Asianet Suvarna News Asianet Suvarna News

ಮೈಸೂರು : ಕಾಡಿಗೆ ತೆರಳಿದವು ಗಜಪಡೆ

ದಸರಾ ಕಾರ್ಯಕ್ರಮಕ್ಕೆಂದು ಮೈಸೂರಿಗೆ ಆಗಮಿಸಿದ್ದ ಗಜಪಡೆ ಮರಳಿ ಕಾಡಿಗೆ ತೆರಳಿವೆ

Mysuru Elephant send To Forest snr
Author
Bengaluru, First Published Oct 29, 2020, 6:58 AM IST

ವರದಿ : ಮಹೇಂದ್ರ ದೇವನೂರು

 ಮೈಸೂರು (ಅ.29):  ಕೋವಿಡ್‌ ಆತಂಕದ ನಡುವೆ ಸಾಂಪ್ರದಾಯಿಕ ಮತ್ತು ಸರಳವಾಗಿ ನೆರವೇರಿದ ದಸರಾ ಮಹೋತ್ಸವದ ಸಂಭ್ರಮಕ್ಕೆ ಕಾರಣವಾದ ಅಭಿಮನ್ಯು ನೇತೃತ್ವದ ಗಜಪಡೆ ಬುಧವಾರ ಕಾಡಿಗೆ ಮರಳಿದವು.

ಮೈಸೂರಿಗೂ, ಆನೆಗಳಿಗೂ ಅವಿನಾಭಾವ ಸಂಬಂಧ. ಅದೂ ದಸರೆ ಕಾರಣಕ್ಕೆ. ಚಾಮುಂಡೇಶ್ವರಿ ದೇವಿಯನ್ನು ನಾಡಹಬ್ಬ ದಸರಾ ಮಹೋತ್ಸವದಲ್ಲಿ ಆನೆಯ ಬದಲಾಗಿ, ಬೇರೆ ಯಾವುದೇ ವಾಹನ ಅಥವಾ ಪ್ರಾಣಿಯ ಮೇಲೆ ಇರಿಸಿ ಮೆರವಣಿಗೆ ಮಾಡಿದ್ದರೂ ಇಷ್ಟೊಂದು ಪ್ರಾಮುಖ್ಯತೆ ದೊರೆಯುತ್ತಿರಲಿಲ್ಲ. ಆನೆಯ ಗಾಂಭೀರ್ಯದ ನಡಿಗೆಯನ್ನು ಕಣ್ತುಂಬಿಕೊಳ್ಳಲೆಂದೆ ಲಕ್ಷೋಪಲಕ್ಷ ಮಂದಿ ಇಲ್ಲಿಗೆ ಬರುತ್ತಾರೆ, ಜಂಬೂಸವಾರಿ ವೀಕ್ಷಿಸುತ್ತಾರೆ. ಅಂತಹ ಸೌಭಾಗ್ಯ ಈ ಬಾರಿ ಲಭ್ಯವಾಗದಿದ್ದರೂ, ಸಂಪ್ರದಾಯಕ್ಕೆ ಚ್ಯುತಿ ಬಾರದಂತೆ ಸರಳವಾಗಿ ನಡೆದ ದಸರಾ ಮೆರವಣಿಗೆಗೆ ಕಳೆ ತಂದುಕೊಟ್ಟದ್ದು, ಅಭಿಮನ್ಯು ಪಡೆ.

ಅ. 2 ರಂದು ಮೈಸೂರಿಗೆ ಬಂದ ಆನೆಗಳ ತಂಡ 27 ದಿನಗಳಿಂದ ಇಲ್ಲಿಯೇ ವಾಸ್ತವ್ಯ ಹೂಡಿದ್ದವು. ಸರಳ ಮತ್ತು ಸಾಂಪ್ರದಾಯಿಕವಾಗಿ ದಸರಾ ಮಹೋತ್ಸವ ನೆರವೇರಿಸಬೇಕು ಎಂಬ ಸರ್ಕಾರದ ತೀರ್ಮಾನದಂತೆ ಆನೆಗಳಿಗೆ ಅರಮನೆ ಆವರಣದಲ್ಲಿಯೇ ತಾಲೀಮು ನಡೆಸಲಾಯಿತು. ಸಾಮಾನ್ಯವಾಗಿ ದಸರಾ ಮಹೋತ್ಸವಕ್ಕೆ ಆಗಮಿಸುವ ಆನೆಗಳನ್ನು ಅಶೋಕಪುರಂನ ಅರಣ್ಯಭವನದಿಂದ ಅರಮನೆವರೆಗೆ ನಡೆಸಿ ಕರೆತಂದು, ಅರಮನೆಯ ಜಯಮಾರ್ತಾಂಡ ದ್ವಾರದಲ್ಲಿ ಅದ್ಧೂರಿ ಸ್ವಾಗತ ನೀಡಲಾಗುತ್ತಿತ್ತು.

ಆದರೆ ಈ ಬಾರಿ ಕೋವಿಡ್‌ ಕಾರಣದಿಂದ ಅರಮನೆ ಆವರಣದಲ್ಲಿ ಆನೆಗಳನ್ನು ಸರಳವಾಗಿ ಬರ ಮಾಡಿಕೊಳ್ಳಲಾಯಿತು. 27 ದಿನಗಳ ಕಾಲ ಅರಮನೆಯಲ್ಲಿಯೇ ಬೀಡು ಬಿಟ್ಟಿದ್ದ ಆನೆಗಳನ್ನು ಹೊರಗೆ ಕರೆತರಲಿಲ್ಲ. ಈವರೆಗೆ ಪ್ರತಿ ದಸರೆಯಲ್ಲಿಯೂ ಅರಮನೆಯಿಂದ ಬನ್ನಿಮಂಟಪದವರೆಗೆ ಆನೆಗಳನ್ನು ಕರೆದೊಯ್ದು ತಾಲೀಮು ನೀಡಲಾಗುತ್ತಿತ್ತು. ಆನೆಗಳು ನಗರದ ವಾತಾವರಣಕ್ಕೆ ಹೊಂದಿಕೊಂಡ ತರುವಾಯ ಮರದ ಅಂಬಾರಿಯನ್ನು ಪ್ರತಿ ಬಾರಿಯೂ ಒಂದೊಂದು ಆನೆಗೆ ಕಟ್ಟಿತರಬೇತಿ ನೀಡಲಾಗುತ್ತಿತ್ತು.

ಆದರೆ ಈ ಬಾರಿ ತಾಲೀಮು ಅರಮನೆ ಆವರಣಕ್ಕೆ ಸೀಮಿತಗೊಂಡ ಪರಿಣಾಮ ಆನೆಗಳು ಅರಮನೆಯಿಂದ ಹೊರ ಬರಲೇ ಇಲ್ಲ. ಸಾರ್ವಜನಿಕರಿಂದ ಆನೆಗಳಿಗೆ ಸೋಂಕು ಹರಡಬಹುದು ಎಂಬ ಕಾರಣಕ್ಕೆ ಆನೆಗಳ ಬಳಿಗೆ ಯಾರನ್ನೂ ಬಿಟ್ಟಿರಲಿಲ್ಲ. ಜೊತೆಗೆ ಆನೆಯ ಮಾವುತರು ಮತ್ತು ಕವಾಡಿಗಳಿಗೂ ಕೋವಿಡ್‌ ಪರೀಕ್ಷೆ ನಡೆಸಲಾಗಿತ್ತು. ಇಷ್ಟೆಲ್ಲಾ ಮುಂಜಾಗ್ರತ ಕ್ರಮದ ಬಳಿಕ ನಡೆದ ಸಾಂಪ್ರದಾಯಕ ದಸರೆಯು ಯಶಸ್ವಿಯಾಗಿ, ಯಾವುದೇ ಅಹಿತಕರ ಘಟನೆಗೆ ಅವಕಾಶ ನೀಡದೆ ನೆರವೇರಿತು.

ಜಿಲ್ಲೆಯಲ್ಲಿ ಒಂದು ತಿಂಗಳ ಹಿಂದೆಯಷ್ಟೇ ಕೊರೋನಾ ಸೋಂಕಿತರ ಸಂಖ್ಯೆ ಪ್ರತಿದಿನ ಸಾವಿರ ಸಾವಿರ ಮಂದಿಗೆ ಬರುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಸೋಂಕಿತರ ಸಂಖ್ಯೆಯಲ್ಲಿ ಇಳಿಮುಖವಾಗಿದೆ. ಅಲ್ಲದೆ ಸೋಂಕಿತರು ಮೃತಪಡುತ್ತಿರುವ ಪ್ರಮಾಣದಲ್ಲಿಯೂ ಗಣನೀಯವಾಗಿ ಇಳಿಕೆ ಕಂಡಿದೆ. ಆದರೆ ಹತ್ತಿರ ಹತ್ತಿರ ಒಂದು ಸಾವಿರ ಮಂದಿ ಕೋವಿಡ್‌ ಕಾರಣದಿಂದ ಮೃತಪಟ್ಟಸಂಕಷ್ಟದ ನಡುವೆಯು ಅಭಿಮನ್ಯು ನೇತೃತ್ವದ ಗಜಪಡೆ ಸಂಭ್ರಮವನ್ನು ಹಂಚಿದೆ. ವಿಕ್ರಮ, ಗೋಪಿ, ವಿಜಯ ಮತ್ತು ಕಾವೇರಿ ಆನೆಗಳು ಅಭಿಮನ್ಯುಗೆ ಸಾಥ್‌ ನೀಡಿದವು.

ಸುಮಾರು 300 ಮಂದಿಗೆ ಮಾತ್ರ ಅರಮನೆ ಆವರಣದಲ್ಲಿ ಅವಕಾಶ ಕಲ್ಪಿಸಬೇಕು ಎಂಬ ತಜ್ಞರ ಸಮಿತಿಯ ಸೂಚನೆಯಂತೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಿದ್ದರ ಪರಿಣಾಮ ಯಾರಿಗೂ ಅವಕಾಶ ನೀಡಿರಲಿಲ್ಲ.

ಸಂಪ್ರದಾಯದಂತೆ ಪೂಜೆ :  ಈ ಎಲ್ಲಾ ಆನೆಗಳಿಗೆ ಸಂಪ್ರದಾಯದಂತೆ ಅರಮನೆ ಆವರಣದಲ್ಲಿ ಪೂಜೆ ಸಲ್ಲಿಸಿ ಬೀಳ್ಕೊಡಲಾಯಿತು. ಈ ವೇಳೆ ಅರಮನೆ ಸಿಬ್ಬಂದಿ, ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಜಿಲ್ಲಾಡಳಿತದ ಪ್ರತಿನಿಧಿಗಳು ಇದ್ದರು.

Follow Us:
Download App:
  • android
  • ios