ಮೈಸೂರು (ಏ.18): ಪುಸ್ತಕ ಪ್ರೇಮಿ ಸೈಯದ್‌ ಇಸಾಕ್‌ ಅವರ ಗ್ರಂಥಾಲಯಕ್ಕೆ ಬೆಂಕಿ ಬೀಳಲು ಕಾರಣವಾಗಿದ್ದ ಆರೋಪಿಯೊಬ್ಬನನ್ನು ಮೈಸೂರಿನ ಉದಯಗಿರಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕುಡಿದ ಮತ್ತಿನಲ್ಲಿದ್ದ ಆರೋಪಿ ಬೀಡಿ ಸೇದಿ ಎಸೆದ ಬೆಂಕಿಕಡ್ಡಿಯಿಂದ ಈ ದುರಂತ ಸಂಭವಿಸಿದ್ದು, ಇದು ಉದ್ದೇಶಪೂರ್ವಕ ಕೃತ್ಯವೇ ಅಥವಾ ಅಲ್ಲವೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಶಾಂತಿನಗರದ ನಿವಾಸಿ ಸೈಯದ್‌ ನಾಸೀರ್‌(35) ಬಂಧಿತ ಆರೋಪಿ.

ಮದ್ಯ ವ್ಯಸನಿ ನಾಸೀರ್‌ ಬೀಡಿ ಸೇದಿ ಎಸೆದ ಬೆಂಕಿಯ ಕಡ್ಡಿಯ ಕಿಡಿ ತಡರಾತ್ರಿ ಕಾಡ್ಗಿಚ್ಚಿನಂತೆ ಹರಡಿ ಸೋಫಾ ರಿಪೇರಿ ಅಂಗಡಿ ಹಾಗೂ ಪಕ್ಕದಲ್ಲಿದ್ದ ಗ್ರಂಥಾಲಯ ಸುಟ್ಟಿದೆ. ಪಕ್ಕದ ನಿವಾಸಿಯೊಬ್ಬರ ಮನೆಯಲ್ಲಿದ್ದ ಸಿಸಿಟಿವಿ ಕ್ಯಾಮೆರಾ ಪರಿಶೀಲಿಸಿದಾಗ ಇದೀಗ ಬೆಂಕಿ ಹಿಂದಿನ ರಹಸ್ಯ ಬಯಲಾಗಿದೆ. ಅದರಂತೆ ಆರೋಪಿಯನ್ನು ಬಂಧಿಸಲಾಗಿದೆ ಎಂದು ನಗರ ಪೊಲೀಸ್‌ ಆಯುಕ್ತ ಡಾ. ಚಂದ್ರಗುಪ್ತ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕಿಡಿಗೇಡಿಗಳ ಕೃತ್ಯದಿಂದ 11 ಸಾವಿರ ಪುಸ್ತಕಗಳು ಬೆಂಕಿಗಾಹುತಿ : ಪುನರ್ ನಿರ್ಮಾಣದ ಭರವಸೆ ..

ಇಸಾಕ್‌ ಅವರು ರಾಜೀವ್‌ನಗರದ ಸಾರ್ವಜನಿಕ ಸ್ಥಳದಲ್ಲಿ ಉಚಿತ ಗ್ರಂಥಾಲಯ ನಡೆಸುತ್ತಿದ್ದರು. ಏ.9ರಂದು ಈ ಗ್ರಂಥಾಲಯ ಬೆಂಕಿಗಾಹುತಿಯಾಗಿತ್ತು. ಏ.8ರ ರಾತ್ರಿ ಕುಡಿದ ಮತ್ತಿನಲ್ಲಿದ್ದ ನಾಸೀರ್‌ ಲೈಬ್ರೆರಿ ಹಿಂಭಾಗದಲ್ಲಿ ಸೋಫಾ ರಿಪೇರಿ ಅಂಗಡಿ ಬಳಿ ತೆರಳಿ ಬೀಡಿ ಸೇದಿದ್ದಾನೆ. ಈ ವೇಳೆ ಬೀಡಿ ಹೊತ್ತಿಸಲು ಗೀರಿದ್ದ ಬೆಂಕಿಕಡ್ಡಿಯನ್ನು ಸೋಫಾದ ಕಸದ ರಾಶಿಗೆ ಎಸೆದು ಮನೆಯತ್ತ ತೆರಳಿದ್ದ. ಅದರಿಂದ ಬೆಂಕಿ ಹೊತ್ತಿಕೊಂಡು ಈ ದುರ್ಘಟನೆ ಸಂಭವಿಸಿದೆ.

- ಆರೋಪಿ ಬೀಡಿ ಸೇದಿ ಎಸೆದಿದ್ದ ಕಡ್ಡಿಯಿಂದ ಬೆಂಕಿ