ನವದೆಹಲಿ [ಡಿ.03]:  ಬೆಳ್ಳಂದೂರು, ವರ್ತೂರು ಮತ್ತು ಅಗರ ಕೆರೆಗಳ ಪುನಶ್ವೇತನಕ್ಕೆ ಸಂಬಂಧಿಸಿದಂತೆ ತಾನು ನೀಡಿದ್ದ ಕಾಲಮಿತಿಯಲ್ಲಿ ಕಾಮಗಾರಿಗಳು ನಡೆಯದಿರುವುದಕ್ಕೆ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಅಲ್ಲದೆ, ಪ್ರಕರಣದ ಸಂಕ್ಷಿಪ್ತ ಮಾಹಿತಿಗಳನ್ನು ಒಳಗೊಂಡ ಟಿಪ್ಪಣಿಯೊಂದನ್ನು ರಚಿಸುವಂತೆ ಸೂಚಿಸಿರುವ ನ್ಯಾಯಾಧಿಕರಣವು ಪ್ರಕರಣದ ಮುಂದಿನ ವಿಚಾರಣೆಯನ್ನು ಡಿ.11ಕ್ಕೆ ನಿಗದಿಪಡಿಸಿದೆ. ವಿಚಾರಣೆ ವೇಳೆ ಕಾಮಗಾರಿ ವಿಳಂಬಕ್ಕೆ ರಾಜ್ಯ ಸರ್ಕಾರ ಎನ್‌ಜಿಟಿಯ ಕ್ಷಮೆ ಕೇಳಿದೆ. ಕಾಮಗಾರಿ ವಿಳಂಬಕ್ಕೆ ತಾನು ಹೊಣೆಗಾರ ಎಂದು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯೂಎಸ್‌ಎಸ್‌ಬಿ) ಎನ್‌ಜಿಟಿ ಮುಂದೆ ಹೇಳಿದೆ.

ಸೋಮವಾರ ಪ್ರಕರಣದ ವಿಚಾರಣೆಯು ಹಸಿರು ನ್ಯಾಯಾಧಿಕರಣದ ಮುಖ್ಯ ನ್ಯಾಯಮೂರ್ತಿ ಆದರ್ಶ ಕುಮಾರ್‌ ಗೊಯೆಲ್‌, ನ್ಯಾ

ಎಸ್‌.ಪಿ.ವಾಂಗ್ಡಿ ಮತ್ತು ತಜ್ಞ ಸದಸ್ಯ ನಾಗಿನ್‌ ನಂದಾ ಅವರ ನ್ಯಾಯಪೀಠದ ಮುಂದೆ ಬಂದಿತ್ತು. ರಾಜ್ಯದ ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಮಣ ರೆಡ್ಡಿ, ಬಿಬಿಎಂಪಿ ಆಯುಕ್ತ ಅನಿಲ್‌ ಕುಮಾರ್‌, ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಮುಖ್ಯಸ್ಥ ತುಷಾರ್‌ ಗಿರಿನಾಥ್‌ ಮುಂತಾದ ಹಿರಿಯ ಅಧಿಕಾರಿಗಳು ನ್ಯಾಯಾಲಯದಲ್ಲಿ ಹಾಜರಿದ್ದರು.

ಅಡಿಷನಲ್‌ ಸಾಲಿಸಿಟರ್‌ ಜನರಲ್‌ ಮಾಧವಿ ದಿವಾನ್‌ ಮತ್ತು ರಾಜ್ಯದ ಪರ ವಕೀಲ ದರ್ಪಣ್‌ ಅವರು ನ್ಯಾಯಾಧಿಕರಣ ನೀಡಿರುವ ಆದೇಶಗಳನ್ನು ಪಾಲಿಸಲು ಸಾಧ್ಯವಾಗಿಲ್ಲ ಎಂದು ಕ್ಷಮೆಯಾಚಿಸಿದರು. ಬಳಿಕ ರಾಜ್ಯ ಸರ್ಕಾರವು ನ್ಯಾಯಾಧಿಕರಣದ ನಿರ್ದೇಶನಗಳನ್ನು ಜಾರಿಗೆ ತರಲು ಗಂಭೀರವಾಗಿ ಯತ್ನಿಸಿದೆ ಎಂದು ಮನವರಿಕೆ ಮಾಡಿಕೊಡಲು ಪ್ರಯತ್ನಿಸಿದರು.

ಕೆರೆ ಪುನರುಜ್ಜೀವನಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ಕಾಮಗಾರಿಗಳ ಮೇಲುಸ್ತುವಾರಿಯನ್ನು ನೋಡಿಕೊಳ್ಳಲು ನೇಮಿಸಲಾಗಿದ್ದ ನಿವೃತ್ತ ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ ಅವರ ನೇತೃತ್ವದ ಸಮಿತಿಯ ಪರವಾಗಿ ಹಾಜರಾದ ಹಿರಿಯ ವಕೀಲ ರಾಜ್‌ ಪಂಜ್ವಾನಿ, ನ್ಯಾಯಾಧಿಕರಣದ ನಿರ್ದೇಶನಗಳನ್ನು ಪಾಲಿಸುವಲ್ಲಿ ರಾಜ್ಯ ಸರ್ಕಾರ ವಿಳಂಬ ಮಾಡಿದೆ ಎಂದು ವಾದಿಸಿದರು.

ನ್ಯಾಯಾಧಿಕರಣವು ಜೂನ್‌ 2019ರ ಅಂತ್ಯದೊಳಗೆ ಕೊಳಚೆ ಸಂಸ್ಕರಣ ಘಟಕ(ಎಸ್‌ಟಿಪಿ)ಗಳನ್ನು ಸ್ಥಾಪಿಸಬೇಕು ಮತ್ತು ಬೆಳ್ಳಂದೂರು, ಅಗರ ಮತ್ತು ವರ್ತೂರು ಕೆರೆಗಳಿಗೆ ಸಂಸ್ಕರಿಸದ ನೀರು ಹರಿಯದಂತೆ ನೋಡಬೇಕು ಎಂದು ತಾಕೀತು ಮಾಡಿತ್ತು. ಆದರೆ ರಾಜ್ಯ ಸರ್ಕಾರ ನಿಗದಿತ ಪ್ರಮಾಣದಲ್ಲಿ ಎಸ್‌ಟಿಪಿ ಸ್ಥಾಪನೆ ಮಾಡಲು ವಿಫಲವಾಗಿದೆ. ಹಾಗೆಯೇ ಜೂನ್‌ನಲ್ಲಿ ನೀಡಬೇಕಿದ್ದ ಕಾರ್ಯಕ್ಷಮತೆ ಬ್ಯಾಂಕ್‌ ಗ್ಯಾರಂಟಿಯನ್ನು ನವೆಂಬರ್‌ನಲ್ಲಿ ನೀಡಿದೆ ಎಂದು ನ್ಯಾಯಾಧಿಕರಣದ ಗಮನಕ್ಕೆ ರಾಜ್‌ ಪಂಜ್ವಾನಿ ತಂದರು.

ನಿಗದಿತ ಕಾಲಮಿತಿಯಲ್ಲಿ ಕೆರೆ ಶುದ್ಧೀಕರಣ ಚಟುವಟಿಕೆಗಳು ನಡೆಯುತ್ತಿಲ್ಲ. ಜೂನ್‌ 30ರ ಗಡುವನ್ನು ಮುರಿಯಲು ಸರ್ಕಾರಕ್ಕೆ ಯಾವುದೇ ಕಾರಣಗಳಿರಲಿಲ್ಲ. ಆದರೂ ಗಡುವು ಮುರಿದಿದ್ದಾರೆ. ನ್ಯಾ.ಹೆಗ್ಡೆ ಅವರು ಸೆಪ್ಟೆಂಬರ್‌ ತಿಂಗಳಿನಲ್ಲಿ ನೀಡಿದ ತಮ್ಮ ವರದಿಯಲ್ಲಿಯೂ ರಾಜ್ಯ ಸರ್ಕಾರದ ವಿಳಂಬವನ್ನು ಉಲ್ಲೇಖಿಸಿದ್ದಾರೆ ಎಂದು ನ್ಯಾಯಾಧಿಕರಣದ ಗಮನಕ್ಕೆ ತಂದರು.

ಕೊಳಚೆ ನಿರ್ವಹಣೆಯಲ್ಲಿ ವಿಫಲವಾಗಿದ್ದರೆ ಯಾರು ಹೊಣೆ ಎಂದು ಈ ಸಂದರ್ಭದಲ್ಲಿ ರಾಜ್ಯದ ಪರ ವಕೀಲರನ್ನು ನ್ಯಾಯಾಧಿಕರಣ ಕೇಳಿತು. ನಾವು ವಿಳಂಬವಾಗಿರುವುದರ ಹೊಣೆ ಹೊತ್ತಿಕೊಳ್ಳುವುದಾಗಿ ಜಲಮಂಡಳಲಿ ನ್ಯಾಯಾಧಿಕರಣಕ್ಕೆ ತಿಳಿಸಿತು.

ನ್ಯಾ.ಹೆಗ್ಡೆ ವರದಿ ಪ್ರಕಾರ ಸೆ.20ಕ್ಕೆ ಹಾಗೂ ನ್ಯಾಯಾಧಿಕರಣದ ವರದಿಯ ಪ್ರಕಾರ ಜೂನ್‌ 30ರೊಳಗೆ ಎಸ್‌ಟಿಪಿ ಕಾರ್ಯನಿರ್ವಹಿಸಬೇಕಿತ್ತು. ಆದರೆ ನೀವು ಈಗ ಎಚ್ಚರಗೊಂಡಿದ್ದೀರಿ ಎಂದು ನ್ಯಾಯಾಧಿಕರಣ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತು. ನಾವು ವಿಳಂಬದ ಹೊಣೆ ಹೊರುತ್ತೇವೆ. ಆದರೆ ರಾತ್ರಿ, ಬೆಳಗಾಗುವುದರೊಳಗೆ ಎಲ್ಲವನ್ನೂ ಮಾಡಿ ಮುಗಿಸಲು ಸಾಧ್ಯವಿಲ್ಲ ಎಂದು ರಾಜ್ಯದ ಪರ ಮಾಧವಿ ದಿವಾನ್‌ ವಾದಿಸಿದರು.

ಆದರೆ ರಾಜ್ಯ ನೀಡಿರುವ ಪ್ರಮಾಣ ಪತ್ರ ಮತ್ತು ವರದಿ ತೀರ ದೊಡ್ಡದಾಗಿದೆ. ಇದರಲ್ಲಿ ಮಾಹಿತಿ ಹುಡುಕುವುದೇ ಕಠಿಣವಾಗಿದೆ. ನೀವು ಸಂಕ್ಷಿಪ್ತ ವರದಿಯೊಂದನ್ನು ಸಲ್ಲಿಸಿ ಎಂದು ರಾಜ್ಯಕ್ಕೆ ಸೂಚಿಸಿದ ನ್ಯಾಯಾಧಿಕರಣ ಪ್ರಕರಣದ ವಿಚಾರಣೆಯನ್ನು ಡಿ.11ಕ್ಕೆ ಮುಂದೂಡಿತು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಪ್ರಕರಣದಲ್ಲಿ ಅರ್ಜಿದಾರರಾಗಿರುವ ನಮ್ಮ ಬೆಂಗಳೂರು ಪ್ರತಿಷ್ಠಾನದ ಪರ ಸಾರಾಂಶ್‌ ಜೈನ್‌ ನ್ಯಾಯಾಧಿಕರಣದಕಲ್ಲಿ ಉಪಸ್ಥಿತರಿದ್ದರು.

 6 ತಿಂಗಳಲ್ಲಿ ಎಸ್‌ಟಿಪಿ ಸ್ಥಾಪನೆ: ವಾಗ್ದಾನ

ಎಸ್‌ಟಿಪಿ ನಿರ್ಮಾಣದ ಬಗ್ಗೆ ಯಾಕೆ ವಿಳಂಬ ಮಾಡುತ್ತಿದ್ದೀರಿ? ನೀವು ಈಗ ನೀಡುತ್ತಿರುವ ಕಾರಣವನ್ನೇ ಕಳೆದ ಎರಡು ವರ್ಷಗಳಿಂದ ಹೇಳುತ್ತಿದ್ದೀರಿ. ಎಸ್‌ಟಿಪಿ ರಚನೆಗೆ ಕಾಲ ಮಿತಿ ವಿಸ್ತರಿಸುವ ಅಧಿಕಾರ ಮಾಲಿನ್ಯ ನಿಯಂತ್ರಣ ಮಂಡಳಿಗೆ ಇಲ್ಲ ನ್ಯಾಯಾಧಿಕರಣ ತಿಳಿಸಿತು.

ನಾವು ಎಸ್‌ಟಿಪಿ ಸ್ಥಾಪಿಸದ ಕೆಲವರ ಮೇಲೆ ಕ್ರಿಮಿನಲ್‌ ಕೇಸ್‌ ಹಾಕಿದ್ದೇವೆ ಎಂದು ರಾಜ್ಯದ ಪರ ವಕೀಲರು ಹೇಳಿದಾಗ ಅಷ್ಟುಸಾಕಾ ಎಂದ ನ್ಯಾಯಾಧಿಕರಣ ಮರು ಪ್ರಶ್ನೆ ಹಾಕಿತು. ಆರು ತಿಂಗಳೊಳಗೆ ನಾವು ಎಸ್‌ಟಿಪಿ ಬಗೆಗಿನ ನಿಮ್ಮ ಆದೇಶವನ್ನು ಸಂಪೂರ್ಣವಾಗಿ ಜಾರಿಗೆ ತರುತ್ತೇವೆ ಎಂದು ರಾಜ್ಯ ಸರ್ಕಾರ ನ್ಯಾಯಾಧಿಕರಣಕ್ಕೆ ಭರವಸೆ ನೀಡಿತು.