ಹುಬ್ಬಳ್ಳಿ(ಫೆ.07): ಮೂರುಸಾವಿರ ಮಠದ ಆಸ್ತಿ ಮಾರಾಟ, ಪರಭಾರೆ ವಿಚಾರವಾಗಿ ವಿವಾದ ನಡೆಯುತ್ತಿರುವುದು ಬಹುಸಂಖ್ಯಾತ ಲಿಂಗಾಯತರ ಮನಸಿಗೆ ಘಾಸಿಯಾಗಿದೆ. ಕೂಡಲೇ ಉನ್ನತ ಮಟ್ಟದ ಸಮಿತಿ ಹಾಗೂ ಶ್ರೀ ಮಠದ ಪೀಠಾಧಿಪತಿಗಳು ಮೌನ ಮುರಿದು ಭಕ್ತರ ಮುಂದೆ ನೈಜತೆ ಬಿಚ್ಚಿಡಬೇಕೆಂದು ವಿಧಾನ ಪರಿಷತ್‌ ಮಾಜಿ ಸದಸ್ಯ, ಲಿಂಗಾಯತ ಮುಖಂಡ ನಾಗರಾಜ ಛಬ್ಬಿ ಆಗ್ರಹಿಸಿದ್ದಾರೆ. ಮಠದ ವಿವಾದ ಬಗೆಹರಿಸಲು ಶೀಘ್ರವೇ ಲಿಂಗಾಯತ ಮುಖಂಡರ ಸಭೆ ಕರೆಯುವುದಾಗಿ ತಿಳಿಸಿದ್ದಾರೆ.

ಈ ಸಂಬಂಧ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಮೂರುಸಾವಿರ ಮಠಕ್ಕೆ ತನ್ನದೇ ಆದ ಇತಿಹಾಸ, ಘನತೆ, ಗೌರವವಿದೆ. ಹೀಗಾಗಿ ಮಠದ ಆಸ್ತಿ ವಿಚಾರ ಹಾದಿ ಬೀದಿಯಲ್ಲಿ ಚರ್ಚೆಯಾಗುತ್ತಿರುವುದು ಸರಿಯಲ್ಲ. ಆರೋಪ- ಪ್ರತ್ಯಾರೋಪದಿಂದ ಮಠದ ಘನತೆಗೆ ಚ್ಯುತಿ ಬರುತ್ತದೆ. ಇಂಥ ಅನಗತ್ಯ ಬೆಳವಣಿಗೆಗೆ ಪೂರ್ಣ ವಿರಾಮ ಹಾಕುವ ಅಗತ್ಯತೆವಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಶ್ರೀ ಮಠದ ಕೆಲವೊಂದಿಷ್ಟುಆಸ್ತಿ ಮಾರಾಟವಾಗಿರುವ ಬಗ್ಗೆ ಚರ್ಚೆ ನಡೆಯುತ್ತಿರುವುದು? ಮಾರಾಟ ಮಾಡಿರುವ ದಾಖಲೆಗಳು ಹೊರ ಬರುತ್ತಿವೆ. ನಿಜವಾಗಿಯೂ ಆಸ್ತಿ ಮಾರಾಟ ಮಾಡಲಾಗಿದೆಯಾ? ಮಾರಾಟ ಮಾಡಿದ್ದೇ ಆದಲ್ಲಿ ಅಂಥ ಅವಶ್ಯಕತೆ ಏನಿತ್ತು? ಎಂಬ ಪ್ರಶ್ನೆಗಳೆಲ್ಲ ಎದ್ದಿವೆ. ಈ ಎಲ್ಲ ಸಂಗತಿಗಳ ಬಗ್ಗೆ ಸ್ಪಷ್ಟಉತ್ತರ ಭಕ್ತರಿಗೆ ನೀಡಬೇಕಾದ ಹೊಣೆ ಹಾಲಿ, ಪೀಠಾಧಿಕಾರಿಗಳಿಗೆ ಹಾಗೂ ಉನ್ನತ ಸಮಿತಿಗೆ ಇರುತ್ತದೆ ಎಂದಿದ್ದಾರೆ.

ಮೂರುಸಾವಿರ ಮಠದ ಆಸ್ತಿ ಉಳಿಸಿ ಬೆಳೆಸಬೇಕಿದೆ: ದಿಂಗಾಲೇಶ್ವರ ಶ್ರೀ

ಆಸ್ತಿ ಮಾರಾಟದ ಬಗ್ಗೆ ಚರ್ಚೆ ನಡೆಯುತ್ತಿದ್ದರೂ ಉನ್ನತ ಸಮಿತಿ ಸುಮ್ಮನಿರುವುದು ಏಕೆ? ಕೇವಲ ರಾಜಕಾರಣಿಗಳನ್ನು ಸೇರಿಸಿಕೊಂಡು ಉನ್ನತ ಸಮಿತಿ ರಚಿಸಿದ್ದೇ ತಪ್ಪು. ಗಣ್ಯ ಉದ್ಯಮಿಗಳು, ನಿವೃತ್ತ ಹಿರಿಯ ಅಧಿಕಾರಿಗಳು, ಪ್ರತಿಷ್ಠಿತ ಭಕ್ತರನ್ನು ಉನ್ನತ ಸಮಿತಿಯಲ್ಲಿ ಸೇರಿಸಿಕೊಳ್ಳಬೇಕಿತ್ತು. ಅದನ್ನು ಬಿಟ್ಟು ರಾಜಕಾರಣಿಗಳನ್ನು ಇಟ್ಟುಕೊಂಡು ಸಮಿತಿ ರಚಿಸಿದ್ದರಿಂದಲೇ ಮಠದ ಆಸ್ತಿಯಲ್ಲಿ ಅಪರಾತಪರಿಯಾಗಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಉನ್ನತ ಸಮಿತಿ ನಿಷ್ಠ ಭಕ್ತರನ್ನು ನೇಮಿಸಬೇಕಿದೆ. ಆಸ್ತಿ ಮಾರಾಟದ ಬಗ್ಗೆ ಉನ್ನತ ಸಮಿತಿ ಭಕ್ತರಿಗೆ ಉತ್ತರಿಸಲೇಬೇಕು. ಇದು ಭಕ್ತರ ಆಸ್ತಿಯೇ ವಿನಃ ಉನ್ನತ ಸಮಿತಿಯದ್ದಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಈ ಬಗ್ಗೆ ಉನ್ನತ ಸಮಿತಿ ಹಾಗೂ ಪೀಠಾಧಿಪತಿ ಕೂಡಲೇ ಭಕ್ತರ ಮುಂದೆ ಸತ್ಯಾಸತ್ಯತೆಯನ್ನು ತಿಳಿಸಬೇಕು. ಈ ಸಂಬಂಧ ಶೀಘ್ರವೇ ಲಿಂಗಾಯತ ಮುಖಂಡರ ಸಭೆ ಕರೆಯಲಾಗುವುದು. ಈ ಮೂಲಕ ಮಠದ ವಿವಾದಕ್ಕೆ ಇತಿಶ್ರೀ ಹಾಡಲು ನಿರ್ಧರಿಸಿದ್ದೇವೆ. ಇದಕ್ಕೆ ಮಠದ ಗುರುಸಿದ್ಧರಾಜಯೋಗೀಂದ್ರ ಶ್ರೀಗಳು ಸ್ಪಂದಿಸುತ್ತಾರೆ ಎಂಬ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ. ಕೂಡಲೇ ಉನ್ನತ ಮಟ್ಟದ ಸಮಿತಿ ಹಾಗೂ ಮಠಾಧೀಶರು ಇಬ್ಬರು ಭಕ್ತರಿಗೆ ಉತ್ತರ ನೀಡಬೇಕು ಎಂದು ತಿಳಿಸಿದ್ದಾರೆ.