ಚಿಕ್ಕಮಗಳೂರು: ಬಿಗ್‌ಬಾಸ್ ಸ್ಪರ್ಧಿ ಸಂತೋಷ್ ಬಂಧನ ಬೆನ್ನಲ್ಲೇ ಹುಲಿ ಉಗುರು ಧರಿಸಿದ್ದ ಇಬ್ಬರ ಬಂಧನ
ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ಮಾಡಿದ ವೇಳೆ ಹುಲಿ ಉಗುರು ಮಾರುತ್ತಿದ್ದ ಇಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಹುಲಿ ಉಗುರಿನ ಒಂದು ಡಾಲರ್ ವಶಪಡಿಸಿಕೊಂಡಿದ್ದಾರೆ.
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು(ಅ.24): ಹುಲಿ ಉಗುರಿನ ಪೆಂಡೆಂಟ್ ಧರಿಸಿದ್ದ ಬಿಗ್ ಬಾಸ್ ಸ್ಪರ್ಧಿ ವರ್ತೂರ್ ಸಂತೋಷ್ ಜೈಲುಪಾಲಾಗಿದ್ದು, ನ್ಯಾಯಾಲಯ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ವರ್ತೂರು ಸಂತೋಷ್ ಅಸಲಿ ಉಗುರಿನ ಕಥೆ ಹೊರಬರುತ್ತಿದ್ದಂತೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲೂ ಬೆಳ್ಳಿ ಚೈನಿಗೆ ಹುಲಿ ಉಗುರು ಜೋಡಿಸಿ ಹಾಕಿಕೊಂಡಿದ್ದ ಇಬ್ಬರನ್ನ ಮೂಡಿಗೆರೆ ಅರಣ್ಯ ಅಧಿಕಾರಿಗಳು ಬಂಧಿಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಮೂಡಿಗೆರೆ ಹಾಗೂ ಆಲ್ದೂರು ಅರಣ್ಯ ಇಲಾಖೆ ಅಧಿಕಾರಿಗಳು ಹುಲಿ ಉಗುರಿನ ಡಾಲರ್ ಧರಿಸಿದ್ದ ಇಬ್ಬರನ್ನು ಬಂಧಿಸಿದ್ದು, ಮತ್ತಿಬ್ಬರು ಪಾರಾರಿಯಾಗಿದ್ದಾರೆ.
ವರ್ತೂರು ಸಂತೋಷ್ ಹುಲಿ ಉಗುರು ಪೆಂಡೆಂಟ್‌ನಿಂದ ಚಿನ್ನದಂಗಡಿ ಮಾಲೀಕನಿಗೂ ಸಂಕಷ್ಟ!
ಬಂಧಿತರಿಬ್ಬರ ವಿರುದ್ಧ ಅರಣ್ಯ ಅಧಿಕಾರಿಗಳು ಅರಣ್ಯ ಕಾಯ್ದೆಯಡಿ ಪ್ರಕರಣ
ಮೂಡಿಗೆರೆ ತಾಲೂಕಿನ ಭಾರತೀಬೈಲು ಬಳಿಯ ಕುಂಡ್ರ ಗ್ರಾಮದ ನಿವಾಸಿಯಾದ ಸತೀಶ್ ಹಾಗೂ ಹಲ್ಲೇಮನೆ ಗ್ರಾಮದ ಕುಂದೂರು ನಿವಾಸಿ ರಂಜಿತ್ ಬಂಧಿತ ಆರೋಪಿಗಳು. ಹುಲಿ ಉಗುರು ಧರಿಸಿದ್ದ ಇಬ್ಬರು ಅರೆಸ್ಟ್ ಆಗುತ್ತಿದ್ದಂತೆ ಮೂಡಿಗೆರೆ ತಾಲೂಕಿನ ಕುಂಡ್ರ, ಹಲ್ಲೇಮನೆ ಗ್ರಾಮದಲ್ಲಿ ಹುಲಿ ಉಗುರು ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ. ದಾಳಿ ನಡೆಸಿದ ಅರಣ್ಯ ಅಧಿಕಾರಿಗಳು ಹುಲಿ ಉಗುರಿನ ಒಂದು ಡಾಲರನ್ನ ವಶಪಡಿಸಿಕೊಂಡಿದ್ದಾರೆ. ಬಂಧಿತರಿಬ್ಬರ ವಿರುದ್ಧ ಅರಣ್ಯ ಅಧಿಕಾರಿಗಳು ಅರಣ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ತಲೆಮರೆಸಿಕೊಂಡಿರುವ ಇಬ್ಬರು ಹುಲಿ ಉಗುರು ಮಾರಾಟಗಾರರ ಬಂಧನಕ್ಕೆ ಬಲೆ ಬೀಸಿದ್ದಾರೆ.