Asianet Suvarna News Asianet Suvarna News

ಕೊಪ್ಪಳ ಬಿಜೆಪಿ ಜಿಲ್ಲಾಧ್ಯಕ್ಷ ದೊಡ್ಡನಗೌಡ ಎಲ್ಲಿದ್ದಾರೆ? ಕಟೀಲ್‌ ಕೆಂಡಾಮಂಡಲ..!

ಚುನಾವಣೆಯಲ್ಲಿ ಪಕ್ಷ ಗೆದ್ದರೂ ಕೊಪ್ಪಳದಲ್ಲಿ ವಿಜಯೋತ್ಸವ ಮಾಡಲಿಲ್ಲ| ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲಿಯೂ ಆಸಕ್ತಿ ತೋರಿಸುತ್ತಿಲ್ಲ| ಕೊಪ್ಪಳ ಬೆಳವಣಿಗೆಯ ಕುರಿತು ಕೆಂಡಾಮಂಡಲರಾದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ ಕಟೀಲ್‌| 

Nalin Kumar Kateel Not Happy for Koppal District BJP Politics grg
Author
Bengaluru, First Published Nov 12, 2020, 12:44 PM IST

ಸೋಮರಡ್ಡಿ ಅಳವಂಡಿ

ಕೊಪ್ಪಳ(ನ.12): ಜಿಲ್ಲಾ ಬಿಜೆಪಿಯಲ್ಲಿ ಬೇಜವಾಬ್ದಾರಿ ಮಡುಗಟ್ಟಿದೆ. ಪಕ್ಷದ ನಾಯಕರಲ್ಲಿನ ಹೊಂದಾಣಿಕೆಯ ಕೊರತೆಯೋ ಅಥವಾ ಜಿಲ್ಲಾಧ್ಯಕ್ಷ ದೊಡ್ಡನಗೌಡ ಪಾಟೀಲ್‌ ಅವರ ನೇತೃತ್ವದಲ್ಲಿನ ದೋಷವೋ ಗೊತ್ತಿಲ್ಲ. ಆದರೆ, ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರದಲ್ಲಿ ಇದ್ದರೂ ಕೊಪ್ಪಳ ಜಿಲ್ಲೆಯಲ್ಲಿ ಮಾತ್ರ ಅದೇಕೋ ಕಮಲ ಮುದುಡಿಕೊಂಡಿದೆ.

ದೇಶಾದ್ಯಂತ ನಡೆದ 58 ಉಪಚುನಾವಣೆಯಲ್ಲಿ ಬಿಜೆಪಿ 40ರಲ್ಲಿ ಜಯಸಾಧಿಸಿದೆ. ರಾಜ್ಯದ ಎರಡು ಉಪಚುನಾವಣೆಯಲ್ಲಿ ಭರ್ಜರಿ ಜಯ ಸಾಧಿಸಿದೆ. ಇದಲ್ಲದೆ ವಿಧಾನ ಪರಿಷತ್‌ ಚುನಾವಣೆಯಲ್ಲಿಯೂ ಮೇಲುಗೈ ಸಾಧಿಸಿದೆ. ಇಷ್ಟಾದರೂ ಕೊಪ್ಪಳದ ನಾಯಕರಲ್ಲಿ ಮತ್ತು ಕಾರ್ಯಕರ್ತರಲ್ಲಿ ಸಂಭ್ರಮವೇ ಕಾಣಲಿಲ್ಲ. ಜಿಲ್ಲಾ ಕೇಂದ್ರದಲ್ಲಿ ಕನಿಷ್ಠ ವಿಜಯೋತ್ಸವವನ್ನು ಆಚರಣೆ ಮಾಡಲಿಲ್ಲ. ಉಳಿದೆಡೆ ಅಲ್ಲಲ್ಲಿ ವಿಜಯೋತ್ಸವವನ್ನು ಕಾಟಾಚಾರಕ್ಕೆ ಎನ್ನುವಂತೆ ಮಾಡಲಾಯಿತು.

ಕಾಂಗ್ರೆಸ್‌ಗೆ ಬೆಂಬಲ:

ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲಿಯೂ ಆಸಕ್ತಿಯನ್ನು ತೋರಿಸುತ್ತಿಲ್ಲ. ಜಿಲ್ಲಾ ಪಂಚಾಯಿತಿಯಲ್ಲಿ ಕನಿಷ್ಠ ಇರುವಷ್ಟು ಸದಸ್ಯರು ತಮ್ಮ ಪಕ್ಷದ ಅಭ್ಯರ್ಥಿಗಳಿಗೆ ಮತ ಚಲಾಯಿಸಲಿಲ್ಲ. ಇನ್ನು ಭಾಗ್ಯನಗರ ಪಟ್ಟಣ ಪಂಚಾಯಿತಿಯಲ್ಲಿ ಬಹುಮತ ಇದ್ದರೂ ಸದಸ್ಯರು ಕಾಂಗ್ರೆಸ್‌ಗೆ ಬೆಂಬಲ ನೀಡಿದರು. ಅದು ಸಂಸದ ಸಂಗಣ್ಣ ಕರಡಿ ಅವರ ಉಪಸ್ಥಿತಿಯಲ್ಲಿ. ಜಿಲ್ಲಾದ್ಯಂತ ಶಾಸಕರು, ಸಂಸದರು, ಬಿಜೆಪಿ ಜಿಲ್ಲಾಧ್ಯಕ್ಷರು ಸ್ಥಳೀಯವಾಗಿಯೇ ಇದ್ದರೂ ಉಪಚುನಾವಣೆಯ ಗೆಲುವನ್ನು ಸಂಭ್ರಮಿಸಲು ವಿಜಯೋತ್ಸವ ಆಚರಿಸದೆ ಇರುವುದು ಪಕ್ಷದಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿದೆ.

'ಬಿಜೆಪಿಯಲ್ಲಿ ಸಾಮಾನ್ಯರೂ ಉನ್ನತ ಹುದ್ದೆಗೇರಲು ಸಾಧ್ಯ, ಪ್ರಧಾನಿ ಮೋದಿನೇ ನಿದರ್ಶನ'

ನಾನಾ ಊಹಾಪೋಹ:

ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರ ಉಪ ಚುನಾವಣೆಯ ಜಯವನ್ನು ದಿಕ್ಸೂಚಿ ಎನ್ನುವಂತೆ ಬಣ್ಣಿಸಿದ್ದಾರೆ. ಇದು ಕಾರ್ಯಕರ್ತರ ಜಯ ಎಂದಿದ್ದಾರೆ. ಗೆಲುವನ್ನು ಅವರು ಕಾರ್ಯಕರ್ತರಿಗೆ ಅರ್ಪಿಸಿದ್ದಾರೆ. ಹೀಗಿದ್ದರೂ ಜಿಲ್ಲಾ ಕೇಂದ್ರ ಕೊಪ್ಪಳದಲ್ಲಿ ಮಾತ್ರ ಉಪಚುನಾವಣೆಯ ಗೆಲುವಿನ ವಿಜಯಯೋತ್ಸವ ಆಗಲೇ ಇಲ್ಲ. ಜಿಲ್ಲಾಧ್ಯಕ್ಷರಾಗಿ ದೊಡ್ಡನಗೌಡ ಅವರು ಸಾರಥ್ಯ ವಹಿಸಿದ ಮೇಲೆ ನಡೆದ ಮೊದಲ ಸಂಭ್ರಮ ಇದಾಗಿದ್ದರೂ ಸಾಂಕೇತಿಕ ವಿಜಯೋತ್ಸವವನ್ನು ಆಚರಣೆ ಮಾಡದೆ ಇರುವುದು ನಾನಾ ಉಹಾಪೋಹಗಳಿಗೆ ಕಾರಣವಾಗಿದೆ.

ಒಗ್ಗಟ್ಟು ಇಲ್ಲವೆ?:

ಪಕ್ಷದ ನಾಯಕರಲ್ಲಿ ಒಗ್ಗಟ್ಟು ಇಲ್ಲವೇ? ಅಥವಾ ಜಿಲ್ಲಾಧ್ಯಕ್ಷರಾಗಿ ದೊಡ್ಡನಗೌಡ ಅವರು ಸಾರಥ್ಯ ವಹಿಸಿದ್ದಕ್ಕೆ ಅಪಸ್ವರ ಇದೆಯೇ? ಹೀಗೆ ಹಲವು ಪ್ರಶ್ನೆಗಳು ಬಿಜೆಪಿ ವಲಯದಲ್ಲಿ ಅಷ್ಟೇ ಅಲ್ಲ ಕಾಂಗ್ರೆಸ್‌ ವಲಯದಲ್ಲಿಯೂ ತೇಲಾಡುತ್ತಿವೆ. ಅಧಿಕಾರ ಇಲ್ಲದ ವೇಳೆಯಲ್ಲಿ ದೇಶದ ಯಾವುದೇ ಮೂಲೆಯಲ್ಲಿ ಬಿಜೆಪಿ ಗೆದ್ದರೆ ಕೊಪ್ಪಳದಲ್ಲಿ ಪಟಾಕಿಗಳ ಅಬ್ಬರ ಜೋರಾಗಿರುತ್ತಿತ್ತು. ಆದರೆ, ಈಗ ಕೊಪ್ಪಳದಲ್ಲಿ ಅದರ ಸುದ್ದಿಯೇ ಇಲ್ಲದಂತೆ ಆಗಿದೆ.

ರಾಜ್ಯಾಧ್ಯಕ್ಷರು ಕೆಂಡಾಮಂಡಲ:

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ ಕಟೀಲ್‌ ಅವರು ಕೊಪ್ಪಳ ಬೆಳವಣಿಗೆಯ ಕುರಿತು ಕೆಂಡಾಮಂಡಲರಾಗಿದ್ದಾರೆ ಎನ್ನಲಾಗಿದೆ. ಬಹುಮತ ಇದ್ದರೂ ಅಧಿಕಾರ ದಕ್ಕಿಸಿಕೊಳ್ಳದೆ ಇರುವುದು ಹಾಗೂ ಪಕ್ಷ ಗೆದ್ದರೂ ವಿಜಯೋತ್ಸವ ಮಾಡದೆ ಇರುವುದು ಕೆಟ್ಟ ಸಂದೇಶವನ್ನು ರವಾನೆ ಮಾಡಿದಂತಾಗುತ್ತಿದೆ ಎಂದು ಕಿಡಿಕಾರಿದ್ದಾರೆ ಎನ್ನಲಾಗಿದೆ.

ಕಟ್ಟಾ ಬಿಜೆಪಿಗರು ಎಲ್ಲಿ?:

ಯಾರೇ ಅಧಿಕಾರದಲ್ಲಿ ಇರಲಿ, ಕೆಲವು ಕಟ್ಟಾ ಬಿಜೆಪಿಗರು ವಿಜಯೋತ್ಸವವನ್ನು ತಪ್ಪದೇ ಮಾಡುತ್ತಿದ್ದರು. ದೇಶದ ಯಾವುದೇ ಮೂಲೆಯಲ್ಲಿ ಬಿಜೆಪಿ ಗೆಲ್ಲುತ್ತಿದ್ದಂತೆ ಕೊಪ್ಪಳದ ಅಶೋಕ ವೃತ್ತ ಹಾಗೂ ಗಡಿಯಾರ ಕಂಬದಲ್ಲಿ ವಿಜಯೋತ್ಸವ ನಡೆಯುತ್ತಿತ್ತು. ಈ ಎರಡು ಸ್ಥಳದಲ್ಲಿ ವಿಜಯೋತ್ಸವ ಆದರೆ ಸಾಕು, ಬಿಜೆಪಿ ಗೆದ್ದಿದೆ ಎಂದೇ ಅರ್ಥ ಎನ್ನುವಂತೀತ್ತು. ಆದರೆ, ಈಗ ಕಟ್ಟಾ ಬಿಜೆಪಿಗರೂ ಕಣ್ಮರೆಯಾಗಿರುವುದು ಯಾಕೆ ಎನ್ನುವ ಪ್ರಶ್ನೆಗೆ ಬಿಜೆಪಿ ನಾಯಕರೇ ಉತ್ತರಿಸಬೇಕು.
 

Follow Us:
Download App:
  • android
  • ios