ನಮ್ಮ ಮೆಟ್ರೋ ನೀಡುತ್ತಿರುವ ಎನ್‌ಸಿಎಂಸಿ ಕಾರ್ಡ್‌ ದೇಶದ ಬೇರೆ ಮೆಟ್ರೋದಲ್ಲಿ ಬಳಕೆ ಕಷ್ಟ, ಪ್ರಯಾಣಿಕರಿಂದ ನಿರಂತರ ದೂರು, ಬೇರೆ ಮೆಟ್ರೋದಲ್ಲೂ ಪಡೆದ ಕಾರ್ಡ್‌ ನಮ್ಮ ಮೆಟ್ರೋದಲ್ಲಿ ಸ್ವೀಕರಿಸಲ್ಲ, ತಾಂತ್ರಿಕ ಸಮಸ್ಯೆ ಅಷ್ಟೇ ಎನ್ನುತ್ತಿರುವ ಮೆಟ್ರೋ ನಿಗಮ

ಬೆಂಗಳೂರು(ಜೂ.18): ‘ಒಂದು ದೇಶ ಒಂದು ಕಾರ್ಡ್‌‘ ಎಂಬ ಉದ್ದೇಶದೊಂದಿಗೆ ‘ನಮ್ಮ ಮೆಟ್ರೋ’ದಲ್ಲಿ ನೀಡುತ್ತಿರುವ ಎನ್‌ಸಿಎಂಸಿ ಕಾರ್ಡ್‌ (ನ್ಯಾಷನಲ್‌ ಕಾಮನ್‌ ಮೊಬಿಲಿಟಿ ಕಾರ್ಡ್‌) ದೇಶದ ಇತರೆ ಮೆಟ್ರೋಗಳಲ್ಲಿ ಬಳಸಲು ಸಾಧ್ಯವಾಗುತ್ತಿಲ್ಲ ಎಂಬುದು ಸೇರಿದಂತೆ ಕಾರ್ಡ್‌ ಬಳಕೆ ಕುರಿತಂತೆ ಹಲವು ದೂರುಗಳು ಕೇಳಿ ಬರುತ್ತಿದೆ.

ಕಳೆದ ಮಾ.25ರಂದು ಕೆ.ಆರ್‌.ಪುರ-ವೈಟ್‌ಫೀಲ್ಡ್‌ ನಿಲ್ದಾಣದ ಮೆಟ್ರೋ ಮಾರ್ಗ ಆರಂಭದ ವೇಳೆ ಎನ್‌ಸಿಎಂಸಿ ಕಾರ್ಡ್‌ ಬಿಡುಗಡೆ ಮಾಡಿದ್ದು, ಆರ್‌ಬಿಎಲ್‌ (ರತ್ನಾಕರ) ಬ್ಯಾಂಕ್‌ ಜೊತೆಗೆ ಒಪ್ಪಂದ ಮಾಡಿಕೊಂಡಿರುವ ಬೆಂಗಳೂರು ಮೆಟ್ರೋ ನಿಗಮ, ಈ ಬ್ಯಾಂಕ್‌ ಸೇರಿದಂತೆ ಮೆಟ್ರೋದ ಎಲ್ಲ ನಿಲ್ದಾಣಗಳಲ್ಲಿ ಈ ಕಾರ್ಡ್‌ ಪಡೆಯಬಹುದು ಎಂದು ತಿಳಿಸಿತ್ತು.

ಜುಲೈನಲ್ಲಿ ಬೈಯಪ್ಪನಹಳ್ಳಿ-ಕೆ.ಆರ್‌.ಪುರ ಮೆಟ್ರೋ ಪರೀಕ್ಷೆ: ಬಳಿಕ ಸಿಎಂಆರ್‌ಎಸ್‌ ತಪಾಸಣೆ

ಈವರೆಗೆ ಸುಮಾರು 700 ಜನ ಮಾತ್ರ ಕಾರ್ಡ್‌ ಪಡೆದುಕೊಂಡಿದ್ದರೂ ಒಂದಲ್ಲಾ ಒಂದು ಸಮಸ್ಯೆ ಎದುರಾಗಿದೆ ಎಂದು ಹಲವರು ದೂರುತ್ತಿದ್ದಾರೆ. ಪ್ರಮುಖವಾಗಿ ನಮ್ಮ ಮೆಟ್ರೋದಲ್ಲಿ ಪಡೆದಿರುವ ಎನ್‌ಸಿಎಂಸಿ ಕಾರ್ಡ್‌ ದೇಶದ ಇತರೆ ಮೆಟ್ರೋ ನಿಲ್ದಾಣದಲ್ಲಿ ಸ್ವೀಕಾರವಾಗುತ್ತಿಲ್ಲ. ಕೊಚ್ಚಿನ್‌ ಮೆಟ್ರೋದಲ್ಲಿ ಎನ್‌ಸಿಎಂಸಿ ಕಾರ್ಡ್‌ ಸ್ವೀಕರಿಸಲಿಲ್ಲ. ಹೀಗಾಗಿ ಪ್ರತ್ಯೇಕ ಟಿಕೆಟ್‌ ಪಡೆದೇ ಸಂಚರಿಸಬೇಕಾಯಿತು ಎಂದು ಪ್ರಯಾಣಿಕರೊಬ್ಬರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜೊತೆಗೆ, ಬೇರೆಡೆ ಪಡೆದ ಎನ್‌ಸಿಎಂಸಿ ಕಾರ್ಡ್‌ ಕೂಡ ‘ನಮ್ಮ ಮೆಟ್ರೋ’ದಲ್ಲಿ ಪ್ರಯೋಜನಕ್ಕೆ ಬರುತ್ತಿಲ್ಲ ಎಂದು ಚೆನ್ನೈ ಪ್ರಯಾಣಿಕರೊಬ್ಬರು ಟ್ವಿಟರ್‌ನಲ್ಲಿ ದೂರಿದ್ದಾರೆ. ಆರ್‌ಬಿಎಲ್‌ ಬ್ಯಾಂಕ್‌ ಹೊರತು ಪಡಿಸಿ ಇತರೆ ಬ್ಯಾಂಕ್‌ಗಳಿಂದ ಪಡೆದ ಎನ್‌ಸಿಎಂಸಿ ಕಾರ್ಡ್‌ ಕೆಲವೊಮ್ಮೆ ನಮ್ಮ ಮೆಟ್ರೋದಲ್ಲೇ ವರ್ಕ್ ಆಗುತ್ತಿಲ್ಲ ಎಂದು ಕೆಲವು ಪ್ರಯಾಣಿಕರು ಹೇಳುತ್ತಿದ್ದಾರೆ.

ಸುಲಭವಾಗಿ ಸಿಗದ ಕಾರ್ಡ್‌

ಕೆವೈಸಿ ಮಾಡಿಕೊಂಡು ನೋಂದಣಿ ಸಂಖ್ಯೆ ತೆಗೆದುಕೊಂಡು ಹೋದರೂ ಮೆಟ್ರೋ ನಿಲ್ದಾಣದಲ್ಲಿ ಸುಲಭವಾಗಿ ಎನ್‌ಸಿಎಂಸಿ ಕಾರ್ಡ್‌ ದೊರೆಯುತ್ತಿಲ್ಲ ಎಂಬ ಆರೋಪಗಳೂ ಇವೆ. ನೆಟ್‌ವರ್ಕ್ ಸಮಸ್ಯೆ, ಕಾರ್ಡ್‌ ಸ್ಟಾಕ್‌ ಇಲ್ಲ ಎಂಬ ಕಾರಣವನ್ನೂ ಹೇಳಲಾಗುತ್ತಿದೆ ಎಂದು ಹಲವು ಪ್ರಯಾಣಿಕರು ದೂರಿದ್ದಾರೆ. ಆದರೆ, ಇದನ್ನು ಒಪ್ಪದ ಬಿಎಂಆರ್‌ಸಿಎಲ್‌ ಅಧಿಕಾರಿಗಳು, ಎನ್‌ಸಿಎಂಸಿ ಕಾರ್ಡ್‌ ಎಲ್ಲೆಡೆ ಲಭ್ಯವಾಗುತ್ತಿದೆ. ದೇಶದ ಇತರೆ ಮೆಟ್ರೋಗಳಲ್ಲಿಯೂ ಸ್ವೀಕರಿಸಲಾಗುತ್ತಿದೆ. ತಾಂತ್ರಿಕ ಕಾರಣದಿಂದ ಮೆಟ್ರೋದಲ್ಲಿ ಸ್ವೀಕಾರ ಆಗದೆ ಇರಬಹುದು ಎಂದು ಪ್ರತಿಕ್ರಿಸಿದರು.

ಎನ್‌ಸಿಎಂಸಿ ಕಾರ್ಡ್‌ ಸ್ವೀಕರಿಸದ ಬಿಎಂಟಿಸಿ

ಎನ್‌ಸಿಎಂಸಿ ಕಾರ್ಡ್‌ ಪರಿಚಯಿಸುವಾಗ ಬಿಎಂಟಿಸಿಯಲ್ಲೂ ಇದನ್ನು ಬಳಸಬಹುದು ಎಂದು ಮೆಟ್ರೋ ಅಧಿಕಾರಿಗಳು ಹೇಳಿದ್ದರು. ಆದರೆ, ಮೂರು ತಿಂಗಳಾದರೂ ಬಿಎಂಟಿಸಿ ಇದನ್ನು ಸ್ವೀಕರಿಸುತ್ತಿಲ್ಲ. ಈ ಬಗ್ಗೆ ಪ್ರತಿಕ್ರಿಯಿಸಿದ ಬಿಎಂಟಿಸಿ ಅಧಿಕಾರಿಗಳು, ಸದ್ಯ ನಾವು ಎನ್‌ಸಿಎಂಸಿ ಕಾರ್ಡ್‌ ಸ್ವೀಕರಿಸುತ್ತಿಲ್ಲ. ಅದರ ಬಳಕೆ ವಿಚಾರ ಇನ್ನೂ ಮಾತುಕತೆ ಹಂತದಲ್ಲೇ ಇದೆ. ಈಗ ಮಹಿಳೆಯರಿಗೆ ಉಚಿತ ಪ್ರಯಾಣ ಇರುವುದರಿಂದ ಹೆಚ್ಚಿನವರು ಅದನ್ನು ಬಳಸುವುದು ಅನುಮಾನ ಎಂದರು.

ಮೆಟ್ರೋಗಾಗಿ 203 ಮರಗಳನ್ನು ಕಡಿಯಲು ಹೈಕೋರ್ಟ್‌ ಒಪ್ಪಿಗೆ

ನಿಲ್ದಾಣದೊಳಗೆ ಜಾಹೀರಾತು

ಈ ಮಧ್ಯೆ ಮೆಟ್ರೋ ಆದಾಯ ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ನಿಲ್ದಾಣದ ಒಳಗೆ ಜಾಹೀರಾತು ಅಳವಡಿಸಲು ಅವಕಾಶ ನೀಡಲು ಮುಂದಾಗಿದೆ. ಇದಕ್ಕಾಗಿ ಕೆಲ ಕಂಪನಿಗಳ ಜೊತೆ ಒಪ್ಪಂದದ ಮಾತುಕತೆ ನಡೆದಿದೆ. ನೇರಳೆ, ಹಸಿರು ಮಾರ್ಗದ ನಾಲ್ಕು ಪ್ಯಾಕೇಜ್‌ಗಳಲ್ಲಿ 50 ನಿಲ್ದಾಣದಲ್ಲಿ ಜಾಹೀರಾತು ಪ್ರಕಟಿಸಲಿದೆ. ಸದ್ಯ ಜಾಹೀರಾತು ಹಾಗೂ ವಾಣಿಜ್ಯ ಮಳಿಗೆಗಳಿಂದ ಸುಮಾರು .20 ಕೋಟಿ ಆದಾಯ ಪಡೆಯುತ್ತಿದೆ.

2019ರ ಬಳಿಕ ಹೈಕೋರ್ಟ್‌ ಆದೇಶದಂತೆ ಮೆಟ್ರೋ ಕಂಬಗಳ ಮೇಲಿನ ಜಾಹೀರಾತನ್ನು ಅಳವಡಿಸುತ್ತಿಲ್ಲ. ಸದ್ಯ ಮೆಟ್ರೋ ರೈಲಿನೊಳಗೆ ಮಾತ್ರ ಜಾಹೀರಾತುಗಳಿವೆ. ನಿಲ್ದಾಣದೊಳಗಿನ ಮಳಿಗೆಗಳ ಬಾಡಿಗೆ ಹೆಚ್ಚಿರುವ ಕಾರಣ ವ್ಯಾಪಾರಸ್ಥರು ಹಿಂದೇಟು ಹಾಕುತ್ತಿದ್ದಾರೆ. ಇದೀಗ ನಿಲ್ದಾಣದೊಳಗೆ ಜಾಹೀರಾತು ಪ್ರಕಟಿಸಲು ಅವಕಾಶ ನೀಡುವುದರಿಂದ ವಾರ್ಷಿಕ 30-35 ಕೋಟಿ ಆದಾಯ ಗಳಿಸಬಹುದು ಎಂದು ಬಿಎಂಆರ್‌ಸಿಎಲ್‌ ನಿರೀಕ್ಷಿಸಿದೆ.