ಮುಂದಿನ ವರ್ಷದಲ್ಲಿ ವೈಟ್‌ಫೀಲ್ಡ್, ಏರ್‌ಪೋರ್ಟ್‌ಗೆ ಮೆಟ್ರೋ: ಸಿಎಂ ಬೊಮ್ಮಾಯಿ
ಬೆಂಗಳೂರು ಮೆಟ್ರೋ ರೈಲು ಯೋಜನೆ-2ನೇ ಹಂತದ ಕಾಮಗಾರಿಯನ್ನು 2024ರೊಳಗೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ.
ವಿಧಾನಪರಿಷತ್(ಡಿ.30): ಬೆಂಗಳೂರು ಮೆಟ್ರೋ ರೈಲು ಯೋಜನೆ-2ನೇ ಹಂತದ ಕಾಮಗಾರಿಯನ್ನು 2024ರೊಳಗೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ಈಗಾಗಲೇ ಕಾಮಗಾರಿ ವೇಗವಾಗಿ ನಡೆಯುತ್ತಿದ್ದು, ಒಂದು ವರ್ಷದ ಮೊದಲೇ ಗುರಿ ಮುಟ್ಟುವಂತೆ ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಗುರುವಾರ ಕಾಂಗ್ರೆಸ್‌ನ ಡಾ. ಕೆ.ಗೋವಿಂದರಾಜು ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಬೆಂಗಳೂರು ನಗರದ ಮಧ್ಯ ಭಾಗದಲ್ಲಿ ಸದ್ಯ ಕಾಮಗಾರಿ ನಡೆಯುತ್ತಿದೆ. ಜನಸಂಖ್ಯೆ, ವಸತಿ, ವಾಣಿಜ್ಯ ಪ್ರದೇಶಗಳು ಇವೆ. ಭೂ ಸ್ವಾಧೀನದ ಸಮಸ್ಯೆ ಇತ್ತು. ಹೀಗಾಗಿ ಕಾಮಗಾರಿಯಲ್ಲಿ ವಿಳಂಬವಾಗಿತ್ತು. ಈಗ ತಾವೇ ಖುದ್ದು ಉಸ್ತುವಾರಿ ವಹಿಸಿಕೊಂಡು ಕಾಮಗಾರಿ ವೇಗವಾಗಿ ನಡೆಯುವಂತೆ ನೋಡಿಕೊಳ್ಳುತ್ತಿದ್ದೇವೆ ಎಂದರು.
Namma Metro: ಮೆಟ್ರೋ ಯೋಜನೆಗೆ ಕಡಿದ ಮರಕ್ಕೆ ಪರ್ಯಾಯವಾಗಿ ನೆಟ್ಟ ಸಸಿ ಎಲ್ಲಿವೆ?: ಹೈಕೋರ್ಟ್
ಮುಂದಿನ ವರ್ಷದ ಡಿಸೆಂಬರ್ ಅಂತ್ಯಕ್ಕೆ ವಿಮಾನ ನಿಲ್ದಾಣ ಸಂಪರ್ಕಿಸುವ ಮೆಟ್ರೋ ಮಾರ್ಗ ಸಿದ್ಧವಾಗಲಿದೆ. ಬರುವ ಮಾಚ್‌ರ್ ಅಂತ್ಯದೊಳಗೆ ಬೈಯಪ್ಪನಹಳ್ಳಿಯಿಂದ ವೈಟ್‌ಫೀಲ್ಡ್, ಮೇ ಹೊತ್ತಿಗೆ ಕೆಂಗೇರಿ-ಚಲ್ಲಘಟ್ಟ ಹಾಗೂ ಸೆಪ್ಟೆಂಬರ್ ಅಂತ್ಯದೊಳಗೆ ಆರ್‌ವಿ ರಸ್ತೆಯಿಂದ ಬೊಮ್ಮಸಂದ್ರ ಮಾರ್ಗ ಮಾರ್ಗ ಸಿದ್ಧವಾಗಲಿದೆ. ಪ್ರಸ್ತುತ ಪ್ರತಿದಿನ 5.30 ಲಕ್ಷ ಪ್ರಯಾಣಿಕರು ಮೆಟ್ರೋ ರೈಲಿನಲ್ಲಿ ಪ್ರಯಾಣಿಸಲಿದ್ದಾರೆ ಎಂದು ವಿವರಿಸಿದರು.