Asianet Suvarna News Asianet Suvarna News

ವೈ.ಎ.ಎನ್ ಮತ್ತೆ ಅವಕಾಶ ಕೇಳುವ ನೈತಿಕತೆಯಿಲ್ಲ : ಲೋಕೇಶ್ ತಾಳಿಕಟ್ಟೆ

ಆಗ್ನೇಯ ಶಿಕ್ಷಕರ ಕ್ಷೇತ್ರದ ವಿಧಾನಪರಿಷತ್ ಸದಸ್ಯರಾಗಿ ವೈ.ಎ.ನಾರಾಯಣಸ್ವಾಮಿ ಅವರು ಶಿಕ್ಷಕರು ಎದುರಿಸುತ್ತಿರುವ ಜಲ್ವಂತ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಸಂಪೂರ್ಣ ವಿಫಲವಾಗಿದ್ದು, ಮತ್ತೊಮ್ಮೆ ಅವಕಾಶ ಕೇಳುವ ನೈತಿಕತೆಯನ್ನು ಉಳಿಸಿಕೊಂಡಿಲ್ಲ ಎಂದು ರೂಫ್ಸಾ ಅಧ್ಯಕ್ಷ ಹಾಗೂ ಆಗ್ನೇಯ ಶಿಕ್ಷಕರ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ ಲೋಕೇಶ್ ತಾಳಿಕಟ್ಟೆ ತಿಳಿಸಿದ್ದಾರೆ.

 Narayana Swamy has no morals to ask for another chance: Lokesh Talikatte snr
Author
First Published Mar 14, 2024, 10:48 AM IST

ತುಮಕೂರು ; ಆಗ್ನೇಯ ಶಿಕ್ಷಕರ ಕ್ಷೇತ್ರದ ವಿಧಾನಪರಿಷತ್ ಸದಸ್ಯರಾಗಿ ವೈ.ಎ.ನಾರಾಯಣಸ್ವಾಮಿ ಅವರು ಶಿಕ್ಷಕರು ಎದುರಿಸುತ್ತಿರುವ ಜಲ್ವಂತ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಸಂಪೂರ್ಣ ವಿಫಲವಾಗಿದ್ದು, ಮತ್ತೊಮ್ಮೆ ಅವಕಾಶ ಕೇಳುವ ನೈತಿಕತೆಯನ್ನು ಉಳಿಸಿಕೊಂಡಿಲ್ಲ ಎಂದು ರೂಫ್ಸಾ ಅಧ್ಯಕ್ಷ ಹಾಗೂ ಆಗ್ನೇಯ ಶಿಕ್ಷಕರ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ ಲೋಕೇಶ್ ತಾಳಿಕಟ್ಟೆ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 20 ವರ್ಷಗಳಿಂದ ಆಗ್ನೇಯ ಶಿಕ್ಷಕರ ಕ್ಷೇತ್ರವನ್ನು ಪ್ರತಿನಿಧಿಸಿರುವ ಇವರು, ಬಹಿರಂಗವಾಗಿ ಶಿಕ್ಷಕರಿಗೆ ಔತಣಕೂಟ ಏರ್ಪಡಿಸುವ ಮೂಲಕ ಒಂದು ಸುಶಿಕ್ಷಿತ ಸಮುದಾಯವನ್ನು ಸಮಾಜದ ದೃಷ್ಟಿಯಲ್ಲಿ ಕಳಂಕಿತರನ್ನಾಗಿ ಮಾಡಿದ್ದೇ ಇವರ ಸಾಧನೆಯಾಗಿದೆ ಎಂದರು.

ರಾಜ್ಯದಲ್ಲಿ ಸುಮಾರು 4.80 ಲಕ್ಷ ಶಿಕ್ಷಕರಿದ್ದು, ಇವರಲ್ಲಿ ಸರ್ಕಾರಿ ಶಾಲೆಯ ಸುಮಾರು 1.20 ಲಕ್ಷ ಶಿಕ್ಷಕರನ್ನು ಹೊರತುಪಡಿಸಿದರೆ ಉಳಿದಂತೆ, ಸುಮಾರು 3.50 ಲಕ್ಷದಷ್ಟು ಶಿಕ್ಷಕರು ಉದ್ಯೋಗ ಭದ್ರತೆ ಹಾಗೂ ಸರಿಯಾದ ವೇತನವಿಲ್ಲದ ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾರೆ. ಕಳೆದ 20 ವರ್ಷಗಳಲ್ಲಿ ಈ ಕ್ಷೇತ್ರವನ್ನು ಪ್ರತಿನಿಧಿಸಿರುವ ವೈ.ಎ.ಎನ್. ಒಂದು ಬಾರಿಯೂ ಶಿಕ್ಷಕರ ಸಮಸ್ಯೆ ಕುರಿತು ವಿಧಾನಪರಿಷತ್ತಿನಲ್ಲಿ ದ್ವನಿ ಎತ್ತಿಲ್ಲ. ನನ್ನ ಸಾಧನೆ ಶೂನ್ಯ ಎಂದು ಅವರೇ ಹೇಳಿಕೊಂಡಿದ್ದಾರೆ. ಹೀಗಿದ್ದು ಯಾವ ಮುಖ ಇಟ್ಟುಕೊಂಡು ಶಿಕ್ಷಕರ ಬಳಿ ಮತಯಾಚಿಸುತ್ತಾರೆ ಎಂದು ವ್ಯಂಗವಾಡಿದರು.

ಸರ್ಕಾರಿ ಶಿಕ್ಷಕರು ಟೈಮ್ ಬಾಂಡ್ ಪ್ರಮೋಷನ್, ಹಳೆಯ ಪಿಂಚಿಣಿ ವ್ಯವಸ್ಥೆ ಜಾರಿ, ವೇತನ ತಾರತಮ್ಯ ನಿವಾರಣೆ ಸೇರಿದಂತೆ ಹಲವು ಸಮಸ್ಯೆಗಳ ಜೊತೆಗೆ, ಬಿಎಲ್‌ಒಗಳಾಗಿ ಅನ್ಯ ಕಾರ್ಯಗಳಿಗೆ ನೇಮಕಗೊಂಡು ಸಂಕಷ್ಟವನ್ನು ಎದುರಿಸುತ್ತಿದ್ದರೆ, ಅನುದಾನಿತ ಶಾಲೆಗಳ ಶಿಕ್ಷಕರು ಸರ್ಕಾರದಿಂದ ವೇತನ ಪಡೆಯುವುದನ್ನು ಬಿಟ್ಟರೆ ಪಿಂಚಿಣಿ ಇಲ್ಲದೆ ಬರಿಗೈಯಲ್ಲಿ ಮನೆಗೆ ಹೋಗುವಂತಹ ಪರಿಸ್ಥಿತಿ ಇದೆ. ಅನುದಾನ ರಹಿತ ಖಾಸಗಿ ಶಾಲೆಗಳ ಶಿಕ್ಷಕರು ಅತಿ ಕಡಿಮೆ ವೇತನಕ್ಕೆ ದುಡಿಯುತಿದ್ದು, ಅಧುನಿಕ ಜೀತದಾಳುಗಳಾಗಿದ್ದಾರೆ. ಬೇರೆ ರಾಜ್ಯಗಳಲ್ಲಿ ಖಾಸಗಿ ಅನುದಾನ ರಹಿತ ಶಾಲೆಗಳ ಶಿಕ್ಷಕರಿಗೆ ಅರ್ಧದಷ್ಟು ವೇತನವನ್ನು ಸರ್ಕಾರವೇ ನೀಡುತ್ತದೆ. ಆದರೆ ಕರ್ನಾಟಕದಲ್ಲಿ ಇದು ಜಾರಿಯಲ್ಲಿ ಇಲ್ಲ. ಈ ವಿಚಾರಗಳ ಬಗ್ಗೆ ವೈ.ಎ.ನಾರಾಯಣಸ್ವಾಮಿ ಸದನದಲ್ಲಿ ದ್ವನಿ ಎತ್ತಿದ್ದರೆ, ದಾಖಲೆಗಳ ಸಮೇತ ಮಾಹಿತಿ ನೀಡಲಿ ಎಂದು ಲೋಕೇಶ್ ತಾಳಿಕಟ್ಟೆ ಸವಾಲು ಹಾಕಿದರು.

ಸುದ್ದಿಗೋಷ್ಠಿಯಲ್ಲಿಂದು ಅರಿವು ಇಂಟರ್ ನ್ಯಾಷನಲ್ ಶಾಲೆಯ ಕಾರ್ಯದರ್ಶಿ ಜಗದೀಶ್ ಕುಮಾರ್, ಸುರ್ಯೋದಯ ಶಾಲೆಯ ಕಾರ್ಯದರ್ಶಿ ಚನ್ನಬಸವೇಶ್ವರಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.

Follow Us:
Download App:
  • android
  • ios