Koppal: ದೇಶದ ಎರಡನೇ ನಾರಿ ಸುವರ್ಣ ಕುರಿ ಸಂವರ್ಧನಾ ಕೇಂದ್ರ ಆರಂಭ
ಇತ್ತೀಚಿನ ದಿನಗಳಲ್ಲಿ ಕುರಿ ಸಾಕಾಣಿಕೆಯತ್ತ ಬಹಳಷ್ಟು ಜನರು ಆಸಕ್ತಿ ತೋರುತ್ತಿದ್ದಾರೆ. ಇದಕ್ಕೆ ಕಾರಣ ಹಲವಾರು. ಕುರಿ ಸಾಕಾಣಿಕೆಯಿಂದ ರೈತರು ಆರ್ಥಿಕವಾಗಿ ಸಬಲರಾಗುತ್ತಾರೆ.
ವರದಿ: ದೊಡ್ಡೇಶ್ ಯಲಿಗಾರ್, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಪ್ಪಳ
ಕೊಪ್ಪಳ (ಜೂ.21): ಇತ್ತೀಚಿನ ದಿನಗಳಲ್ಲಿ ಕುರಿ ಸಾಕಾಣಿಕೆಯತ್ತ ಬಹಳಷ್ಟು ಜನರು ಆಸಕ್ತಿ ತೋರುತ್ತಿದ್ದಾರೆ. ಇದಕ್ಕೆ ಕಾರಣ ಹಲವಾರು. ಕುರಿ ಸಾಕಾಣಿಕೆಯಿಂದ ರೈತರು ಆರ್ಥಿಕವಾಗಿ ಸಬಲರಾಗುತ್ತಾರೆ. ಈ ಹಿನ್ನಲೆಯಲ್ಲಿ ರೈತರನ್ನು ಮತ್ತಷ್ಟು ಆರ್ಥಿಕವಾಗಿ ಸಬಲರನ್ನಾಗಿ ಮಾಡಬೇಕೆನ್ನುವ ದೃಷ್ಟಿಯಿಂದ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದಿಂದ ಹೊಸದೊಂದು ಹೆಜ್ಜೆ ಇಡಲಾಗಿದೆ. ಅಷ್ಟಕ್ಕೂ ಯಾವುದು ಆ ಹೆಜ್ಜೆ ಅಂತೀರಾ? ಹಾಗಾದ್ರೆ ಈ ಸುದ್ದಿ ನೋಡಿ.
ನಾರಿ ಸುವರ್ಣ ಕುರಿ ಸಂವರ್ಧನಾ ಕೇಂದ್ರ ಆರಂಭ: ದೇಶದ ಪೈಕಿ ಎರಡನೇ ನಾರಿ ಸುವರ್ಣ ಕುರಿ ಸಂವರ್ಧನಾ ಕೇಂದ್ರ ಶೀಘ್ರದಲ್ಲಿಯೇ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ನಿಲೋಗಲ್ ಗ್ರಾಮದಲ್ಲಿ ತಲೆ ಎತ್ತಲಿದೆ.ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಏಲಶರಣು ತಳ್ಳಿಕೇರಿ ಕೊಪ್ಪಳ ಜಿಲ್ಲೆಯವರಾಗಿದ್ದು, ಹೀಗಾಗಿ ಕೊಪ್ಪಳ ಜಿಲ್ಲೆಯಲ್ಲಿ ಕೇಂದ್ರ ಆರಂಭಿಸಲು ಉತ್ಸುಕವಾಗಿದ್ದು, 15 ದಿನದೊಳಗೆ ಭೂಮಿ ಪೂಜೆ ನೆರವೇರಿಸಲು ಸಿದ್ಧತೆ ನಡೆಸಿದೆ. ಈಗಾಗಲೇ ಕೋಟಿ ರೂ. ಅನುದಾನ ಬಿಡುಗಡೆ ಗೊಂಡಿದ್ದು. ಹೆಚ್ಚುವರಿ 50 ಲಕ್ಷ ರೂ. ಅನುದಾನಕ್ಕಾಗಿ ನಿಗಮದಿಂದ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ಹಿಂದೂ ಎಂದು ಬರೆದಿದ್ದಕ್ಕೆ ಮೊರಾರ್ಜಿ ಶಾಲೆಯಲ್ಲಿ 71 ವಿದ್ಯಾರ್ಥಿಗಳಿಗಿಲ್ಲ ಪ್ರವೇಶ!
ಏನಿದು ನಾರಿ ಸುವರ್ಣ ಕುರಿ ಸಂವರ್ಧನಾ ಕೇಂದ್ರ: ನಾರಿ ಎಂದರೆ ನಿಂಬಾಳ ಅಗ್ರಿಕಲ್ಡರ್ ರಿಸರ್ಚ್ ಇನ್‌ಸ್ಟಿಟ್ಯೂಟ್ ಆಗಿದ್ದು, ಮಹಾರಾಷ್ಟ್ರದ ಪುಣೆಯ ಫಲಾನಿನಲ್ಲಿ ವಿಜ್ಞಾನಿ ನಿಂಬಾಳ ಸಂಶೋಧಿಸಿದ ವಿಶೇಷ ತಳಿ ಇದಾಗಿದೆ. ಈ ತಳಿಯ ಸಂವರ್ಧನಾ ಕೇಂದ್ರ ಮಹಾರಾಷ್ಟ ಹೊರತುಪಡಿಸಿದರೆ ದೇಶದಲ್ಲಿ ಎರಡನೆಯದಾಗಿ ಆರಂಭವಾಗುತ್ತಿರುವುದು ಕೊಪ್ಪಳ ಜಿಲ್ಲೆಯಲ್ಲಿ ಎನ್ನುವುದು ವಿಶೇಷ. ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮವು ರಾಜ್ಯದಲ್ಲಿರುವ ಕುರಿಗಾರರಿಗೆ ಅನುಕೂಲ ಕಲ್ಪಿಸುವುದಕ್ಕಾಗಿ ದೇಶದ ಎರಡನೇ ನಾರಿ ಸುವರ್ಣ ಕುರಿ ಸಂವರ್ಧನಾ ಕೇಂದ್ರವನ್ನು ಆರಂಭಿಸುತ್ತಿದೆ. ಶೀಘ್ರದಲ್ಲಿಯೇ ಕುಷ್ಟಗಿ ತಾಲೂಕಿನ ನಿಲೋಗಲ್ ಗ್ರಾಮದಲ್ಲಿ ಆರಂಭಿಸಲಾಗುತ್ತಿದೆ. ನಿಲೋಗಲ್ ಗ್ರಾಮವು ಗಡಿಭಾಗದಲ್ಲಿ ಇರುವುದರಿಂದ ರಾಜ್ಯದ ಕುರಿಗಾರರ ಜತೆಗೆ ಪ್ರಮುಖವಾಗಿ ಈ ಮೂರು ಜಿಲ್ಲೆಗಳಿಗೂ ಹೆಚ್ಚಿನ ಅನುಕೂಲವಾಗಲಿದೆ.
ಏನಿದು ನಾರಿ ಸುವರ್ಣ ತಳಿ: ಇನ್ನು ನಾರಿ ಸುವರ್ಣ ತಳಿ ಇಸ್ರೇಲ್ ಮೂಲದ ಆವಾಸಿ ತಳಿಯಾಗಿದ್ದು, ಪಶ್ಚಿಮ ಬಂಗಾಳದ ಅವಳಿ ಮರಿ ನೀಡುವ ಗೆರೋಲ್ ತಳಿ, ಹೆಚ್ಚು ತೂಕ ಬರುವ ತಳಿ ಡೆಕ್ಕನಿ ತಳಿ, ರುಚಿ ಕರ ಮಾಂಸದ ಬಂಡೂರು ತಳಿ ಸೇರಿದಂತೆ ಐದು ತಳಿಗಳ ಸಂಕರಣ ತಳಿಯೇ ನಾರಿ ಸುವರ್ಣ. ಈ ತಳಿಯ ಕುರಿಗಳು ಹೆಚ್ಚು ರೋಗನಿರೋಧಕ ಶಕ್ತಿ ಹೊಂದಿದ್ದು, ಅಲ್ಲದೆ ಹೆಚ್ಚು ಲಾಭ ತಂದುಕೊಡುತ್ತವೆ.
ಕುರಿ ಸಾಕಾಣಿಕೆದಾರರಿಗೆ ಏನು ಲಾಭ: ನಾರಿ ಸುವರ್ಣ ತಳಿ ಬಹು ಬೇಡಿಕೆಯ ಕುರಿಯಾಗಿದ್ದು, ಪ್ರತಿ ಕುರಿ 25 ಸಾವಿರ ರೂ.ವರೆಗೆ ಮಾರಾಟವಾಗಲಿದೆ. ಈ ತಳಿ ಅವಳಿ, ತ್ರಿವಳಿ ಮರಿ ಹಾಕುವುದರಿಂದ ರೈತರಿಗೆ, ಕುರಿಗಾರರಿಗೆ ಆರ್ಥಿಕ ಸ್ವಾವಲಂಬನೆಗೆ ಅನುಕೂಲವಾಗಲಿದೆ. ಕೇಂದ್ರ ಆರಂಭದಿಂದ ಕುರಿಗಾರಿಕೆಯನ್ನೇ ನೆಚ್ಚಿ ಬದುಕುತ್ತಿರುವ 15 ಲಕ್ಷ ರೂ. ಕುಟುಂಬಗಳಿಗೆ ಅನುಕೂಲವಾಗಲಿದೆ.
ಕೊಪ್ಪಳ; Kara Hunnime ಓಟದಲ್ಲಿ ಗೆದ್ದ ಮುಂದಿನ ಸಿಎಂ ಸಿದ್ದರಾಮಯ್ಯ ಎಂದು ಬರೆದಿದ್ದ ಎತ್ತು!
ಒಟ್ಟಿನಲ್ಲಿ ದೇಶದ ಎರಡನೇ ನಾರಿ ಸುವರ್ಣ ತಳಿ ಕುರಿ ಸಂವರ್ಧನಾ ಕೇಂದ್ರವು ಕೊಪ್ಪಳ ಜಿಲ್ಲೆಯಲ್ಲಿ ಆರಂಭವಾಗುತ್ತಿರುವುದು ನಿಜಕ್ಕೂ ಒಳ್ಳೆಯ ಬೆಳವಣಿಗೆ ಎಂದರೆ ತಪ್ಪಾಗಲಾರದು. ಈ ಕೇಂದ್ರ ಆರಂಭವಾದರೆ ಕುರಿ ಸಾಕಾಣಿಕೆದಾರರ ಆರ್ಥಿಕ ಪರಸ್ಥಿತಿ ಸುಧಾರಿಸುವುದರಲ್ಲಿ ಯಾವುದೇ ಅನುಮಾನವೇ ಇಲ್ಲ.