Asianet Suvarna News Asianet Suvarna News

Tumakuru : ಮಳೆಗೆ ರಾಷ್ಟ್ರೀಯ ಹೆದ್ದಾರಿಯೇ ಮುಳುಗಡೆ

ಕಲ್ಪತರು ನಾಡಿನಲ್ಲಿ ಬಿಟ್ಟೂಬಿಡದೆ ಧಾರಾಕಾರವಾಗಿ ಸುರಿಯುತ್ತಿರುವ ಮಳೆ ಅವಾಂತರಗಳನ್ನು ಸೃಷ್ಟಿಸಿದ್ದು, ಪೂನಾ-ಬೆಂಗಳೂರು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ-48 ಮುಳುಗಡೆಯಾಗಿ ಈ ರಸ್ತೆಯಲ್ಲಿ ನದಿಯಂತೆ ನೀರು ಹರಿದಿದೆ.

National Highway Submerged in Rain water snr
Author
First Published Oct 21, 2022, 4:12 AM IST | Last Updated Oct 21, 2022, 4:12 AM IST

 ತುಮಕೂರು (ಅ.21): ಕಲ್ಪತರು ನಾಡಿನಲ್ಲಿ ಬಿಟ್ಟೂಬಿಡದೆ ಧಾರಾಕಾರವಾಗಿ ಸುರಿಯುತ್ತಿರುವ ಮಳೆ ಅವಾಂತರಗಳನ್ನು ಸೃಷ್ಟಿಸಿದ್ದು, ಪೂನಾ-ಬೆಂಗಳೂರು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ-48 ಮುಳುಗಡೆಯಾಗಿ ಈ ರಸ್ತೆಯಲ್ಲಿ ನದಿಯಂತೆ ನೀರು ಹರಿದಿದೆ.

ರಾತ್ರಿ ಸುರಿದ ಮಳೆಗೆ ಹೆಬ್ಬಾಕ ಅಮಾನಿಕೆರೆ ಒಳ ಮತ್ತು ಹೊರ ಹರಿವು ಜಾಸ್ತಿಯಾಗಿ ರಾಷ್ಟ್ರೀಯ ಹೆದ್ದಾರಿ-40 ಹಾಗೂ ಅಂಚಿಹಳ್ಳಿ ಗ್ರಾಮ ಜಲಾವೃತವಾಗಿದೆ. ಮಳೆಯಿಂದಾಗಿ ಊರುಕೆರೆ ಮತ್ತು ಕೋರ ನಡುವೆ ರಾಷ್ಟ್ರೀಯ ಹೆದ್ದಾರಿ-48 ಸಂಪೂರ್ಣ ಜಲಾವೃತಗೊಂಡಿರುವುದರಿಂದ ಸುಮಾರು 4 ಕಿಲೋ ಮೀಟರ್‌ ವರೆಗೆ ಮಳೆ ನೀರು ತುಂಬಿ ವಾಹನಗಳು ಸಂಚರಿಸಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಹೆಬ್ಬಾಕ ಕೆರೆ ಭರ್ತಿಯಾಗಿರುವ ಹಿನ್ನೆಲೆಯಲ್ಲಿ ನೀರಿನ ಪ್ರಮಾಣ ಜಾಸ್ತಿಯಾಗಿ ಅಂಚಿಹಳ್ಳಿ ಹಾಗೂ ಸುತ್ತಮುತ್ತಲ ಗ್ರಾಮಗಳ ಜಲಾವೃತ ಭೀತಿ ಅನುಭವಿಸುವಂತಾಗಿತ್ತು. ರಾಷ್ಟ್ರೀಯ ಹೆದ್ದಾರಿ-48 ರಲ್ಲಿ ವಾಹನಗಳ ಸಂಚಾರ ಪರ್ಯಾಯ ವ್ಯವಸ್ಥೆ ಮಾಡಲಾಗಿದ್ದು, ಒಂದೇ ಕಡೆ ರಸ್ತೆಯಲ್ಲಿ ಎರಡು ಕಡೆಯ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.

ಹೆಬ್ಬಾಕ ಅಮಾನಿಕೆರೆಯ ಕೋಡಿ ಹೊರ ಹರಿವು ಹೆಚ್ಚಳವಾಗಿರುವುದರಿಂದ ಹೆಬ್ಬಾಕ ಗ್ರಾಮದ ಒಳಾಂಗಣದಲ್ಲೇ ನೀರು ಹರಿಯುತ್ತಿರುವುದರಿಂದ ಗ್ರಾಮದಿಂದ ಹೊರಗೆ ಹಾಗೂ ಹೊರಗಿನಿಂದ ಗ್ರಾಮಕ್ಕೆ ಬರಲು ಮತ್ತು ಹೋಗಲು ಸಾಧ್ಯವಾಗದೆ ಜನರು ಪರದಾಡುವಂತಾಗಿದೆ. ಹೆಬ್ಬಾಕ ಮತ್ತು ಅಂಚಿಹಳ್ಳಿ ಗ್ರಾಮದ ಗ್ರಾಮಸ್ಥರು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಹೊರಗೆ ಹೋಗಲು ಸಾಧ್ಯವಾಗದೆ ನೀರಿನ ಅಬ್ಬರಕ್ಕೆ ತತ್ತರಿಸುವಂತಾಗಿದೆ. ಹೆಬ್ಬಾಕ ಅಮಾನಿಕೆರೆ ಅಪಾಯಮಟ್ಟಮೀರಿ ಹರಿಯುತ್ತಿರುವುದರಿಂದ ಹೆಬ್ಬಾಕ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಜನತೆ ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ.

ಗ್ರಾಮಸ್ಥರಿಗೆ ಜಲದಿಗ್ಬಂಧನ:

ಹೆಬ್ಬಾಕ ಅಮಾನಿಕೆರೆ ಅಪಾಯಮಟ್ಟಮೀರಿ ಹರಿಯುತ್ತಿರುವುದರಿಂದ ಹೆಬ್ಬಾಕ ಮತ್ತು ಊರುಕೆರೆ ನಡುವೆ ಸಂಪರ್ಕ ಕಡಿತಗೊಂಡಿದೆ. ಇತ್ತ ಹೆಬ್ಬಾಕ ಗ್ರಾಮದ ಆಂಜನೇಯ ದೇಗುಲ, ಕೆರೆ ಅಂಚಿನ ಮನೆಗಳು ಮುಳುಗಡೆಯಾಗಿವೆ. ಅಲ್ಲದೆ ಹೆಬ್ಬಾಕ, ನರಸಾಪುರ, ಊರುಕೆರೆ, ಕಟ್ಟಿಗೇನಹಳ್ಳಿ ಭಾಗದ ಬಹುತೇಕ ಅಡಿಕೆ, ತೆಂಗು ತೋಟಗಳು ಜಲಾವೃತಗೊಂಡಿವೆ.

ಡಿಸಿ ಭೇಟಿ, ಪರಿಶೀಲನೆ:

ಮಳೆ ಅಬ್ಬರದಿಂದಾಗಿ ಹೆಬ್ಬಾಕ ಕೆರೆಯ ನೀರಿನ ಹರಿವಿನ ಪ್ರಮಾಣ ಹೆಚ್ಚಾಗಿ ರಾಷ್ಟ್ರೀಯ ಹೆದ್ದಾರಿ-48ಕ್ಕೆ ಹರಿದು ಜಲಾವೃತಗೊಂಡಿರುವ ಸ್ಥಳಕ್ಕೆ ಜಿಲ್ಲಾಧಿಕಾರಿ ವೈ.ಎಸ್‌. ಪಾಟೀಲ್‌ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಮಾತನಾಡಿದ ಅವರು, ಪ್ರಾಥಮಿಕ ವರದಿ ಪ್ರಕಾರ ಹೆಬ್ಬಾಕ ಕೆರೆ ಬಹಳ ವರ್ಷಗಳಿಂದ ಕೋಡಿ ಬಿದ್ದಿರಲಿಲ್ಲ. ಆದರೆ ಈಗ ಮಳೆ ಪ್ರಮಾಣ ಜಾಸ್ತಿಯಾಗಿದ್ದರಿಂದ ಮಳೆಯ ಹಿನ್ನೀರು ಜಾಸ್ತಿಯಾಗಿದೆ. ಕೋಡಿ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಯುತ್ತಿರುವುದರಿಂದ ರಾಷ್ಟ್ರೀಯ ಹೆದ್ದಾರಿ ಜಲಾವೃತಗೊಂಡಿದೆ. ಈಗ ನೀರು ಕಡಿಮೆ ಮಾಡುವ ಕೆಲಸ ಮಾಡುತ್ತಿದ್ದು, ಸಂಚಾರವನ್ನು ಸುಗಮ ಮಾಡುವ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದರು.

ಹೆಬ್ಬಾಕ ಕೆರೆಯ ಕೋಡಿ ಪಕ್ಕದಲ್ಲಿ ಸ್ವಲ್ಪ ಒಡೆದು ಹೆಚ್ಚಿನ ನೀರು ಹೊರಗೆ ಬಿಡಲಾಗಿದೆ. ಆದರೆ ಇನ್ನು ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಡುಗಡೆ ಮಾಡಲು ಸಾಧ್ಯವಿಲ್ಲ. ಏಕೆಂದರೆ ಮುಂದೆ ಬರುವ ಗ್ರಾಮಗಳ ತೋಟಗಳು ಹಾಗೂ ಊರುಗಳು ಜಲಾವೃತಗೊಳ್ಳುವ ಭೀತಿ ಇದೆ. ಸ್ಥಳೀಯರು ಹೇಳುವ ಪ್ರಕಾರ ಕೆರೆ ಕೋಡಿ ಎತ್ತರ ಮಾಡಿರುವುದು ನಿಜ. ಕೋಡಿ ಎತ್ತರ ಮಾಡಿರುವುದರಿಂದ ಈ ಸಮಸ್ಯೆಯಾಗಿರುವುದನ್ನು ತಾಂತ್ರಿಕವಾಗಿ ಪರಿಶೀಲಿಸಿದಾಗ ಕಂಡು ಬಂದರೆ ಸಂಬಂಧಪಟ್ಟಇಲಾಖೆಗಳಿಂದ ಕ್ರಮ ಕೈಗೊಳ್ಳಲಾಗುವುದು. ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗುತ್ತಿರುವುದರಿಂದ ಈಗಾಗಲೇ ತಾಲೂಕು ಆಡಳಿತಗಳನ್ನು ಸಂಪೂರ್ಣವಾಗಿ ಸಜ್ಜು ಮಾಡಲಾಗಿದ್ದು, ಆಯಾ ಗ್ರಾಮ ಪಂಚಾಯ್ತಿ ಮಟ್ಟದಲ್ಲೂ ಸಹ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ. ಇದಕ್ಕೆ ನಾಗರಿಕರ ಸಹಕಾರವೂ ಅಷ್ಟೇ ಮುಖ್ಯವಾಗಿದೆ. ಹಾಗಾಗಿ ನಾಗರಿಕರು ಸಹ ಅಷ್ಟೇ ಕಾಳಜಿಯಿಂದ ಇರಬೇಕು ಎಂದರು.

ಪಾಲಿಕೆ ಆಯುಕ್ತರ ಭೇಟಿ:

ಹೆಬ್ಬಾಕ ಅಮಾನಿಕೆರೆ ನೀರಿನ ಹೊರ ಹರಿವು ಜಾಸ್ತಿಯಾಗಿ ಅಂಚಿಹಳ್ಳಿ ಗ್ರಾಮ ಮುಳುಗಡೆಯಾಗಿರುವ ಸುದ್ದಿ ತಿಳಿಯುತ್ತಿದ್ದಂತೆ ತುಮಕೂರು ಮಹಾನಗರ ಪಾಲಿಕೆ ಆಯುಕ್ತೆ ರೇಣುಕಾ ಅವರು ಬೆಳಗ್ಗೆಯೇ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಮನವಿ ಮಾಡಿದರು.

ಉಪವಿಭಾಗಾಧಿಕಾರಿ ಭೇಟಿ:

ಜಲಾವೃತಗೊಂಡಿರುವ ಅಂಚಿಹಳ್ಳಿ ಗ್ರಾಮಕ್ಕೆ ಉಪವಿಭಾಗಾಧಿಕಾರಿ ಅಜಯ್‌, ಅಡಿಷನಲ್‌ ಎಸ್ಪಿ ಉದೇಶ್‌ ಹಾಗೂ ತಹಸೀಲ್ದಾರ್‌ ಮೋಹನ್‌ಕುಮಾರ್‌, ಆರ್‌ಐಗಳಾದ ಶಿವಣ್ಣ, ಮಹೇಶ್‌, ಅಜಯ್‌, ಗೋಪಿನಾಥ್‌ ಗ್ರಾಮ ಲೆಕ್ಕಿಗರಾದ ದೇವರಾಜು, ಸುನಿತಾ, ರವಿಕುಮಾರ್‌, ರಾಘವೇಂದ್ರ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Latest Videos
Follow Us:
Download App:
  • android
  • ios