Asianet Suvarna News Asianet Suvarna News

ಮೈಸೂರು: 29ಕ್ಕೆ ಪುರಸಭೆ, 31ಕ್ಕೆ ಪಾಲಿಕೆ ಚುನಾವಣೆ

ಆ.17 ಕಡೆ ದಿನವಾಗಿದ್ದು, ಆ.18 ರಂದು ನಾಮಪತ್ರ ಪರಿಶೀಲಿಸಲಾಗುವುದು. ಉಮೇದು ವಾರಿಕೆಗಳನ್ನು ಹಿಂಪಡೆಯಲು ಆ.20 ಕಡೆಯ ದಿನ. ಆ.29ರ ಬೆಳಗ್ಗೆ 7 ರಿಂದ ಸಂಜೆ 5 ರವರೆಗೆ ಮತದಾನ ನಡೆಯಲಿದ್ದು, ಸೆ.೩ರಂದು ಮತ ಎಣಿಕೆ ಕಾರ್ಯವು ಆಯಾ ತಾಲೂಕು ಕೇಂದ್ರದಲ್ಲೇ ನಡೆಯಲಿದೆ

Mysuru Local body Elections on August 29th
Author
Bengaluru, First Published Aug 11, 2018, 4:40 PM IST

ಮೈಸೂರು[ಆ.11]:ರಾಜ್ಯ ಚುನಾವಣಾ ಆಯೋಗವು ಮೈಸೂರು ಜಿಲ್ಲೆಯ ಟಿ. ನರಸೀಪುರ, ಪಿರಿಯಾಪಟ್ಟಣ ಮತ್ತು ಎಚ್.ಡಿ. ಕೋಟೆ ಪುರಸಭೆ ಹಾಗೂ ಮೈಸೂರು ಮಹಾನಗರ ಪಾಲಿಕೆ ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಅದರಂತೆ ಪುರಸಭೆ ಚುನಾವಣೆಯು ಆ.29ರಂದು ಹಾಗೂ ನಗರ ಪಾಲಿಕೆ ಚುನಾವಣೆಯು ಆ.31ರಂದು ನಡೆಯಲಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಯೋಗೇಶ್ ತಿಳಿಸಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಟಿ. ನರಸೀಪುರ, ಪಿರಿಯಾಪಟ್ಟಣ ಮತ್ತು ಎಚ್.ಡಿ. ಕೋಟೆ ಪುರಸಭೆಗೆ ನಾಮಪತ್ರಗಳನ್ನು ಸಲ್ಲಿಸಲು ಆ.17 ಕಡೆ ದಿನವಾಗಿದ್ದು, ಆ.18 ರಂದು ನಾಮಪತ್ರ ಪರಿಶೀಲಿಸಲಾಗುವುದು. ಉಮೇದು ವಾರಿಕೆಗಳನ್ನು ಹಿಂಪಡೆಯಲು ಆ.20 ಕಡೆಯ ದಿನ. ಆ.29ರ ಬೆಳಗ್ಗೆ 7 ರಿಂದ ಸಂಜೆ 5 ರವರೆಗೆ ಮತದಾನ ನಡೆಯಲಿದ್ದು, ಸೆ.೩ರಂದು ಮತ ಎಣಿಕೆ ಕಾರ್ಯವು ಆಯಾ ತಾಲೂಕು ಕೇಂದ್ರದಲ್ಲೇ ನಡೆಯಲಿದೆ ಎಂದು ವಿವರಿಸಿದರು.

ಟಿ. ನರಸೀಪುರ ಪುರಸಭೆ, ಪಿರಿಯಾಪಟ್ಟಣ ಪುರಸಭೆ ಹಾಗೂ ಎಚ್.ಡಿ. ಕೋಟೆ ಪುರಸಭೆಯಲ್ಲಿ ತಲಾ 23 ವಾರ್ಡ್‌ಗಳಿವೆ. ಮೈಸೂರು ಮಹಾನಗರ ಪಾಲಿಕೆಗೆ ನಾಮಪತ್ರ ಸಲ್ಲಿಸಲು ಆ.20 ಕಡೆಯ ದಿನವಾಗಿದ್ದು, ಆ.21 ರಂದು ನಾಮಪತ್ರ ಪರಿಶೀಲಿಸಲಾಗುವುದು. ಉಮೇದುವಾರಿಕೆಯನ್ನು ಹಿಂಪಡೆಯಲು ಆ.23 ಕಡೆಯ ದಿನವಾಗಿದೆ. ಆ.31ರ ಬೆಳಗ್ಗೆ 7 ರಿಂದ ಸಂಜೆ 5 ರವರೆಗೆ ಮತದಾನ ನಡೆಯಲಿದ್ದು, ಸೆ.3ರಂದು ಮತ ಎಣಿಕೆ ನಡೆಯಲಿದೆ ಎಂದರು.

ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ನಮೂನೆ 2 ರಲ್ಲಿ ನಾಮಪತ್ರ ಮತ್ತು ನಿಗದಿತ ನಮೂನೆಯಲ್ಲಿ ಪ್ರಮಾಣ ಪತ್ರ (ಅಫಿಡವಿಟ್) ಗಳನ್ನು ಭರ್ತಿ ಮಾಡಿ ( ಯಾವುದೇ ಕಾಲಂಗಳನ್ನುಖಾಲಿ ಬಿಡುವಂತಿಲ್ಲ) ಸಲ್ಲಿಸುವುದು. ಪ್ರಮಾಣ ಪತ್ರವನ್ನು ಎರಡು ಮೂಲ ಪ್ರತಿ, ಒಂದು ಜೆರಾಕ್ಸ್ ಪ್ರತಿ ನೀಡುವುದು. ನಾಮಪತ್ರವನ್ನು ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಟಿ. ನರಸೀಪುರ, ಪಿರಿಯಾ ಪಟ್ಟಣ ಮತ್ತು ಎಚ್.ಡಿ. ಕೋಟೆ ಪುರಸಭೆಗೆ ಸಂಬಂಧಿಸಿದಂತೆ ಆ.17ರವರೆಗೆ ಹಾಗೂ ಮೈಸೂರು ಮಹಾನಗರ ಪಾಲಿಕೆ ಸಂಬಂಧಿಸಿದಂತೆ ಆ.13 ರಿಂದ ಆ.20 ರವರೆಗೆ ಬೆಳಗ್ಗೆ 11ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಅಭ್ಯರ್ಥಿ, ಸೂಚಕರು ಸಲ್ಲಿಸಬಹುದಾಗಿದೆ ಎಂದರು.

ಚುನಾವಣೆ ಸ್ಪರ್ಧಿಸುವ ಅಭ್ಯರ್ಥಿಯ ವಯಸ್ಸು 21 ವರ್ಷಗಳಿಗೆ ಕಡಿಮೆ ಇರಬಾರದು. ಅಭ್ಯರ್ಥಿಯು ಸ್ಪರ್ಧಿಸಲು ಇಚ್ಛಿಸುವ ನಗರ ಸ್ಥಳೀಯ ಮತದಾರರಾಗಿರಬೇಕು. ಸೂಚಕರು ಆಯಾ ವಾರ್ಡಿನ ಮತದಾರರಾಗಿರತಕ್ಕದ್ದು. ಮಾನ್ಯತೆ ಪಡೆದ ರಾಜಕೀಯ ಪಕ್ಷಗಳ ಅಭ್ಯರ್ಥಿ ಗಳಿಗೆ 1 ಒಬ್ಬರು ಸೂಚಕರು, ನೋಂದಾಯಿತ/ಪಕ್ಷೇತರ ಅಭ್ಯರ್ಥಿಗಳಿಗೆ ಪಾಲಿಕೆ 6, ಪುರಸಭೆಗೆ 4 ಸೂಚಕರು ಸಹಿ ಮಾಡಬೇಕು ಎಂದು ಅವರು ತಿಳಿಸಿದರು. ಮೈಸೂರು ಮಹಾನಗರ ಪಾಲಿಕೆಗೆ ಸ್ಪರ್ಧಿಸುವವರ ಸಾಮಾನ್ಯ ಅಭ್ಯರ್ಥಿ 5000, ಎಸ್ಸಿ, ಎಸ್ಟಿ, ಹಿಂದುಳಿದ ವರ್ಗ, ಮಹಿಳೆಯರು 2500 ಠೇವಣಿ ಇರಿಸಬೇಕು.

ಪುರಸಭೆಗೆ ಸ್ಪರ್ಧಿಸುವ ಸಾಮಾನ್ಯ ಅಭ್ಯರ್ಥಿ 1000, ಎಸ್ಸಿ, ಎಸ್ಟಿ, ಹಿಂದುಳಿದ ವರ್ಗ, ಮಹಿಳೆಯರು 500 ಠೇವಣಿ ಕಟ್ಟಬೇಕು. ಎಸ್ಸಿ, ಎಸ್ಟಿ, ಹಿಂದುಳಿದ ವರ್ಗ ಎ, ಬಿಗೆ ಸೇರಿದ ಅಭ್ಯರ್ಥಿಗಳು ಸಂಬಂಧಪಟ್ಟ ತಾಲೂಕು ತಹಸೀಲ್ದಾರ್ ಅವರಿಂದ ಪಡೆದ ಜಾತಿ ದೃಢೀಕರಣ ಪತ್ರವನ್ನು ಹಾಜರುಪಡಿಸಬೇಕು. ಮಾನ್ಯತೆ ಪಡೆದ ರಾಜಕೀಯ ಪಕ್ಷದಿಂದ ಸ್ಪರ್ಧಿಸುವ ಅಭ್ಯರ್ಥಿಗಳು ನಮೂನೆ ಎ ಮತ್ತು ಬಿ ಯನ್ನು ಹಾಗೂ ನೊಂದಾಯಿತ ರಾಜಕೀಯ ಪಕ್ಷದಿಂದ ಸ್ಪರ್ಧಿಸುವ ಅಭ್ಯರ್ಥಿಗಳು ನಮೂನೆ ಸಿ ಮತ್ತು ಡಿ ಯನ್ನು ಸಲ್ಲಿಸಬೇಕು ಎಂದು ಅವರು ವಿವರಿಸಿದರು.

ಮತದಾರರ ಪಟ್ಟಿ ಪರಿಷ್ಕರಣೆ:
ಮತದಾರರ ಪಟ್ಟಿ ಪರಿಷ್ಕರಣೆಯಿಂದ 1400 ಅಧಿಕ ಮತದಾರರಾಗುವ ಮತಗಟ್ಟೆಗಳಿಗೆ ಆಕ್ಸಿಲರಿ ಮತಗಟ್ಟೆಗಳನ್ನು ಸ್ಥಾಪಿಸಲು ಕ್ರಮ ವಹಿಸಲಾಗುವುದು. ಚುನಾವಣೆ ಸಂಬಂಧ ಮತದಾರರ ಪಟ್ಟಿಯನ್ನು ಸಿದ್ದಪಡಿಸಲಾಗಿದ್ದು, ಮತದಾರರ ಪಟ್ಟಿಯನ್ನು ಪಾಲಿಕೆ ಆಯುಕ್ತರು, ಟಿ. ನರಸೀಪುರ, ಪಿರಿಯಾಪಟ್ಟಣ ಮತ್ತು ಎಚ್.ಡಿ. ಕೋಟೆ ತಹಸೀಲ್ದಾರ್ ಅವರಲ್ಲಿ ಲಭ್ಯವಿರುತ್ತದೆ ಎಂದರು. 

ಮತಗಟ್ಟೆ ಅಧಿಕಾರಿಗಳ ನೇಮಕ: 
ಪ್ರತಿ ಮತಗಟ್ಟೆಗೆ ಒಬ್ಬರು ಅಧ್ಯಕ್ಷಾಧಿಕಾರಿ ಹಾಗೂ ಮೂವರು ಮತಗಟ್ಟೆ ಅಧಿಕಾರಿಗಳನ್ನು ನೇಮಕ ಮಾಡಲು ಕ್ರಮ ವಹಿಸಲಾಗಿದೆ. ಮತಗಟ್ಟೆ ಅಧಿಕಾರಿಗಳಿಗೆ 1 ಹಂತದಲ್ಲಿ ತರಬೇತಿಯನ್ನು ನೀಡಲಾಗುವುದು. ಅಭ್ಯರ್ಥಿಗಳು ಚುನಾವಣಾ ವೆಚ್ಚದ ವಿವರವನ್ನು ನಾಮಪತ್ರ ಸಲ್ಲಿಸಿದ ದಿನಾಂಕದಿಂದ ಫಲಿತಾಂಶ ಘೋಷಣೆಯಾಗುವ ದಿನಾಂಕದವರೆಗೆ ಪಾಲಿಕೆ 3 ಲಕ್ಷ, ಪುರಸಭೆ 1.50 ಲಕ್ಷ ಗರಿಷ್ಟ ಮಿತಿಗೆ ಒಳಪಟ್ಟು ಚುನಾವಣಾ ವೆಚ್ಚ ಮಾಡಬಹುದು. ಅಭ್ಯರ್ಥಿಗಳು ಪ್ರತಿದಿನ ಮಾಡುವ ವೆಚ್ಚಗಳನ್ನು ತಪಾಸಣೆ ಮಾಡಲು ಹಾಗೂ ಅಭ್ಯರ್ಥಿಗಳು ಉಪಯೋಗಿಸುವ ವಾಹನಗಳ ವಿವರ, ಪ್ರಚಾರಕ್ಕಾಗಿ ಪ್ರಕಟಿಸುವ ಕರಪತ್ರಗಳ ವಿವರ, ಪ್ರಕಟಣೆ, ಪೋಸ್ಟರ್‌ಗಳು, ಬ್ಯಾನರ್‌ಗಳು ಇತ್ಯಾದಿಗಳ ವೋಚರ್‌ಗಳ ಹಾಗೂ ಚುನಾವಣಾ ವೆಚ್ಚದ ಲೆಕ್ಕವನ್ನು ಪರಿಶೀಲಿಸಲು ನೋಡೆಲ್ ಅಧಿಕಾರಿಯನ್ನಾಗಿ ನೇಮಕ ಮಾಡಲಾಗಿದೆ ಎಂದು ಅವರು ವಿವರಿಸಿದರು.

ಸದಾಚಾರ ಸಂಹಿತೆ: 
ಸದಾಚಾರ ಸಂಹಿತೆಯು ಸೆ.3ರವರೆಗೆ ಜಾರಿಯಲ್ಲಿರುತ್ತದೆ. ನೀತಿ ಸಂಹಿತೆಯು ಚುನಾವಣೆ ಪ್ರಕಟವಾಗಿರುವ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಗೆ ಮಾತ್ರ ಅನ್ವಯವಾಗುತ್ತದೆ. ಧ್ವನಿವರ್ಧಕಗಳನ್ನು ಬಳಸುವ ಮುಂಚಿತವಾಗಿ ಸಂಬಂಧಿಸಿದ ಸ್ಥಳೀಯ ಪೊಲೀಸ್ ಅಧಿಕಾರಿಗಳಿಂದ ಪರವಾನಗಿ ಪಡೆದಿರಬೇಕು. ಪರವಾನಗಿಯಲ್ಲಿ ಧ್ವನಿವರ್ಧಕ ಬಳಸುವ ಪ್ರದೇಶ ಇತ್ಯಾದಿ ವಿವರಗಳನ್ನು ನಮೂದಿಸಬೇಕು. ಧ್ವನಿವರ್ಧಕಗಳನ್ನು ಬೆಳಗ್ಗೆ 7ರಿಂದ ರಾತ್ರಿ 10 ಗಂಟೆಯವರೆಗೆ ಮಾತ್ರ ಬಳಸಬೇಕು. ಚುನಾವಣಾ ಪ್ರಕ್ರಿಯೆ ಪ್ರಾರಂಭವಾದ ದಿನದಿಂದ ಮುಕ್ತಾಯವಾಗುವವರೆಗೆ ಯಾವುದೇ ಸರ್ಕಾರಿ, ಸಾರ್ವಜನಿಕ ಮತ್ತು ಖಾಸಗಿ ಸ್ವತ್ತುಗಳಲ್ಲಿ ಬ್ಯಾನರ್, ಬಂಟಿಂಗ್ಸ್, ಪೋಸ್ಟರ್ಸ್‌, ಹೋರ್ಡಿಂಗ್ಸ್,ಹಾಗೂ ಕಟೌಟ್‌ಗಳ ಹಾಕುವುದನ್ನು ನಿಷೇಧಿಸಿದೆ.

ವಿದ್ಯುನ್ಮಾನ ಮತಯಂತ್ರಗಳು: 
ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ವಿದ್ಯುನ್ಮಾನ ಮತಯಂತ್ರ ಗಳನ್ನು ಬಳಸಲಾಗುತ್ತಿದ್ದು, ಚುನಾವಣೆಗೆ ಅಗತ್ಯವಿರುವಷ್ಟು ವಿದ್ಯುನ್ಮಾನ ಮತಯಂತ್ರಗಳನ್ನು ರಾಜ್ಯ ಚುನಾವಣಾ ಆಯೋಗದಿಂದ ಸರಬರಾಜು ಮಾಡಲಾಗಿದೆ ಎಂದು ತಿಳಿಸಿದರು. ಪಾಲಿಕೆ ಆಯುಕ್ತ ಕೆ.ಎಚ್. ಜಗದೀಶ್, ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕ ಪಿ. ರಾಜು ಇದ್ದರು.

ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಸಂಬಂಧ ಯಾವುದೇ ಮಾಹಿತಿಗಾಗಿ ಜಿಲ್ಲಾಧಿಕಾರಿ ಕಚೇರಿ ದೂ. 0821-2428382, ಮೈಸೂರು ಮಹಾನಗರ ಪಾಲಿಕೆ
ದೂ. 0821-2418801, ಟಿ. ನರಸೀಪುರ ತಾಲೂಕು ದೂ.08227-260210, ಪಿರಿಯಾಪಟ್ಟಣ ತಾಲೂಕು ದೂ. 08223-273175, ಎಚ್.ಡಿ. ಕೋಟೆ ತಾಲೂಕು
ದೂ.08228 -255325 ಸಂಪರ್ಕಿಸಬಹುದು.
 

Follow Us:
Download App:
  • android
  • ios