ಕಾಂಗ್ರೆಸ್‌ನದ್ದೇ ಸರ್ಕಸ್‌ ಕಂಪನಿ| ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌, ಕಾಂಗ್ರೆಸ್‌ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ, ಡಾ.ಪರಮೇಶ್ವರ್‌ ಅವರದ್ದು ಒಂದೊಂದು ಗ್ಯಾಂಗ್‌ ಇದೆ| ಈ ಸರ್ಕಸ್‌ ಕಂಪನಿ ಸರಿಮಾಡಲು ಸುರ್ಜೇವಾಲರನ್ನು ಕಳುಹಿಸಿಕೊಟ್ಟಿದ್ದಾರೆ: ಕಟೀಲ್‌| 

ಗೋಕಾಕ(ಏ.12): ನಾವು ಐದು ರಾಜ್ಯಗಳಲ್ಲಿ ನಡೆಯಲಿರುವ ಚುನಾವಣೆಗಳಲ್ಲಿ ಮೂರು ರಾಜ್ಯಗಳಲ್ಲಿ ಗೆಲ್ಲುತ್ತೇವೆ. ಕಾಂಗ್ರೆಸ್‌ ಒಂದು ರಾಜ್ಯ ಗೆದ್ದು ತೋರಿಸಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣ್‌ದೀಪ್‌ ಸಿಂಗ್‌ ಸುರ್ಜೇವಾಲಾ ಅವರಿಗೆ ಸವಾಲು ಹಾಕಿದ್ದಾರೆ.

ಪಟ್ಟಣದಲ್ಲಿ ಭಾನುವಾರ ಬಿಜೆಪಿ ಅಭ್ಯರ್ಥಿ ಮಂಗಲ ಅಂಗಡಿ ಪರ ರೋಡ್‌ ಶೋ ನಡೆಸಿ ಮತಯಾಚನೆ ನಡೆಸಿ ಭಾಷಣ ಮಾಡಿದ ಅವರು, ಉಪಚುನಾವಣೆ ಫಲಿತಾಂಶ ಬಿಜೆಪಿ ಪತನಕ್ಕೆ ಮುನ್ನುಡಿಯಾಗಲಿದೆ ಎಂಬ ಸುರ್ಜೇವಾಲಾ ಹೇಳಿಕೆಗೆ ತಿರುಗೇಟು ನೀಡಿದರು. ಬಿಜೆಪಿ ಮೂರು ರಾಜ್ಯಗಳಲ್ಲಿ ಗೆಲ್ಲಲಿದ್ದು, ಎರಡು ಕಡೆ ಖಾತೆ ತೆರೆಯಲಿದೆ. ಕಾಂಗ್ರೆಸ್‌ ಒಂದು ರಾಜ್ಯ ಗೆದ್ದು ತೋರಿಸಲಿ. ನಾಶ ಯಾರಾಗ್ತಾರೆ ಗೊತ್ತಾಯ್ತಲ್ಲ ಎಂದು ವ್ಯಂಗ್ಯವಾಡಿದ್ದಾರೆ.

ಹಠಕ್ಕೆ ಬಿದ್ದ ನಾಯಕರು: ಉಪಚುನಾವಣೆ ಗೆಲುವಿಗೆ ಕಾಂಗ್ರೆಸ್ ರಣತಂತ್ರ

ಬಿಜೆಪಿ ಸರ್ಕಾರ ಸರ್ಕಸ್‌ ಸರ್ಕಾರ ಎಂಬ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣ್‌ದೀಪ್‌ ಸಿಂಗ್‌ ಸುರ್ಜೇವಾಲಾ ಹೇಳಿಕೆಗೂ ಆಕ್ರೋಶ ವ್ಯಕ್ತಪಡಿಸಿದ ಅವರು, ಕಾಂಗ್ರೆಸ್‌ನದ್ದೇ ಸರ್ಕಸ್‌ ಕಂಪನಿ. ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಕಾಂಗ್ರೆಸ್‌ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ, ಮಾಜಿ ಉಪಮುಖ್ಯಮಂತ್ರಿ ಡಾ.ಪರಮೇಶ್ವರ್‌ ಅವರದ್ದು ಒಂದೊಂದು ಗ್ಯಾಂಗ್‌ ಇದೆ. ಈ ಸರ್ಕಸ್‌ ಕಂಪನಿ ಸರಿಮಾಡಲು ಸುರ್ಜೇವಾಲರನ್ನು ಕಳುಹಿಸಿಕೊಟ್ಟಿದ್ದಾರೆ ಎಂದು ಕುಟುಕಿದರು.

ಪ್ರಜಾಪ್ರಭುತ್ವ ಎಂಬ ಶಬ್ದವನ್ನು ಹಾಳು ಮಾಡಿದ್ದೇ ಕಾಂಗ್ರೆಸ್‌ ಪಕ್ಷ. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್‌ ಬಣಗಳು ತಮ್ಮ ವೈಯಕ್ತಿಕ ಪ್ರತಿಷ್ಠೆಗಾಗಿ ಜಗಳವಾಡುತ್ತ ಪಕ್ಷವನ್ನು ಅಧೋಗತಿಗೆ ಇಳಿಸಿದ್ದಾರೆ ಎಂದರು. ಆ ಪಕ್ಷವೀಗ ರಾಜ್ಯದಲ್ಲಿ ಮೂರು ಹೊಳಾಗಿ ಅದೋಗತಿಗೆ ಬಂದಿಳಿದಿದೆ, ತಮ್ಮ ರಾಜಕೀಯ ಬೇಳೆಯನ್ನು ಬೆಳೆಸಿಕೊಳ್ಳುವಗೋಸ್ಕರ ಪಕ್ಷದಲ್ಲಿ ಪ್ರಭಾವಿಯಾಗಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಿದ್ದು, ಸತೀಶ ಅವರ ರಾಜಕೀಯ ಮುಗಿಸಲು ಇದೊಂದು ಡಿ.ಕೆ.ಶಿವಕುಮಾರ್‌ ಹೂಡಿರುವ ಸಂಚು ಎಂದು ಆರೋಪಿಸಿದರು.