ನಮ್ಮ ಮೆಟ್ರೋದ ಕಾಳೇನ ಅಗ್ರಹಾರ-ನಾಗವಾರ ಮಾರ್ಗದಲ್ಲಿ (ಪಿಂಕ್ ಲೈನ್) ಬರುವ ಕಂಟೋನ್ಮೆಂಟ್ ಮತ್ತು ಪಾಟರಿ ಮಾರ್ಗದಲ್ಲಿ ಸುರಂಗ ಕೊರೆಯುವ ಯಂತ್ರ ಊರ್ಜಾ ಒಂದೇ ದಿನ 27 ಮೀಟರ್ ಸುರಂಗ ಕೊರೆದು ದಾಖಲೆ ನಿರ್ಮಿಸಿದೆ ಎಂದು ಬೆಂಗಳೂರು ಮೆಟ್ರೋ ನಿಗಮ ತಿಳಿಸಿದೆ.
ಬೆಂಗಳೂರು (ಏ.28): ನಮ್ಮ ಮೆಟ್ರೋದ (Namma Metro) ಕಾಳೇನ ಅಗ್ರಹಾರ-ನಾಗವಾರ ಮಾರ್ಗದಲ್ಲಿ (ಪಿಂಕ್ ಲೈನ್) ಬರುವ ಕಂಟೋನ್ಮೆಂಟ್ ಮತ್ತು ಪಾಟರಿ ಮಾರ್ಗದಲ್ಲಿ ಸುರಂಗ ಕೊರೆಯುವ ಯಂತ್ರ ಊರ್ಜಾ ಒಂದೇ ದಿನ 27 ಮೀಟರ್ ಸುರಂಗ (Tunnel) ಕೊರೆದು ದಾಖಲೆ ನಿರ್ಮಿಸಿದೆ ಎಂದು ಬೆಂಗಳೂರು ಮೆಟ್ರೋ ನಿಗಮ (BMRCL) ತಿಳಿಸಿದೆ. ಕಲ್ಲಿನ ಭೂ ರಚನೆಗಳಿದ್ದರೆ ದಿನಕ್ಕೆ ಮೂರರಿಂದ ಐದು ಮೀಟರ್ ಮಾತ್ರ ಸುರಂಗ ಕೊರೆಯಲು ಸಾಧ್ಯವಾಗುತ್ತದೆ. ಸುರಂಗ ಕೊರೆಯುವ ಯಂತ್ರ ಮಣ್ಣಿನ ಪದರ ಸಿಕ್ಕರೆ 10ರಿಂದ 12 ಮೀಟರ್ ಸುರಂಗವನ್ನು ಒಂದೇ ದಿನದಲ್ಲಿ ಕೊರೆಯುತ್ತದೆ.
ಆದರೆ, ಹಂತ ಎರಡರ ಯೋಜನೆಯಲ್ಲಿ ಮೊದಲ ಬಾರಿಗೆ ಇಷ್ಟೊಂದು ಉದ್ದನೆಯ ಸುರಂಗ ಕೊರೆಯಲು ಸಾಧ್ಯವಾಗಿದೆ. ಏಪ್ರಿಲ್ 25ರಂದು ಈ ಸಾಧನೆ ಮಾಡಿದ್ದೇವೆ ಎಂದು ಮೆಟ್ರೋ ನಿಗಮ ಹೇಳಿದೆ. ಈ ವಿಭಾಗದ ಮುಖ್ಯ ಇಂಜಿನಿಯರ್ ಆಗಿರುವ ದಯಾನಂದ ಶೆಟ್ಟಿ, ಬೆಂಗಳೂರಿನ ಮಣ್ಣಿನ ಸಂರಚನೆ ಸಂಕೀರ್ಣವಾದದ್ದು. ಕಲ್ಲು ಮಿಶ್ರಿತ ಮಣ್ಣು ಹೆಚ್ಚಿದೆ. ಸಾಮಾನ್ಯವಾಗಿ ಪ್ರತಿದಿನ ಒಂದೇ ವೇಗದಲ್ಲಿ ಕೆಲಸ ಮಾಡಲು ಬಯಸುತ್ತೇವೆ. ಆದರೆ ಆಗಾಗ, ಅಲ್ಲಲ್ಲಿ ಕಲ್ಲು ಸಿಗುವುದರಿಂದ ನಮ್ಮ ವೇಗಕ್ಕೆ ಕಡಿವಾಣ ಬೀಳುತ್ತದೆ. ಆದರೆ, ಈ ಬಾರಿ 27 ಮೀಟರ್ ಮಾರ್ಗದಲ್ಲಿ ಯಾವುದೇ ಕಠಿಣ ಸನ್ನಿವೇಶಗಳು ಎದುರಾಗದೇ ಇದ್ದ ಕಾರಣ ಇಷ್ಟೊಂದು ವೇಗವಾಗಿ ಕೆಲಸ ಮಾಡಲು ಸಾಧ್ಯವಾಯಿತು ಎಂದು ಹೇಳುತ್ತಾರೆ.
ಮೆಟ್ರೋ 2: 1342 ಮರಗಳ ಕತ್ತರಿಸಲು ಹೈಕೋರ್ಟ್ ಅಸ್ತು
ಏ.11ರಂದು ಶಿವಾಜಿನಗರದಿಂದ ಎಂ.ಜಿ.ರಸ್ತೆ ನಡುವೆ ಟಿಬಿಎಂ ‘ಲವಿ’ ಒಂದೇ ದಿನದಲ್ಲಿ 19.6 ಮೀಟರ್ ಸುರಂಗ ಕೊರೆದು ನಿರ್ಮಿಸಿತ್ತು. ‘ನಮ್ಮ ಮೆಟ್ರೋ’ದ ಮೊದಲ ಹಂತದಲ್ಲೂ ಇಂತಹದ್ದೆ ದಾಖಲೆ ನಿರ್ಮಾಣಗೊಂಡಿತ್ತು. ಮೆಜೆಸ್ಟಿಕ್‌ನ ಕೆಂಪೇಗೌಡ ಬಸ್ ನಿಲ್ದಾಣ ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ ನಡುವೆ ಟಿಬಿಎಂ ಒಂದೇ ದಿನದಲ್ಲಿ 27 ಮೀಟರ್ ಸುರಂಗ ಮಾರ್ಗ ಕೊರೆದಿತ್ತು. ಪಿಂಕ್ ಲೈನ್ ಒಟ್ಟು 21.25 ಕಿ.ಮೀ. ಉದ್ದವಿದ್ದು ಇದರಲ್ಲಿ 13.88 ಕಿ.ಮೀ. ಸುರಂಗ ಮಾರ್ಗವಿದೆ. ಸದ್ಯ 9 ಸುರಂಗ ಕೊರೆಯುವ ಯಂತ್ರಗಳು ಈ ಮಾರ್ಗದಲ್ಲಿ ಕಾರ್ಯನಿರ್ವಹಿಸುತ್ತಿವೆ.
ರಾತ್ರಿ ವೇಳೆ ಮೆಟ್ರೋ ಕಾಮಗಾರಿಗೆ ಬ್ರೇಕ್: ರಾತ್ರಿ ಕಾಮಗಾರಿ ನಡೆಸುವುದರಿಂದ ಉಂಟಾಗುವ ಶಬ್ದದಿಂದ ನಿದ್ದೆಗೆ ತೊಂದರೆಯಾಗುತ್ತಿದೆ ಎಂದು ನಿವಾಸಿಗಳು ದೂರು ನೀಡಿರುವ ಹಿನ್ನೆಲೆಯಲ್ಲಿ ಮೆಟ್ರೋದ(Metro) ಸಿಲ್ಕ್ ಬೋರ್ಡ್- ಕೆ.ಆರ್.ಪುರ ಕಾಮಗಾರಿಯನ್ನು ರಾತ್ರಿ ವೇಳೆ ನಡೆಸುವುದನ್ನು ಸ್ಥಗಿತಗೊಳಿಸಲಾಗಿದೆ. ಮೆಟ್ರೋದ ಎರಡನೇ ಹಂತದ ಕಾಮಗಾರಿ ಹೊರ ವರ್ತುಲ ರಸ್ತೆಯಲ್ಲಿ ಸಾಗುತ್ತಿದೆ. ಒಟ್ಟು 18.23 ಕಿ.ಮೀ. ಉದ್ದದ ಮಾರ್ಗದ ಕಾಮಗಾರಿಯನ್ನು 2027ರ ಹೊತ್ತಿಗೆ ಮುಗಿಸಲು ಮೆಟ್ರೋ ನಿಗಮ(BMRCL) ಈ ಮೊದಲು ಉದ್ದೇಶಿಸಿತ್ತು.
ಆದರೆ 2024ರ ಡಿಸೆಂಬರ್ ಒಳಗೆ ಕಾಮಗಾರಿ ಮುಗಿಸುವಂತೆ ಮುಖ್ಯಮಂತ್ರಿಗಳು ಮೆಟ್ರೋ ನಿಗಮಕ್ಕೆ ಗಡುವು ನೀಡಿರುವ ಹಿನ್ನೆಲೆಯಲ್ಲಿ ಯೋಜನೆ ಪೂರ್ಣಗೊಳಿಸಲು ರಾತ್ರಿ-ಹಗಲೆನ್ನದೆ ಕಾಮಗಾರಿ ನಡೆಸಲಾಗುತ್ತಿತ್ತು. ಆದರೆ ರಾತ್ರಿ ಕಾಮಗಾರಿ ನಡೆಸುವುದರಿಂದ ನಿದ್ರೆಗೆ ಭಂಗ ಬರುತ್ತಿದೆ ಎಂದು ಎಚ್‌ಎಸ್‌ಆರ್ ಬಡಾವಣೆ, ಬೆಳ್ಳಂದೂರು ನಿವಾಸಿಗಳು ಮೆಟ್ರೋ ನಿಗಮಕ್ಕೆ ದೂರು ನೀಡಿದ್ದರು. ಈ ದೂರನ್ನು ಪರಿಗಣಿಸಿ ರಾತ್ರಿ 10ರ ನಂತರ ಕಾಮಗಾರಿ ನಡೆಸದಿರಲು ನಿರ್ಧರಿಸಲಾಗಿದೆ. ಪಿಲ್ಲರ್(Piller) ಅಳವಡಿಸಲು ಮಣ್ಣು ಕೊರೆಯುವ ಮತ್ತು ಪಿಲ್ಲರ್ ಅಳವಡಿಸುವ ಸಂದರ್ಭದಲ್ಲಿ ವಿಪರೀತ ಶಬ್ದ ಮಾಲಿನ್ಯವಾಗುತ್ತದೆ(Noise Pollution) ಎಂದು ಸ್ಥಳೀಯ ನಿವಾಸಿಗಳು ತಮ್ಮ ದೂರಿನಲ್ಲಿ ವಿವರಿಸಿದ್ದಾರೆ.
Bengaluru: ಮೆಟ್ರೋ ರೈಲಿನಿಂದ ನಗರದ ಮಾಲಿನ್ಯ ಇಳಿಕೆ!
ದೂರಿನ ಹಿನ್ನೆಲೆಯಲ್ಲಿ ರಾತ್ರಿಯ ಹೊತ್ತು ನಿರ್ಮಾಣ ಕಾಮಗಾರಿ ನಡೆಸುವುದನ್ನು ನಿಲ್ಲಿಸಲಾಗಿದೆ. ಆದರೆ ಹೆಚ್ಚು ಸದ್ದು ಮಾಡದ ಚಟುವಟಿಕೆಗಳಾದ ತ್ಯಾಜ್ಯ, ನಿರ್ಮಾಣ ಸಾಮಗ್ರಿಗಳ ಸಾಗಾಟದ ಚಟುವಟಿಕೆಯನ್ನು ಮುಂದುವರಿಸುತ್ತೇವೆ ಎಂದು ಮೆಟ್ರೋ ನಿಗಮದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸಿಲ್ಕ್ ಬೋರ್ಡ್‌ನಿಂದ ಕೆ.ಆರ್.ಪುರದ ನಡುವಿನ ನೀಲಿ ಮಾರ್ಗದ ಮೆಟ್ರೋ ಕಾಮಗಾರಿ ಕಳೆದ ವರ್ಷದ ಆಗಸ್ಟ್‌ನಲ್ಲಿ ಪ್ರಾರಂಭಗೊಂಡಿತ್ತು. ಕೆ.ಆರ್.ಪುರವನ್ನು ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕಿಸುವ ಹಂತ ಎರಡರ (2ಬಿ) ಕಾಮಗಾರಿ ಇತ್ತೀಚೆಗೆ ಪ್ರಾರಂಭಗೊಂಡಿದೆ.
