ತಳ್ಳಾಟದಿಂದ ಗರ್ಭಪಾತ ಆಗಿಲ್ಲ| ಪುರಸಭೆ ಸದಸ್ಯೆ ಚಾಂದನಿ ಪತಿ ಹೇಳಿಕೆ| ಈ ಬಗ್ಗೆ ಯಾರಿಂದಲೂ ಒತ್ತಡವಿರುವುದಿಲ್ಲ, ಸ್ವಯಂ ಪ್ರೇರಿತವಾಗಿ ಲಿಖಿತ ಹೇಳಿಕೆ ನೀಡುತ್ತಿದ್ದೇವೆ ಎಂದ ನಾಗೇಶ್‌ ನಾಯಕ| 

ಬಾಗಲಕೋಟೆ(ಡಿ.03): ಜಿಲ್ಲೆಯ ಮಹಾಲಿಂಗಪುರ ಪುರಸಭೆ ಸದಸ್ಯೆ ಚಾಂದನಿ ನಾಯಕ ಗರ್ಭಪಾತ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು ಶಾಸಕ ಸಿದ್ದು ಸವದಿ ಅವರ ತಳ್ಳಾಟ, ನೂಕಾಟದಿಂದ ಗರ್ಭಪಾತವಾಗಿದೆ ಎಂದು ಆರೋಪಿಸುವುದಿಲ್ಲ ಎಂದು ಚಾಂದನಿ ಪತಿ ನಾಗೇಶ್‌ ನಾಯಕ ಅಚ್ಚರಿ ಮೂಡಿಸಿದ್ದಾರೆ. 

ಏಳು ವರ್ಷದಲ್ಲಿ ನನ್ನ ಪತ್ನಿಗೆ ಎರಡ್ಮೂರು ಬಾರಿ ಗರ್ಭಪಾತವಾಗಿದೆ. ಚುನಾವಣೆ ಘಟನೆಯಿಂದಲೇ ಆಗಿದೆ ಎನ್ನುವುದನ್ನು ನಾವು ಒಪ್ಪುವುದಿಲ್ಲ. ಇದು ನಮ್ಮ ಮನೆಯ ವಿಷಯ. ದೊಡ್ಡದನ್ನು ಮಾಡುವುದು ಬೇಡ. ಯಾವ ರಾಜಕೀಯ ಪಕ್ಷಗಳು ಇದನ್ನು ಬಳಸಿಕೊಳ್ಳುವುದು ಬೇಡ. ಇದನ್ನು ಇಷ್ಟಕ್ಕೆ ಮುಗಿಸಿಬಿಡಿ ಎಂದು ಪತ್ರಿಕಾ ಹೇಳಿಕೆ ನೀಡುವ ಮೂಲಕ ಘಟನೆಗೆ ಹೊಸ ತಿರುವು ನೀಡಿದ್ದಾರೆ.

ಬಿಜೆಪಿ ಶಾಸಕ ಸಿದ್ದು ಸವದಿ ಎಳೆದಾಡಿದ್ದ ಪುರಸಭೆ ಸದಸ್ಯೆಗೆ ಗರ್ಭಪಾತ

ಚುನಾವಣೆಯ ದಿನದ ಘಟನೆಯಿಂದ ಹೀಗಾಗಿರಬಹುದು ಎಂದು ತಪ್ಪಾಗಿ ಭಾವಿಸಿ ಹೇಳಿಕೆ ನೀಡಿದ್ದೆ. ಚುನಾವಣೆ ಘಟನೆ ನಡೆದು 16 ದಿನಗಳ ಬಳಿಕ ಆಸ್ಪತ್ರೆಗೆ ತೋರಿಸಿದಾಗ ಗರ್ಭಪಾತ ವಿಷಯ ಗೊತ್ತಾಗಿದೆ. ಹೀಗಾಗಿ ಚುನಾವಣೆಯ ಗಲಾಟೆ ಇದಕ್ಕೆ ಕಾರಣ ಎನ್ನುವುದನ್ನು ನಾನು ಮತ್ತು ನನ್ನ ಪತ್ನಿ ಚಾಂದನಿ ಒಪ್ಪುವುದಿಲ್ಲ ಎಂದು ನಾಗೇಶ್‌ ಹೇಳಿದ್ದಾರೆ.

ಈ ಬಗ್ಗೆ ಯಾರಿಂದಲೂ ಒತ್ತಡವಿರುವುದಿಲ್ಲ ಎಂದು ಹೇಳಿರುವ ನಾಗೇಶ್‌ ನಾಯಕ ಸ್ವಯಂ ಪ್ರೇರಿತವಾಗಿ ಲಿಖಿತ ಹೇಳಿಕೆ ನೀಡುತ್ತಿದ್ದೇವೆ ಎಂದು ತಿಳಿಸಿದ್ದಾರೆ. ಆದರೆ, ಇದೇ ವಿಷಯವನ್ನು ಮುಂದಿಟ್ಟುಕೊಂಡು ಡಿ.5ರಂದು ಮಹಾಲಿಂಗಪುರದಲ್ಲಿ ಡಿ.ಕೆ.ಶಿವಕುಮಾರ್‌, ಸಿದ್ದರಾಮಯ್ಯ ನೇತೃತ್ವದಲ್ಲಿ ಬೃಹತ್‌ ಪ್ರತಿಭಟನೆಗೆ ಮುಂದಾಗಿರುವ ಕಾಂಗ್ರೆಸ್‌ ಪಕ್ಷದ ನಿಲುವು ಇನ್ನಷ್ಟೇ ತಿಳಿಯಬೇಕಿದೆ.