ಆರೋಪ-ಪ್ರತ್ಯಾರೋಪಗಳಲ್ಲಿ ಕಾಲ ಕಳೆದು ಬೌದ್ಧಿಕವಾಗಿ ದಿವಾಳಿಯಾದ ಕಾಂಗ್ರೆಸ್‌| ದೇಶದಲ್ಲೂ ಕಾಂಗ್ರೆಸ್‌ ಪಕ್ಷಕ್ಕೆ ನಾಯಕತ್ವ ಕೊರತೆ ಎದ್ದು ಕಾಣುತ್ತಿದೆ. ಸೋನಿಯಾಗಾಂಧಿ, ರಾಹುಲ್‌ಗಾಂಧಿ ಬೇಡ. ಹೊಸ ಅಧ್ಯಕ್ಷರನ್ನು ಮಾಡಬೇಕೆಂಬುದು ಹಿರಿಯ ಕಾಂಗ್ರೆಸ್ಸಿಗರ ಒತ್ತಾಸೆಯಾಗಿದೆ: ಕಟೀಲ್‌| 

ಸಿಂಧನೂರು(ನ.21): ಸಮಾಜವಾದಿ ಪಕ್ಷದಿಂದ ಬಂದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಂಗ್ರೆಸ್‌ ಪಕ್ಷದವರಿಗೆ ಬುದ್ಧಿವಾದ ಹೇಳುವಂತಹ ಪರಿಸ್ಥಿತಿ ನಿರ್ಮಾಣಗಿದ್ದು, ಆ ಪಕ್ಷ ಬೌದ್ಧಿಕವಾಗಿ ದಿವಾಳಿಯಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಾಕ್ಷ ನಳಿನ್‌ ಕುಮಾರ್‌ ಕಟೀಲ್‌ ವ್ಯಂಗ್ಯವಾಡಿದ್ದಾರೆ.

ನಗರದಲ್ಲಿ ಬಿಜೆಪಿ ರಾಜ್ಯ ಪದಾಧಿಕಾರಿಗಳ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್‌ನಲ್ಲಿ ಜಾತಿ ಹಾಗೂ ಗೂಂಡಾಗಿರಿ ರಾಜಕಾರಣದಿಂದಾಗಿ ನಾಯಕರ ಮಧ್ಯ ಅತೃಪ್ತಿಯ ಹೊಗೆಯಾಡುತ್ತಿದೆ. ಅವರು ವೈಯಕ್ತಿಕ ಕಚ್ಚಾಟ, ಆರೋಪ-ಪ್ರತ್ಯಾರೋಪಗಳಲ್ಲಿ ಕಾಲ ಕಳೆದು ಬೌದ್ಧಿಕವಾಗಿ ದಿವಾಳಿಯಾಗಿದ್ದಾರೆ ಎಂದು ಅಭಿಪ್ರಾಯಪಟ್ಟರು.

ಬಸವಕಲ್ಯಾಣ ಉಪಚುನಾವಣೆಯಲ್ಲಿ ನಾನು ಸ್ಪರ್ಧಿಸೋದಿಲ್ಲ: ಬಿ.ವೈ.ವಿಜಯೇಂದ್ರ

ಅಧಿಕಾರಕ್ಕಾಗಿ ಸಿದ್ರಾಮಣ್ಣ ಮತ್ತು ಡಿ.ಕೆ.ಶಿವಕುಮಾರ್‌ ಪಕ್ಷದಲ್ಲಿ ಗುಂಪು ರಾಜಕಾರಣ ಮಾಡುತ್ತಿದ್ದು, ಇದುವೇ ರಾಜ್ಯದಲ್ಲಿ ಕಾಂಗ್ರೆಸ್‌ಗೆ ಹಿನ್ನಡೆಯಾಗಿದೆ. ಇನ್ನು ದೇಶದಲ್ಲೂ ಕಾಂಗ್ರೆಸ್‌ ಪಕ್ಷಕ್ಕೆ ನಾಯಕತ್ವ ಕೊರತೆ ಎದ್ದು ಕಾಣುತ್ತಿದೆ. ಸೋನಿಯಾಗಾಂಧಿ, ರಾಹುಲ್‌ಗಾಂಧಿ ಬೇಡ. ಹೊಸ ಅಧ್ಯಕ್ಷರನ್ನು ಮಾಡಬೇಕೆಂಬುದು ಹಿರಿಯ ಕಾಂಗ್ರೆಸ್ಸಿಗರ ಒತ್ತಾಸೆಯಾಗಿದೆ. ಈಗ ದೇಶದಲ್ಲಿ ಕಾಂಗ್ರೆಸ್‌ಗೆ ಕಾಂಗ್ರೆಸ್ಸೇ ವಿರೋಧಿಯಾಗಿದೆ. ವಿರೋಧ ಪಕ್ಷದ ಸ್ಥಾನದಲ್ಲಿ ಕೂಡಲು ಆಪಕ್ಷ ನಾಲಾಯಕ್‌ ಆಗಿದೆ ಎಂದು ಟೀಕಿಸಿದರು.

ಇದೇ ವೇಳೆ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರ ಸಂಘಟನೆ ನಿರಂತರವಾಗಿ ನಡೆಯುತ್ತಿದ್ದು ಶಕ್ತಿಕೇಂದ್ರಗಳು, ಪಂಚರತ್ನ, ಪೇಜ್‌ ಕುಟುಂಬಗಳು ಹೋಬಳಿ ಮಟ್ಟದಿಂದ ರಾಷ್ಟಮಟ್ಟದವರೆಗೆ ಕಾರ್ಯನಿರ್ವಹಿಸುತ್ತಿವೆ. ಮುಂದಿನ ಮಸ್ಕಿ, ಬಸವಕಲ್ಯಾಣ, ಬೆಳಗಾವಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುವುದು ನಿಶ್ಚಿತ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ 150ಕ್ಕೂ ಹೆಚ್ಚು ಸ್ಥಾನಗಳಲ್ಲಿ ಬಿಜೆಪಿ ಗೆಲ್ಲಲಿದೆ. ಅದರಲ್ಲಿ ಸಿಂಧನೂರು ವಿಧಾನಸಭೆ ಕ್ಷೇತ್ರವು ಒಂದಾಗಿದೆ ಎಂದು ಕಟೀಲ್‌ ಭವಿಷ್ಯ ನುಡಿದರು.