ಸೂಕ್ತ ಕಾಲಕ್ಕೆ ಆಸ್ಪತ್ರೆಯಲ್ಲಿ ಬೆಡ್‌ ಸಿಗದೆ ಸಾವು| ಬೆಂಗಳೂರಿನ ಬಿಟಿಎಂ ಲೇಔಟ್‌ನಲ್ಲಿ ನಡೆದ ಘಟನೆ| ವಾರದ ಹಿಂದೆಯಷ್ಟೇ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದ ಮೃತ ವ್ಯಕ್ತಿ| ಮದುವೆಯಾಗಿ ಒಂದೇ ವಾರಕ್ಕೆ ಪತಿಯನ್ನು ಕಳೆದುಕೊಂಡಿರುವ ಪತ್ನಿ ಗೋಳಾಟ| 

ಬೆಂಗಳೂರು(ಮೇ.05): ವಾರದ ಹಿಂದೆ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದ ನವವಿವಾಹಿತ ಸೋಂಕಿಗೆ ತುತ್ತಾಗಿ ಸಕಾಲಕ್ಕೆ ಆಸ್ಪತ್ರೆಯಲ್ಲಿ ಹಾಸಿಗೆ ಸಿಗದೇ ಮೃತಪಟ್ಟಿರುವ ಘಟನೆ ನಗರದಲ್ಲಿ ನಡೆದಿದೆ.

ಬಿಟಿಎಂ ಲೇಔಟ್‌ ನಿವಾಸಿಯಾಗಿರುವ ಮೃತ ವ್ಯಕ್ತಿ ಪಿಜಿವೊಂದರಲ್ಲಿ ಅಡುಗೆ ಕೆಲಸ ಮಾಡುತ್ತಿದ್ದರು. ಕೇರಳ ಮೂಲದ ಈ ವ್ಯಕ್ತಿ ಹಲವು ವರ್ಷಗಳಿಂದ ನಗರದಲ್ಲಿ ನೆಲೆಸಿದ್ದರು. ವಾರದ ಹಿಂದೆಯಷ್ಟೇ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದರು. ಆದರೆ, ಕ್ರೂರಿ ಕೊರೋನಾ ಸೋಂಕು ಆತನನ್ನು ಬಲಿ ಪಡೆದಿದ್ದು, ಇಡೀ ಕುಟುಂಬ ದುಃಖದ ಮಡುವಿನಲ್ಲಿ ಮುಳುಗಿದೆ.

"

ಆಕ್ಸಿಜನ್‌ ಕೊರತೆ: 'ಪರಿಸ್ಥಿತಿ ಭೀಕರಗೊಂಡ್ರೂ ಎಚ್ಚೆತ್ತುಕೊಳ್ಳದ ಬಿಎಸ್‌ವೈ ಸರ್ಕಾರ'

ಕೆಲ ದಿನಗಳ ಹಿಂದೆ ಅವರಿಗೆ ಮೈ ಕೈ ನೋವು, ಸುಸ್ತು ಕಾಣಿಸಿಕೊಂಡಿದ್ದು, ಆಕ್ಸಿಜನ್‌ ಪ್ರಮಾಣ ಶೇ.84ಕ್ಕೆ ಇಳಿಕೆಯಾಗಿದೆ. ತಕ್ಷಣ ಸಮೀಪದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಈ ವೇಳೆ ಕೊರೋನಾ ಸೋಂಕು ಪರೀಕ್ಷೆಗೆ ಒಳಪಡಿಸಿದ ಆಸ್ಪತ್ರೆ ಸಿಬ್ಬಂದಿ ಮೈ-ಕೈ ನೋವಿಗೆ ಮಾತ್ರೆಗಳನ್ನು ಕೊಟ್ಟು ಕಳುಹಿಸಿದ್ದಾರೆ. ಆದರೆ, ಅಷ್ಟರಲ್ಲಿ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ಮತ್ತೆ ಸೇಂಟ್‌ ಜಾನ್‌ ಆಸ್ಪತ್ರೆಗೆ ಹೋಗಿದ್ದು, ಹಾಸಿಗೆ ಸಿಕ್ಕಿಲ್ಲ. ಅನ್ಯ ಮಾರ್ಗ ಇಲ್ಲದೇ ದಂಪತಿ ಮನೆಗೆ ವಾಪಾಸಾಗಿದ್ದಾರೆ.

ರಾತ್ರಿ ಮಾತ್ರೆ ನುಂಗಿ ನಿದ್ರೆಗೆ ಜಾರಿದ್ದ ವ್ಯಕ್ತಿ ಬೆಳಗ್ಗೆ ಎಚ್ಚರವೇ ಆಗಲಿಲ್ಲ. ಈ ವೇಳೆ ಪತ್ನಿ ಎಚ್ಚರಗೊಳಿಸಲು ಪ್ರಯತ್ನಿಸಿ ವಿಫಲರಾಗಿದ್ದಾರೆ. ಬಳಿಕ ಕುಟುಂಬದವರು ಬಂದು ನೋಡಿದಾಗ ಆ ವ್ಯಕ್ತಿ ಮೃತಪಟ್ಟಿರುವುದು ಖಚಿತವಾಗಿದೆ. ಮನೆಗೆ ಆಧಾರಸ್ತಂಭವಾಗಿದ್ದ ವ್ಯಕ್ತಿಯನ್ನು ಕಳೆದುಕೊಂಡಿರುವ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ. ಮದುವೆಯಾಗಿ ಒಂದೇ ವಾರಕ್ಕೆ ಪತಿಯನ್ನು ಕಳೆದುಕೊಂಡಿರುವ ಪತ್ನಿ ಗೋಳಾಟ ಎಂತಹವರ ಹೃದಯವನ್ನು ಕಲಕುವಂತಿತ್ತು.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona