ಕಾಫಿನಾಡಿನಲ್ಲಿ ಮಹಾಮಳೆಗೆ 80 ಕೋಟಿ ನಷ್ಟ, ವರುಣನ ಆರ್ಭಟಕ್ಕೆ ಮೂರು ಜೀವ ಬಲಿ!
ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆಯ ಅಬ್ಬರ ಮುಂದುವರಿದಿದ್ದು, ಜಿಲ್ಲೆಯಲ್ಲಿ ಮಹಾಮಳೆಗೆ 80 ಕೋಟಿ ನಷ್ಟವಾಗಿ ಮೂರು ಜೀವ ಬಲಿಯಾಗಿವೆ. ನೂರು ಹೆಚ್ಚು ಮನೆಗಳು ಕುಸಿತವಾಗಿದೆ.
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿಕ್ಕಮಗಳೂರು (ಜು.27): ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆಯ ಅಬ್ಬರ ಮುಂದುವರಿದಿದ್ದು, ಅಲ್ಲಲ್ಲಿ ಭೂ ಕುಸಿತ, ಮನೆಗಳ ಕುಸಿತ ಮುಂದುವರಿದಿದ್ದು, ಮಳೆ ಹೆಚ್ಚಾದಂತೆ ಅನಾಹುತಗಳೂ ಹೆಚ್ಚಾಗುವ ಆತಂಕ ಎದುರಾಗಿದೆ. ಕೊಪ್ಪ ತಾಲ್ಲೂಕಿನ ಹೆರೂರು ಗ್ರಾಮದಲ್ಲಿ ಏಳೆಂಟು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಸುಮಾರು 90 ಅಡಿ ಉದ್ದದಷ್ಟು ಕುಸಿದಿದೆ. ಶಾಂತಿ ಕೂಡಿಗೆ, ಶುಂಠ ಕೂಡಿಗೆ, ಬಿಟ್ಟ ಕೂಡಿಗೆ ಗ್ರಾಮಸ್ಥರಲ್ಲಿ ಇದರಿಂದ ಭೀತಿಗೊಂಡಿದ್ದಾರೆ. ಮಳೆ ಹೆಚ್ದಾದಂತೆ ಸ್ವಲ್ಪ, ಸ್ವಲ್ಪವೇ ಕುಸಿತ ಹೆಚ್ಚಾಗುತ್ತಿದೆ. ಇನ್ನು ಜಿಲ್ಲೆಯಲ್ಲಿ ಮಹಾಮಳೆಗೆ 80 ಕೋಟಿ ನಷ್ಟವಾಗಿ ಮೂರು ಜೀವ ಬಲಿಯಾಗಿದ್ದು ಸೇತುವೆ ಸೇರಿದಂತೆ ನೂರು ಹೆಚ್ಚು ಮನೆಗಳು ಕುಸಿತವಾಗಿದೆ.
ಜಿಲ್ಲೆಯಲ್ಲಿ 80 ಕೋಟಿ ನಷ್ಟ:
ಈ ವರ್ಷದ ಜನವರಿಯಿಂದ ಈ ವರೆಗೆ ಜಿಲ್ಲೆಯಲ್ಲಿ ಸುರಿದ ಮಳೆಗೆ ಒಟ್ಟು 80 ಕೋಟಿ ರೂ.ಗಳಿಗೂ ಹೆಚ್ಚಿನ ಹಾನಿ ಸಂಭವಿಸಿದ್ದು, 3 ಮಂದಿ ಜೀವ ಕಳೆದುಕೊಂಡಿದ್ದಾರೆ.ಲೋಕೋಪಯೋಗಿ ಇಲಾಖೆಗೆ ಹೆಚ್ಚಿನ ನಷ್ಟ ಉಂಟಾಗಿದೆ. ಜುಲೈ ತಿಂಗಳಲ್ಲಿ ಸುರಿದ ಮಳೆಯಿಂದಲೇ ಅಷ್ಟೂ ನಷ್ಟ ಸಂಭವಿದ್ದು, ಒಟ್ಟು 44.98 ಕೋಟಿ ರೂ. ನಷ್ಟು ರಸ್ತೆ, ಸೇತುವೆ, ಕಟ್ಟಡಗಳು ಹಾನಿಗೀಡಾಗಿವೆ.ಜಿಲ್ಲೆಯಲ್ಲಿ 70ಕಿಲೋ ಮೀಟರ್ ರಸ್ತೆ 30ಕ್ಕೂ ಹೆಚ್ಚು ಸೇತುವೆಗಳಿಗೆ ಹಾನಿಯಾಗಿದ್ದು ಜಿಲ್ಲೆಯ 9 ತಾಲ್ಲೂಕುಗಳಲ್ಲಿ ಒಟ್ಟು 24 ಸರ್ಕಾರಿ ಕಟ್ಟಡಗಳಿಗೆ ಹಾನಿ ಉಂಟಾಗಿ ನೂರು ಹೆಚ್ಚು ಮನೆಗಳಿಗೆ ಹಾನಿ ಆಗಿದೆ.ಜಿಲ್ಲೆಯಲ್ಲಿ ಮಳೆ-ಗಾಳಿಯಿಂದ ಒಟ್ಟು 1463 ಕಂಬಗಳು ನೆಲಕ್ಕುರುಳಿವೆ. 29.26 ಕಿ.ಮೀ ವಿದ್ಯುತ್ ಲೈನ್ ಹಾನಿಗೀಡಾಗಿ ಒಟ್ಟು 1.50 ಕೋಟಿ ರೂ. ನಷ್ಟ ಸಂಭವಿಸಿದೆ.
3 ಮಂದಿ ಸಾವು:
ಈ ವರ್ಷ ಮಳೆಯಿಂದ ಈ ವರೆಗೆ 3 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.ತರೀಕೆರೆ ತಾಲ್ಲುಕು ಲಕ್ಕವಳ್ಳಿಯ ಗಂಜಿಕೆರೆ ಗ್ರಾಮದ ಜಿ.ಎಚ್.ಮುಖೇಶ್ ಎಂಬುವವರು ಕಡೂರು ತಾಲ್ಲೂಕಿನ ಪುರ ಗ್ರಾಮದ ದೇವಸ್ಥಾನಕ್ಕೆ ಬಂದಿದ್ದ ಸಂದರ್ಭದಲ್ಲಿ ಸಿಡಿಲು ಬಡಿದು ಮೃತಪಟ್ಟಿದ್ದರು.ಮೂಡಿಗೆರೆ ತಾಲ್ಲೂಕಿನ ದಾರದಹಳ್ಳಿಯ ದೇವಮ್ಮ ಎಂಬ 68 ವರ್ಷದ ವೃದ್ಧೆ ಜುಲೈ 19 ರಂದು ಹಳ್ಳದಲ್ಲಿ ಕೊಚ್ಚಿ ಹೋಗಿ ಮೃತಪಟ್ಟಿದ್ದಾರೆ.ಕಡೂರು ತಾಲ್ಲೂಕಿನ ಹೊಸ ಸಿದ್ದರಹಳ್ಳಿ ಗ್ರಾಮದ ರೇವಮ್ಮ ಎಂಬ 65 ವರ್ಷದ ವೃದ್ಧೆ ಜುಲೈ 25 ರಂದು ತಾಯಿ ಹಳ್ಳದಲ್ಲಿ ಕೊಚ್ಚಿಕೊಂಡು ಹೋಗಿ ಮೃತ ಪಟ್ಟಿದ್ದಾರೆ.
ಮನೆ ಕುಸಿತ:
ಚಿಕ್ಕಮಗಳೂರು ತಾಲ್ಲೂಕಿನ ಭಕ್ತರಹಳ್ಳಿ ಬೋವಿ ಕಾಲೋನಿಯಲ್ಲಿ ಗಾಳಿ-ಮಳೆ ಆರ್ಭಟಕ್ಕೆ ಮನೆಯೊಂದರ ಮೇಲ್ಚಾವಣಿ ಸಂಪೂರ್ಣ ಜಖಂ ಗೊಂಡಿದೆ. ದೊಡ್ಡ ಮುನಿ ಎಂಬುವವರಿಗೆ ಸೇರಿದ ಮನೆ ಇದಾಗಿದೆ. ಮನೆಯಲ್ಲಿದ್ದ ಆಹಾರ ಪದಾರ್ಥ, ದಿನಬಳಕೆ ವಸ್ತುಗಳು ಹಾನಿಗೀಡಾಗಿವೆ. ಸ್ಥಳಕ್ಕೆ ಪಂಚಾಯ್ತಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಅಲ್ಲದೆ ಮೂಡಿಗೆರೆ ತಾಲ್ಲೂಕಿನಲ್ಲಿ ನಿರಂತರ ಮಳೆಯಿಂದಾಗಿ ತಳವಾರ ಗ್ರಾಮದ ಮನೆಯೊಂದು ನೆಲಸಮಗೊಂಡಿದೆ. ಮಂಜುಳಾ ಎಂಬುವವರಿಗೆ ಸೇರಿದ ಮನೆ ಇದಾಗಿದ್ದು, ದವಸ-ಧಾನ್ಯ, ವಸ್ತುಗಳೆಲ್ಲವೂ ಹಾನಿಗೀಡಾಗಿದೆ. ಮಳೆ-ಗಾಳಿಯಿಂದಾಗಿ ಏಕಾ ಏಕಿ ಮನೆ ನೆಲಕ್ಕುರುಳಿದ್ದು, ನಿವಾಸಿಗಳು ಬೀದಿಪಾಲಾಗಿದ್ದಾರೆ.ಚಿಕ್ಕಮಗಳೂರು ತಾಲ್ಲೂಕಿನ ತುಡಕೂರು ಗ್ರಾಮದಲ್ಲಿ ರುದ್ರಯ್ಯ ಎಂಬುವವರ ಮನೆ ಮಳೆಯಿಂದಾಗಿ ಕುಸಿದುಬಿದ್ದಿದೆ. ಗ್ರಾ.ಪಂ.ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದ್ದಾರೆ.
ಜಲಪಾತದ ಬಳಿ ತೆರಳಲು ನಿರ್ಬಂಧ:
ಮುಳ್ಳಯ್ಯನ ಗಿರಿ ಭಾಗದಲ್ಲಿ ಭಾರೀ ಮಳೆಯಿಂದಾಗಿ ತರೀಕೆರೆ ತಾಲ್ಲೂಕಿನ ಕಾಮೇನಹಳ್ಳಿ ಗ್ರಾಮದಲ್ಲಿ ಹಳ್ಳದ ನೀರು ಕ್ಷಣ ಕ್ಷಣಕ್ಕೂ ಹೆಚ್ಚಾಗಿ ರಸ್ತೆ ಮೇಲೆ ಹರಿಯುತ್ತಿದ್ದು, ಸಂಪರ್ಕ ಕಡಿತಗೊಂಡಿದೆ. ಮಲ್ಲೇನಹಳ್ಳಿ, ಕಾಮೇನಹಳ್ಳಿ ಸೇರಿದಂತೆ ಇತರೆ ಗ್ರಾಮಗಳ ಜನರು ಪರದಾಡುವಂತಾಗಿದೆ.ನಿರಂತರ ಮಳೆಯಿಂದಾಗಿ ಶೃಂಗೇರಿ ತಾಲ್ಲೂಕಿನ ಸಿರಿಮನೆ ಜಲಪಾತ ರುದ್ರರಮಣೀಯವಾಗಿ ಧುಮ್ಮಿಕ್ಕುತ್ತಿದೆ. ಹಾಲ್ನೊರೆಯಂತೆ ಭೋರ್ಗರೆಯುತ್ತಿರುವ ಜಲರಾಶಿಯನ್ನು ಕಣ್ತುಂಬಿಕೊಂಡು ಪ್ರವಾಸಿರು ಸಂತೋಷ ಪಡುತ್ತಿದ್ದಾರೆ.ಈಗಾಗಲೇ ಮುಂಜಾಗ್ರತೆ ಕ್ರಮವಾಗಿ ಜಿಲ್ಲಾಡಳಿತ ಹಲವು ಫಾಲ್ಸ್ಗಳಿಗೆ ನಿರ್ಬಂಧವನ್ನು ಹೇರಿದೆ. ಸಿರಿಮನೆ ಜಲಪಾತದಲ್ಲೂ ನೀರು ಭಾರೀ ಪ್ರಮಾಣದಲ್ಲಿ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಜಲಪಾತದ ಬಳಿ ತೆರಳಲು ನಿರ್ಬಂಧ ವಿಧಿಸಲಾಗಿದೆ.ಮೂಡಿಗೆರೆ ತಾಲ್ಲೂಕು ಹಾಂದಿ ಬಳಿ ರಸ್ತೆಗೆ ಅಡ್ಡಲಾಗಿ ಮರವೊಂದು ಬಿದ್ದಿದ್ದು ಸಂಚಾರಕ್ಕೆ ತೊಡಕಾಗಿದೆ. ಚಿಕ್ಕಮಗಳೂರಿನಿಂದ ಮಂಗಳೂರಿಗೆ ತೆರಳುತ್ತಿದ್ದ ಕೆಎಸ್ಆರ್ಟಿಸಿ ಬಸ್ ಸ್ವಲ್ಪದರಲ್ಲೇ ಪಾರಾಗಿದ್ದು, ಭಾರೀ ಅನಾಹುತ ತಪ್ಪಿದೆ.
ನೆರೆ ಆತಂಕ:
ಮುಳ್ಳಯ್ಯನಗಿರಿ, ದತ್ತಪೀಠ, ಕೆಮ್ಮಣ್ಣುಗುಂಡಿ, ಚುರ್ಚೆಗುಡ್ಡ ವ್ಯಾಪ್ತಿಯಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ಕಡೂರು ತಾಲ್ಲೂಕಿನ ತಾಯಿ ಹಳ್ಳ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಇದರ ಪರಿಣಾಮ ಸಿದ್ದರಹಳ್ಳಿ, ಎಮ್ಮೆದೊಡ್ಡಿ ಸೇರಿದಂತೆ ಹಲವು ಗ್ರಾಮಗಳಲ್ಲಿ ನೆರೆ ಆತಂಕ ಮೂಡಿಸಿದೆ.ಸಾವಿರಾರು ಎಕರೆ ಕೃಷಿ ಹಾಗೂ ತೋಟಗಾರಿಕೆ ಜಮೀನು ತಾಯಿಹಳ್ಳದ ನೀರಿನಿಂದ ಆವೃತಗೊಂಡಿದೆ. ಆಲೂಗೆಡ್ಡೆ, ಶುಂಠಿ, ಟೊಮ್ಯಾಟೋ, ತೆಂಗಿನ ಬೆಳೆಗಳಿಗೆ ಹಾನಿ ಸಂಭಿವಿಸಿದೆ.ಈ ಭಾಗದಲ್ಲಿ ಸುರಿಯುತ್ತಿರುವುದರಿಂದ ಐತಿಹಾಸಿಕ ಮದಗದ ಕೆರೆಗೂ ಭಾರೀ ಪ್ರಮಾಣದಲ್ಲಿ ನೀರು ಹರಿದುಬರುತ್ತಿದ್ದು, ಕೋಡಿ ಬೀಳಲು ಕೆಲವೇ ಅಡಿಗಳಷ್ಟೇ ಬಾಕಿ ಇದೆ.