ಮೈಸೂರು(ಏ.04): ಭಾರತೀಯ ಹವಾಮಾನ ಇಲಾಖೆಯ ಈ ವಾರದ ಮುನ್ಸೂಚನೆ ಪ್ರಕಾರ ಮೈಸೂರು ಜಿಲ್ಲೆಯಲ್ಲಿ ಏ.4 ರಿಂದ 8 ರವರೆಗೆ ಮೋಡ ಕವಿದ ವಾತಾವರಣ ಇರಲಿದ್ದು, ಚದುರಿದಂತೆ ಹಗುರವಾದ ಮಳೆ ಬರುವ ಸಾಧ್ಯತೆ ಇದೆ ಎಂದು ನಾಗನಹಳ್ಳಿಯ ಗ್ರಾಮೀಣ ಕೃಷಿ ಹವಾಮಾನ ಸೇವಾ, ಕೃಷಿ ಹವಾಮಾನ ಕ್ಷೇತ್ರ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.

ಕೃಷಿ ಸಲಹೆಗಳು- ಜಿಲ್ಲೆಯಲ್ಲಿ ಕೋವಿಡ್‌-19 ವೈರಾಣುವಿನ ಹಾವಳಿ ಹೆಚ್ಚಾಗಿರುವುದರಿಂದ ರೈತ ಬಾಂಧವರು ಅತ್ಯಾವಶ್ಯವಾಗಿರುವ ಕೃಷಿ ಚಟುವಟಿಕೆಗಳಲ್ಲಿ ಮಾತ್ರ ಭಾಗವಹಿಸುವುದು. ಇಲ್ಲವಾದಲ್ಲಿ ಅನಾವಶ್ಯಕವಾಗಿ ಹೊರಬರದೆ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಆರೋಗ್ಯ ಕಾಪಾಡಿಕೊಳ್ಳುವಂತೆ ತಿಳಿಸಲಾಗಿದೆ.

ಕೊರೋನಾ ಕಾಟ: ನೈರುತ್ಯ ರೈಲ್ವೆಯಿಂದ ಮಾಸ್ಕ್‌, ಸ್ಯಾನಿಟೈಸರ್‌ ಉತ್ಪಾದನೆ 

ಮಾವು ಬೆಳೆಯಲ್ಲಿ ಕಾಯಿ ಉದುರುವುದು ಕಂಡು ಬಂದಿದೆ. ಮಾವಿನ ಬೆಳೆ ಕಾಯಿಕಟ್ಟುವ (ಗೊಟ್ಟಿ) ಹಂತದಲ್ಲಿ ಇದ್ದು, ರೈತರು ತಪ್ಪದೆ ನೀರುಣಿಸಬೇಕು. ನೀರಿನ ಅನುಕೂಲತೆ ಹೆಚ್ಚಿಗೆ ಇದ್ದ ರೈತರು ಕಾಯಿಕಟ್ಟುವ ಹಂತದಿಂದ ಮಾಗುವ ಹಂತದವರೆಗೆ ಪ್ರತಿ 15- 20 ದಿನಗಳಿಗೊಮ್ಮೆ ನೀರುಣಿಸಬೇಕು. ಮಾವಿನಲ್ಲಿ ಕಾಯಿಗಳು ಉದುರುವುದನ್ನು ತಡೆಗಟ್ಟಲು ನ್ಯಾಪ್ತಲಿನ್‌ ಅಸಿಟಿಕ್‌ ಆಸಿಡ್‌ 20 ಪಿಪಿಎಂ 15 ದಿನಗಳಿಗೊಮ್ಮೆ 2 ಬಾರಿ ಕೊಡುವುದು.

ಬೇಸಿಗೆ ತಿಂಗಳಿನಲ್ಲಿ ಪಶು ಸಂಗೋಪನಾ ಸಲಹೆಗಳು:

ದನಕರುಗಳ ಕೊಟ್ಟಿಗೆಯ ಮೇಲೆ ಹುಲ್ಲಿನ ಹೊದಿಕೆಯನ್ನು ಹಾಕಿ, ಮಧ್ಯಾಹ್ನದಲ್ಲಿ ದಿನದಲ್ಲಿ 2- 3 ಸಲ ನೀರು ಹೊಡೆಯಬೇಕು. ಹಾಗೂ ಕೊಟ್ಟಿಗೆಯ ನೆಲ ಮತ್ತು ಗೋಡೆಗಳಿಗೂ ನೀರು ಹೊಡೆಯಬೇಕು. ಇದರಿಂದ ಕೊಟ್ಟಿಗೆಯು ತಕ್ಕಮಟ್ಟಿಗೆ ತಂಪಾಗಿ ಉಳಿಯುತ್ತದೆ. ಕೊಟ್ಟಿಗೆಯಲ್ಲಿ ಗಾಳಿ ಸರಾಗವಾಗಿ ಅಡುವಂತೆ ವ್ಯವಸ್ಥೆ ಮಾಡಬೇಕು. ಸ್ವಚ್ಛವಾದ ನೀರನ್ನು ಮೇಲಿಂದ ಮೇಲೆ ಕುಡಿಸಬೇಕು.

ಲಾಕ್‌ಡೌನ್‌: ಮದ್ದೂರಿನಲ್ಲಿ 25,920 ಲೀಟರ್‌ ಮದ್ಯ ವಶ

ಜಾನುವಾರು, ರೇಷ್ಮೆ ಹಾಗೂ ಕೋಳಿ ಸಾಕಣೆ ಕೊಠಡಿಯ ಉಷ್ಣಾಂಶದ ಸ್ಥಿರತೆಯನ್ನು ಕಾಪಾಡಿಕೊಳ್ಳುವಂತೆ ಕೃಷಿ ಹವಾಮಾನ ಕ್ಷೇತ್ರ ವಿಭಾಗದ ಹಿರಿಯ ಕ್ಷೇತ್ರ ಅಧೀಕ್ಷಕ ಡಾ.ಪಿ. ಪ್ರಕಾಶ್‌, ಸಹ ಸಂಶೋಧಕ ಎನ್‌. ನರೇಂದ್ರಬಾಬು ಸಲಹೆ ನೀಡಿದ್ದಾರೆ. ರೈತರು ಹೆಚ್ಚಿನ ಮಾಹಿತಿಗಾಗಿ ದೂ: 0821- 2591267, ಮೊ: 94498 69914, 93435 32154 ಸಂಪರ್ಕಿಸಬಹುದು.