ಕೊಡಗಿನಲ್ಲಿ ಬೀಡುಬಿಟ್ಟು ಎನ್‌ಡಿಆರ್‌ಎಫ್ ತಂಡ ತಾಲೀಮು, ಭೂಕುಸಿತದಲ್ಲಿ ಸಿಲುಕಿದ್ದ 9 ಜನರ ರಕ್ಷಣೆ
ಜುಲೈ ತಿಂಗಳಲ್ಲಿ ಮಳೆ ತೀವ್ರವಾಗುವ ಸಾಧ್ಯತೆ ಇದ್ದು, ಭೂಕುಸಿತ ಅಥವಾ ಪ್ರವಾಹ ಎದುರಾದಲ್ಲಿ ಜನರನ್ನು ರಕ್ಷಿಸುವ ಕುರಿತು ಅಣಕು ತಾಲೀಮು ಎನ್‌ಡಿಆರ್‌ಎಫ್ ತಂಡದಿಂದ ನಡೆಯುತ್ತಿದೆ.
ವರದಿ : ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು (ಜು.1): ಭೂಕುಸಿತದಲ್ಲಿ ಕೊಚ್ಚಿ ಹೋಗಿರುವ ಜನರು, ಮನೆಗಳು ಕುಸಿದು ಅವುಗಳ ಅವಶೇಷಗಳಡಿಯಲ್ಲಿ ಸಿಲುಕಿ ನರಳುತ್ತಿರುವ ಗಾಯಾಳುಗಳು, ಮಣ್ಣಿನಡಿಯಲ್ಲಿ ಹೂತು ಹೋಗಿರುವ ಜನರು. ಜನರನ್ನು ಆದಷ್ಟು ಬೇಗನೇ ರಕ್ಷಣೆ ಮಾಡಲು ತಮಗೆ ಅಗತ್ಯವಾಗಿರುವ ಪರಿಕರಗಳ ಹಿಡಿದು ಒಂದೇ ಉಸಿರಿಗೆ ಧಾವಿಸಿ ಹೋಗುತ್ತಿರುವ ಎನ್‌ಡಿಆರ್‌ಎಫ್ , ಅಗ್ನಿ ಶಾಮಕ ಮತ್ತು ಪೊಲೀಸ್ ಸಿಬ್ಬಂದಿ. ಭೂಕುಸಿತದಲ್ಲಿ ಸಿಲುಕಿರುವ ಜನರನ್ನು ರಕ್ಷಿಸಿ ಕರೆತಂದರೆ ಸಾಕು ಎಂದು ಭಯದಿಂದಲೇ ನೋಡುತ್ತಿರುವ ಜನರು. ಅರೆ ಇದೇನು ಮಳೆಯೇ ಇಲ್ಲ, ಪ್ರವಾಹ, ಭೂಕುಸಿತವಾಗಿದ್ದಾದರೂ ಎಲ್ಲಿ ಎಂದು ಅಚ್ಚರಿಯಿಂದ ನೋಡ್ತಾ ಇದ್ದೀರಾ. ಇದು ಅಚ್ಚರಿ ಆದರೂ ಸತ್ಯ. ಕೊಡಗು ಜಿಲ್ಲೆಯಲ್ಲಿ 2018 ರಿಂದ ನಿರಂತರವಾಗಿ ಪ್ರವಾಹ ಭೂಕುಸಿತ ಸಂಭವಿಸಿದ್ದು ಗೊತ್ತೇ ಇದೆ. ಈ ಬಾರಿಯೂ ಅದೇ ರೀತಿ ಪ್ರವಾಹ ಮತ್ತು ಭೂಕುಸಿತ ಆಗುವ ಸಾಧ್ಯತೆ ಇದೆ ಎಂದು ಈಗಾಗಲೇ ಜಿಲ್ಲಾಡಳಿತ ಅಂದಾಜಿಸಿದೆ. ಹೀಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಕೊಡಗು ಜಿಲ್ಲಾಡಳಿತ ಚೆನ್ನೈನಿಂದ ಎನ್ಡಿಆರ್ ಎಫ್ ನ 10 ನೇ ಬೆಟಾಲಿಯನ್ ಜಿಲ್ಲೆಗೆ ಆಗಮಿಸಿದೆ.
ಶಂಕಿತ ಉಗ್ರರ ವಿಚಾರಣೆಯಲ್ಲಿ ಕರಾಳ ಸತ್ಯ, ರಾಜ್ಯದಲ್ಲಿ ರೋಬೋಟ್ ಮೂಲಕ ವಿದ್ವಂ
ಜುಲೈ ತಿಂಗಳಲ್ಲಿ ಮಳೆ ತೀವ್ರವಾಗುವ ಸಾಧ್ಯತೆ ಇದ್ದು, ಭೂಕುಸಿತ ಅಥವಾ ಪ್ರವಾಹ ಎದುರಾದಲ್ಲಿ ಜನರನ್ನು ರಕ್ಷಿಸುವ ಕುರಿತು ಅಣಕು ತಾಲೀಮು ನಡೆಸುತ್ತಿದ್ದಾರೆ. ಮಡಿಕೇರಿ ತಾಲ್ಲೂಕಿನ ಹೆಬ್ಬೆಟಗೇರಿಯಲ್ಲಿ 2018 ರಲ್ಲಿ ಭೂಕುಸಿತವಾಗಿ ದೊಡ್ಡ ಕಂದಕ ನಿರ್ಮಾಣವಾಗಿರುವ ಜಾಗದಲ್ಲಿ ತಾಲೀಮು ನಡೆಸಲಾಗಿದೆ. ಭೂಕುಸಿತವಾಗಿದ್ದ ಸ್ಥಳದಲ್ಲಿ ಯಾರಿಗೂ ತೊಂದರೆ ಆಗದಂತೆ ಮುನ್ನೆಚ್ಚರಿಕೆ ವಹಿಸುವ ಎನ್‌ಡಿಆರ್‌ಎಫ್ ಯುಟಿಲಿಟಿ ತಂಡ ಮೊದಲು ಭೂಕುಸಿತವಾಗಿರುವ ಸ್ಥಳದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಅದನ್ನು ರಕ್ಷಣಾ ವಲಯವಾಗಿ ಮಾಡಲಿದೆ. ಹಿಂದೆಯೇ ಎನ್‌ಡಿಆರ್‌ಎಫ್ ತಂಡದೊಂದಿಗೆ ಬರುವ ವೈದ್ಯರು ಕುಸಿದು ಬಿದ್ದ ಮನೆಯೊಳಗೆ ಸಿಲುಕಿದ ಅಥವಾ ಮಣ್ಣು ಮರಗಳ ದಿಮ್ಮಿಯೊಳಗೆ ಸಿಲುಕಿರುವವರನ್ನು ಪರಿಶೀಲಿಸಿ ಅವರನ್ನು ಹೇಗೆ ಸುರಕ್ಷಿತವಾಗಿ ಹೊರತೆಗೆಯಬೇಕು ಎಂದು ವೈದ್ಯರು ಹೇಳಿ ಬಳಿಕ ಎನ್‌ಡಿಆರ್‌ಎಫ್ ತಂಡ ಮಣ್ಣಿನೊಳಗೆ ಹೂತು ಹೋಗಿದ್ದ ವ್ಯಕ್ತಿಯನ್ನು ಹೊರತೆಗೆದರು.
ಭೂಮಿ ಕುಸಿದು ಕಂದಕ ನಿರ್ಮಾಣವಾಗಿದ್ದರಿಂದ ಆ ವ್ಯಕ್ತಿಯೊನ್ನು ಹೊತ್ತು ಸಾಗುವುದು ಕಷ್ಟವಾಗಬಹುದೆಂದು ಅರಿತ ರಕ್ಷಣಾ ಸಿಬ್ಬಂದಿ ಅಗತ್ಯ ಮೂಲಕವೇ ವ್ಯಕ್ತಿಯನ್ನು ಹೊರಗೆ ಸಾಗಿಸಿ ಅಂಬ್ಯುಲೆನ್ಸ್ಗೆ ಕರೆದೊಯ್ದರು. ಇನ್ನು ಕುಸಿದ ಮನೆಯೊಳಗೆ ಸಿಲುಕಿದ್ದ ವ್ಯಕ್ತಿಯನ್ನು ರಕ್ಷಿಸುವುದಕ್ಕಾಗಿ ವೈಜ್ಞಾನಿಕ ಕ್ರಮ ಅನುಸರಿಸಿದ ರಕ್ಷಣಾ ಸಿಬ್ಬಂದಿ ತಮ್ಮ ಬಳಿ ಇರುವ ಅತ್ಯಾಧುನಿಕ ಕಟ್ಟರ್ಗಳನ್ನು ಬಳಸಿ ಮನೆಯ ಗೋಡೆಯನ್ನು ತುಂಡರಿಸಿ ಅದರೊಳಗೆ ಸಿಲುಕಿದ್ದ ವ್ಯಕ್ತಿಯನ್ನು ರಕ್ಷಿಸಿದರು.ಇನ್ನು ಭೂಕುಸಿತವಾಗಿ ಬೆಟ್ಟದ ಮೇಲೆ ಸಿಲುಕಿದ್ದ ವ್ಯಕ್ತಿಯನ್ನು ರಕ್ಷಣಾ ಸಿಬ್ಬಂದಿ ಬೆನ್ನಮೇಲೆ ಹೊತ್ತು ಸುರಕ್ಷಿತವಾದ ಸ್ಥಳಕ್ಕೆ ಕರೆತಂದರು. ಹೀಗೆ ಒಬ್ಬೊಬ್ಬರು ಒಂದೊಂದು ಸನ್ನಿವೇಶದ ತೊಂದರೆಗೆ ಸಿಲುಕಿದ್ದ ಒಂಭತ್ತು ಜನರನ್ನು ರಕ್ಷಿಸುವ ತಾಲೀಮು ನಡೆಸಲಾಯಿತು.
ಬೆಳಗಾವಿ-ಮಹಾರಾಷ್ಟ್ರ ಗಡಿಯಲ್ಲಿ 4 ತಲೆಬುರುಡೆ ಪತ್ತೆ, ಬೆಚ್ಚಿಬಿದ್ದ ಜನ!
ಆ ಮೂಲಕ ಜಿಲ್ಲೆಯಲ್ಲಿ ಒಂದು ವೇಳೆ ಪ್ರವಾಹ ಭೂಕುಸಿತವಾದರೆ ಎಂತಹದ್ದೇ ಸ್ಥಿತಿಯಲ್ಲಾದರೂ ಜನರನ್ನು ರಕ್ಷಿಸಲು ಸಿದ್ದವಾಗಿದ್ದೇವೆ ಎನ್ನುವ ಧೈರ್ಯವನ್ನು ಜನರಿಗೆ ತುಂಬಿಸುವ ಪ್ರಯತ್ನ ಮಾಡಿದರು. ಇಡೀ ಕಾರ್ಯಾಚರಣೆಯಲ್ಲಿ ಇದ್ದ ಜಿಲ್ಲಾಧಿಕಾರಿ ವೆಂಕಟ್ ರಾಜ ಅವರು ಮಾತನಾಡಿ ಎನ್‌ಡಿಆರ್‌ಎಫ್ , ಪೊಲೀಸ್ ಮತ್ತು ಅಗ್ನಿ ಶಾಮಕ ದಳದ ನೇತೃತ್ವದಲ್ಲಿ ಅಣಕು ಪ್ರದರ್ಶನ ಮಾಡಿದ್ದೇವೆ. ಎಂತಹದ್ದೇ ಸ್ಥಿತಿ ಬಂದರೂ ಜನರನ್ನು ರಕ್ಷಿಸಲು ಸಿದ್ದರಿದ್ದೇವೆ ಎಂದು ಹೇಳಿದರು. ಇನ್ನು ಎನ್‌ಡಿಆರ್‌ಎಫ್ ತಂಡ ಉಪನಾಯಕ ಅರ್ಜುನ್ ಅವರು ಮಾತನಾಡಿ ವಿವಿಧ ಸ್ಥಿತಿಯಲ್ಲಿ ತೊಂದರೆಗೆ ಸಿಲುಕಿದ್ದವರನ್ನು ರಕ್ಷಿಸುವ ಮೂಲಕ ತರಬೇತಿ ನಡೆಸಿದ್ದೇವೆ ಎಂದರು.