ನೆಹರು ನಿರ್ಧಾರದಿಂದ ಭಾರತ ದಯನೀಯ ಸ್ಥಿತಿ - ಎಸ್.ಎಲ್. ಭೈರಪ್ಪ
ದೇಶದ ಸಮಗ್ರತೆ, ಸಾರ್ವಭೌಮತೆಗೆ ಧಕ್ಕೆ ತರುವ ವ್ಯಕ್ತಿಗಳನ್ನೇ ತನ್ನ ಸುತ್ತ ಇರಿಸಿಕೊಂಡಿದ್ದ ಮೊದಲ ಪ್ರಧಾನಿ ನೆಹರೂ ತೆಗೆದುಕೊಂಡ ನಿರ್ಧಾರಗಳ ಫಲದಿಂದ ಭಾರತ ದಯಾನೀಯ ಸ್ಥಿತಿ ಎದುರಿಸುವಂತಾಯಿತು ಎಂದು ಖ್ಯಾತ ಕಾದಂಬರಿಕಾರ ಡಾ.ಎಸ್.ಎಲ್. ಭೈರಪ್ಪ ಅಭಿಪ್ರಾಯಪಟ್ಟರು.
ಮೈಸೂರು : ದೇಶದ ಸಮಗ್ರತೆ, ಸಾರ್ವಭೌಮತೆಗೆ ಧಕ್ಕೆ ತರುವ ವ್ಯಕ್ತಿಗಳನ್ನೇ ತನ್ನ ಸುತ್ತ ಇರಿಸಿಕೊಂಡಿದ್ದ ಮೊದಲ ಪ್ರಧಾನಿ ನೆಹರೂ ತೆಗೆದುಕೊಂಡ ನಿರ್ಧಾರಗಳ ಫಲದಿಂದ ಭಾರತ ದಯಾನೀಯ ಸ್ಥಿತಿ ಎದುರಿಸುವಂತಾಯಿತು ಎಂದು ಖ್ಯಾತ ಕಾದಂಬರಿಕಾರ ಡಾ.ಎಸ್.ಎಲ್. ಭೈರಪ್ಪ ಅಭಿಪ್ರಾಯಪಟ್ಟರು.
ನಗರದ ಗೋಪಾಲಸ್ವಾಮಿ ವಿದ್ಯಾಸಂಸ್ಥೆ ಆವರಣದಲ್ಲಿ ಶನಿವಾರ ಸಂಜೆ ಸಾಮಾಜಿಕ ನ್ಯಾಯ ವೇದಿಕೆ, ಸಾಹಿತ್ಯ ಪ್ರಕಾಶನವು ಆಯೋಜಿಸಿದ್ದ ಚಿಂತಕ ಅಜಕ್ಕಳ ಗಿರೀಶ ಭಟ್ ಅವರ ಬಹುವಚನಕ್ಕೊಂದೇ ತತ್ವ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಸ್ವಾತಂತ್ರ್ಯ ನಂತರ ದೇಶದ ದಯಾನಿಯ ಸ್ಥಿತಿಗೆ ನೆಹರೂ ಅವರೇ ನೇರ ಕಾರಣ. ನೆಹರು ಬೇರಿಯರ್ ಎಲ್ವಿನ್ನಂತಹ ಕ್ರೈಸ್ತ ಪಾದ್ರಿಗೆ ಲಕ್ಷಾಂತ ಹಣ ನೀಡಿದ್ದರಿಂದ ಮೇಘಾಲಯ ಭಾಗದ ಬುಡಕಟ್ಟು ಸಮುದಾಯದವರು ಕ್ರೈಸ್ತ ಧರ್ಮಕ್ಕೆ ಮತಾಂತರವಾದರು. ಸೈನ್ಯಕ್ಕೆ ಅನುದಾನ ಹೆಚ್ಚಿಸದೇ ಹೋದ್ದರಿಂದ ಭಾರತದ ಮೇಲೆ ಚೀನಾ ಎರಡು ಬಾರಿ ದಾಳಿ ಮಾಡಿ, ನಮ್ಮ ನೆಲ ಕಬಳಿಸಿತು. ಇದಕ್ಕೆ ಹೊಣೆ ಯಾರು ಎಂಬುದನ್ನು ನಾವು ಯೋಚಿಸಬೇಕು ಎಂದರು.
ಬ್ರಿಟಿಷರು ಬರೆದ ಕೃತಿಗಳನ್ನೇ ಆಧಾರವಾಗಿಟ್ಟುಕೊಂಡು ನೆಹರು ದಿ ಡಿಸ್ಕವರಿ ಆಫ್ ಇಂಡಿಯಾ ಕೃತಿ ರಚಿಸಿದರು. ಆರ್ಯರು ಹೊರಗಿನಿಂದ ಬಂದವರು ಎಂಬ ಸಿದ್ಧಾಂತ ಬ್ರಿಟೀಷರು ಸೃಷ್ಟಿಸಿದ ಕಟ್ಟುಕತೆ. ದೇಶದಲ್ಲಿ ಆಗಷ್ಟೇ ಸ್ವಾತಂತ್ರ್ಯ ಚಳವಳಿ ಹುಟ್ಟಿಕೊಂಡ ಸಮಯದಲ್ಲಿ ಹೋರಾಟದ ದಿಕ್ಕು ತಪ್ಪಿಸುವ ಸಲುವಾಗಿ, ಆರ್ಯನ್ನರು ಹೊರಗನಿಂದ ಬಂದವರು ಎನ್ನಲಾಯಿತು.
ಮೂಲದ ಪ್ರಕಾರ ಇಲ್ಲಿರುವವರೆಲ್ಲ ಹೊರಗಿನಿಂದ ಬಂದವರೇ ಆಗಿದ್ದಾರೆ. ಹಾಗಾಗಿ ನಮ್ಮನ್ನು ಭಾರತದಿಂದ ಹೋಗಿ ಎನ್ನಲು ನಿವ್ಯಾರು ಎಂಬ ಸಿದ್ಧಾಂತವನ್ನು ಬ್ರಿಟೀಷರು ಹುಟ್ಟುಹಾಕಿದ್ದಾಗಿ ಅವರು ವಿವರಿಸಿದರು.
ಸ್ವಾತಂತ್ರ ಹೋರಾಟದಲ್ಲಿ ಪಾಲ್ಗೊಂಡ ಸಾವರ್ಕರ್ ಹಾಗೂ ನೆಹರು ಜೈಲು ಶಿಕ್ಷೆ ಅನುಭವಿಸಿದ್ದಾರೆ. ಆದರೆ ನೆಹರು ಅವರನ್ನು ಡೆಹರಡೂನ್ ಸಮೀಪದ ನೈನಿತಾಲ್ ಸರೋವರದ ಬಳಿಯ ಜೈಲಿಗೆ ಕಳುಹಿಸಲಾಯಿತು. ಆ ಜೈಲಿನ ಕೊಠಡಿ ವಿಶಾಲವಾದ ಕಿಟಕಿಯಲ್ಲಿ ನಿಂತು ನೋಡಿದರೆ ನೈನಿತಾಲ್ ಸರೋವರ ಕಾಣುತಿತ್ತು. ಅವರ ಕೊಠಡಿಗೆ ಮೇಜು, ಕುರ್ಚಿ, ಸೋಫಾ, ಹಾಸಿಗೆ ನೀಡಲಾಗಿತ್ತು. ಇದೇ ವೇಳೆ ಡಿಸ್ಕವರಿ ಆಫ್ ಇಂಡಿಯಾ ಕೃತಿ ರಚಿಸುತ್ತಾರೆ. ಆದರೆ, ಸಾವರ್ಕರ್ ಸೆರೆಮನೆವಾಸ ಅನುಭವಿಸಿದ್ದು ಅಂಡಮಾನ್‌ನ ಸೆಲ್ಯುಲಾರ್ ಜೈಲಿನಲ್ಲಿ. ಆ ಜೈಲಿನಲ್ಲಿ ನಿರಂತರ ದೈಹಿಕ ಕಿರುಕುಳ ಅನುಭವಿಸಿದರು. ಅವರಿಗೆ 52 ವರ್ಷಗಳ ಕಾಲ ಜೈಲು ಶಿಕ್ಷೆ ವಿಸಲಾಗಿತ್ತು. ಜೀವನವೆಲ್ಲ ಜೈಲಿನಲ್ಲಿ ಕಳೆದರೆ ಜೀವನ ಸಾರ್ಥಕವಾಗಲು ಸಾಧ್ಯವಿಲ್ಲ ಎಂದು ಅರಿತ ಸಾವರ್ಕರ್ ರಾಜಕೀಯ ವ್ಯಕ್ತಿಯಾಗಿ ಇನ್ನು ಮುಂದೆ ಗುರುತಿಸಿಕೊಳ್ಳುವುದಿಲ್ಲ ಎಂದು ಬ್ರಿಟೀಷರಿಗೆ ಬರೆದುಕೊಟ್ಟು ಜೈಲಿನಿಂದ ಬಿಡುಗಡೆಯಾದರು. ಆದರೆ, ಇದೇ ವಿಚಾರವನ್ನು ಮುಂದಿಟ್ಟುಕೊಂಡು ಸಾವರ್ಕರ್ ಕ್ಷಮೆಯಾಚಿಸಿದರು ಎಂದು ಕೆಲವರು ಟೀಕಿಸುತ್ತಿದ್ದಾರೆ ಎಂದು ಆರೋಪಿಸಿದರು.
ಲೇಖಕ ರೋಹಿತ್ ಚಕ್ರತೀರ್ಥ ಮಾತನಾಡಿ, ಇಂದಿಗೂ ಡಾ.ಎಸ್.ಎಲ್…. ಭೈರಪ್ಪ ಅವರಂತೆ ಬಲಪಂಥೀಯರ ಸಾಹಿತ್ಯ ಕೃತಿಗಳು ಚರ್ಚೆಯಾಗದ, ವಿಮರ್ಶೆಗೆ ಒಪಡದಂತೆ ನೋಡಿಕೊಳ್ಳುವ ಒಂದು ವರ್ಗವಿದೆ. ಆದರೆ, ಎಲ್ಲರಿಗೂ ವಾಸ್ತವ ಏನು ಎಂಬುದು ಅರಿವಾಗುತ್ತಿದೆ ಎಂದರು.
ದೇಶಕ್ಕೆ ಆರ್ಯರು ವಲಸೆ ಬಂದರು, ಅವರು ಸ್ಥಳೀಯರ ಮೇಲೆ ಆಕ್ರಮಣ ಮಾಡಿದರು ಎಂಬ ಸುಳ್ಳುಗಳನ್ನು ಬಿತ್ತಲಾಗಿದೆ. ಯಾರೋ ನಮ್ಮನ್ನು ದಾರಿ ತಪ್ಪಿಸುವ ಸಲುವಾಗಿ ಬರೆದ ಲೇಖನವನ್ನೇ ನಾವು ಇದುವರೆಗೆ ನಂಬಿಕೊಂಡು ಬಂದೆವು. ಆದರೆ, ಇದೀಗ ನಿಜವಾದ ಇತಿಹಾಸ ಏನು ಎಂಬುದು ಜನರಿಗೆ ಅರ್ಥವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಕೀಲ ಒ. ಶಾಮ ಭಟ್, ಮಹಾರಾಜ ಎಜುಕೇಷನ್ ಟ್ರಸ್ವ್ ಅಧ್ಯಕ್ಷ ಡಾ.ಎಸ್. ಮುರಳಿ, ಲೇಖಕ ಅಜಕ್ಕಳ ಗಿರೀಶ ಭಟ್ ಇದ್ದರು.