ರಾಜ್ಯದಲ್ಲಿ ಸೀಡಿ ಪ್ರಕರಣ ದಿನದಿಂದ ದಿನಕ್ಕೆ ಹೊಸ ತಿರುವುಗಳನ್ನು ಪಡೆಯುತ್ತಲೇ ಇದೆ. ಇದೀಗ ಈ ಸಂಬಂಧ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ರಾಜೀನಾಮೆಗೆ ಒತ್ತಾಯಿಸಲಾಗಿದೆ.
ಮೈಸೂರು (ಮಾ.30): ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಷಡ್ಯಂತ್ರ ನಡೆಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ನಾಯಕರ ಯುವಸೇನೆಯವರು ಮೈಸೂರು ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟಿಸಿದರು.
ರಮೇಶ್ ಜಾರಕಿಹೊಳಿ ಅವರಿಗೆ ಸಂಬಂಧಿಸಿದ ಸಿಡಿಯಲ್ಲಿ ಇರುವ ಯುವತಿಗೆ ನ್ಯಾಯ ಕೊಡಿಸುವ ನೆಪ ಇಟ್ಟುಕೊಂಡು ಯುವತಿಯನ್ನು ಬಚ್ಚಿಟ್ಟು ದಿನಕ್ಕೊಂದು ವಿಡಿಯೋವನ್ನು ಯುವತಿಯ ಕಡೆಯಿಂದ ಹೇಳಿಸಿ, ರಾಜ್ಯದ ಜನರಲ್ಲಿ ರಮೇಶ್ ಜಾರಕಿಹೊಳಿ ಅವರ ಬಗ್ಗೆ ಕೆಟ್ಟದ್ದಾಗಿ ಬಿಂಬಿಸಿ, ಅವರ ರಾಜಕೀಯವನ್ನು ವ್ಯವಸ್ಥಿತವಾಗಿ ಮುಗಿಸುವ ನಿಟ್ಟಿನಲ್ಲಿ ಉದ್ದೇಶಪೂರ್ವಕವಾಗಿ ಷಡ್ಯಂತ್ರ ಮಾಡಿರುವ ಡಿ.ಕೆ. ಶಿವಕುಮಾರ್ ಅವರು ಐತಿಹಾಸಿಕ ಹಿನ್ನೆಲೆಯುಳ್ಳ ಕಾಂಗ್ರೆಸ್ ಪಕ್ಷವನ್ನು ಮುನ್ನಡೆಸುವ ನೈತಿಕತೆಯನ್ನು ಕಳೆದುಕೊಂಡಿರುವುದರಿಂದ ತಕ್ಷಣವೇ ಅವರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಬೇಕು ಎಂದು ಅವರು ಒತ್ತಾಯಿಸಿದರು.
ಯುವತಿಯ ತಂದೆ, ತಾಯಿ ಮತ್ತು ಸಹೋದರ ನೇರವಾಗಿ ಎಸ್‌ಐಟಿಯವರ ಮುಂದೆ ನಮ್ಮ ಮಗಳನ್ನು ಡಿ.ಕೆ. ಶಿವಕುಮಾರ್ ಅವರು ಬಚ್ಚಿಟ್ಟುಕೊಂಡು ರಾಜಕಾರಣ ಮಾಡುತ್ತಿದ್ದಾರೆ. ಈ ಸಿಡಿ ಪ್ರಕರಣಕ್ಕೆ ಮೂಲ ಸೂತ್ರಧಾರ ಡಿಕೆಶಿ ಕಾರಣ ಎಂದು ಹೇಳಿರುವುದರಿಂದ ಅವರ ವಿರುದ್ಧ ಎಸ್ಸಿ, ಎಸ್ಟಿದೌರ್ಜನ್ಯ ಕಾಯ್ದೆಯಡಿ ದೂರು ದಾಖಲಿಸಿಕೊಂಡು ಅವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಬೇಕು ಎಂದು ಅವರು ಒತ್ತಾಯಿಸಿದರು.
ಸೀಡಿ ಲೇಡಿಗೂ ನನಗೂ ಸಂಬಂಧವಿಲ್ಲ, ದಾಖಲೆಗಳಿದ್ರೆ ಬಿಡುಗಡೆ ಮಾಡಲಿ : ಡಿಕೆಶಿ
ಪರಿಶಿಷ್ಟಪಂಗಡದ ಮಹಿಳೆಯನ್ನು ಮುಂದಿಟ್ಟುಕೊಂಡು ಡಿಕೆಶಿ ಮತ್ತು ಕಾಂಗ್ರೆಸ್‌ನವರು ರಾಜಕಾರಣ ಮಾಡೋದು ಇವರ ಘನತೆಗೆ ಶೋಭೆ ತರುವಂತದ್ದಲ್ಲ. ಜಾರಕಿಹೊಳಿ ಅವರ ಕುಟುಂಬವನ್ನು ಹಾಗೂ ವಾಲ್ಮೀಕಿ ಸಮಾಜವನ್ನು ರಾಜಕೀಯವಾಗಿ ತುಳಿಯುವಂತಹ ಪ್ರಯತ್ನವನ್ನು ಕಾಂಗ್ರೆಸ್ ಮಾಡಲು ಹೊರಟಿದೆ. ಇಂತಹ ದುರುದ್ದೇಶವನ್ನು ಬಿಟ್ಟು ನಾಯಕ ಸಮಾಜಕ್ಕೆ ಸಿಗಬೇಕಾದ ಹಕ್ಕುಗಳನ್ನು ಕೊಡಿಸುವುದಕ್ಕೆ ಆಡಳಿತ ಪಕ್ಷದ ಮೇಲೆ ಒತ್ತಡ ತಂದು, ಕಾಂಗ್ರೆಸ್ ಪಕ್ಷದ ವಿರೋಧಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಮುಂದಾಗಲಿ ಎಂದು ಅವರು ಆಗ್ರಹಿಸಿದರು.
ರಾಜಕೀಯ ಲಾಭಕ್ಕಾಗಿ ಹೆಣ್ಣನ್ನು ದುರ್ಬಳಕೆ ಮಾಡಿಕೊಂಡು ಈ ರೀತಿ ನಾಯಕ ಸಮಾಜದ ನಾಯಕನ ಕುಟುಂಬಕ್ಕೆ ರಾಜ್ಯದಲ್ಲಿ ಕೆಟ್ಟಹೆಸರು ತರಲು ಹೊರಟಿರುವ ಡಿಕೆಶಿ ಮತ್ತು ಕಾಂಗ್ರೆಸ್ ಪಕ್ಷದಿಂದ ಕೇವಲ ಜಾರಕಿಹೊಳಿಯವರ ಕುಟುಂಬದ ವಿರುದ್ಧ ಷಡ್ಯಂತ್ರವಷ್ಟೇ ಅಲ್ಲ. ಅಖಂಡ ವಾಲ್ಮೀಕಿ ಸಮುದಾಯದ ನಾಯಕರನ್ನು ಮತ್ತು ಸಮಾಜವನ್ನು ರಾಜಕೀಯವಾಗಿ ತುಳಿಯುವ ಪ್ರಯತ್ನ ಇದಾಗಿದೆ ಎಂದು ಆರೋಪಿಸಿದ ಅವರು, ಕಾಂಗ್ರೆಸ್ ಪಕ್ಷ ನಮ್ಮ ಸಮಾಜದ ವಿರುದ್ಧ ಷಡ್ಯಂತ್ರ ಮಾಡುವುದನ್ನು ಬಿಡಬೇಕು. ಡಿಕೆಶಿ ಅವರು ತಕ್ಷಣ ರಾಜಿನಾಮೆ ನೀಡಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ರಾಜಕೀಯವಾಗಿ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.
