Asianet Suvarna News Asianet Suvarna News

ರಾಮಮಂದಿರ ರಕ್ಷಣೆಗೆ ಹಿಂದೂಗಳ ಒಗ್ಗಟ್ಟು ಬೇಕು: ಪೇಜಾವರ ಶ್ರೀ

ದುಷ್ಟ ಶಕ್ತಿಗಳಿಂದ ಹಿಂದೂಗಳ ಮಧ್ಯೆ ಕಂದಕ ಸೃಷ್ಟಿಗೆ ಯತ್ನ| ಇಂದಿನ ಮಕ್ಕಳಲ್ಲಿ ಪೋಷಕರು ಹಿಂದೂ ಸಂಸ್ಕೃತಿ, ರಾಮನ ಆದರ್ಶಗಳನ್ನು ಬಿತ್ತಬೇಕು| ಹಿಂದು ಸಂತತಿ, ಸಂಸ್ಕೃತಿ, ದೇವಸ್ಥಾನ ಉಳಿಸಿಕೊಳ್ಳುವಂತೆ ನವಪೀಳಿಗೆಯನ್ನು ಇಂದಿನಿಂದಲೇ ಸಜ್ಜುಗೊಳಿಸಬೇಕಿದೆ: ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ| 

Need the Unity of the Hindus for Protection of RamMandir Says Pejawara Shri grg
Author
Bengaluru, First Published Mar 27, 2021, 10:46 AM IST

ಬೆಂಗಳೂರು(ಮಾ.27): ಮುಂದಿನ ಮೂರು ವರ್ಷದಲ್ಲಿ ಆಯೋಧ್ಯೆಯಲ್ಲಿ ಸಿದ್ಧವಾಗಲಿರುವ ರಾಮಮಂದಿರವನ್ನು ದುಷ್ಟ ಶಕ್ತಿಗಳಿಂದ ರಕ್ಷಿಸಬೇಕಾದರೆ ಹಿಂದೂಗಳು ಸದಾ ಒಗ್ಗಟ್ಟಿನಿಂದ ಇರಬೇಕು. ಹಿಂದೂಗಳ ಮಧ್ಯೆಯೇ ಕಂದಕ ಸೃಷ್ಟಿಸುವ ವಿರೋಧಿಗಳನ್ನು ಮೆಟ್ಟಿನಿಲ್ಲಬೇಕು ಎಂದು ರಾಮಮಂದಿರ ಟ್ರಸ್ಟ್‌ ಸದಸ್ಯರೂ ಆಗಿರುವ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಕರೆ ನೀಡಿದ್ದಾರೆ.

ಸದಾಶಿವನಗರದಲ್ಲಿ ಶುಕ್ರವಾರ ‘ಶ್ರೀರಾಮ ಮಂದಿರ ನಿರ್ಮಾಣ ನಿಧಿ ಸಮರ್ಪಣಾ ಅಭಿಯಾನ ಕರ್ನಾಟಕ ರಾಜ್ಯ ಸಮಿತಿ’ಯಿಂದ ನಡೆದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ವಿದೇಶಿ ಸಂಸ್ಕೃತಿ ಪಾಲಾಗಿ ಹಿಂದೂ ಸಂಸ್ಕೃತಿ, ಆಚಾರ-ವಿಚಾರ, ವೇಷ-ಭೂಷಣ ಮರೆಯುತ್ತಿರುವ ಇಂದಿನ ಮಕ್ಕಳಲ್ಲಿ ಪೋಷಕರು ಹಿಂದೂ ಸಂಸ್ಕೃತಿ, ರಾಮನ ಆದರ್ಶಗಳನ್ನು ಬಿತ್ತಬೇಕು. ಹಿಂದು ಸಂತತಿ, ಸಂಸ್ಕೃತಿ, ದೇವಸ್ಥಾನ ಉಳಿಸಿಕೊಳ್ಳುವಂತೆ ನವಪೀಳಿಗೆಯನ್ನು ಇಂದಿನಿಂದಲೇ ಸಜ್ಜುಗೊಳಿಸಬೇಕಿದೆ. ರಾಮಮಂದಿರ ನಿರ್ಮಾಣದ ಜತೆಗೆ ದೇಶವನ್ನು ರಾಮರಾಜ್ಯವನ್ನಾಗಿ ಮಾಡಲು ಎಲ್ಲರೂ ಕೈ ಜೋಡಿಸಬೇಕಿದೆ. ಮಂದಿರ ನಿರ್ಮಾಣಕ್ಕೆ 1,400 ಕೋಟಿ ರು. ನಿರೀಕ್ಷೆಯಿತ್ತು, ಈಗ 2,500 ಕೋಟಿ ರು. ನಿಧಿ ಸಂಗ್ರಹಣೆಯಾಗಿದೆ ಎಂದು ತಿಳಿಸಿದ್ದಾರೆ.

ಮಾತಾಡಿದ್ದು ತಪ್ಪು, ಮಸಿ ಬಳಿದಿದ್ದು ತಪ್ಪು : ಪೇಜಾವರ ಶ್ರೀ

ಹಿಂದೂಗಳ ಒಗ್ಗಟ್ಟು ಪ್ರದರ್ಶನ:

ಬೇಲಿಮಠದ ಶಿವರುದ್ರ ಮಹಾಸ್ವಾಮಿ ಮಾತನಾಡಿ,ದೇಶ ವಿದೇಶಗಳ ಇತಿಹಾಸ ಕೆದಕಿದರೆ ಅಲ್ಲಿಯೂ ಹಿಂದು ಸಂಸ್ಕೃತಿ ಕಾಣಬಹುದು. ಹಿಂದು ಮಂದಿರ ನಿರ್ಮಾಣಕ್ಕೆ ಅವಕಾಶವಿಲ್ಲ ಎಂದಿದ್ದ ಅರಬ್‌ ರಾಷ್ಟ್ರಗಳಲ್ಲಿ ಇದೀಗ ಹಿಂದು ಮಂದಿರ ನಿರ್ಮಾಣವಾಗಿವೆ. ಭಾರತದಲ್ಲಿ ರಾಮಮಂದಿರ ಮೂಲಕ ಹಿಂದುಗಳ ಒಗ್ಗಟ್ಟು ಪ್ರದರ್ಶನವಾಗಿದೆ ಎಂದರು.

ಕೊಲ್ಲಾಪುರ ಕನ್ನೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ, ನಿಧಿ ಸಂಗ್ರಹ ಅಭಿಯಾನಕ್ಕೆ ಸ್ಪಂದಿಸುವ ಮೂಲಕ ಜನರು, ಹಿಂದು ವಿರೋಧಿ ಚಿಲ್ಲರೆ ಭಾಷಣ ಮಾಡುವವರಿಗೆ, ಜಾತಿ, ಧರ್ಮಗಳ ಮಧ್ಯೆ ಬೆಂಕಿ ಹಚ್ಚುವವರಿಗೆ ಬುದ್ಧಿ ಕಲಿಸಿದ್ದಾರೆ ಎಂದು ಹೇಳಿದರು.

ಇಸ್ಕಾನ್‌ ಮುಖ್ಯಸ್ಥ ಮಧುಪಂಡಿತ್‌ ದಾಸ್‌, ವಿಜಯನಗರ ಆದಿಚುಂಚನಗಿರಿ ಶಾಖಾ ಮಠದ ಸೌಮ್ಯನಾಥ ಸ್ವಾಮೀಜಿ, ರಾಯಭಾಗ ಕವಲುಗುಡ್ಡ ಮಠದ ಅಮರೇಶ್ವರ ಸ್ವಾಮೀಜಿ, ರಾಜ್ಯ ಸಮಿತಿ ಅಧ್ಯಕ್ಷ ಮ. ವೆಂಕಟರಾಮು, ಉಪಾಧ್ಯಕ್ಷೆ ಡಾ.ವಿಜಯಲಕ್ಷ್ಮೇ ದೇಶಮಾನೆ, ಕಾರ್ಯದರ್ಶಿ ನಾ. ತಿಪ್ಪೇಸ್ವಾಮಿ, ಸಹ ಕಾರ್ಯದರ್ಶಿ ಟಿ. ಪಟ್ಟಾಭಿರಾಮ್‌, ಸದಸ್ಯರಾದ ಮೀರಾ ಚಂದಾರ್ಕರ್‌, ವಿವೇಕ್‌ ಆಳ್ವಾ ಮತ್ತಿತರರು ಉಪಸ್ಥಿತರಿದ್ದರು.

ರಾಮಮಂದಿರ ನಿರ್ಮಾಣಕ್ಕೆ ಪೇಜಾವರ ಶ್ರೀಗಳಿಂದ ದೇಣಿಗೆ

ರಾಜ್ಯದಲ್ಲಿ 196 ಕೋಟಿ ರು. ಸಂಗ್ರಹ

ಬೆಂಗಳೂರು: ಶ್ರೀರಾಮ ಮಂದಿರ ನಿರ್ಮಾಣಕ್ಕಾಗಿ ಈವರೆಗೆ ರಾಜ್ಯದಲ್ಲಿ ಉತ್ತರ ಕರ್ನಾಟಕ ಪ್ರಾಂತ (56.14 ಕೋಟಿ) ಮತ್ತು ದಕ್ಷಿಣ ಕರ್ನಾಟಕ ಪ್ರಾಂತ (140.08ಕೋಟಿ) ಸೇರಿ ಒಟ್ಟು 196,23,07,910ಕೋಟಿ ರು. ಸಂಗ್ರಹವಾಗಿದೆ. 45 ದಿನದ ನಿಧಿ ಸಂಗ್ರಹ ಅಭಿಯಾನದಲ್ಲಿ 2.29 ಲಕ್ಷ ಪುರುಷರು ಹಾಗೂ 27,071 ಮಹಿಳಾ ಕಾರ್ಯಕರ್ತರು ಸೇರಿ ಒಟ್ಟು 2.56 ಲಕ್ಷ ಮಂದಿ ಪಾಲ್ಗೊಂಡಿದ್ದರು. ಎರಡು ಪ್ರಾಂತ ಸೇರಿ ಒಟ್ಟು 93 ಲಕ್ಷಕ್ಕೂ ಅಧಿಕ ಮನೆಗಳಿಗೆ ತೆರಳಿ ನಿಧಿ ಸಂಗ್ರಹಿಸಿದ್ದಾರೆ ಎಂದು ರಾಜ್ಯ ಸಮಿತಿ ಕಾರ್ಯದರ್ಶಿ ನಾ. ತಿಪ್ಪೇಸ್ವಾಮಿ ವಿವರಿಸಿದರು.

ಬೆಂಗಳೂರಿನಲ್ಲಿ ನಡೆದ ‘ಶ್ರೀರಾಮ ಮಂದಿರ ನಿರ್ಮಾಣ ನಿಧಿ ಸಮರ್ಪಣಾ ಅಭಿಯಾನದ ಸಮಾರೋಪ ಸಮಾರಂಭ’ದಲ್ಲಿ ಶ್ರೀರಾಮನ ಭಾವಚಿತ್ರಕ್ಕೆ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಪುಷ್ಪನಮನ ಸಲ್ಲಿಸಿದರು. ಬೇಲಿಮಠದ ಶಿವರುದ್ರ ಮಹಾಸ್ವಾಮಿ,ಕೊಲ್ಲಾಪುರ ಕನ್ನೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ, ವಿಜಯನಗರ ಆದಿಚುಂಚನಗಿರಿ ಶಾಖಾ ಮಠದಸೌಮ್ಯನಾಥ ಸ್ವಾಮೀಜಿ, ಇಸ್ಕಾನ್‌ ಮುಖ್ಯಸ್ಥ ಮಧುಪಂಡಿತ್‌ ದಾಸ್‌ ಉಪಸ್ಥಿತರಿದ್ದರು.
 

Follow Us:
Download App:
  • android
  • ios