ಕೆರೆಗಳ ಅಭಿವೃದ್ಧಿ, ನೀರಾವರಿ ಯೋಜನೆಗೆ ಅಗತ್ಯ ಕ್ರಮ: ಸಚಿವ ಭೋಸರಾಜು
ಅಂತರ್ಜಲಮಟ್ಟ ಅಭಿವೃದ್ಧಿಗೊಳಿಸುವಲ್ಲಿ ರೈತರಿಗೆ ಅನುಕೂಲವಾಗುವಂತೆ ಕೆರೆಗಳ ಅಭಿವೃದ್ಧಿ ಜೊತೆಗೆ ಅಗತ್ಯ ನೀರಾವರಿ ಯೋಜನೆ ಕೈಗೊಳ್ಳಲಾಗುವುದು ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್. ಭೋಸರಾಜು ತಿಳಿಸಿದರು.
ತಿಪಟೂರು: ಅಂತರ್ಜಲಮಟ್ಟ ಅಭಿವೃದ್ಧಿಗೊಳಿಸುವಲ್ಲಿ ರೈತರಿಗೆ ಅನುಕೂಲವಾಗುವಂತೆ ಕೆರೆಗಳ ಅಭಿವೃದ್ಧಿ ಜೊತೆಗೆ ಅಗತ್ಯ ನೀರಾವರಿ ಯೋಜನೆ ಕೈಗೊಳ್ಳಲಾಗುವುದು ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್. ಭೋಸರಾಜು ತಿಳಿಸಿದರು.
ಸಣ್ಣ ನೀರಾವರಿ ಇಲಾಖೆಗೆ ಸಂಬಂಧಿಸಿದ ಯೋಜನೆ ಕಾಮಗಾರಿಗಳ ಪ್ರಗತಿ ಪರಿಶೀಲನೆಗೆ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್. ಭೋಸರಾಜು ತಿಪಟೂರು ತಾಲೂಕಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಮಾತನಾಡಿ, ಎತ್ತಿನಹೋಳೆ, ಹೇಮಾವತಿ ಯೋಜನೆಗಳಿಗೆ ಸಂಬಂಧಿಸಿದ ಕಾಮಗಾರಿಗಳ ಸ್ಥಳಕ್ಕೆ ಭೇಟಿ ಮಾಡಿ, ಪರಿಶೀಲನೆ ಮಾಡಲಾಗಿದ್ದು, ಅತ್ಯಂತ ಶೀಘ್ರ ಕಾಮಗಾರಿ ನಡೆಯಬೇಕೆಂದು ಗುತ್ತಿಗೆದಾರರಿಗೆ ಸೂಚಿಸಿಲಾಗಿದೆ. ಜಿಲ್ಲೆಯಲ್ಲಿ 371ಕೆರೆಗಳಿದ್ದು, ಅಟಲ್ ಭೂ ಜಲ್ ಯೋಜನೆಯಡಿ 32ಕೋಟಿ ರು. ವೆಚ್ಚದಲ್ಲಿ ಕೆರೆಗಳ ಕಾಮಗಾರಿ ನಡೆಯಲಿವೆ. ಯಾವುದೇ ಯೋಜನೆಗಳಾಗಲಿ ಕಾಮಗಾರಿಗಳ ಪ್ರಗತಿ ಬಗ್ಗೆ ಪರಿಶೀಲನೆ ಮಾಡುತ್ತಿರಬೇಕು. ಆಗ ಮಾತ್ರ ಪ್ರಗತಿ ಸಾಧಿಸಲು ಸಾಧ್ಯ. ತಾಲೂಕಿನ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಕಾಮಗಾರಿ ನಡೆಯುತ್ತಿದ್ದು, ಎತ್ತಿನಹೊಳೆ ಯೋಜನೆಯಿಂದ 91 ಕೆರೆಗಳು ಹಾಗೂ ಹೇಮಾವತಿ ಯೋಜನೆಯಿಂದ14 ಕೆರೆಗಳು ಸೇರಿದಂತೆ ಒಟ್ಟು 105 ಕೆರೆ ತುಂಬಿಸುವ ಯೋಜನೆ ಇದೆ. ಬಹಳಷ್ಟು ಕಡೆಗಳಲ್ಲಿ ಕೆರೆ ಒತ್ತುವರಿ ನಡೆದಿದೆ ಎಂಬ ಬಗ್ಗೆ ಮಾಹಿತಿ ಇದೆ. ಈ ಬಗ್ಗೆ ಕೆರೆ ಪ್ರಾಧಿಕಾರ ಸಮಿತಿಗೆ ಸೂಚಿಸಲಾಗಿದೆ.ಗ್ಯಾರಘಟ್ಟ ಬೋವಿಕಾಲೋನಿಯಲ್ಲಿ ಚೆಕ್ ಡ್ಯಾಂ ನಿರ್ಮಾಣವಾಗಿದ್ದು, ಎಲ್ಲಿ ಅವಶ್ಯಕತೆ ಇದೆಯೋ ಅಲ್ಲಿ ಚೆಕ್ ಡ್ಯಾಂ ನಿರ್ಮಿಸಿ ರೈತರಿಗೆ ನೀರಿನ ಸಮಸ್ಯೆ ನೀಗಿಸಲಾಗುವುದು ಎಂದರು.
ಕೋಟನಾಯಕನಹಳ್ಳಿ, ಬೊಮ್ಮೇನಹಳ್ಳಿಯಲ್ಲಿ ನಡೆಯುತ್ತಿರುವ ಎತ್ತಿನಹೊಳೆ ಕಾಮಗಾರಿ ಹಾಗೂ ಹರಚನಹಳ್ಳಿ ಬಳಿಯ ಜಾಕ್‌ವೆಲ್ ಮತ್ತು ಗ್ಯಾರಘಟ್ಟ ಬಳಿಯ ಚೆಕ್ ಡ್ಯಾಂ ವೀಕ್ಷಿಸಿದರು. ಮಾರ್ಗ ಮಧ್ಯೆ ಸಚಿವರು ತಾಲೂಕಿನ ತಿಮ್ಮಲಾಪುರ ಗ್ರಾಮದ ಅಂಗನವಾಡಿಗೆ ಭೇಟಿ ನೀಡಿ. ಮಕ್ಕಳಿಗೆ ಕೊಡುವ ಆಹಾರದ ಗುಣಮಟ್ಟ ಮತ್ತು ತೂಕವನ್ನು ಪರಿಶೀಲಿಸಿದರು. ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿದರು. ಅಂಗಡಿ ಮನೆಯಲ್ಲಿದ್ದ ಮಹಿಳೆಯನ್ನು ಮಾತನಾಡಿಸಿ, ಸರ್ಕಾರದ ಗ್ಯಾರಂಟಿ ಯೋಜನೆಯ ಬಗ್ಗೆ ಕೇಳಿದರು.
ಈ ಸಂದರ್ಭದಲ್ಲಿ ಸಣ್ಣ ನೀರಾವರಿ ಇಲಾಖೆಯ ಕಾರ್ಯದರ್ಶಿ ಕೆ. ಯತೀಶ್ಚಂದ್ರ, ಸಣ್ಣ ನೀರಾವರಿ ಇಲಾಖೆಯ ತಾಲೂಕು ಎಇಇ ದೊಡ್ಡಯ್ಯ, ಇಲಾಖೆ ಅಧಿಕಾರಿಗಳಾದ ಸಂಜೀವ್ ರಾಜ್, ಮೂಡಲಗಿರಿಯಪ್ಪ, ಕಿಶೋರ್, ರಾಘವನ್ ಸೇರಿದಂತೆ ಜಿಲ್ಲಾ ಮತ್ತು ತಾಲೂಕು ಮಟ್ಟದ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿ ವರ್ಗದವರಿದ್ದರು.