟು ವರ್ಷಗಳಿಂದ ಕುಮಾರಸ್ವಾಮಿ ಅಲ್ಲಿಗೆ ಹೋಗಿಲ್ಲ. ನಮ್ಮ ಹುಡುಗರು ಅಲ್ಲಿದ್ದರು. ಜೊತೆಗೆ ನನ್ನ ಶೂಟಿಂಗ್ ಉಪಕರಣಗಳು ಇದ್ದವು. 2-3 ದಿನದ ಹಿಂದೆ ಖಾಲಿ ಮಾಡುವಂತೆ ತಿಳಿಸಿದ್ದರು.
ಗೆಸ್ಟ್‌ಹೌಸ್ ವಿಷಯಕ್ಕೆ ಎಚ್‌ಡಿಕೆ - ಜಮೀರ್ ಗಲಾಟೆ
ಆದರೆ ಹುಡುಗರೆಲ್ಲ ಕೊರೋನಾ ಕಾರಣದಿಂದ ಮನೆಗೆ ಹೋಗಿದ್ದರಿಂದ ಖಾಲಿ ಮಾಡಲು ಆಗಿರಲಿಲ್ಲ. ಅವರೇ ಹೋಗಿ ಬೀಗ ಒಡೆದಿದ್ದಾರೆ. ಅದನ್ನು ನಮ್ಮ ಹುಡುಗರು ಪ್ರಶ್ನಿಸಿದ್ದಕ್ಕೆ ವಾಗ್ವಾದವಾಗಿದೆ ಅಷ್ಟೇ. ಹಲ್ಲೆ ಆಗಿಲ್ಲ, ಗೊಂದಲ ಸೃಷ್ಟಿಸಲು ಜಮೀರ್ ಕುಮಾರಸ್ವಾಮಿ ವಿರುದ್ಧ ಹೇಳಿಕೆ ನೀಡಿದ್ದಾರೆ ಎಂದು ಸ್ಪಷ್ಟಪಡಿಸಿದರು. ಜಮೀರ್ ರಾಜಕೀಯದಲ್ಲಿ ಬೆಳವಣಿಗೆ ಕಾಣಲು ನೆರವಾದ ನಮ್ಮ ಕುಟುಂಬದ ಬಗ್ಗೆ ಮಾತನಾಡುವಾಗ ಎಚ್ಚರಿಕೆ ವಹಿಸಬೇಕು ಎಂದರು.