ಬೆಂಗಳೂರು (ಅ.08):  ಮೈಸೂರು ಜಿಲ್ಲಾಧಿಕಾರಿ ಹುದ್ದೆಯಿಂದ ತಮ್ಮನ್ನು ಅವಧಿ ಪೂರ್ವ ವರ್ಗಾವಣೆ ಮಾಡಿರುವ ಸರ್ಕಾರದ ಕ್ರಮ ಪ್ರಶ್ನಿಸಿ ಬಿ. ಶರತ್‌ ಸಲ್ಲಿಸಿರು​ವ ಅರ್ಜಿ ಕುರಿತು ವಾದ ಮಂಡಿಸಲು ಸರ್ಕಾರ ಕಾಲಾವಕಾಶ ಕೋರಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಆಡಳಿತಾತ್ಮಕ ನ್ಯಾಯಮಂಡಳಿ (ಸಿಎಟಿ) ಅ.14ಕ್ಕೆ ವಿಚಾ​ರಣೆ ಮುಂದೂ​ಡಿ​ದೆ. ಬುಧವಾರ ನಡೆದ ವಿಚಾರಣೆ ವೇಳೆ ಹಾಜರಾಗಿದ್ದ ಸರ್ಕಾರದ ಪರ ವಕೀಲರು, ಅರ್ಜಿಗೆ ಸಂಬಂಧ ರಾಜ್ಯ ಅಡ್ವೋಕೇಟ್‌ ಜನರಲ್‌ ವಾದ ಮಂಡಿಸಲಿದ್ದಾರೆ. ಹೀಗಾಗಿ ಮತ್ತಷ್ಟುಕಾಲಾವಕಾಶ ನೀಡಬೇಕು ಎಂಬ ಮನವಿ ಪುರಸ್ಕರಿಸಿದ ನ್ಯಾಯಮಂಡಳಿ ವಿಚಾರಣೆಯನ್ನು ಮುಂದೂಡಿದೆ.

‘ಕಳೆದ ಆಗಸ್ಟ್‌ 28ರಂದು ಮೈಸೂರು ಜಿಲ್ಲಾ​ಧಿಕಾರಿ ಹುದ್ದೆಗೆ ನಮ್ಮನ್ನು ನಿಯೋಜಿಸಿ ಸರ್ಕಾರ ಆದೇಶ ಹೊರಡಿಸಿತ್ತು. ನಂತರ ಸೂಕ್ತ ಕಾರಣ ನೀಡದೆ ಸೆ.28ಕ್ಕೆ ವರ್ಗಾವಣೆ ಮಾಡಿದೆ. ಆ ಜಾಗಕ್ಕೆ ರೋಹಿಣಿ ಸಿಂಧೂರಿ ಅವರನ್ನು ನಿಯೋಜಿಸಿದೆ. ಸೂಕ್ತ ಕಾರಣ ನೀಡದೆ, ಏಕಾಏಕಿ ನಮ್ಮನ್ನು ವರ್ಗಾವಣೆ ಮಾಡಿರುವ ಸರ್ಕಾರದ ಆದೇಶ ಕಾನೂನು ಬಾಹಿರವಾಗಿದೆ. ಆದ್ದರಿಂದ ವಗಾವಣೆ ಆದೇಶ ರದ್ದುಗೊಳಿಸಬೇಕು’ ಎಂದು ಕೋರಿ ಬಿ.ಶರತ್‌ ಸಿಎಟಿಯಲ್ಲಿ ಅರ್ಜಿ ಸಲ್ಲಿಸಿದ್ದರು.

ಮೈಸೂರಲ್ಲಿ ಕೊರೋನಾ ತಡೆಗೆ ರೋಹಿಣಿ ಸಿಂಧೂರಿ ಪ್ಲಾನ್ ...

ಈ ಹಿಂದೆ ವಿಚಾರಣೆ ನಡೆಸಿದ್ದ ಸಿಎಟಿ, ಕೇವಲ 30 ದಿನಕ್ಕೆ ಅರ್ಜಿದಾರರನ್ನು ಮೈಸೂರು ಜಿಲ್ಲಾ​ಧಿಕಾರಿ ಹುದ್ದೆಯಿಂದ ಏಕೆ ವರ್ಗಾಯಿಸಲಾಗಿದೆ ಎಂದು ಸರ್ಕಾರವನ್ನು ಪ್ರಶ್ನಿಸಿತ್ತು. ನಂತರ ಅರ್ಜಿ ಸಂಬಂಧ ಉತ್ತರಿಸಲು ಸೂಚಿಸಿ ಸರ್ಕಾರಕ್ಕೆ ನೋಟಿಸ್‌ ಜಾರಿ ಮಾಡಿತ್ತು.