ನರೇಗಾ: ವೈಯಕ್ತಿಕ ಕಾಮಗಾರಿ ಮೊತ್ತ ದುಪ್ಪಟ್ಟು
ನರೇಗಾ ಯೋಜನೆಯಡಿ ವೈಯಕ್ತಿಕ ಕಾಮಗಾರಿಯಲ್ಲಿ ಪ್ರತಿ ಅರ್ಹ ಕುಟುಂಬಗಳ ಗರಿಷ್ಠ ಮೊತ್ತವನ್ನು ರು. 2.50 ಲಕ್ಷದಿಂದ 5 ಲಕ್ಷದವರೆಗೆ ಹೆಚ್ಚಿಸಲಾಗಿದ್ದು, ಗ್ರಾಮೀಣರು ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಬೇಕೆಂದು ಪಿಡಿಒ ನವೀನ್ ಕುಮಾರ್ ಹೇಳಿದರು.
ಹುಣಸೂರು : ನರೇಗಾ ಯೋಜನೆಯಡಿ ವೈಯಕ್ತಿಕ ಕಾಮಗಾರಿಯಲ್ಲಿ ಪ್ರತಿ ಅರ್ಹ ಕುಟುಂಬಗಳ ಗರಿಷ್ಠ ಮೊತ್ತವನ್ನು ರು. 2.50 ಲಕ್ಷದಿಂದ 5 ಲಕ್ಷದವರೆಗೆ ಹೆಚ್ಚಿಸಲಾಗಿದ್ದು, ಗ್ರಾಮೀಣರು ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಬೇಕೆಂದು ಪಿಡಿಒ ನವೀನ್ ಕುಮಾರ್ ಹೇಳಿದರು.
ತಾಲೂಕಿನ ಉದ್ದೂರ್ ಕಾವಲ್ ಗ್ರಾಪಂ ವ್ಯಾಪ್ತಿಯಲ್ಲಿ ಏರ್ಪಡಿಸಿದ್ದ ಉದ್ಯೋಗ ಖಾತ್ರಿ ನಡಿಗೆ ಸುಸ್ಥಿರತೆಯೆಡೆಗೆ ಅಭಿಯಾನದಡಿ ಕೈಗೊಂಡಿರುವ ಮನೆ ಮನೆ ಜಾಥಾ ಹಾಗೂ ಕ್ಯೂ ಆರ್ ಕೋಡ್ ಅಂಟಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನರೇಗಾ ಯೋಜನೆಯಡಿ ಕೂಲಿಕಾರರಿಗೆ ಅಕುಶಲ ಕೆಲಸ ಒದಗಿಸುವುದರ ಜೊತೆಗೆ ಅರ್ಹ ಫಲಾನುಭವಿಗಳ ಜೀವನಾಧಾರಕ್ಕೆ ನೆರವಾಗುವ ವೈಯಕ್ತಿಕ ಆಸ್ತಿಗಳನ್ನು ಸೃಜನೆ ಮಾಡಿ ಆರ್ಥಿಕ ಪರಿಸ್ಥಿತಿಯನ್ನು ಉತ್ತಮಪಡಿಸುವ ಉದ್ದೇಶದಿಂದ ಜೀವತಾವಧಿಯ ಹಣವನ್ನು ಸರ್ಕಾರಿ ಏರಿಕೆ ಮಾಡಿದೆ. ಮುಂದಿನ ಆರ್ಥಿಕ ವರ್ಷದ ಕ್ರಿಯಾ ಯೋಜನೆ ತಯಾರಿಕೆಗಾಗಿ ನರೇಗಾ ಯೋಜನೆಯಡಿಯಲ್ಲಿರುವ ವೈಯಕ್ತಿಕ ಮತ್ತು ಸಮುದಾಯ ಕಾಮಗಾರಿಗಳ ಬೇಡಿಕೆಯನ್ನು ಪಡೆಯಲಾಗುತ್ತಿದ್ದು, ಗ್ರಾಮಸ್ಥರು ಇದರ ಸದುಪಯೋಗವನ್ನು ಪಡೆದುಕೊಳ್ಳುವ ಮೂಲಕ ಆರ್ಥಿಕವಾಗಿ ಸದೃಢರಾಗುವ ಮೂಲಕ ಗ್ರಾಮದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಹೇಳಿದರು.
ಇದಕ್ಕೂ ಮುನ್ನ ಉದ್ಯೋಗ ಖಾತ್ರಿ ನಡಿಗೆ ಸುಸ್ಥಿರತೆಯೆಡೆಗೆ ಅಭಿಯಾನದಡಿ ಕೈಗೊಂಡಿರುವ ಮನೆ ಮನೆ ಜಾಥಾ ಹಾಗೂ ಮನೆ ಮನೆಗಳಿಗೆ ಕ್ಯೂ ಆರ್ ಕೋಡ್ ಅಂಟಿಸುವ ಕಾರ್ಯಕ್ರಮದ ಪ್ರಚಾರ ವಾಹನಕ್ಕೆ ಗ್ರಾಪಂ ಅಧ್ಯಕ್ಷ ಮುಬಾರಕ್ ಬಾನು ಚಾಲನೆ ನೀಡಿದರು.
ಪ್ರಚಾರ ವಾಹನವು ಪಂಚಾಯಿತಿ ವ್ಯಾಪ್ತಿಯ ಗೌರಿಪುರ, ನಂಜಾಪುರ, ಹೊಸಕೋಟೆ ಕಾಲೋನಿ, ಹೊನ್ನಿಕುಪ್ಪೆ ಕಾಲೋನಿ, ರತ್ನಪುರಿ ಬ್ಯಾಡರಹಳ್ಳಿ ಕಾಲೋನಿ ಗ್ರಾಮಗಳಿಗೆ ತೆರಳಿ ನರೇಗಾ ಯೋಜನೆ ಕುರಿತು ಪ್ರಚಾರ ನಡೆಸಲಾಯಿತು.
ತಾಲೂಕು ಐಇಸಿ ಸಂಯೋಜಕಿ ಪುಷ್ಪ, ಗ್ರಾಪಂ ಸದಸ್ಯರಾದ ಗೌರಮ್ಮ ಶಂಕರ್, ರಾಮಭೋವಿ, ಗೋವಿಂದ ಶೆಟ್ಟಿ, ಮಾಜಿ ಸದಸ್ಯ ಮಹಮ್ಮದ್ ರಫೀಕ್, ಗ್ರಾಮದ ಮುಖಂಡರಾದ ಶಂಕರನಾಯಕ, ಮರೀಗೌಡ, ಪಂಚಾಯಿತಿ ಸಿಬ್ಬಂದಿ ವರ್ಗದವರು ಇದ್ದರು.
ಕೃಷಿ ಸಖಿಯರು ಉದ್ಯೋಗ ಖಾತ್ರಿ ಯೋಜನೆಯಲ್ಲಿ ಬರುವ ಕಾಮಗಾರಿಗಳು, ಯೋಜನೆಗಳ ಅನುಕೂಲಗಳ ಬಗ್ಗೆ ರೈತ, ರೈತ ಮಹಿಳೆಯರಿಗೆ ಮಾಹಿತಿ
ಮೈಸೂರು : ಕೃಷಿ ಸಖಿಯರು ಉದ್ಯೋಗ ಖಾತ್ರಿ ಯೋಜನೆಯಲ್ಲಿ ಬರುವ ಕಾಮಗಾರಿಗಳು, ಯೋಜನೆಗಳ ಅನುಕೂಲಗಳ ಬಗ್ಗೆ ರೈತ, ರೈತ ಮಹಿಳೆಯರಿಗೆ ಮಾಹಿತಿ ಒದಗಿಸಬೇಕು ಎಂದು ಮೈಸೂರು ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕಿ ಬಿ.ಎಂ. ಸವಿತಾ ತಿಳಿಸಿದರು.
ಸಂಜೀವಿನಿ- ಕೆಎಸ್ಆರ್ ಎಲ್ ಪಿಎಸ್, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಕೃಷಿ ವಿವಿ ಮೈಸೂರಿನ ನಾಗನಹಳ್ಳಿಯ ವಿಸ್ತರಣಾ ಶಿಕ್ಷಣ ಘಟಕದಲ್ಲಿ ಪರಿಸರ ಕೃಷಿ ವಿಧಾನಗಳು ಕುರಿತು ಕೃಷಿ ಜೀವನೋಪಾಯ ಸಮುದಾಯ ಸಂಪನ್ಮೂಲ ವ್ಯಕ್ತಿಗಳಿಗೆ (ಕೃಷಿಸಖಿ) 6 ದಿನಗಳ ತರಬೇತಿ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿದರು.
ಕೃಷಿಸಖಿಯರು ಪ್ರಮುಖ ಇಲಾಖೆಗಳು ಹಾಗೂ ರೈತರಿಗೆ ಸಂಪರ್ಕ ಸೇತುವೆಯಾಗಿ ಕಾರ್ಯ ನಿರ್ವಹಸಿ, ಉದ್ಯೋಗ ಅವಕಾಶಗಳನ್ನು ಕಲ್ಪಿಸಿಕೊಡುವಲ್ಲಿ ಯಶಸ್ವಿಯಾಗಿ ಶ್ರಮಿಬೇಕು ಎಂದು ಅವರು ಮನವಿ ಮಾಡಿದರು.
ಅಧ್ಯಕ್ಷತೆ ವಹಿಸಿದ್ದ ವಿಸ್ತರಣಾ ಶಿಕ್ಷಣ ಘಟಕದ ಬೇಸಾಯಶಾಸ್ತ್ರ ಪ್ರಾಧ್ಯಾಪಕ ಡಾ.ಸಿ. ರಾಮಚಂದ್ರ ಮಾತನಾಡಿ, ಕೃಷಿಸಖಿಯರು ರೈತ, ರೈತ ಮಹಿಳೆಯರಿಗೆ ವಿಷಯ ವಿನಿಮಯ ಮಾಡಿಕೊಡುವಲ್ಲಿ ಹೆಚ್ಚು ಪ್ರಾಶಸ್ತ್ಯ ನೀಡಬೇಕಾಗುತ್ತದೆ. ತರಬೇತಿಯ ಮೂಲ ಉದ್ದೇಶ ಸ್ವಸಹಾಯ ಗುಂಪಿನ ಸದಸ್ಯ ಮಹಿಳಾ ರೈತರಿಗೆ ಕೃಷಿ, ತೋಟಗಾರಿಕೆ, ರೇಷ್ಮೆ, ಪಶುಸಂಗೋಪನೆ, ಮೀನುಗಾರಿಕೆ ಇಲಾಖೆ ಕಾರ್ಯಕ್ರಮಗಳ ವಿಸ್ತರಣಾ ಸೇವೆಗಳನ್ನು ಪರಿಣಾಮಕಾರಿಯಾಗಿ ಒದಗಿಸುವುದಾಗಿದೆ ಎಂದರು.
ಅಲ್ಲದೆ, ಜೀವನೋಪಾಯ ವೃದ್ಧಿ ಮಾಡುವ ಜೊತೆಗೆ ಉದ್ಯೋಗದ ಅವಕಾಶಗಳನ್ನು ಸೃಷ್ಟಿಸುವ ಮೂಲಕ ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ಆತ್ಮ ವಿಶ್ವಾಸ ಹೆಚ್ಚಿಸುವ ಹೊಸ ಯೋಜನೆಯಾಗಿದೆ. ಕೇವಲ ಕೃಷಿ ಮಾತ್ರವಲ್ಲದೆ ಮೌಲ್ಯವರ್ಧನೆ, ಕೃಷಿ ಮಾರುಕಟ್ಟೆ, ಕೃಷಿ ತಂತ್ರಜ್ಞಾನಗಳ ಬಗ್ಗೆ ತರಬೇತಿಯನ್ನು ಪಡೆದು ಉದ್ಯೋಗವಕಾಶ ಮತ್ತು ಸಾಮರ್ಥ್ಯವನ್ನು ವೃದ್ಧಿಸಿಕೊಳ್ಳಬೇಕು ಎಂದು ಅವರು ತಿಳಿಸಿದರು.