ಸಂಪತ್‌ ತರೀಕೆರೆ

ಬೆಂಗಳೂರು (ಸೆ.30):  ಮೆಟ್ರೋ ನಿಲ್ದಾಣಗಳಲ್ಲಿ ಪ್ರಯಾಣಿಕರ ದಟ್ಟಣೆಗೆ ತಕ್ಕಂತೆ ಮೂಲಸೌಕರ್ಯಗಳಿಲ್ಲ. ಆಸನ ವ್ಯವಸ್ಥೆ, ಶೌಚಾಲಯ, ಎಸ್ಕಲೇಟರ್‌ಗಳ ಕೊರತೆ ಇದೆ. ಹಿರಿಯ ನಾಗರಿಕರು, ಮಹಿಳೆಯರು, ಅಂಗವಿಕಲ ಪ್ರಯಾಣಿಕರು ಪರದಾಡುವಂತಾಗಿದೆ.

ಬೈಯಪ್ಪನಹಳ್ಳಿ- ಮೈಸೂರು ರಸ್ತೆ (ನೇರಳೆ ಮಾರ್ಗ) ಮತ್ತು ಯಲಚೇನಹಳ್ಳಿ- ನಾಗಸಂದ್ರ (ಹಸಿರು ಮಾರ್ಗ) ಮೆಟ್ರೋ ಮಾರ್ಗದಲ್ಲಿ ಆರು ಬೋಗಿಗಳ ಮೆಟ್ರೋ ರೈಲುಗಳು ಹೆಚ್ಚಿದಂತೆ ಪ್ರಯಾಣಿಕರ ಸಂಖ್ಯೆಯೂ ಹೆಚ್ಚುತ್ತಿದೆ. ಈ ಹಿಂದೆ ದಿನಕ್ಕೆ 3.70 ಲಕ್ಷ ಇದ್ದ ಪ್ರಯಾಣಿಕರ ಸಂಖ್ಯೆ ಇದೀಗ 4.60 ಲಕ್ಷಕ್ಕೆ ಏರಿಕೆಯಾಗಿದೆ. ಆದರೆ, ಮೆಟ್ರೋ ನಿಲ್ದಾಣಗಳಲ್ಲಿ ಅಗತ್ಯಕ್ಕೆ ತಕ್ಕಂತೆ ಮೂಲಸೌಲಭ್ಯ ಕೊರತೆ ಎದ್ದು ಕಾಣುತ್ತಿದ್ದು, ಬಿಎಂಆರ್‌ಸಿಎಲ್‌ ನಿರ್ಲಕ್ಷ್ಯ ವಹಿಸಿದೆ ಎಂಬ ಆರೋಪ ಕೇಳಿ ಬಂದಿದೆ.

ಪ್ರಸ್ತುತ ನಗರದಲ್ಲಿ 40 ಮೆಟ್ರೋ ನಿಲ್ದಾಣಗಳಿದ್ದು, ಮೆಜೆಸ್ಟಿಕ್‌, ವಿಜಯನಗರ, ಸೆಂಟ್ರಲ್‌ ಕಾಲೇಜ್‌, ವಿಧಾನಸೌಧ ಮೆಟ್ರೋ ನಿಲ್ದಾಣ, ಬೈಯಪ್ಪನಹಳ್ಳಿ ಸೇರಿದಂತೆ 20 ನಿಲ್ದಾಣಗಳಲ್ಲಿ ಮೆಟ್ರೋ ನಿಲ್ದಾಣಗಳಿಗೆ ಪ್ರಯಾಣಿಕರು ಹತ್ತಿ-ಇಳಿಯಲು ಅನುಕೂಲವಾಗುವಂತೆ ಎರಡು ಎಸ್ಕಲೇಟರ್‌ ವ್ಯವಸ್ಥೆ ಮಾಡಲಾಗಿದೆ. ಆದರೆ, ಉಳಿದ 20 ಮೆಟ್ರೋ ನಿಲ್ದಾಣಗಳಲ್ಲಿ ಹತ್ತಲು ಅಥವಾ ಇಳಿಯಲು ಮಾತ್ರ ಎಸ್ಕಲೇಟರ್‌ ವ್ಯವಸ್ಥೆ ಇದ್ದು, ವೃದ್ಧರು, ಗರ್ಭಿಣಿಯರು, ಮಕ್ಕಳು ತೊಂದರೆ ಅನುಭವಿಸುವಂತಾಗಿದೆ. ಹಾಗೆಯೇ ಎಲ್ಲ ಮೆಟ್ರೋ ನಿಲ್ದಾಣಗಳಲ್ಲಿ 10ರಿಂದ 20 ಮಂದಿ ಪ್ರಯಾಣಿಕರು ಕುಳಿತುಕೊಳ್ಳಲು ಆಸನ ವ್ಯವಸ್ಥೆ ಇದ್ದರೂ ಅರ್ಹರಿಗೆ ಸ್ಥಳಾವಕಾಶ ಸಿಗದೆ 10ರಿಂದ 15 ನಿಮಿಷ ನಿಂತುಕೊಂಡೇ ರೈಲಿಗಾಗಿ ಕಾಯುವಂತ ಸ್ಥಿತಿ ಇದೆ.

ಆಸನಗಳ ಕೊರತೆ:

ಯಲಚೇನಹಳ್ಳಿ- ನಾಗಸಂದ್ರ ಮೆಟ್ರೋ ಮಾರ್ಗದಲ್ಲಿ ಮಧ್ಯಾಹ್ನ 12ರಿಂದ 3ರ ವರೆಗೆ ರೈಲುಗಳ ಅಂತರ 10ರಿಂದ 12 ನಿಮಿಷಗಳು ಇರುತ್ತದೆ. ಈ ಅವಧಿಯಲ್ಲಿ ಹಿರಿಯ ನಾಗರಿಕರು, ಮಹಿಳೆಯರಿಗೆ ಕುಳಿತುಕೊಳ್ಳಲು ಆಸನಗಳು ಸಿಗದೆ ನಿಂತುಕೊಂಡೇ ಇರಬೇಕಾದ ಸ್ಥಿತಿ ಇದೆ. ಕೆಲವೊಮ್ಮೆ ಅನಾರೋಗ್ಯಕ್ಕೆ ತುತ್ತಾದವರು ಬಂದರೂ ಅವರಿಗೆ ಆಸನಗಳಲ್ಲಿ ಕುಳಿತ ಇತರ ಪ್ರಯಾಣಿಕರು ಸ್ಥಳಾವಕಾಶ ಮಾಡಿಕೊಡುವಷ್ಟುಔದಾರ್ಯ ತೋರುವುದಿಲ್ಲ. ವಿಪರಾರ‍ಯಸವೆಂದರೆ ಮೆಟ್ರೋ ನಿಲ್ದಾಣಗಳ ಸಿಬ್ಬಂದಿ ಕೂಡ ದುರ್ಬಲರಿಗೆ ಆಸನ ವ್ಯವಸ್ಥೆ ಮಾಡಲು ಮುಂದಾಗುವುದಿಲ್ಲ. ಸಾವಿರಾರು ಮಂದಿ ಪ್ರಯಾಣಿಕರು ಓಡಾಡುವ ಜಾಗದಲ್ಲಿ ದಟ್ಟಣೆ ಅವಧಿ ಹೊರತುಪಡಿಸಿ ಇತರ ಸಮಯದಲ್ಲಿ ಆಗುವ ತೊಂದರೆಗಳ ಬಗ್ಗೆಯೂ ಮೆಟ್ರೋ ನಿಗಮ ಗಮನ ಹರಿಸುವ ಅಗತ್ಯತೆ ಇದೆ ಎನ್ನುತ್ತಾರೆ 79 ವಯಸ್ಸಿನ ಮೆಟ್ರೋ ಪ್ರಯಾಣಿಕ ಎಚ್‌.ಎಚ್‌.ಶನಿವಾರಾಚಾರ್‌.

ಶೌಚಾಲಯಕ್ಕೂ ಪರದಾಟ:

ಇದು ಆಸನದ ಸಮಸ್ಯೆಯಾದರೆ ಮತ್ತೊಂದು ಕಡೆಗೆ ತುರ್ತಾಗಿ ಶೌಚಾಲಯಕ್ಕೆ ಹೋಗಬೇಕೆಂದರೂ ದುರ್ಬಿನು ಇಟ್ಟು ಶೌಚಾಲಯವನ್ನು ಹುಡುಕುವ ಪರಿಸ್ಥಿತಿ ಇದೆ. ಇದರಿಂದ ಮಹಿಳೆಯರು, ವೃದ್ಧರು ಹಾಗೂ ಮಧುಮೇಹಿ ಪ್ರಯಾಣಿಕರು ಹೆಚ್ಚು ಸಮಸ್ಯೆಗೆ ಒಳಗಾಗುತ್ತಿದ್ದಾರೆ.

 ಹೆಚ್ಚಿನ ಆಸನ ಯಾಕೆ!!?

ಎಲ್ಲ ನಿಲ್ದಾಣಗಳಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಮೂಲಸೌಲಭ್ಯ ಒದಗಿಸಲು ನಿಗಮ ನಿರಂತರವಾಗಿ ಪ್ರಯತ್ನಿಸುತ್ತಿದೆ. ಮೆಟ್ರೋ ನಿಲ್ದಾಣಗಳಲ್ಲಿ ಆಸನ ವ್ಯವಸ್ಥೆ ಮಾಡಲು ಮಿತಿಗಳಿದೆ. ಪ್ರತಿ 5 ಅಥವಾ 7 ನಿಮಿಷಕ್ಕೆ ರೈಲುಗಳಿವೆ. ಹೀಗಿರುವಾಗ ಆಸನಗಳು ಏಕೆ ಬೇಕು? ಇದರಿಂದ ಇತರ ಪ್ರಯಾಣಿಕರಿಗೂ ತೊಂದರೆ ಹೆಚ್ಚು. ಅಗತ್ಯವಾದ ಮೂಲಸೌಲಭ್ಯ ಒದಗಿಸಲು ನಿಗಮ ನಿರಂತರವಾಗಿ ಶ್ರಮಿಸುತ್ತಿದೆ ಎಂದು ಬಿಎಂಆರ್‌ಸಿಎಲ್‌ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ಎರಡು ವರ್ಷಗಳಿಂದ ಮೆಟ್ರೋದಲ್ಲಿ ಪ್ರಯಾಣಿಸುತ್ತಿದ್ದೇನೆ. ಮೆಜೆಸ್ಟಿಕ್‌ನಿಂದ ಯಲಚೇನಹಳ್ಳಿಗೆ ಅರ್ಧಗಂಟೆಯಲ್ಲಿ ಹೋಗಬಹುದು. ಆದರೆ, ಇಲ್ಲಿ ರೈಲಿಗಾಗಿ 10 ನಿಮಿಷ ಕಾಯಬೇಕಾದ ಪರಿಸ್ಥಿತಿ ಇದೆ. ಆಸನಗಳ ವ್ಯವಸ್ಥೆಯು ಇಲ್ಲ. ಮಧುಮೇಹಿಗಳಾದ ನಮ್ಮಂತವರ ಪರಿಸ್ಥಿತಿ ಏನು?

-ಸೋಮಸುಂದರಂ. ಮೆಟ್ರೋ ಪ್ರಯಾಣಿಕ.

ಅನೇಕ ನಿಲ್ದಾಣಗಳಲ್ಲಿ ಆಸನಗಳ ವ್ಯವಸ್ಥೆ ಇಲ್ಲದ ಕಾರಣ ಪ್ರಯಾಣಿಕರು ನೆಲದ ಮೇಲೆ ಕುಳಿತು ಕಾಯುವುದನ್ನು ನಾವು ಕಂಡಿದ್ದೇವೆ.

-ಟಿ.ಆರ್‌.ಶ್ವೇತಾ ಗಿರೀಶ್‌, ಖಾಸಗಿ ಕಂಪನಿ ಉದ್ಯೋಗಿ.