ಅಂಬು ಒಡೆಯುವ ಮೂಲಕ ಆರದವಳ್ಳಿ ಗ್ರಾಮದಲ್ಲಿ ನವರಾತ್ರಿ ಸಂಪನ್ನ
ನವರಾತ್ರಿಯ ಕೊನೆಯ ದಿನವಾದ ಇಂದು ವಿಜಯದಶಮಿ ಆಚರಣೆ ಯನ್ನು ಚಿಕ್ಕಮಗಳೂರು ತಾಲೂಕಿನ ಅಂಬಳೆ ಹೋಬಳಿಯ ಆರದವಳ್ಳಿ ಗ್ರಾಮದಲ್ಲಿ ಅಂಬು ಒಡೆಯುವ ಮೂಲಕ ಅತ್ಯಂತ ಸಂಭ್ರಮದಿಂದ ಆಚರಣೆ ಮಾಡಲಾಯಿತು.
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು
ಚಿಕ್ಕಮಗಳೂರು (ಅ.24) : ನವರಾತ್ರಿಯ ಕೊನೆಯ ದಿನವಾದ ಇಂದು ವಿಜಯದಶಮಿ ಆಚರಣೆ ಯನ್ನು ಚಿಕ್ಕಮಗಳೂರು ತಾಲೂಕಿನ ಅಂಬಳೆ ಹೋಬಳಿಯ ಆರದವಳ್ಳಿ ಗ್ರಾಮದಲ್ಲಿ ಅಂಬು ಒಡೆಯುವ ಮೂಲಕ ಅತ್ಯಂತ ಸಂಭ್ರಮದಿಂದ ಆಚರಣೆ ಮಾಡಲಾಯಿತು.ಗ್ರಾಮದ ಪಟೇಲ ವಂಶಸ್ಥರಾದ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎ.ಎನ್ ಮಹೇಶ್ ನೇತೃತ್ವದಲ್ಲಿ 26ನೇ ವರ್ಷದ ಅಂಬು ಮಹೋತ್ಸವ ಸಾಂಪ್ರದಾಯಿಕ ಪೂಜಾ ವಿಧಿ ವಿಧಾನಗಳೊಂದಿಗೆ ಅತ್ಯಂತ ಸಂಭ್ರಮ ದಿಂದ ನೆರವೇರಿತು.
ಬಾಳೆಗೊನೆಗೆ ಬಿಲ್ಲು ಹೊಡೆಯುವ ಮೂಲಕ ಸಂಪನ್ನ :
ಗ್ರಾಮಸ್ಥರು ಗ್ರಾಮದೇವರನ್ನು ಹೊತ್ತು ಊರಿನ ಸುತ್ತ ಮೆರವಣಿಗೆ ನಡೆಸುವ ಮೂಲಕ ಅಂಬು ಒಡೆ ಯುವ ಸ್ಥಳಕ್ಕೆ ಸಾಗಿದರು. ಸಾಂಪ್ರದಾಯಿಕ ಅಲಂಕೃತ ಉಡುಗೆಯೊಂದಿಗೆ ಸಿಂಗಾರಗೊಂಡಿದ್ದ ಪಟೇಲ ವಂಶಸ್ಥ ರಾದ ಎ.ಎನ್.ಮಹೇಶ್ ಹಾಗೂ ಕುಟುಂಬಸ್ಥರನ್ನು ಊರಿನ ಮುಖಂಡರು, ಗ್ರಾಮಸ್ಥರುಗಳು ವಾದ್ಯಗೋಷ್ಠಿಯೊಂದಿಗೆ ಮೆರವಣಿಗೆ ಮೂಲಕ ಗ್ರಾಮದ ಅಂಬು ಹೊಡೆಯುವ ದೊಡ್ಡಕೆರೆ ಬಳಿಗೆ ಕರೆ ತರಲಾಯಿತು.
ಚಿಕ್ಕಮಗಳೂರು: ಚಪಾತಿ ಉಜ್ಜುವ ಲಟ್ಟಣಿಗೆಗೂ ಪೂಜೆ ಮಾಡಿದ ಮಹಿಳೆ, ಫೋಟೋ ವೈರಲ್..!
ಗ್ರಾಮದೇವತೆಗಳಿಗೆ ಪೂಜೆ ಸಲ್ಲಿಸಿ ಬನ್ನಿ ಮರದ ಬಳಿ ಶಮಿ ಪೂಜೆ ನೆರವೇರಿಸಿದ ನಂತರ ಊರಿನ ದೊಡ್ಡ ಕೆರೆ ಬಳಿಕ ಏರ್ಪಡಿಸಿದ ಅಂಬು ಹೊಡೆಯುವ ಸಾಂಪ್ರದಾಯಿಕ ಕಾರ್ಯಕ್ರಮದಲ್ಲಿ ಬಾಳೆಗೊನೆಗೆ ಬಿಲ್ಲು ಹೊಡೆಯುವ ಮೂಲಕ ತುಂಡರಿಸಿದರು. ನಂತರ ಬಂದೂರಿನಿಂದ ಬಾಳೆ ದಿಂಡನ್ನು ತುಂಡರಿಸಲಾಯಿತು. ಶ್ರೀ ಆಂಜನೇಯ ಸ್ವಾಮಿ, ಮಲ್ಲೇಶ್ವರಸ್ವಾಮಿ, ಗ್ರಾಮದೇವತೆಗಳಾದ ಮಾರಮ್ಮದೇವಿ ಹಾಗೂ ಭೂತಪ್ಪ ದೇವರ ಉತ್ಸವದೊಂದಿಗೆ ಬನ್ನಿ ಮರಕ್ಕೆ ವಿಶೇಷ ಪೂಜೆ ಸಲ್ಲಿಸಿ ಸಂಪ್ರದಾಯಿಕವಾಗಿ ಬಾಳೆ ಗೊನೆಗೆ ಬಿಲ್ಲು ಹೊಡೆಯುವ ಮೂಲ ಅಂಬಿನ ಉತ್ಸವವನ್ನು ಯಶಸ್ವಿಗೊಳಿಸಿದರು.
ಸಂಪ್ರದಾಯ ಕಾರ್ಯಕ್ರಮಕ್ಕೆ ಮೆರಗು :
ವಿಜಯದಶಮಿ ಅಂಬುಮಹೋತ್ಸವ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಎ.ಎನ್.ಮಹೇಶ್ ವಿಜಯದಶಮಿ ಒಂದು ಐತಿಹಾಸಿಕ ಕಾರ್ಯಕ್ರಮವಾಗಿದೆ. ವಿಜಯನಗರ ಅರಸರ ಕಾಲದಿಂದಲೂ ದಸರಾ ಉತ್ಸವ ಅತ್ಯಂತ ವಿಜೃಂಭಣೆಯಿಂದ ನಡೆದುಕೊಂಡು ಬರುತ್ತಿದೆ. ಮೈಸೂರು ಅರಸರ ಕಾಲದಲ್ಲಿ ನವರಾತ್ರಿ ದಸರಾಗೆ ಮತ್ತಷ್ಟು ಮಹತ್ವ ಬಂದಿದೆ ಎಂದರು.
ರಾಜ ಪ್ರಜಾಪ್ರಭುತ್ವದ ಕಾಲದಲ್ಲಿ ಸ್ಥಳೀಯ ಆಡಳಿತ ನಡೆಸುವ ಪಟೇಲರನ್ನು ನೇಮಿಸಿ ಅವರಿಂದ ದಸರಾ ಆಚರಣೆಗೆ ಚಾಲನೆ ನೀಡಲಾಗುತ್ತಿತ್ತು. ಅಂದಿನಿಂದ ನಿರಂತರವಾಗಿ ನಡೆದುಕೊಂಡು ಬರುತ್ತಿದೆ. ತಮ್ಮ ಕುಟುಂಬದ ಪೂರ್ವಜರು ಪಟೇಲರಾಗಿ ಕಾರ್ಯನಿರ್ವಹಿಸುತ್ತಿದ್ದರು. ಇದೀಗ ಅದನ್ನು ಮುಂದುವರಿಸಿಕೊಂಡು ಬರಲಾಗುತ್ತಿದೆ ಎಂದರು.
ಚಿಕ್ಕಮಗಳೂರು: ಬಿಗ್‌ಬಾಸ್ ಸ್ಪರ್ಧಿ ಸಂತೋಷ್ ಬಂಧನ ಬೆನ್ನಲ್ಲೇ ಹುಲಿ ಉಗುರು ಧರಿಸಿದ್ದ ಇಬ್ಬರ ಬಂಧನ
ಅಂಬು ಉತ್ಸವವು ಅನೇಕ ವರ್ಷಗಳಿಂದ ಆರದವಳ್ಳಿಯ ಗ್ರಾಮದಲ್ಲಿ ಪಟೇಲ ವಂಶಸ್ಥರಿಂದ ಚಾಲನೆ ದೊರೆಯುತ್ತಿದೆ ಎಂದರು. ನವರಾತ್ರಿಯ ಪ್ರಾರಂಭದ ದಿನ ಗ್ರಾಮದೇವರುಗಳನ್ನು ಪಟ್ಟಕ್ಕೆ ಕೂರಿಸಿ ಪೂಜಾ ವಿಧಿವಿಧಾನಗಳೊಂದಿಗೆ ಕಾರ್ಯಕ್ರಮ ನಡೆಯಲಿದ್ದು 9 ದಿನಗಳ ಕಾಲ ದೇವರ ಪೂಜಾ ಕೈಂಕಾರ್ಯಗಳು ನಡೆಯುತ್ತದೆ. ಕೊನೆಯ ದಿನವಾದ ವಿಜಯದಶಮಿ ವಿಜ್ರಂಭಣೆಯಿಂದ ನೆರವೇರಲಿರುತ್ತದೆ.
ಈ ಸಂದರ್ಭದಲ್ಲಿ ಹರಿಹರದಹಳ್ಳಿ ಗ್ರಾ.ಪಂ. ಅಧ್ಯಕ್ಷೆ ಶಾರದಾ ಮಾಸ್ತೇಗೌಡ, ಸದಸ್ಯೆ ಲಲಿತಾ ಶಿವಾನಂದ್, ಯುವ ಮುಖಂಡ ಶ್ರೀಕಾಂತ್, ಗ್ರಾಮದ ಅಧ್ಯಕ್ಷ ಪಾಪೇಗೌಡ, ಮಹಿಳೆಯರು, ವೃದ್ದರು, ಮಕ್ಕಳು ಭಾಗವಹಿಸಿ ಸಂಪ್ರದಾಯ ಕಾರ್ಯಕ್ರಮಕ್ಕೆ ಮೆರಗು ಮೂಡಿಸಿದರು.