Asianet Suvarna News Asianet Suvarna News

ನ.11ರಂದು ಕೆಂಪೇಗೌಡ ಪ್ರತಿಮೆ ಲೋಕಾರ್ಪಣೆ: ಆದಿಚುಂಚನಗಿರಿ ಶ್ರೀಗಳ ಜತೆ ಸಚಿವರ ಸಮಾಲೋಚನೆ

 ನ.11ರಂದು ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಕಂಚಿನ ಪ್ರತಿಮೆ ಉದ್ಘಾಟಿಸಲಿದ್ದು, ಈ ಕಾರ್ಯಕ್ರಮದ ರೂಪುರೇಷೆ ಕುರಿತು  ಉನ್ನತ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ಅವರು  ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಗಳನ್ನು ಭೇಟಿ‌ ಮಾಡಿ ಸಮಾಲೋಚನೆ ನಡೆಸಿದರು.

Nadaprabhu Kempegowda statue inauguration on November 11th gow
Author
First Published Oct 17, 2022, 8:12 PM IST | Last Updated Oct 17, 2022, 8:12 PM IST

ಬೆಂಗಳೂರು (ಅ.17): ನ.11ರಂದು ಪ್ರಧಾನಿ ನರೇಂದ್ರ ಮೋದಿ ಇಲ್ಲಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಆವರಣದಲ್ಲಿ ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಕಂಚಿನ ಪ್ರತಿಮೆ ಉದ್ಘಾಟಿಸಲಿದ್ದು, ಈ ಕಾರ್ಯಕ್ರಮದ ರೂಪುರೇಷೆ ಕುರಿತು ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರದ ಉಪಾಧ್ಯಕ್ಷರೂ ಆದ ಉನ್ನತ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ಅವರು ಸೋಮವಾರ ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಗಳನ್ನು ಭೇಟಿ‌ ಮಾಡಿ ಸಮಾಲೋಚನೆ ನಡೆಸಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಲಹೆಯಂತೆ ಶ್ರೀಗಳನ್ನು ಭೇಟಿ ಮಾಡಿದ ಸಚಿವರು, ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಸರಕಾರದ ಚಿಂತನೆ ಮತ್ತು ಆಶಯಗಳನ್ನು ಹಂಚಿಕೊಂಡರು. ಶ್ರೀಗಳ ಜತೆ ಸುಮಾರು ಎರಡು ತಾಸು ವಿಚಾರ ವಿನಿಮಯ ನಡೆಸಿದ ಸಚಿವರು, ಕಾರ್ಯಕ್ರಮದ ಯಶಸ್ಸಿಗೆ ಮಾರ್ಗದರ್ಶನ ಕೋರಿದರು. ಜತೆಗೆ, ಕಾರ್ಯಕ್ರಮಕ್ಕೆ ಜನರನ್ನು ಸಮಾಗಮಗೊಳಿಸುವ ಕುರಿತು ಚರ್ಚಿಸಿದರು. ಸಚಿವರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಶ್ರೀಗಳು, ಕಾರ್ಯಕ್ರಮದ ಯಶಸ್ಸಿಗೆ ಮಠ ಮತ್ತು ಸಮಾಜದ ವತಿಯಿಂದ ಸಕಲ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ಇದಕ್ಕೂ ಮೊದಲು ಸಚಿವರು 20ಕ್ಕೂ ಹೆಚ್ಚು ಪ್ರಮುಖ ಒಕ್ಕಲಿಗ ಸಂಘಟನೆಗಳ ಪ್ರಮುಖರ ಜೊತೆಯೂ ಕಾರ್ಯಕ್ರಮ ಕುರಿತು ಸಭೆ ನಡೆಸಿದರು.

21ರಂದು ರಥಗಳಿಗೆ ಚಾಲನೆ: ನ.11ರ ಕಾರ್ಯಕ್ರಮದ ಅಂಗವಾಗಿ ನಾಡಿನೆಲ್ಲೆಡೆಯಿಂದ ಪವಿತ್ರ ಮೃತ್ತಿಕೆ ಸಂಗ್ರಹಣಾ ಅಭಿಯಾನ ನಡೆಯಲಿದೆ. ಇದಕ್ಕೆ ಸಿದ್ಧವಾಗಿರುವ ವಿಶೇಷ ರಥಗಳಿಗೆ ಅ.21ರಂದು ವಿಧಾನಸೌಧದ ಮುಂಭಾಗದಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಲಿದ್ದಾರೆ. ಈ‌ ಕಾರ್ಯಕ್ರಮದಲ್ಲಿ ಹೆಚ್ವಿನ ಸಂಖ್ಯೆಯಲ್ಲಿ ಜನ ಸೇರಬೇಕು ಎಂದು ಅಶ್ವತ್ಥನಾರಾಯಣ ಹೇಳಿದರು. ಇದರಲ್ಲಿ ಪಕ್ಷಾತೀತವಾಗಿ ಎಲ್ಲರೂ ಪಾಲ್ಗೊಂಡು, ಸಾಮೂಹಿಕ ಸಂಭ್ರಮದಂತೆ ಆಚರಿಸಬೇಕು ಎಂದರು.

Kempegowda Theme Park : ಎಲ್ಲ ಜಿಲ್ಲೆಗಳಿಂದ ಮಣ್ಣು ಪವಿತ್ರ ಮಣ್ಣು ಸಂಗ್ರಹಿಸಲು ತೀರ್ಮಾನ

ಅಭಿಯಾನ ಯಶಸ್ಸಿಗೆ ಸಿಎಂ ಸೂಚನೆ: ಇದಕ್ಕೂ ಮೊದಲು ವಿಧಾನಸೌಧದಲ್ಲಿ ಎಲ್ಲಾ ಜಿಲ್ಲಾಧಿಕಾರಿಗಳ ಜತೆ ಸಭೆ ನಡೆಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ನಾಡಪ್ರಭು ಕೆಂಪೇಗೌಡರ ಪ್ರತಿಮೆಯ ಲೋಕಾರ್ಪಣೆ ಅಂಗವಾಗಿ ರಾಜ್ಯಾದ್ಯಂತ ನಡೆಯಲಿರುವ ಪವಿತ್ರ ಮೃತ್ತಿಕಾ ಸಂಗ್ರಹ ಅಭಿಯಾನದ ಯಶಸ್ಸಿಗೆ ಎಲ್ಲರೂ ಸೂಕ್ತ ವ್ಯವಸ್ಥೆ ಮಾಡಬೇಕೆಂದು ಸೂಚಿಸಿದರು.

Bengaluru News: ವಿಧಾನಸೌಧದ ಜತೆಗೆ ಲಾಲ್‌ಬಾಗ್‌ನಲ್ಲೂ ಕೆಂಪೇಗೌಡರ ಪ್ರತಿಮೆ ಸ್ಥಾಪನೆ

ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ನಿರ್ಮಿಸುತ್ತಿರುವ ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಬೃಹತ್‌ ಪ್ರತಿಮೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ನಗರದ ಆದಿಚುಂಚನಗಿರಿ ಶಾಖಾ ಮಠದ ಆವರಣದಲ್ಲಿ ಪೂರ್ವಭಾವಿ ಸಭೆ ಈಗಾಗಲೇ ಜರುಗಿದೆ.

ಶಾಸಕ ಎಲ್‌. ನಾಗೇಂದ್ರ ಮಾತನಾಡಿ, ಪ್ರಧಾನಿ ನರೇಂದ್ರಮೋದಿ ಅವರು ಆಗಮಿಸುತ್ತಿರುವ ಈ ಕಾರ್ಯಕ್ರಮದಲ್ಲಿ ಜಾತ್ಯಾತೀತ ಹಾಗೂ ಪಕ್ಷಾತೀತವಾಗಿ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಬೇಕು. ನಮ್ಮ ಸರ್ಕಾರದ ಅವಧಿಯಲ್ಲಿ ಪ್ರತಿಮೆ ನಿರ್ಮಿಸಿದ್ದು ಹೆಗ್ಗಳಿಕೆಯ ಸಂಗತಿ. ಈ ಕಾರ್ಯ ಮುನ್ನಡೆಯಲು ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯ ಶಕ್ತಿ ಕಾರಣ ಎಂದರು.

ಒಕ್ಕಲಿಗರು ಹಿಂದಿನಿಂದಲು ಇತಿಹಾಸವನ್ನ ಸೃಷ್ಟಿಸಿಕೊಂಡು ಬಂದಿದ್ದೇವೆ. ಹಾಗೆಯೇ ನ. 10 ರಂದು 108 ಅಡಿ ಎತ್ತರದ ನಾಡಪ್ರಭು ಕೆಂಪೇಗೌಡರ ಪ್ರತಿಮೆ ಅನಾವರಣಗೊಳ್ಳಲಿದೆ. ಮತ್ತೆ ನಾವೆಲ್ಲಾ ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ಮತ್ತೆ ಇತಿಹಾಸ ನಿರ್ಮಿಸೋಣ ಎಂದರು.

ಮಾಜಿ ಶಾಸಕ ವಾಸು ಮಾತನಾಡಿ, ಈ ಕಾರ್ಯಕ್ರಮದ ಗೆಲುವು ನಮ್ಮೆಲ್ಲರ ಗೆಲುವು ಆಗಬೇಕು. ಇದೊಂದು ಪಕ್ಷಾತೀತ ಕಾರ್ಯಕ್ರಮ. ಇದರಲ್ಲಿ ನಾವೆಲ್ಲರೂ ಭಾಗವಹಿಸಿ ಕಾರ್ಯಕ್ರಮದ ಯಶಸ್ವಿಗೆ ಸಾಕ್ಷಿಯಾಗೋಣ ಎಂದು ಹೇಳಿದರು.

ಸಾನ್ನಿಧ್ಯವಹಿಸಿದ್ದ ಶ್ರೀ ಸೋಮೇಶ್ವರನಾಥ ಸ್ವಾಮೀಜಿ ಮಾತನಾಡಿ, ಅ. 22 ರಿಂದ 10 ದಿನಗಳ ಕಾಲ ಜಿಲ್ಲೆಯಲ್ಲಿ ರಥಯಾತ್ರೆ ಇದ್ದು, ಕೆಂಪೇಗೌಡರ ಕಾರ್ಯಕ್ಷಮತ ಸಾರುವ ಹಾಗೂ ಪ್ರತಿ ಜಿಲ್ಲೆಗಳಿಂದ ಥೀಮ್‌ ಪಾರ್ಕ್ಗೆ ಮಣ್ಣು ಮತ್ತು ನೀರನ್ನು ಸಂಗ್ರಹಿಸುವ ಯೋಜನೆ ಇದಾಗಿದೆ. ಈ ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಬೇಕಿದೆ ಎಂದರು.

ಕಾಂಗ್ರೆಸ್‌ ಮುಖಂಡ ಕೆ. ಹರೀಶ್‌ ಗೌಡ, ಬೀಡನಹಳ್ಳಿ ಸತೀಶ್‌ಗೌಡ, ಮೈಸೂರು ಚಾಮರಾಜನಗರ ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಮರಿಸ್ವಾಮಿ, ಉಪಾಧ್ಯಕ್ಷ ರವಿ ರಾಜಕೀಯ, ನಗರ ಪಾಲಿಕೆ ಸದಸ್ಯರಾದ ಪ್ರೇಮಾ ಶಂಕರೇಗೌಡ, ಪುಷ್ಪಲತಾ ಜಗನ್ನಾಥ್‌, ಅಶ್ವಿನಿ ಅನಂತು, ಶ್ರೀನಿವಾಸ್‌, ಶಿವಣ್ಣ, ಕವಿಶ್‌ಗೌಡ ಮೊದಲಾದವರು ಇದ್ದರು.

Latest Videos
Follow Us:
Download App:
  • android
  • ios