New Youth Policy : ರಾಜ್ಯದಲ್ಲಿ ಮುಂದಿನ ವರ್ಷ ಹೊಸ ಯುವನೀತಿ: ಸಿಎಂ ಬೊಮ್ಮಾಯಿ ಮಾಹಿತಿ
* ರಾಜ್ಯದಲ್ಲಿ ಮುಂದಿನ ವರ್ಷ ಹೊಸ ಯುವನೀತಿ: ಸಿಎಂ
* ಬರುವ ಬಜೆಟ್‌ನಲ್ಲಿ ವಿಶೇಷ ಯೋಜನೆ ರೂಪಿಸುತ್ತೇವೆ
* ವಿವೇಕಾನಂದರ ಚಿಂತನೆಗೆ ತಕ್ಕಂತೆ ಯುವಕರ ಭವಿಷ್ಯ ರೂಪಿಸುತ್ತೇವೆ
* ಸ್ವಾಮಿ ವಿವೇಕಾನಂದರ 159ನೇ ಜನ್ಮದಿನದಲ್ಲಿ ಬೊಮ್ಮಾಯಿ ಭರವಸೆ
ಬೆಂಗಳೂರು(ಜ. 13) ರಾಜ್ಯದಲ್ಲಿ ಸರ್ಕಾರವು (Karnataka Govt) ಪರಿಣಾಮಕಾರಿಯಾದ ಹೊಸ ಯುವನೀತಿಯನ್ನು(New Yoyth Policy) ತರಲು ಉದ್ದೇಶಿಸಲಾಗಿದ್ದು, ಮುಂಬರುವ
ವರ್ಷದಲ್ಲಿ ಈ ನೀತಿ ಯುವಕರಿಗೆ ಮಾದರಿ ರೀತಿಯಲ್ಲಿ ಮಾರ್ಗದರ್ಶನ ನೀಡಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಹೇಳಿದ್ದಾರೆ.
ಸ್ವಾಮಿ ವಿವೇಕಾನಂದರ (Swami Vivekananda) 159ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ವರ್ಚುವಲ್ ಮೂಲದ ಭಾಗಿಯಾಗಿ ಮಾತನಾಡಿದ ಅವರು, ಯುವಕರಿಗೆ ತತ್ವಾಧಾರಿತವಾದಂಥ ವೈಚಾರಿಕತೆ ನೆಲೆಯಲ್ಲಿ ಹೆಚ್ಚಿನ ಬೆಂಬಲ, ಪ್ರೋತ್ಸಾಹ ನೀಡಲು ಸರ್ಕಾರ ಸಿದ್ಧವಿದೆ. ಈ ದಿಸೆಯಲ್ಲಿ ವಿಶೇಷ ಯೋಜನೆಯೊಂದನ್ನು ಮುಂದಿನ ಬಜೆಟ್‌ನಲ್ಲಿ ತರಲಾಗುವುದು. ವಿವೇಕಾನಂದರು ಯುಗ ಪುರುಷರಾಗಿದ್ದರು. ಅವರು ದೇಶದ ಯುವಸಮೂಹದ ಮೇಲೆ ಅಪಾರ ನಂಬಿಕೆ ಇಟ್ಟುಕೊಂಡಿದ್ದರು. ಅವರ ಚಿಂತನೆಗಳಿಗೆ ತಕ್ಕಂತೆ ಸರ್ಕಾರವು ಯುವಜನರ ಭವಿಷ್ಯವನ್ನು ರೂಪಿಸಲಿದೆ ಎಂದು ಅಭಿಪ್ರಾಯಪಟ್ಟರು.
ಸಾರ್ಥಕತೆಯ ಮತ್ತು ಸಾಧನೆಯ ಬದುಕನ್ನು ನಡೆಸಿ ಮತ್ತು ಸಾವಿನ ನಂತರವೂ ಬದುಕುವ ರೀತಿಯನ್ನು ತಿಳಿಸಿದ್ದಾರೆ. ಚೈತನ್ಯಮಯ ಬದುಕಿನ ದಾರಿಯನ್ನು ತೋರಿಸಿಕೊಟ್ಟಿದ್ದಾರೆ. ವಿವೇಕಾನಂದರ ಬದುಕಿನ ರೀತಿ ನೀತಿಗಳನ್ನು ಯುವಜನತೆಗೆ ಮನದಟ್ಟು ಮಾಡುವ ಕೆಲಸ ಮಾಡಬೇಕಿದೆ. ಸರ್ಕಾರ ಮತ್ತು ಸಮಾಜ ಈ ನಿಟ್ಟಿನಲ್ಲಿ ಕೆಲಸ ಮಾಡಬೇಕಿದೆ ಎಂದರು.
ಜಾಗತಿಕ ನಾಯಕತ್ವ ಸೃಷ್ಟಿ- ಡಾ. ಅಶ್ವತ್ಥ ನಾರಾಯಣ: ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಮಾತನಾಡಿ, ರಾಜ್ಯವು ಗುಣಮಟ್ಟದ ಶಿಕ್ಷಣ ಮತ್ತು ಉದ್ಯಮಶೀಲತೆಗೆ ಹೆಸರಾಗಿದ್ದು, ಸ್ವಾಮಿ ವಿವೇಕಾನಂದರ ಆಶಯದಂತೆ ಜಾಗತಿಕ ನಾಯಕತ್ವವನ್ನು ಸೃಷ್ಟಿಸುತ್ತಿದೆ ಎಂದು ಅಭಿಪ್ರಾಯಪಟ್ಟರು.
ಉಪನ್ಯಾಸಕರಿಗೆ ಸರ್ಕಾರದಿಂದ ಸಿಹಿಸುದ್ದಿ
ಅಕ್ಷರ ಕಲಿಕೆಯಷ್ಟೇ ಶಿಕ್ಷಣವಲ್ಲ, ವಿದ್ಯೆಯಲ್ಲಿ ಆಧ್ಯಾತ್ಮಿಕ, ನೈತಿಕ, ಸಾಂಸ್ಕೃತಿಕ ಮತ್ತು ಸಾಮಾಜಿಕ ಆಯಾಮಗಳು ಇರಬೇಕು. ಇದಕ್ಕೆ ತಕ್ಕಂತೆ ಶಿಕ್ಷಣವನ್ನು ಸುಧಾರಿಸಲಾಗುತ್ತಿದೆ. ರಾಷ್ಟ್ರೀಯ ಶಿಕ್ಷಣ ನೀತಿಯನ್ನು (ಎನ್‌ಇಪಿ) ರಾಜ್ಯದಲ್ಲಿ ಜಾರಿಗೊಳಿಸಲಾಗಿದೆ. ಇದರಿಂದ ಶಿಕ್ಷಣದ ಗುಣಮಟ್ಟಕನಿಷ್ಠ ಪಕ್ಷ 10 ಪಟ್ಟು ಸುಧಾರಿಸಲಿದೆ. ಎನ್‌ಇಪಿ ಜಾರಿಗೊಳಿಸಿದ ಮೊದಲ ರಾಜ್ಯ ಕರ್ನಾಟಕವಾಗಿದೆ ಎಂದು ಹೇಳಿದರು.
ಕ್ರೀಡಾ ಮತ್ತು ಯುವ ಸಬಲೀಕರಣ ಸಚಿವ ನಾರಾಯಣ ಗೌಡ ಮಾತನಾಡಿ, ಯುವಶಕ್ತಿ ದೇಶದ ಶಕ್ತಿ. ಯುವ ಪ್ರತಿಭೆಗಳಿಗೆ ಸೂಕ್ತ ವೇದಿಕೆ ಕಲ್ಪಿಸುವುದು ನಮ್ಮ ಕರ್ತವ್ಯ. ರಾಜ್ಯಮಟ್ಟದಿಂದ ಗ್ರಾಮಮಟ್ಟದವರೆವಿಗೂ ಜ.12ರಿಂದ 18ರವರೆಗೆ ಯುವ ಸಂಸದ, ಯುವ ಗ್ರಾಮ ಸಭೆ, ಯುವ ವಾರ್ಡ್ ಸಭೆ ಸೇರಿದಂತೆ ಪ್ರತಿ ಯುವ ಸಮುದಾಯಕ್ಕೆ ನೆರವಾಗುವ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಮಾದಕ ವ್ಯಸನ, ಮಹಿಳಾ ದೌರ್ಜನ್ಯ ಮತ್ತು ಸೈಬರ್ ಅಪರಾಧಗಳ ತಡೆಗಟ್ಟುವ ಬಗ್ಗೆ ಯವು ಸಮುದಾಯಕ್ಕೆ ಜಾಗೃತಿ ಮೂಡಿಸಲಾಗುತ್ತದೆ. ಸರ್ಕಾರದಿಮದ ಯುವ ಸಮುದಾಯಕ್ಕೆ ಸುಮಾರು 540 ಯೋಜನೆಗಳಿದ್ದು, ಈ ಸಪ್ತಾಹದಲ್ಲಿ ಅವುಗಳ ಬಗ್ಗೆ ಮಾಹಿತಿ ನೀಡಿ ಅರಿವು ಮೂಡಿಸಲಾಗುತ್ತದೆ ಎಂದು ತಿಳಿಸಿದರು. ಇದೇ ವೇಳೆ ಯುವಜನರಿಗೆ ಸಂಬಂಧಿಸಿದ ಸರ್ಕಾರದಿಂದ ಇರುವ 540 ಯೋಜನೆಗಳ ಮಾಹಿತಿ ಇರುವ ಯುವಜನ ಕಣಜ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು.