ಕಾಂಗ್ರೆಸ್‌ನಲ್ಲಿ ಮೂಲ, ವಲಸಿಗರ ನಡುವೆ ತೀವ್ರ ಸಂಘರ್ಷ: ಕಟೀಲ್
* ಚುನಾವಣೆಗೂ ಮುನ್ನವೇ ಕಾಂಗ್ರೆಸ್‌ನಲ್ಲಿ ಸಿಎಂ ಪಟ್ಟಕ್ಕಾಗಿ ಕಿತ್ತಾಟ
* ಮುಂದಿನ ಅವಧಿಗೆ ಬಿಜೆಪಿಯೇ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ
* ಬಿಜೆಪಿಯಲ್ಲಿ ಯಾವುದೇ ರೀತಿಯ ಭಿನ್ನಾಭಿಪ್ರಾಯಗಳಿಲ್ಲ
ರಾಯಚೂರು(ಜೂ.25): ಮುಖ್ಯಮಂತ್ರಿ ಪಟ್ಟಕ್ಕಾಗಿ ಕಾಂಗ್ರೆಸ್ ಪಕ್ಷದಲ್ಲಿ ಚುನಾವಣೆಗೂ ಮುನ್ನವೇ ಕಿತ್ತಾಟ ಶುರುವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ ಕುಮಾರ ಕಟೀಲ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಗುರುವಾರ ಮಾತನಾಡಿ, ಕಾಂಗ್ರೆಸ್ ಪಕ್ಷದಲ್ಲಿ ಪದಾಧಿಕಾರಿಗಳ ಆಯ್ಕೆಗೂ ಹೈಕಮಾಂಡ್ ಬಳಿಗೆ ಹೋಗುವಷ್ಟರ ಮಟ್ಟಿಗೆ ಆತಂರಿಕ ಕಿತ್ತಾಟ ಸಾಗಿದೆ. ಇನ್ನು ಎರಡು ವರ್ಷ ಇರುವಾಗಲೇ ಸಿಎಂ ಸ್ಥಾನಕ್ಕಾಗಿ ಗುದ್ದಾಟ ನಡೆಸಿದ್ದಾರೆ. ಕಾಂಗ್ರೆಸ್‌ನಲ್ಲಿ ಮೂಲ ಕಾರ್ಯಕರ್ತರು, ವಲಸಿಗರ ನಡುವೆ ತೀವ್ರ ಸಂಘರ್ಷ ಉಂಟಾಗಿದೆ. ಶಾಸಕರು ಗೆದ್ದು ಬಂದ ಬಳಿಕ ಸಿಎಂ ಯಾರು ಎನ್ನುವುದನ್ನು ನಿರ್ಧರಿಸಬೇಕು ಆದರೆ ಕಾಂಗ್ರೆಸ್ಸಿಗರು ಈಗಾಗಲೇ ಸಿಎಂ ಪಟ್ಟಕ್ಕಾಗಿ ತಗಾದೆ ನಡೆಸುತ್ತಿದ್ದು, ಡಿ.ಕೆ.ಶಿವಕುಮಾರ, ಸಿದ್ದರಾಮಯ್ಯ ಅವರ ನಡುವೆ ಕಿತ್ತಾಟ ಜೋರಾಗಿ ಸಾಗಿದೆ. ಆದರೆ ಬಿಜೆಪಿಯಲ್ಲಿ ಅಂತಹ ಯಾವುದೇ ರೀತಿಯ ಆಂತರಿಕ ಭಿನ್ನಾಭಿಪ್ರಾಯಗಳಾಗಲಿ, ಒಳ ಜಗಳಗಳಾಗಲಿ ಇಲ್ಲ.
ಮುಂದಿನ ಎರಡು ವರ್ಷ ಯಡಿಯೂರಪ್ಪ ಅವರೇ ಮುಖ್ಯಮಂತ್ರಿಗಳಾಗಿ ಮುಂದುವರೆಯಲಿದ್ದಾರೆ. ಪಕ್ಷದ ಶಾಸಕರು ಸ್ವತಂತ್ರರು. ಯಾರು ಯಾವ ದೇವಸ್ಥಾನ ಹಾಗೂ ಮಠಕ್ಕೂ ಹೋಗಿರಬಹುದು. ಅದನ್ನೇ ಭಿನ್ನಮತವೆನ್ನಲು ಸಾಧ್ಯವೇ ಎಂದು ಪ್ರಶ್ನಿಸಿದರು. ಮುಂದಿನ ಅವಧಿಗೆ ಬಿಜೆಪಿಯೇ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಯಚೂರು ವಿಮಾನ ನಿಲ್ದಾಣಕ್ಕೆ ರಾಯರ ಹೆಸರಿಡಲು ತೀರ್ಮಾನ
ಶಾಸಕರಾದ ಅರವಿಂದ್ ಬೆಲ್ಲದ್ ಮತ್ತು ಯೋಗೇಶ್ವರ ಅವರ ನಡುವೆ ಯಾವುದೇ ರೀತಿಯ ಭಿನ್ನಾಭಿಪ್ರಾಯಗಳು ಇಲ್ಲ ಫೋನ್ ಕದ್ದಾಲಿಕೆ ವಿಷಯಕ್ಕೆ ಸಂಬಂಧಿಸಿದಂತೆ ಈಗಾಗಲೇ ನೀಡಿರುವ ದೂರನ್ನು ಗೃಹ ಇಲಾಖೆಯು ಗಂಭೀರವಾಗಿ ಪರಿಗಣಿಸಿದ್ದು, ಸರ್ಕಾರ ಸಮಗ್ರ ತನಿಖೆ ನಡೆಸುತ್ತದೆ ಎಂದು ಹೇಳಿದರು.
ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರು ಮಾಹಾರಾಷ್ಟ್ರ ಮಾಜಿ ಸಿಎಂ ದೇವೇಂದ್ರ ಫಡ್ನವೀಸ್ ಭೇಟಿಗೆ ಮಾಡಿದ್ದಾರೆ. ಅವರ ನಮ್ಮ ಪಕ್ಷದವರು. ಅದಕ್ಕೆ ಅನಗತ್ಯ ಗೊಂದಲ ಸೃಷ್ಟಿಸುವುದು ಸರಿಯಲ್ಲ ಎಂದು ಹೇಳಿದರು.
ಮಾಜಿ ಸಚಿವ ಎಚ್.ವಿಶ್ವನಾಥ ಇತ್ತೀಚೆಗೆಯೇ ಬಿಜೆಪಿ ಸೇರಿದ್ದಾರೆ. ಅವರನ್ನು ಭೇಟಿಯಾಗಿ ಪಕ್ಷದ ತತ್ವ-ಸಿದ್ಧಾಂತಗಳ ಬಗ್ಗೆ ಮನವರಿಕೆ ಮಾಡಿಕೊಡಲಾಗುವುದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಶಾಸಕರಾದ ಕೆ.ಶಿವನಗೌಡ ನಾಯಕ, ಡಾ.ಶಿವರಾಜ ಪಾಟೀಲ್, ಮಾಜಿ ಶಾಸಕ ತಿಪ್ಪರಾಜು ಹವಾಲ್ದಾರ್ ಸೇರಿ ಪಕ್ಷದ ಮುಖಂಡರು ಇದ್ದರು.