ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಯಾರ ಗುಲಾಮ ಎನ್ನುವುದು ಜಗತ್ತಿಗೆ  ಗೊತ್ತಿದೆ. ಅವರು ಯಾರ ಕಾಲು ಹಿಡಿದು ಸಿಎಂ ಆಗಿದ್ದಾರೆನ್ನುವುದು ತಿಳಿದಿದೆ ಎಂದು ಟಾಂಗ್ ನೀಡಿದ್ದಾರೆ.

ಬೆಳಗಾವಿ (ಮಾ.31) : ವಿಪಕ್ಷ ನಾಯಕ ಸಿದ್ದರಾಮಯ್ಯ ಯಾರ ಗುಲಾಮರು ಎಂಬುವುದು ಜಗತ್ತಿಗೆ ಗೊತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಹೇಳಿದರು.

ನಗರದ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಯಾರ ಕಾಲು ಹಿಡಿದು ಸಿಎಂ ಆಗಿದ್ದಾರೆ ಎನ್ನುವುದೂ ಗೊತ್ತಿದೆ. 

ಅವರಿಗೆ 65 ವರ್ಷ, ಆದರೂ ಅವರಿಗಿಂತ ಕಿರಿಯರಾದ ರಾಹುಲ್ ಗಾಂಧಿ ಕಾಲು ಹಿಡಿದು ಸಿಎಂ ಆಗಿದ್ದಾರೆ ಎಂದರು. ಮಾಜಿ ಸಚಿವರ ಸಿ.ಡಿ. ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ಅವರು, ಸಿ.ಡಿ. ಪ್ರಕರಣ ತನಿಖಾ ಹಂತದಲ್ಲಿದೆ. ಸಿದ್ದರಾಮಯ್ಯ ಅವರ ಕಾಲಾವಧಿಯಲ್ಲಿ ಸಿ.ಡಿ.ಗಳು ಯಾವ ರೀತಿ ತನಿಖೆಯಾಗಿದೆ ಎಂಬುದು ಗೊತ್ತಿದೆ. ಸಿದ್ದರಾಮಯ್ಯಗೆ ಸಿಬಿಐ, ಐಟಿ, ಎಸ್‌ಐಟಿ ಮೇಲೆ ನಂಬಿಕೆ ಇಲ್ಲ. ಅಷ್ಟಕ್ಕೂ ಸಿದ್ದರಾಮಯ್ಯಗೆ ಅವರ ಮೇಲೆಯೇ ನಂಬಿಕೆ ಇಲ್ಲ ಎಂದು ಹೇಳಿದರು.

ನಾಯಕರುಗಳ 19 ಸೀಡಿ ಇದ್ಯಂತೆ : ಹುಷಾರ್ ...

ಪ್ರಚಾರದಲ್ಲಿ ರಮೇಶ್‌ ಸಹ ಭಾಗಿ: ಲೋಕಸಭಾ ಉಪಚುಣಾವಣೆ ದಿನಾಂಕ ಘೋಷಣೆ ಆಗಿದೆ. ಮಂಗಲಾ ಅಂಗಡಿ ನಾಮಪತ್ರ ಸಲ್ಲಿಸಿದ್ದಾರೆ. ರಾಜ್ಯದಲ್ಲಿರುವ ಮೂರು ಉಪ ಚುಣಾವಣೆಯಲ್ಲಿ ಬಿಜೆಪಿ ಗೆಲ್ಲಲಿದೆ. ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಸೇರಿದಂತೆ ಎಲ್ಲ ಶಾಸಕರಿಗೂ ಚುನಾವಣೆಯ ಪ್ರಚಾರದಲ್ಲಿ ಭಾಗಿಯಾಗಲು ಸೂಚನೆ ನೀಡಿದ್ದೇವೆ. ರಮೇಶ್‌ ಜಾರಕಿಹೊಳಿ ಕೂಡ ಚುನಾವಣಾ ಪ್ರಚಾರ ಕಾರ್ಯದಲ್ಲಿ ಭಾಗವಹಿಸುತ್ತಾರೆ ಎಂದರು.