ಬೆಂಗಳೂರು(ಏ.07): ಮೈಸೂರು ರಸ್ತೆ-ಕೆಂಗೇರಿ ನಡುವೆ ಮೆಟ್ರೋ ರೈಲುಗಳ ಪರೀಕ್ಷಾರ್ಥ ಓಡಾಟವನ್ನು ನಮ್ಮ ಮೆಟ್ರೋ ನಿಗಮ ಮಂಗಳವಾರ ಪ್ರಾರಂಭಿಸಿದೆ. ಈ ಮಾರ್ಗ ಜೂನ್‌ನಲ್ಲಿ ವಾಣಿಜ್ಯ ಬಳಕೆಗೆ ಲಭ್ಯವಾಗುವ ನಿರೀಕ್ಷೆಯಿದೆ.

ನೇರಳೆ ಮಾರ್ಗದ ಬೈಯ್ಯಪ್ಪನಹಳ್ಳಿ-ಮೈಸೂರು ರಸ್ತೆಯ ಈ ವಿಸ್ತರಿತ ಕಾಮಗಾರಿಯಿಂದ ಸುಮಾರು 75 ಸಾವಿರ ಪ್ರಯಾಣಿಕರಿಗೆ ಅನುಕೂಲವಾಗುವ ನಿರೀಕ್ಷೆಯಿದೆ. ಸುಮಾರು 7.5 ಕಿಮೀ ಉದ್ದದ ಈ ಮೆಟ್ರೋ ಮಾರ್ಗದಲ್ಲಿ 7 ನಿಲ್ದಾಣಗಳಿರಲಿವೆ. ನಾಯಂಡನಹಳ್ಳಿ, ರಾಜರಾಜೇಶ್ವರಿ ನಗರ, ಜ್ಞಾನಭಾರತಿ, ಪಟ್ಟಣಗೆರೆ, ಮೈಲಸಂದ್ರ, ಕೆಂಗೇರಿ ಬಸ್‌ ಟರ್ಮಿನಲ್‌ ಮತ್ತು ಚಲ್ಲಘಟ್ಟ ನಿಲ್ದಾಣಗಳಿವೆ.

ಸಾರಿಗೆ ನೌಕರರ ಮುಷ್ಕರ: 'ಪ್ರತಿ 5 ನಿಮಿಷಕ್ಕೆ ಒಂದು ಮೆಟ್ರೋ ಓಡುತ್ತೆ'

ಕಳೆದ ತಿಂಗಳಷ್ಟೆ ಈ ಮೆಟ್ರೋ ಮಾರ್ಗದಲ್ಲಿ ಸಿಗ್ನಲಿಂಗ್‌ ಕಾಮಗಾರಿ ಮುಕ್ತಾಯಗೊಂಡಿತ್ತು. ಮಂಗಳವಾರ ಪರೀಕ್ಷಾ ಸಂಚಾರ ಆರಂಭವಾಗಿದೆ. ಪರೀಕ್ಷಾ ಸಂಚಾರದ ಸಂದರ್ಭದಲ್ಲಿ ಆರಂಭದಲ್ಲಿ ರೈಲು ಕನಿಷ್ಠ ವೇಗದಲ್ಲಿ ಓಡಾಟ ನಡೆಸಲಿದ್ದು, ಬಳಿಕ ವೇಗದ ಮಿತಿಯನ್ನು ಹೆಚ್ಚಿಸಲಾಗುತ್ತದೆ. ಈ ಪರೀಕ್ಷೆಯಲ್ಲಿ ಸಮಾಧಾನಕರ ಫಲಿತಾಂಶ ಬಂದ ಬಳಿಕ ಪ್ರಾಯೋಗಿಕ ರೈಲು ಸಂಚಾರ ಆರಂಭವಾಗಲಿದೆ ಎಂದು ನಮ್ಮ ಮೆಟ್ರೋದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಯಶ್ವಂತ್‌ ಚೌಹಾಣ್‌ ಹೇಳಿದ್ದಾರೆ. ಪ್ರಾಯೋಗಿಕ ಪರೀಕ್ಷೆ ಯಶಸ್ವಿಯಾದ ಬಳಿಕ ವರದಿಯನ್ನು ಸುರಕ್ಷತಾ ಪ್ರಮಾಣಪತ್ರ ಮತ್ತು ತಾಂತ್ರಿಕ ಅನುಮತಿಗಾಗಿ ಸಲ್ಲಿಸಲಾಗುತ್ತದೆ.