ಹೊಸ ವರ್ಷಾಚರಣೆಗಾಗಿ ಕಾಫಿನಾಡು ಚಿಕ್ಕಮಗಳೂರಿನಲ್ಲಿ ಜಿಲ್ಲಾಡಳಿತವು ರೇವ್ ಪಾರ್ಟಿ ನಿಷೇಧದಂತಹ ಕಠಿಣ ನಿಯಮಗಳನ್ನು ಜಾರಿಗೆ ತಂದಿದೆ. ಆದರೆ, ಈ ಬಾರಿ ವಾರದ ಮಧ್ಯದಲ್ಲಿ ಹೊಸ ವರ್ಷ ಬಂದಿರುವುದರಿಂದ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ.
ವರದಿ : ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್
ಚಿಕ್ಕಮಗಳೂರು (ಡಿ.31): ಪ್ರವಾಸಿಗರ ಸ್ವರ್ಗ ಕಾಫಿನಾಡ ಚಿಕ್ಕಮಗಳೂರಲ್ಲಿ ಹೊಸ ವರ್ಷವನ್ನ ಬರಮಾಡಿಕೊಳ್ಳಲು ಸಿದ್ಧತೆಗಳೇನೋ ಜೋರಾಗಿ ನಡೆಯುತ್ತಿವೆ. ಆದರೆ, ಜಿಲ್ಲಾಡಳಿತ ಕೂಡ ಜಿಲ್ಲಾದ್ಯಂತ ಅಷ್ಟೆ ಕಟ್ಟುನಿಟ್ಟಿನ ನಿಯಮಾವಳಿಗಳನ್ನ ಜಾರಿಗೆ ತಂದಿದೆ. ಸಂಭ್ರಮಾಚರಣೆ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಡಿಸೆಂಬರ್ 24ರಿಂದಲೇ ಬೈಕ್ ವೀಲಿಂಗ್ ಹಾಗೂ ಡ್ರಿಂಕ್ ಅಂಡ್ ಡ್ರೈವ್ ವಿರುದ್ಧ ವಿಶೇಷ ತಪಾಸಣಾ ಅಭಿಯಾನ ಆರಂಭಿಸಿದ್ದಾರೆ.
ಚೆಕ್ ಪೋಸ್ಟ್ , ಸಿಸಿಟಿವಿ ಕ್ಯಾಮರಾ ಕಣ್ಗಾವಲು:
ಜಿಲ್ಲೆಯಾದ್ಯಂತ 25 ಚೆಕ್ ಪೋಸ್ಟ್‌ಗಳನ್ನು ಸ್ಥಾಪಿಸಲಾಗಿದ್ದು, 8 ಚೆಕ್ ಪೋಸ್ಟ್‌ಗಳು ಜಿಲ್ಲೆಯ ಗಡಿಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಸುರಕ್ಷತೆಯ ದೃಷ್ಟಿಯಿಂದ ಹೋಂಸ್ಟೇ ಮತ್ತು ರೆಸಾರ್ಟ್ ಮಾಲೀಕರು ಕಡ್ಡಾಯವಾಗಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕು ಮತ್ತು ಭದ್ರತಾ ಸಿಬ್ಬಂದಿಯನ್ನು ನೇಮಿಸಿಕೊಳ್ಳಬೇಕು ಎಂದು ಸೂಚಿಸಲಾಗಿದೆ. ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಯ ಸಂಪೂರ್ಣ ಜವಾಬ್ದಾರಿಯನ್ನು ಆಯೋಜಕರೇ ಹೊರಬೇಕಾಗುತ್ತದೆ.ಈ ಬಾರಿ ರೇವ್ ಪಾರ್ಟಿಗಳಿಗೆ ಕಟ್ಟುನಿಟ್ಟಾಗಿ ನಿಷೇಧ ಹೇರಲಾಗಿದ್ದು, ಪಾರ್ಟಿ ನಡೆಯುವ ಸ್ಥಳಗಳಲ್ಲಿ ಮಫ್ತಿ ಪೊಲೀಸರ ತಂಡಗಳು ನಿರಂತರವಾಗಿ ನಿಗಾ ಇರಿಸಲಿವೆ.
ಡಿಜೆ ಬಳಕೆಯನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದ್ದು, ರಾತ್ರಿ 10 ಗಂಟೆಯವರೆಗೆ ಮಾತ್ರ ಮ್ಯೂಸಿಕ್ ಸಿಸ್ಟಮ್ ಬಳಸಲು ಅನುಮತಿ ನೀಡಲಾಗಿದೆ. ಸಂಭ್ರಮಾಚರಣೆಗೆ ರಾತ್ರಿ 12:30ರವರೆಗೆ ಮಾತ್ರ ಕಾಲಾವಕಾಶವಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಸಂಭ್ರಮಾಚರಣೆ ಮಾಡುವಂತಿಲ್ಲ. ಸಾರ್ವಜನಿಕರಿಗೆ ತೊಂದರೆ ನೀಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವುದಾಗಿ ಎಸ್ ಪಿ ವಿಕ್ರಮ್ ಅಮಟೆ ಎಚ್ಚರಿಸಿದ್ದಾರೆ. ಭದ್ರತೆಗಾಗಿ ಎಂಟು ಕೆ.ಎಸ್.ಆರ್.ಪಿ. ತುಕಡಿಗಳು ಮತ್ತು ಸಾವಿರಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಹೊಸ ವರ್ಷದ ಸಡಗರಕ್ಕೆ 'ವರ್ಕಿಂಗ್ ಡೇ' ಎಫೆಕ್ಟ್:
ಪ್ರವಾಸಿಗರ ಸ್ವರ್ಗ ಕಾಫಿನಾಡು ಚಿಕ್ಕಮಗಳೂರಿನಲ್ಲಿ ಹೊಸ ವರ್ಷವನ್ನು ಬರಮಾಡಿಕೊಳ್ಳಲು ಸಿದ್ಧತೆಗಳೇನೋ ಭರ್ಜರಿಯಾಗಿ ನಡೆಯುತ್ತಿವೆ. ಆದರೆ, ಈ ಬಾರಿ ಹೊಸ ವರ್ಷಾಚರಣೆಯು ವಾರದ ಮಧ್ಯಭಾಗದಲ್ಲಿ ಅಂದರೆ ಬುಧವಾರ ಬಂದಿರುವುದು ಪ್ರವಾಸೋದ್ಯಮದ ಮೇಲೆ ಕೊಂಚ ಪರಿಣಾಮ ಬೀರಿದೆ. ಸಾಮಾನ್ಯವಾಗಿ ಕ್ರಿಸ್‌ಮಸ್ ಮತ್ತು ವಾರಾಂತ್ಯದ ರಜೆಗಳ ಸಂದರ್ಭದಲ್ಲಿ ಪ್ರವಾಸಿಗರಿಂದ ತುಂಬಿ ತುಳುಕುತ್ತಿದ್ದ ಕಾಫಿನಾಡು, ಹೊಸ ವರ್ಷದ ಹೊತ್ತಿಗೆ ನಿರೀಕ್ಷಿತ ಮಟ್ಟದಲ್ಲಿ ಪ್ರವಾಸಿಗರು ಆಗಮಿಸಿಲ್ಲ ಇದು ಸಹಜವಾಗಿಯೇ ಜಿಲ್ಲೆಯ ಹೋಂ ಸ್ಟೇ ಹಾಗೂ ರೆಸಾರ್ಟ್ ಮಾಲೀಕರಲ್ಲಿ ಅಲ್ಪಮಟ್ಟಿನ ನಿರಾಸೆ ಮೂಡಿಸಿದೆ.
ಇನ್ನು ಜಿಲ್ಲೆಯಲ್ಲಿ ಸುಮಾರು 1200ಕ್ಕೂ ಹೆಚ್ಚು ಹೋಂಸ್ಟೇಗಳಿದ್ದು, ಪ್ರತಿ ವರ್ಷ ರಾಜಧಾನಿ ಬೆಂಗಳೂರಿನಿಂದ ಸಾವಿರಾರು ಪ್ರವಾಸಿಗರು ಸಂಭ್ರಮಾಚರಣೆಗಾಗಿ ಇಲ್ಲಿಗೆ ಲಗ್ಗೆ ಇಡುತ್ತಿದ್ದರು. ಆದರೆ ಈ ಬಾರಿ ಕೆಲಸದ ದಿನಗಳ ನಡುವೆ ಹೊಸ ವರ್ಷ ಬಂದಿರುವುದರಿಂದ ಪ್ರವಾಸಿಗರ ಹರಿವು ಇಳಿಮುಖವಾಗಿದೆ. ವಾರಾಂತ್ಯದ ರಜೆಯ ಮೋಜು ಮುಗಿಸಿ ಪ್ರವಾಸಿಗರು ಈಗಾಗಲೇ ತಮ್ಮೂರಿಗೆ ಮರಳಿರುವುದು ಮತ್ತು ವಾರದ ಮಧ್ಯೆ ರಜೆ ಸಿಗುವುದು ಕಷ್ಟವಾಗಿರುವುದು ಕಾಫಿನಾಡಿನತ್ತ ಮುಖ ಮಾಡುವವರ ಸಂಖ್ಯೆ ಕಡಿಮೆಯಾಗಲು ಪ್ರಮುಖ ಕಾರಣವಾಗಿದೆ. ಹೀಗಾಗಿ, ಪ್ರತಿವರ್ಷದಂತೆ ಈ ಬಾರಿ ಹೊಸ ವರ್ಷದ ಅಬ್ಬರ ಮಲೆನಾಡಿನ ಹೋಂ ಸ್ಟೇಗಳಲ್ಲಿ ಅಷ್ಟಾಗಿ ಕಂಡುಬರುತ್ತಿಲ್ಲ.


