ಮಂಗಳೂರು ವಿದ್ಯಾರ್ಥಿನಿ ಹಾಗೂ ಹವ್ಯಾಸಿ ಮಾಡೆಲ್ ಪ್ರೇಕ್ಷಾ ಸಾವಿನ ಪ್ರಕರಣಕ್ಕೆ ಇದೀಗ ಹೊಸ ಟ್ವಿಸ್ಟ್ ಸಿಕ್ಕಿದೆ.  ಸಾವಿನ ಬಳಿಕ ಹಲವರನ್ನು ಬಂಧಿಸಲಾಗಿದೆ. 

ಉಳ್ಳಾಲ (ಮಾ.13):  ಕುಂಪಲ ಆಶ್ರಯಕಾಲನಿ ನಿವಾಸಿ ವಿದ್ಯಾರ್ಥಿನಿ ಹಾಗೂ ಹವ್ಯಾಸಿ ಮಾಡೆಲ್‌ ಪ್ರೇಕ್ಷಾ(17) ನಿಗೂಢ ಸಾವಿನ ಪ್ರಕರಣಕ್ಕೆ ಸಂಬಂಧಿಸಿ ಗಾಂಜಾ ವ್ಯಸನಿಗಳ ಮೇಲೆ ಆರೋಪಿಸಿರುವ ಮೋಹನ್‌ ಶೆಟ್ಟಿಎಂಬವರ ಮನೆಗೆ ಗುರುವಾರ ತಡರಾತ್ರಿ ದುಷ್ಕರ್ಮಿಗಳು ಕಿಟಕಿ ಗಾಜುಗಳಿಗೆ ಕಲ್ಲೆಸೆದು ಹಾನಿಗೊಳಿಸಿದ್ದಾರೆ. ಪ್ರಕರಣ ಸಂಬಂಧ ಉಳ್ಳಾಲ ಪೊಲೀಸರು 13 ಮಂದಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇವರಲ್ಲಿ 11 ಮಂದಿ ಗಾಂಜಾ ಸೇವಿಸಿರುವ ವರದಿ ಪಾಸಿಟಿವ್‌ ಆಗಿದೆ.

ಶುಕ್ರವಾರ ಮನೆಯಲ್ಲಿ ಮೋಹನ್‌ ಮತ್ತು ಪತ್ನಿ ಇಬ್ಬರೇ ಇದ್ದ ಸಂದರ್ಭ 12ರ ವೇಳೆಗೆ ಮನೆಯ ಕಿಟಕಿ ಗಾಜಿಗೆ ಕಲ್ಲೆಸೆಯಲಾಗಿದೆ. ಗಾಜು ಒಡೆದು ಕಲ್ಲು ಮನೆಯೊಳಕ್ಕೆ ಬಿದ್ದಿದೆ. ಪ್ರೇಕ್ಷಾ ಸಾವು ಸಂಭವಿಸಿದ ಸಂದರ್ಭ ಮೋಹನ್‌ ಶೆಟ್ಟಿಗಾಂಜಾ ವ್ಯಸನಿಗಳ ಕೃತ್ಯ ಎಂದು ಆರೋಪಿಸಿದ್ದರು. ಅಲ್ಲದೆ ಪ್ರೇಕ್ಷಾ ಮನೆಗೆ ಬಂದಿದ್ದ ಮೂವರು ಯುವಕರ ಕುರಿತು ಹೇಳಿರುವ ಸ್ಥಳೀಯ ಅಂಗಡಿ ಮಾಲೀಕರಿಗೂ ಗಾಂಜಾ ಗ್ಯಾಂಗ್‌ ಜೀವ ಬೆದರಿಕೆಯೊಡ್ಡಿದೆ.

ಕಾಲೇಜಿಗೆ ರಜೆ ಹಾಕಿ ಮನೆಯಲ್ಲಿದ್ದಳು : ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾದಳು ...

ಸಚಿವ ಅಂಗಾರ ಭೇಟಿ: ಪ್ರೇಕ್ಷಾ ಮನೆಗೆ ಶುಕ್ರವಾರ ಮೀನುಗಾರಿಕೆ, ಬಂದರು ಮತ್ತು ಒಳನಾಡು ಸಾರಿಗೆ ಸಚಿವ ಎಸ್‌. ಅಂಗಾರ ಭೇಟಿ ನೀಡಿದರು. ಪ್ರೇಕ್ಷಾಳ ಹೆತ್ತವರನ್ನು ಸಮಾಧಾನಿಸಿದ ಸಚಿವರು, ಪ್ರಕರಣದ ಹಿಂದೆ ಇರುವವರ ವಿರುದ್ಧ ಕಠಿಣ ಕ್ರಮಕ್ಕೆ ಪೊಲೀಸ್‌ ಕಮೀಷನರ್‌ ಅವರಲ್ಲಿ ಆಗ್ರಹಿಸುತ್ತೇನೆ. ಯಾವ ಗಾಂಜಾದವರಿಗೂ ಹೆದರಬೇಕಾದ ಅವಶ್ಯಕತೆಯಿಲ್ಲ. ಪ್ರಸ್ತುತ ಕಾನೂನು ಕಠಿಣವಾಗಿರುವುದರಿಂದ ಚಿಂತಿಸದಿರಿ ಎಂದರು.

ಗಾಂಜಾ ವ್ಯಸನಿಗಳ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ: ಪ್ರೇಕ್ಷಾ ತಂದೆ ಚಿತ್ತಪ್ರಸಾದ್‌

ಮಗಳ ಅಂತಿಮ ಸಂಸ್ಕಾರದ ಸಂದರ್ಭದಲ್ಲೂ ಗಾಂಜಾ ಗ್ಯಾಂಗ್‌ ಬೆದರಿಕೆಯನ್ನೊಡ್ಡಿತ್ತು. ಗಾಂಜಾ ವ್ಯಸನಿಗಳ ಕುರಿತು ಮಾತನಾಡದಂತೆ ಎಚ್ಚರಿಕೆಯನ್ನು ನೀಡಿದೆ. ಬಳಿಕ ಅಂಗಡಿಯವರಿಗೆ, ಸ್ಥಳೀಯರಿಗೆ ಜೀವಬೆದರಿಕೆಯನ್ನು ಒಡ್ಡಿದೆ. ಅವರಿಗೆ ಇಷ್ಟುಕಿರುಕುಳ ನೀಡಿದವರು ಮಗಳಿಗೆ ಎಷ್ಟುಕಿರುಕುಳ ನೀಡಿರಬಹುದು? ಅವರ ಮಾನಸಿಕ ಕಿರುಕುಳದಿಂದಲೇ ಬೇಸತ್ತು ಪ್ರೇಕ್ಷಾ ಸಾವನ್ನಪ್ಪಿದ್ದಾಳೆ ಎಂದು ಚಿತ್ತಪ್ರಸಾದ್‌ ಸಚಿವ ಅಂಗಾರರವರಲ್ಲಿ ತಿಳಿಸಿದರು.

ಬೆಳಗ್ಗೆ ಕರೆ ಮಾಡಿದ್ದಳು: ಪ್ರೇಕ್ಷಾ ಬೆಂಗಳೂರಿನಲ್ಲಿ ನಡೆಯುವ ಫೋಟೋ ಶೂಟ್‌ನಿಂದ ಭವಿಷ್ಯವಿದೆ. ಪರಿಚಿತ ಯುವಕನೇ ಕರೆದುಕೊಂಡು ಹೋಗುವ ಭರವಸೆ ನೀಡಿದ ಕಾರಣಕ್ಕೆ ಬೆಂಗಳೂರಿಗೆ ತೆರಳಲು ಹೇಳಿದ್ದೆವು. ಅದಕ್ಕಾಗಿ ಸಾವನ್ನಪ್ಪುವ ಹಿಂದಿನ ದಿನ ಬ್ಯೂಟಿಪಾರ್ಲರ್‌ಗೆ ಹೋಗಿ ಫೇಷಿಯಲ್‌ ಕೂಡಾ ಮಾಡಿಸಿದ್ದಳು. ಆದರೆ ಈ ನಡುವೆ ಗೆಳೆಯ ಯತೀನ್‌ ರಾಜ್‌ ಬೆಂಗಳೂರು ತೆರಳದಂತೆ ಬೆದರಿಕೆ ಒಡ್ಡಿರುವ ಕುರಿತು ಪ್ರೇಕ್ಷಾ ಸಹೋದರಿಯಲ್ಲಿ ತಿಳಿಸಿದ್ದಳು. ವಿಚಾರ ಬೇರೆ ಯಾರಿಗೂ ಗೊತ್ತಿರಲಿಲ್ಲ. ಆತ್ಮಹತ್ಯೆ ನಡೆಸಿದ ದಿನದಂದು ಬೆಳಿಗ್ಗೆ 10.30ಕ್ಕೆ ತಂದೆಗೆ ಕರೆ ಮಾಡಿರುವ ಪ್ರೇಕ್ಷಾ ಮಧ್ಯಾಹ್ನ ಹೊರಡುವುದಾಗಿಯೂ ತಿಳಿಸಿದ್ದಳು. ಆ ಬಳಿಕ ನಡೆದ ಘಟನೆಯೇ ಬೇರೆಯಾಗಿದೆ. ಪ್ರೇಕ್ಷಾ ಆತ್ಮಹತ್ಯೆ ನಡೆಸುವ ವಿಚಾರವನ್ನು ಬೆದರಿಕೆ ಒಡ್ಡಿದವರಿಗೆ ಹೇಳಿರುತ್ತಾಳೆ. ಅವರು ಮನೆ ಸಮೀಪದ ಮಹಿಳೆಯೊಬ್ಬರಿಗೆ ಸೂಚನೆಯನ್ನು ನೀಡಿದ್ದರು. ಮಹಿಳೆ ಮನೆಗೆ ಬಂದು ಬಾಗಿಲು ಬಡಿದಾಗ ತೆಗೆದಿರಲಿಲ್ಲ. ಬಳಿಕ ಬೆದರಿಕೆಯೊಡ್ಡಿದ ತಂಡವೇ ಹಿಂಬಾಗಿಲನ್ನು ಮುರಿದು ಒಳನುಗ್ಗಿದಾಗ ಪ್ರೇಕ್ಷಾ ನೇತಾಡುವುದನ್ನು ಕಂಡು ವಾಪಸ್ಸಾಗಿದ್ದರು. ಪ್ರೇಕ್ಷಾ ಆತ್ಮಹತ್ಯೆ ನಡೆಸುವಾಗಲೂ ರಾರ‍ಯಕ್‌ನಲ್ಲಿ ಮೊಬೈಲ್‌ ಇಟ್ಟಿದ್ದು, ಅದರಲ್ಲಿ ಸಾಯುವ ಮುನ್ನ ವೀಡಿಯೋ ಮಾಡಿರುವ ಸಾಧ್ಯತೆಗಳೂ ಇವೆ ಎಂದು ಚಿತ್ತಪ್ರಸಾದ್‌ ಸಚಿವರಲ್ಲಿ ತಿಳಿಸಿದ್ದಾರೆ.

ತನ್ನ ಮೇಲೂ ಅಟ್ಯಾಕ್‌ ಆಗಿತ್ತು: ಸತೀಶ್‌ ಕುಂಪಲ

ಈ ಹಿಂದೆ ಗಾಂಜಾ ತಂಡ ತನ್ನ ಮೇಲೆಯೂ ಗಂಭೀರವಾಗಿ ದಾಳಿ ನಡೆಸಿತ್ತು. ಆದರೆ ಎಲ್ಲಿಯೂ ಅದನ್ನು ಪ್ರಚಾರ ಮಾಡಿರಲಿಲ್ಲ. ಈ ಭಾಗದಲ್ಲಿ ಇಂತಹ ದುಷ್ಕೃತ್ಯಗಳು ಮುಂದುವರಿಯುತ್ತಲೇ ಇದೆ. ಆಶ್ರಯಕಾಲನಿ ನಿವಾಸಿಗಳು ಎಲ್ಲರೂ ಒಳ್ಳೆಯವರು. ಹೊರಗಿನಿಂದ ಬರುವ ಬೆರಳೆಣಿಕೆ ಮಂದಿ ಇಲ್ಲಿ ದುಷ್ಕೃತ್ಯ ಎಸಗಿ, ಮನೆಯವರ ಮರ್ಯಾದೆಯನ್ನು ಬಲಿ ಪಡೆದಯುವುದರ ಜೊತೆಗೆ ಊರಿನ ಮರ್ಯಾದೆ ಹರಣ ಮಾಡುತ್ತಿದ್ದಾರೆ. ರಾಜಕೀಯ ರಹಿತವಾಗಿ ಎಲ್ಲರೂ ಗಂಭೀರ ಸಮಸ್ಯೆ ವಿರುದ್ಧ ಹೋರಾಡಬೇಕಿದೆ ಎಂದರು.

13 ಮಂದಿ ವಶಕ್ಕೆ: ಮನೆಗೆ ಕಲ್ಲೆಸೆದ ಘಟನೆಯ ಬಳಿಕ ಸುಮಾರು 13 ಮಂದಿಯನ್ನು ಉಳ್ಳಾಲ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಇದರಲ್ಲಿ 11 ಮಂದಿಯ ಗಾಂಜಾ ವರದಿ ಪಾಸಿಟಿವ್‌ ಆಗಿದೆ. ಎಲ್ಲರ ವಿರುದ್ಧ ಪ್ರಕರಣ ದಾಖಲಾಗಿದೆ. ಇವರ ಪೈಕಿ ಪ್ರಮುಖ ಗಾಂಜಾ ಸಾಗಾಟಗಾರ ತಲೆಮರೆಸಿಕೊಂಡಿರುವುದಾಗಿ ಪೊಲೀಸ್‌ ಮೂಲಗಳು ತಿಳಿಸಿದೆ.