Asianet Suvarna News Asianet Suvarna News

ಫಲಪುಷ್ಪ ಪ್ರದರ್ಶನದಲ್ಲಿ ಈ ಬಾರಿ ನಾಲ್ಕುನಾಡು ಅರಮನೆ ಆಕರ್ಷಣೆ

ಎರಡು ವರ್ಷಗಳ ಬಳಿಕ ಮಡಿಕೇರಿಯ ಪ್ರಮುಖ ಪ್ರವಾಸಿ ತಾಣ ರಾಜಾಸೀಟ್‌ನಲ್ಲಿ ಫಲಪುಷ್ಪ ಪ್ರದರ್ಶನ ನಡೆಯುತ್ತಿದ್ದು, ಈ ಬಾರಿ ನಾಲ್ಕುನಾಡು ಅರಮನೆ ಪ್ರಮುಖ ಆಕರ್ಷಣೆಯಾಗಿರಲಿದೆ. ಇದರೊಂದಿಗೆ ಕೊಡಗಿನ ವೈನ್‌ ಪ್ರದರ್ಶನ ಹಾಗೂ ಮಾರಾಟ ಕೂಡ ಇರುವುದು ವಿಶೇಷ.

nalkunadu palace attraction this time in the fruit and flower show at madikeri rav
Author
First Published Jan 20, 2023, 7:39 AM IST

ವಿಘ್ನೇಶ್ ಎಂ. ಭೂತನಕಾಡು

ಮಡಿಕೇರಿ (ಜ.20) : ಎರಡು ವರ್ಷಗಳ ಬಳಿಕ ಮಡಿಕೇರಿಯ ಪ್ರಮುಖ ಪ್ರವಾಸಿ ತಾಣ ರಾಜಾಸೀಟ್‌ನಲ್ಲಿ ಫಲಪುಷ್ಪ ಪ್ರದರ್ಶನ ನಡೆಯುತ್ತಿದ್ದು, ಈ ಬಾರಿ ನಾಲ್ಕುನಾಡು ಅರಮನೆ ಪ್ರಮುಖ ಆಕರ್ಷಣೆಯಾಗಿರಲಿದೆ. ಇದರೊಂದಿಗೆ ಕೊಡಗಿನ ವೈನ್‌ ಪ್ರದರ್ಶನ ಹಾಗೂ ಮಾರಾಟ ಕೂಡ ಇರುವುದು ವಿಶೇಷ.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ತೋಟಗಾರಿಕೆ ಇಲಾಖೆಯ ಸಹಯೋಗದೊಂದಿಗೆ ಫೆಬ್ರವರಿ 3 ರಿಂದ 6 ರ ವರೆಗೆ ಮೂರು ದಿನಗಳ ಕಾಲ ನಗರದ ರಾಜಾಸೀಟು ಉದ್ಯಾನವನದಲ್ಲಿ ಫಲಪುಷ್ಪ ಪ್ರದರ್ಶನ ನಡೆಯಲಿದೆ. ಈ ಬಾರಿ ಫಲಪುಷ್ಪ ಪ್ರದರ್ಶನಕ್ಕೆ ಅಂದಾಜು 20 ಲಕ್ಷ ರುಪಾಯಿ ವೆಚ್ಚ ಮಾಡಲಾಗುತ್ತಿದೆ. ನಾಲ್ಕುನಾಡು ಅರಮನೆಯೊಂದಿಗೆ ಹೂವಿನಿಂದಲೇ ಬಗೆ ಬಗೆಯ ಕಲಾಕೃತಿಗಳು ಪ್ರದರ್ಶನದಲ್ಲಿ ಕಂಡುಬರಲಿದ್ದು, ಈ ಬಾರಿಯ ಪ್ರದರ್ಶನಕ್ಕೆ ಹೆಚ್ಚು ಪ್ರವಾಸಿಗರು ಭೇಟಿ ನೀಡುವ ಸಾಧ್ಯತೆಯಿದೆ.

ವಿಶೇಷಚೇತನರಿಗೆ ತೊಡಕಾಗಿರುವ ಸರ್ಕಾರದ ಮಾನದಂಡ ನಿರ್ಬಂಧ

ನಾಲ್ಕುನಾಡು ಕಲಾಕೃತಿ ಪ್ರದರ್ಶನ: ನಾಲ್ಕುನಾಡು ಅರಮನೆ ಕೊಡಗು ಜಿಲ್ಲೆಯ ಅತ್ಯಂತ ದೊಡ್ಡ ಬೆಟ್ಟತಡಿಯಂಡಮೋಳ್‌ ಬುಡದಲ್ಲಿದೆ. ಟಿಪ್ಪು ಸುಲ್ತಾನನ ಮೇಲೆ ದೊಡ್ಡವೀರ ರಾಜೇಂದ್ರನ ವಿಜಯದ ನೆನಪಿಗಾಗಿ ಈ ಅರಮನೆಯನ್ನು 1792ರ ಅವಧಿಯಲ್ಲಿ ನಿರ್ಮಿಸಲಾಗಿತ್ತು. ಬ್ರಿಟಿಷರಿಂದ ಪದಚ್ಯುತಗೊಳ್ಳುವ ಮೊದಲು ಈ ಅರಮನೆ ಹಾಲೇರಿ ರಾಜರ ಕೊನೆಯ ರಾಜ ಚಿಕ್ಕವೀರ ರಾಜೇಂದ್ರನ ಕೊನೆಯ ಆಶ್ರಯವಾಗಿತ್ತು. ಕೊಡಗನ್ನು ಆಳಿದ ರಾಜರ ಪರಂಪರೆಯನ್ನು ಬಿಂಬಿಸುವ ಸಲುವಾಗಿ ಈ ಕಲಾಕೃತಿಯನ್ನು ಈ ಬಾರಿಯ ಫಲಪುಷ್ಪ ಪ್ರದರ್ಶನಕ್ಕೆ ಆಯ್ಕೆ ಮಾಡಲಾಗಿದೆ.

ಫಲಪುಷ್ಪ ಪ್ರದರ್ಶನದ ಪ್ರಯುಕ್ತ ಈಗಾಗಲೇ ರಾಜಾಸೀಟು ಉದ್ಯಾನವನದಲ್ಲಿ 10 ರಿಂದ 12 ಸಾವಿರ ಸಂಖ್ಯೆಯ 15- 20 ರೀತಿಯ ಹೂವುಗಳಾದ ಪೇಟೂನಿಯ, ಕ್ಯಾನ, ಸಾಲ್ವಿಯ, ಸೇವಂತಿಗೆ, ಚೆಂಡು ಹೂ, ಜೀನಿಯಾ, ಕ್ಯಾಲಾಂಡೂಲಾ, ಪ್ಲಾಕ್ಸ್‌, ವಿಂಕಾ ರೋಸಿಯಾ, ಡೇಲಿಯಾ, ಅಲಿಸಂ ಮತ್ತಿತರ ಗಿಡಗಳನ್ನು ಪಾತಿಯಲ್ಲಿ ಹಾಗೂ ಕುಂದಗಳಲ್ಲಿ ನಾಟಿ ಮಾಡಲಾಗಿದ್ದು, ಪ್ರದರ್ಶನದಲ್ಲಿ ನೋಡುಗರ ಮನ ಸೆಳೆಯಲಿವೆ.

ಫಲಪುಷ್ಪ ಪ್ರದರ್ಶನದ ಮುಖ್ಯ ಆರ್ಕಷಣೆಯಾಗಿ ಮಕ್ಕಳಿಗೆ ಮಿಕ್ಕಿಮೌಸ್‌, ವೀಕ್ಷಕರಿಗೆ ಸೆಲ್ಫಿ ಪಾಯಿಂಟ್‌ ಹಾಗೂ ವಿವಿಧ ಹೂಗಳಿಂದ ಬಗೆ ಬಗೆಯ ಕಲಾಕೃತಿಗಳನ್ನು ನಿರ್ಮಿಸಿ ಪ್ರದರ್ಶನಕ್ಕೆ ಇಡಲಾಗುತ್ತದೆ ಹಾಗೂ ಅಲಂಕಾರಿಕ ವಿವಿಧ ಹೂ ಕುಂದಗಳ ಪ್ರದರ್ಶನ, ಬೊನ್ಸಾಯ್‌ ಪ್ರದರ್ಶನ, ತರಕಾರಿ ಕೆತ್ತನೆ ಹಾಗೂ ಹಣ್ಣಿನ ಕೆತ್ತನೆ ಕೂಡ ಇರಲಿದೆ.

ಗಾಂಧಿ ಮೈದಾನದಲ್ಲಿ ವಿವಿಧ ನರ್ಸರಿ ಗಿಡಗಳ ಮಾರಾಟ ಮಳಿಗೆ, ಕೃಷಿ ಪರಿಕರಗಳ ಪ್ರದರ್ಶನ, ತೋಟಗಾರಿಕೆ, ಇತರೆ ಇಲಾಖೆಯ ವಸ್ತು ಪ್ರದರ್ಶನದ ಮಳಿಗೆ ಇರಲಿದೆ. ರೈತರು ಬೆಳೆದಿರುವ ವಿಶಿಷ್ಟವಾದ ಹಣ್ಣುಗಳು, ತರಕಾರಿ, ತೋಟದ ಬೆಳೆಗಳು, ಸಂಬಾರ ಬೆಳೆಗಳನ್ನು ಪ್ರದರ್ಶಿಸಲು ತೋಟಗಾರಿಕೆ ಇಲಾಖೆ ಚಿಂತನೆ ನಡೆಸಿದೆ.

ಪ್ರದರ್ಶನಕ್ಕೆ ಬಹುಮಾನ: ಅತ್ಯುತ್ತಮ ಹಣ್ಣು, ತರಕಾರಿ ಮತ್ತಿತರ ಪ್ರದರ್ಶನಕ್ಕೆ ಬಹುಮಾನ ಕೂಡ ಇರಲಿದೆ. ತೋಟಗಾರಿಕೆಯಲ್ಲಿ ಆಸಕ್ತಿಯಿರುವ ಮಹಿಳೆಯರಿಗೆ ಹಾಗೂ ಸಾರ್ವಜನಿಕರಿಗೆ ಒಣ ಹೂ ಜೋಡಣೆ, ಬಿಡಿ ಹೂ ಜೋಡಣೆ, ಇಕೆಬಾನೆ, ರಂಗೋಲಿ ಸ್ಪರ್ಧೆ ಕೂಡ ಆಯೋಜಿಸಲಾಗಿದೆ. ಆಸಕ್ತರು ಹೆಚ್ಚಿನ ಮಾಹಿತಿಗೆ ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕರನ್ನು ಸಂಪರ್ಕಿಸಬಹುದಾಗಿದೆ.

ಚುನಾವಣೆ ಜಾಗೃತಿ: ಕೆಲವೇ ತಿಂಗಳಲ್ಲಿ ವಿಧಾನಸಭಾ ಚುನಾವಣೆ ಕೂಡ ನಡೆಯಲಿರುವ ಹಿನ್ನೆಲೆಯಲ್ಲಿ ಫಲಪುಷ್ಪ ಪ್ರದರ್ಶನದಲ್ಲಿ ಚುನಾವಣೆಗೆ ಸಂಬಂಧಿಸಿದಂತೆ ಜಾಗೃತಿ ಕಾರ್ಯಕ್ರಮ ಕೂಡ ಇರಲಿದೆ. ಪ್ರತಿಯೊಬ್ಬರು ಮತದಾನ ಮಾಡುವ ಮೂಲಕ ತಮ್ಮ ಹಕ್ಕನ್ನು ಚಲಾವಣೆ ಮಾಡಬೇಕೆಂಬ ಕಲಾಕೃತಿಗಳು ಕೂಡ ಮೂಡಿ ಬರಲಿದೆ.

ಕೊಡಗಿನ ವೈನ್‌ ಮೇಳ

ಕೊಡಗಿನಲ್ಲಿ ಉತ್ಪಾದಿಸುವ ಉತ್ಪನ್ನವಾಗಿರುವ ಕೊಡಗಿನ ಹೋಂ ಮೇಡ್‌ ವೈನ್‌ನ್ನು ಉತ್ತೇಜಿಸುವ ಸಲುವಾಗಿ ಫಲಪುಷ್ಪ ಪ್ರದರ್ಶನ ಜೊತೆಗೆ ವೈನ್‌ ಉತ್ಸವ ಕೂಡ ಆಯೋಜಿಸಲಾಗಿದೆ. ವೈನ್‌ ಉತ್ಸವದಲ್ಲಿ ವಿವಿಧ ಹಣ್ಣುಗಳಿಂದ ತಯಾರಿಸಿದ ವೈನ್‌ಗಳ ಪ್ರದರ್ಶನ ಹಾಗೂ ಮಾರಾಟ ಇರಲಿದೆ. ವೈನ್‌ ಉತ್ಸವದಲ್ಲಿ ಭಾಗವಹಿಸುವವರು ಸ್ವಂತ ಉತ್ಪಾದನಾ ಘಟಕ ಹೊಂದಿದ್ದು, ಸಂಬಂಧಿಸಿದ ಇಲಾಖೆಯ ದೃಢೀಕರಣ ಪ್ರಮಾಣ ಪತ್ರ ಹೊಂದಿರಬೇಕು. ಹಾಗೂ ಆಲ್ಕೋಹಾಲ್‌ ಪ್ರಮಾಣವು ಅಬಕಾರಿ ಕಾಯ್ದೆಯಡಿ ನಿಗದಿಪಡಿಸಿದ ಪ್ರಮಾಣಕ್ಕಿಂತ ಕಡಿಮೆ ಇರಬೇಕು ಎಂದು ತೋಟಗಾರಿಕಾ ಇಲಾಖೆ ಸ್ಪಷ್ಟಪಡಿಸಿದೆ.

'ಕರ್ನಾಟಕದ ಕಾಶ್ಮೀರ' ಮಡಿಕೇರಿ ರಸ್ತೆಗಳು ಗುಂಡಿಮಯ; ದುರಸ್ತಿ ಭಾಗ್ಯ ಎಂದು?

ಕೊರೋನಾ ಕಾರಣದಿಂದಾಗಿ ಕಳೆದೆರಡು ವರ್ಷ ರಾಜಾಸೀಟ್‌ನಲ್ಲಿ ಫಲಪುಷ್ಪ ಪ್ರದರ್ಶನ ನಡೆದಿರಲಿಲ್ಲ. ಈ ಬಾರಿ ಅಂದಾಜು 20 ಲಕ್ಷ ರು. ವೆಚ್ಚದಲ್ಲಿ ಫಲಪುಷ್ಪ ಪ್ರದರ್ಶನ ಫೆ.3ರಿಂದ ಮೂರು ದಿನಗಳ ಕಾಲ ಆಯೋಜಿಸಲಾಗಿದ್ದು, ನಾಲ್ಕುನಾಡು ಅರಮನೆ ಪ್ರಮುಖ ಕಲಾಕೃತಿಯಾಗಿ ಮೂಡಿ ಬರಲಿದೆ. ಇದರೊಂದಿಗೆ ಕೊಡಗಿನ ವೈನ್‌ ಮೇಳವನ್ನು ಕೂಡ ಆಯೋಜಿಸಲಾಗಿದೆ

- ಪ್ರಮೋದ್‌, ಉಪ ನಿರ್ದೇಶಕರು ತೋಟಗಾರಿಕೆ ಇಲಾಖೆ ಮಡಿಕೇರಿ

Follow Us:
Download App:
  • android
  • ios