ಬಾದಾಮಿ, ರಾಯಚೂರು, ಕೊಪ್ಪಳ, ದಾವಣಗೆರೆ, ಚಿಕ್ಕಮಗಳೂರಿನಲ್ಲಿ ಮುಂಬರುವ 18 ತಿಂಗಳಲ್ಲಿ ವಿಮಾನ ನಿಲ್ದಾಣ ಸ್ಥಾಪಿಸಲಾಗುವುದು ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಹೇಳಿದರು.

ಹುಬ್ಬಳ್ಳಿ (ಸೆ.25) : ಬಾದಾಮಿ, ರಾಯಚೂರು, ಕೊಪ್ಪಳ, ದಾವಣಗೆರೆ, ಚಿಕ್ಕಮಗಳೂರಿನಲ್ಲಿ ಮುಂಬರುವ 18 ತಿಂಗಳಲ್ಲಿ ವಿಮಾನ ನಿಲ್ದಾಣ ಸ್ಥಾಪಿಸಲಾಗುವುದು ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಹೇಳಿದರು. ಇಲ್ಲಿನ ಖಾಸಗಿ ಹೋಟೆಲ್‌ನಲ್ಲಿ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯಿಂದ ಶನಿವಾರ ನಡೆದ 94ನೇ ಸಂಸ್ಥಾಪಕರ ದಿನಾಚರಣೆ ಹಾಗೂ ವಾಣಿಜ್ಯ ರತ್ನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ತುಮಕೂರು ಬಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: ಸಚಿವ ನಿರಾಣಿ

ಹುಬ್ಬಳ್ಳಿ ಹಾಗೂ ಬೆಳಗಾವಿಯಲ್ಲಿರುವ ನಿಲ್ದಾಣಗಳು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲ. ಹೀಗಾಗಿ ಕಿತ್ತೂರಿನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾರಂಭಿಸುವ ಚಿಂತನೆ ನಡೆದಿದೆ. ಕೇಂದ್ರ ಸರ್ಕಾರದ ಮಟ್ಟದಲ್ಲಿಯೂ ಚರ್ಚೆ ನಡೆದಿದೆ ಎಂದರು. ಕರ್ನಾಟಕದಲ್ಲಿ ಹೂಡಿಕೆ ಮಾಡಲು ಈಗಾಗಲೇ 3ರಿಂದ 4 ಕಂಪನಿಗಳು ಮುಂದೆ ಬಂದಿವೆ. ಅದರಲ್ಲಿ ಹುಬ್ಬಳ್ಳಿ-ಧಾರವಾಡಕ್ಕೆ ಒಂದೆರಡು ಕಂಪನಿಗಳನ್ನು ಕರೆತರಲು ಕ್ರಮಕೈಗೊಳ್ಳಲಾಗುವುದು ಎಂದು ಸಚಿವರು ಭರವಸೆ ನೀಡಿದರು.

ಕೈಗಾರಿಕೆ ಸ್ಥಾಪಿಸುವ ಎಸ್ಸಿ, ಎಸ್ಟಿಜನಾಂಗದವರಿಗೆ ನೀಡುತ್ತಿರುವ ಶೇ. 75 ಸಬ್ಸಿಡಿಯನ್ನು ಇತರ ಅತ್ಯಂತ ಹಿಂದುಳಿದ ಸಮುದಾಯಗಳಿಗೆ ನೀಡುವ ಬಗ್ಗೆ ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಲಾಗಿದೆ ಎಂದ ಸಚಿವರು, ಟೆಕ್ಸ್‌ಟೈಲ್‌ಗೆ ಭಾರತದಲ್ಲಿ ಉತ್ತಮ ಭವಿಷ್ಯವಿದೆ. ನೂತನ ಜವಳಿ ನೀತಿಯಂತೆ ಶೇ. 50 ಸಬ್ಸಿಡಿ ನೀಡಲಾಗುತ್ತಿದೆ. ರಾಜ್ಯದಲ್ಲಿ ವಲಸೆ ತಪ್ಪಿಸಲು ಹೆಚ್ಚಿನ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಮಾಡಲಾಗುವುದು ಎಂದರು.

ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ವಿನಯ ಜವಳಿ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭ ಸಂಸ್ಥಾಪಕರ ದಿನದ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಯಿತು. ಏಕಸ್‌ ಕಂಪನಿ ಮುಖ್ಯ ತಂತ್ರಜ್ಞಾನ ಅಧಿಕಾರಿ ಡಾ. ರವಿ ಗುತ್ತಲ, ಬೆಂಗಳೂರಿನ ಪೆರಿವಿಂಕಲ್‌ ಟೆಕ್ನಾಲಜಿಸ್‌ ಪ್ರೈ. ಲಿಮಿಟೆಡ್‌ನ ಸಂಸ್ಥಾಪಕ ನಿರ್ದೇಶಕಿ ವೀಣಾ ಮೊಕ್ತಾಲಿ ಉಪನ್ಯಾಸ ನೀಡಿದರು.

ಉದ್ಯಮಿಗಳಾದ ಸುರೇಶಗೌಡ ಪಾಟೀಲ, ರಾಮಚಂದ್ರ ಕಾಮತ್‌, ಸಂಜಯ ಮಿಶ್ರಾ, ಶೈಲಾ ಗಣಾಚಾರಿ, ನಾರಾಯಣ ನಿರಂಜನ, ಶ್ರೀನಿವಾಸ ರಾವ್‌, ನೆಕ್ಕಂಟಿ ಅಮಿತ್‌ ಪರಮಾರ ಅವರಿಗೆ ವಾಣಿಜ್ಯ ರತ್ನ ಪ್ರಶಸ್ತಿ ವಿತರಿಸಲಾಯಿತು. ಸಂಸ್ಥೆ ಮಾಜಿ ಅಧ್ಯಕ್ಷರಾದ ವಿ.ಪಿ. ಲಿಂಗನಗೌಡರ, ವಸಂತ ಲದ್ವಾ, ಶಂಕರಣ್ಣ ಮುನವಳ್ಳಿ, ರಮೇಶ ಪಾಟೀಲ, ಡಿ.ಎಸ್‌. ಗುದ್ದೋಡಗಿ, ಮಹೇಂದ್ರ ಲದ್ದಡ, ವಿಧಾನ ಪರಿಷತ್‌ ಮಾಜಿ ಸದಸ್ಯ ಮೋಹನ ಲಿಂಬಿಕಾಯಿ, ಉಪಾಧ್ಯಕ್ಷರಾದ ಸಂದೀಪ ಬಿಡಸಾರಿಯಾ, ಎಸ್‌.ಪಿ. ಸಂಶಿಮಠ, ಬಿ.ಎಸ್‌. ಸತೀಶ, ಗೌರವ ಕಾರ್ಯದರ್ಶಿ ಪ್ರವೀಣ ಅಗಡಿ, ಜೊತೆ ಗೌರವ ಕಾರ್ಯದರ್ಶಿ ಶಂಕರ ಕೋಳಿವಾಡ ಇದ್ದರು.

ಉದ್ಘಾಟನೆಗಾಗಿ ಕಾಯುತ್ತಿರುವ ESI Hospital ; ಉಸ್ತುವಾರಿ ಸಚಿವ ನಿರಾಣಿ ನಿರ್ಲಕ್ಷ್ಯ?

ನವೆಂಬರ್‌ನಲ್ಲಿ ಬೆಂಗಳೂರಿನಲ್ಲಿ ಜಾಗತಿಕ ಬಂಡವಾಳ ಹೂಡಿಕೆ ಸಮಾವೇಶ ಆಯೋಜಿಸಲಾಗಿದೆ. ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಲಿದ್ದಾರೆ. ಈ ಸಮಾವೇಶದಿಂದ 5 ಲಕ್ಷ ಉದ್ಯೋಗ ಸೃಷ್ಟಿಯಾಗಲಿದೆ.

ಮುರುಗೇಶ ನಿರಾಣಿ ಸಚಿವ