ಅವರಿನ್ನೂ  ನವದಂಪತಿ. ಮದುವೆಯಾಗಿ ಇನ್ನೂ ಒಂದು ವರ್ಷವೂ ಕಳೆದಿರಲಿಲ್ಲ. ಆದಗಲೇ ಇಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ. ತವರಿಗೆ ಹಬ್ಬಕ್ಕೆ ಹೋಗಿ ಬಂದ ಆಕೆ ಗಂಡನ ಜೊತೆಯೇ ವಿಷ ಸೇವಿಸಿದ್ದಾಳೆ. 

ನಂಜನಗೂಡು (ಏ.20):  ಮದುವೆಯಾಗಿ ವರ್ಷ ತುಂಬುವುದಕ್ಕೆ ಮೊದಲೇ ದಂಪತಿ ಭಾನುವಾರ ರಾತ್ರಿ ತಮ್ಮ ಜಮೀನಿನಲ್ಲಿ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಕೃಷ್ಣಾಪುರದಲ್ಲಿ ಜರುಗಿದೆ.

ಕೃಷ್ಣಾಪುರ ಗ್ರಾಮದ ಚಿನ್ನರಾಬೋವಿ ಪುತ್ರ ಚಂದ್ರಶೇಖರ್‌ (27) ಹಾಗೂ ಸೊಸೆ ಕವಿತಾ (18) ಆತ್ಮಹತ್ಯೆ ಮಾಡಿಕೊಂಡ ದಂಪತಿ.

ಚಂದ್ರಶೇಖರ್‌ಗೆ ತಾಲೂಕಿನ ವೆಂಕಟಾಚಲಪುರ ಗ್ರಾಮದ ಸೀತಾರಾಮು ಎಂಬವರ ಪುತ್ರಿ ಕವಿತಾಳನ್ನು ಕೊಟ್ಟು ಕಳೆದ 10 ತಿಂಗಳ ಹಿಂದೆ ಮದುವೆ ಮಾಡಿಕೊಡಲಾಗಿತ್ತು. ಯುಗಾದಿ ಹಬ್ಬಕ್ಕೆ ವೆಂಕಟಾಚಲಪುರದ ಮಾವನ ಮನೆಗೆ ಪತ್ನಿಯನ್ನು ಕರೆದುಕೊಂಡು ಹೋಗಿ ಹಬ್ಬ ಮುಗಿಸಿಕೊಂಡು ಬಂದಿದ್ದರು ಎನ್ನಲಾಗಿದೆ.

ಪ್ರೀತಿ ಬಲೆಯಲ್ಲಿ ಬಾಲಕ : ಮಧ್ಯರಾತ್ರಿ ಮಗಳ ಮೂಲಕ ಮನೆಗೆ ಕರೆಸಿ ಕೊಲೆಗೈದ ಮುಖಂಡ ...

ಭಾನುವಾರ ರಾತ್ರಿ ಜಮೀನಿನಲ್ಲಿ ಕ್ರಿಮಿನಾಶಕ ಸೇವಿಸಿ ಅಸ್ವಸ್ಥರಾಗಿದ್ದ ದಂಪತಿಯನ್ನು ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್‌. ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಚಂದ್ರಶೇಖರ್‌ ಮೃತಪಟ್ಟಿದ್ದಾರೆ. ಸೋಮವಾರ ಬೆಳಗ್ಗೆ ಕವಿತಾ ಮೃತಪಟ್ಟಿದ್ದಾರೆ. ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ, ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ ಸಾವಿಗೆ ನಿಖರ ಕಾರಣ ತಿಳಿದುಬರಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಥಳಕ್ಕೆ ಗ್ರೇಡ್‌ ಒನ್‌ ತಹಸೀಲ್ದಾರ್‌ ವಿಶ್ವನಾಥ್‌, ಎಸ್‌ಐ ಶಿವನಂಜ ಶೆಟ್ಟಿ, ಸತೀಶ್‌, ಪೇದೆಗಳಾದ ಕವೀಶ್‌, ನಾಗರಾಜ ಭೇಟಿ ನೀಡಿ ಮಹಜರು ನಡೆಸಿದರು.