Asianet Suvarna News Asianet Suvarna News

ಜೂ.27ಕ್ಕೆ ನಾಡಪ್ರಭು ಕೆಂಪೇಗೌಡರ ಜಯಂತೋತ್ಸವ: ಡಿ.ಕೆ.ಶಿವಕುಮಾರ್‌

ವಿಧಾನಸೌಧದ ಬದಲು ಈ ಬಾರಿ ನಗರದ ಅರಮನೆ ಮೈದಾನ ಅಥವಾ ಕಂಠೀರವ ಹೊರಾಂಗಣ ಕ್ರೀಡಾಂಗಣದಲ್ಲಿ ಜೂನ್‌ 27ರಂದು ನಡೆಸಲು ತೀರ್ಮಾನಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.

Nadaprabhu Kempegowda Jayantotsava on June 27 Says DK Shivakumar gvd
Author
First Published Jun 19, 2024, 12:36 PM IST

ಬೆಂಗಳೂರು (ಜೂ.19): ನಾಡಪ್ರಭು ಕೆಂಪೇಗೌಡರ 515ನೇ ಜಯಂತೋತ್ಸವದ ರಾಜ್ಯಮಟ್ಟದ ಕಾರ್ಯಕ್ರಮವನ್ನು ವಿಧಾನಸೌಧದ ಬದಲು ಈ ಬಾರಿ ನಗರದ ಅರಮನೆ ಮೈದಾನ ಅಥವಾ ಕಂಠೀರವ ಹೊರಾಂಗಣ ಕ್ರೀಡಾಂಗಣದಲ್ಲಿ ಜೂನ್‌ 27ರಂದು ನಡೆಸಲು ತೀರ್ಮಾನಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.

ಅಲ್ಲದೆ, ಬಾರಿ ರಾಜ್ಯದ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಕೆಂಪೇಗೌಡರ ಜಯಂತಿ ಆಚರಣೆಯ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ನೀಡುತ್ತಿದ್ದ ₹20 ಸಾವಿರ ಜೊತೆಗೆ ಇನ್ನೂ ₹1 ಲಕ್ಷ ಹೆಚ್ಚುವರಿ ಅನುದಾನ ನೀಡಲು ಹಾಗೂ ರಾಜ್ಯದ ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲೂ ಶಾಲಾ ಮಕ್ಕಳಿಗೆ ಕೆಂಪೇಗೌಡರ ಕುರಿತಾದ ಚರ್ಚಾ ಸ್ಪರ್ಧೆ ಆಯೋಜಿಸಿ ಬಹುಮಾನ ನೀಡಲು ಶಿಕ್ಷಣ ಇಲಾಖೆಯ ಎಲ್ಲಾ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ತಲಾ ₹1 ಲಕ್ಷ ಅನುದಾನ ಬಿಡುಗಡೆ ಮಾಡಲಾಗುವುದು. ಅದೇ ರೀತಿ ಜಿಲ್ಲಾ ಕೇಂದ್ರಗಳಲ್ಲಿ ಜಯಂತಿ ಆಚರಣೆಗೆ ಇರುವ ₹50 ಸಾವಿರ ಅನುದಾನವನ್ನೂ ಹೆಚ್ಚಳ ಮಾಡಲು ಚಿಂತಿಸಲಾಗಿದೆ ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ಇಂಧನ ಬೆಲೆ ಹೆಚ್ಚಳ ಎಫೆಕ್ಟ್‌: ಗೋವಾ ಗಡಿಯತ್ತ ಕಾರವಾರ ವಾಹನಗಳು

ಕೆಂಪೇಗೌಡರ ಜಯಂತಿ ಆಚರಣೆ ಸಂಬಂಧ ವಿಧಾನಸೌಧದಲ್ಲಿ ಮಂಗಳವಾರ ಹಲವು ಸಂಘಟನೆಗಳೊಂದಿಗೆ ಪೂರ್ವಭಾವಿ ಸಭೆ ನಡೆಸಿ ಸಲಹೆ, ಅಭಿಪ್ರಾಯಗಳನ್ನು ಪಡೆದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನಸೌಧದಲ್ಲಿ ಸ್ಥಳಾವಕಾಶದ ಸಮಸ್ಯೆಯಾಗುವ ಅಭಿಪ್ರಾಯ ಕೇಳಿಬಂದಿರುವುದರಿಂದ ಈ ಬಾರಿ ಅರಮನೆ ಮೈದಾನ ಇಲ್ಲವೇ ಕಂಠೀರವ ಹೊರಾಂಗಣ ಕ್ರೀಡಾಂಗಣದಲ್ಲಿ ಕೆಂಪೇಗೌಡರ ಜಯಂತ್ಯುತ್ಸವವನ್ನು ಜೂ.27ರಂದು ನಡೆಸಲು ತೀರ್ಮಾನಿಸಲಾಗಿದೆ. ಹುಲಿಯೂರುದುರ್ಗ, ಮಾಗಡಿ, ಆವತಿ ಸೇರಿದಂತೆ ಬೆಂಗಳೂರಿನ ಎಲ್ಲಾ ದಿಕ್ಕುಗಳಿಂದ ಪ್ರತಿವರ್ಷದಂತೆ ಗೋಪುರ ಮತ್ತು ಜ್ಯೋತಿಗಳ ಮೆರವಣಿಗೆ ಬರುತ್ತದೆ ಎಂದರು.

ಕೆಂಪೇಗೌಡರು ನಿರ್ಮಾಣ ಮಾಡಿದ್ದ ಗೋಪುರಗಳನ್ನು ದಾಟಿ ಬೆಂಗಳೂರು ಮೂರು, ನಾಲ್ಕು ಪಟ್ಟು ಹೆಚ್ಚು ಬೆಳೆದಿದೆ. ಬೆಂಗಳೂರು ಇಷ್ಟು ಅಗಾಧವಾಗಿ ಬೆಳೆಯಬಹುದು ಎನ್ನುವ ಕಲ್ಪನೆ ಸ್ವತಃ ಕೆಂಪೇಗೌಡರಿಗೆ ಇರಲಿಲ್ಲ. ಕೆಂಪೇಗೌಡರು, ಬಸವಣ್ಣ, ಅಂಬೇಡ್ಕರ್‌ ಸೇರಿದಂತೆ ಇಂತಹ ಮಹಾನ್‌ ವ್ಯಕ್ತಿಗಳನ್ನು ಯಾವುದೇ ಜಾತಿಗೆ ಸೀಮಿತಗೊಳಿಸಬಾರದು. ಸಭೆಯಲ್ಲಿ ಸಂಘಟನೆಗಳಿಂದ 100ಕ್ಕೂ ಉತ್ತಮವಾದ ಸಲಹೆಗಳು ಬಂದಿವೆ. ಇದರಲ್ಲಿ ಸೂಕ್ತವಾದವುಗಳನ್ನು ಅಧಿಕಾರಿಗಳ ಬಳಿ ಚರ್ಚಿಸಲಾಗುವುದು. ಎಲ್ಲ ಸಮುದಾಯಗಳು, ಸಂಘಟನೆಗಳನ್ನೂ ಒಳಗೊಂಡು ಕೆಂಪೇಗೌಡರ ಜಯಂತಿ ಆಚರಿಸಲು ತಾಲೂಕುವಾರು ₹1 ಲಕ್ಷ ಹೆಚ್ಚುವರಿ ಅನುದಾನ ನೀಡಲಾಗುವುದು ಎಂದು ಹೇಳಿದರು.

ಶಂಕರ್ ನೇತೃತ್ವದಲ್ಲಿಪ್ರಶಸ್ತಿ ಆಯ್ಕೆ ಸಮಿತಿ: ಈ ಬಾರಿ ಕೆಂಪೇಗೌಡ ಪ್ರಶಸ್ತಿಗೆ ಎಷ್ಟು ಜನರನ್ನು ಆಯ್ಕೆ ಮಾಡಬೇಕು, ಹೇಗೆ ಆಯ್ಕೆ ಮಾಡಬೇಕೆಂಬ ಬಗ್ಗೆ ಬಿ.ಎಲ್‌.ಶಂಕರ್‌ ಅವರ ನೇತೃತ್ವದಲ್ಲಿ ಆಯ್ಕೆ ಸಮಿತಿ ರಚನೆ ಮಾಡಲಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬಿಡಿಎ, ಬಿಬಿಎಂಪಿಯಿಂದ ಕೆಂಪೇಗೌಡ ಪ್ರಶಸ್ತಿ ನೀಡಲು ಯೋಜಿಸಲಾಗಿದೆ. ಪ್ರಶಸ್ತಿಗೆ ನಾನು ಒಂದಷ್ಟು ಹೆಸರು ಸೂಚಿಸಿದ್ದೆ. ವಾರ್ಡ್ ಮಟ್ಟದಲ್ಲಿ ಅಥವಾ ಬೇರೆ ಸ್ವರೂಪದಲ್ಲಿ ಪ್ರಶಸ್ತಿ ನೀಡಬೇಕಾ ಎಂದು ಗೊಂದಲ ಇರುವ ಕಾರಣಕ್ಕೆ ಮುಂದುವರೆದಿಲ್ಲ. ಮುಂದಿನ ದಿನಗಳಲ್ಲಿ ಈ ಪ್ರಶಸ್ತಿ ಆಯ್ಕೆ ನಡೆಯಲಿದೆ ಎಂದು ಡಿ.ಕೆ.ಶಿವಕುಮಾರ್‌ ತಿಳಿಸಿದರು.

ಸಮಾಧಿ, ಕೋಟೆ ಅಭಿವೃದ್ಧಿಗೆ ಕ್ರಿಯಾ ಯೋಜನೆ: ಇಂದಿನ ಸಭೆಯಲ್ಲಿ ಪ್ರಮುಖವಾಗಿ ಮೂರು ತೀರ್ಮಾನಗಳನ್ನು ಕೈಗೊಳ್ಳಲಾಗಿದೆ. ದೇವನಹಳ್ಳಿಯಲ್ಲಿರುವ ಕೆಂಪೇಗೌಡರ ಜನ್ಮಸ್ಥಳ, ಮಾಗಡಿ ಬಳಿಯ ಸಮಾಧಿ ಸ್ಥಳಗಳ ಸಮರ್ಪಕ ಅಭಿವೃದ್ಧಿಗೆ ನಿರ್ಧರಿಸಲಾಗಿದೆ. ಜನ್ಮಸ್ಥಳದ ಅಭಿವೃದ್ಧಿಗೆ 10 ಎಕರೆ ಈಗಾಗಲೇ ಮಂಜೂರಾಗಿದೆ. ಸಮಾಧಿ ಸ್ಥಳ, ಕೋಟೆಯನ್ನು ಅಭಿವೃದ್ದಿಪಡಿಸುವ ಕ್ರಿಯಾಯೋಜನೆ ಸಿದ್ದ ಪಡಿಸಲಾಗಿದೆ. ಈ ಸ್ಥಳಗಳು ಪ್ರವಾಸಿ ಸ್ಥಳಗಳಾಗಿ ಪರಿವರ್ತನೆಯಾಗಬೇಕು. ಜೊತೆಗೆ ಸುಮ್ಮನಹಳ್ಳಿಯಲ್ಲಿ ಕೆಂಪೇಗೌಡ ಪ್ರಾಧಿಕಾರದ ಕಚೇರಿಗೆ ಮಂಜೂರು ಮಾಡಿರುವ 5 ಎಕರೆ ಜಾಗದಲ್ಲಿ ಈ ಜಯಂತಿಯಂದೇ ಗುದ್ದಲಿಪೂಜೆಗೆ ಯೋಚಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಿಳಿಸಿದರು.

ಬೆಕ್ಕಿಗೆ ಹಾಲು ಹಾಕಲು ಕೊಟ್ಟಿದ್ದ ಕೀ ಬಳಸಿ ಚಿನ್ನ ಕದ್ದವನ ಬಂಧನ

ಬೆಂಗಳೂರಿನ ಅಭಿವೃದ್ಧಿ ಜೊತೆಗೆ ಪ್ರವಾದ್ಯಮಕ್ಕೆ ಆದ್ಯತೆ ನೀಡಬೇಕಿದೆ. ಹಿಂದಿನ ಸರ್ಕಾರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ತರಾತುರಿಯಲ್ಲಿ ಕೆಂಪೇಗೌಡರ ಪ್ರತಿಮೆ ನಿರ್ಮಿಸಿ ಬಿಸಿಲಿನಲ್ಲಿ ನಿಲ್ಲಿಸಿದೆ. ಇದಕ್ಕೆ ನೆರಳು ಕಲ್ಪಿಸುವ ಹಾಗೂ ಸುತ್ತಮುತ್ತಲ ಪ್ರದೇಶವನ್ನು ಅಭಿವೃದ್ಧಿಪಡಿಸುವ ಉಸ್ತುವಾರಿಯನ್ನು ನಮ್ಮ ಸರ್ಕಾರ ಸಚಿವರಾದ ಮುನಿಯಪ್ಪ ಅವರು ಹಾಗೂ ಕೃಷ್ಣಭೈರೇಗೌಡ ಅವರಿಗೆ ನೀಡಿದೆ.
-ಡಿ.ಕೆ.ಶಿವಕುಮಾರ್‌, ಉಪಮುಖ್ಯಮಂತ್ರಿ.

Latest Videos
Follow Us:
Download App:
  • android
  • ios