ವರದಿ :  ಧರ್ಮಾಪುರ ನಾರಾಯಣ್‌

ಹುಣಸೂರು (ಫೆ.21):  ಸುಧಾರಣೆಯ ಪರ್ವದಡೆಗೆ ಕಂದಾಯ ಇಲಾಖೆಯ ಕ್ರಾಂತಿಕಾರಿ ಹೆಜ್ಜೆಗಳು ಘೋಷವಾಕ್ಯದಡಿಯಲ್ಲಿ ಜಿಲ್ಲಾಧಿಕಾರಿ ನಡೆ ಹಳ್ಳಿಯಡೆ ಕಾರ್ಯಕ್ರಮದಲ್ಲಿ ಶಿಕ್ಷಣ ಆರೋಗ್ಯ, ಕಂದಾಯ ಇಲಾಖೆಯ ಹಾಗೂ ಮೂಲಭೂತ ಸಮಸ್ಯೆಗಳ ಪರಿಹಾರದ ಜೊತೆಗೆ ನೊಂದವರ ಬಾಳಿಗೆ ಆಶಾಕಿರಣವಾದ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಭೇಟಿಯಿಂದ ಸಾರ್ವಜನಿಕರ ಮನದಲ್ಲಿ ಮಂದಹಾಸ ಮೂಡಿದೆ.

ತಾಲೂಕಿನ ಧರ್ಮಾಪುರ ಗ್ರಾಪಂ ವ್ಯಾಪ್ತಿಗೆ ಬರುವ ತರಿಕಲ್‌, ಶಿವಾಜಿನಗರ, ಸಂತೆಕೆರೆಕೋಡಿ, ರಂಗಯ್ಯನಕೊಪ್ಪಲು, ಗ್ರಾಮಗಳ ಜೊತೆಗೆ ತಾಲೂಕಿನ ವಿವಿಧ ಪ್ರಕರಣಗಳು ಮತ್ತು ತರೀಕಲ್‌ ಗ್ರಾಮದಲ್ಲಿ ಎಲ್ಲವನ್ನು ವೀಕ್ಷಣೆ ಮಾಡಿ ಗ್ರಾಮದ ಬಹುತೇಕ ಸಮಸ್ಯೆಗಳ ಇತ್ಯಾರ್ಥ ಮಾಡುವಲ್ಲಿ ಯಶಸ್ವಿಯಾದರು. ಬೆಳಗ್ಗೆಯಿಂದ ಸಂಜೆಯ ತನಕ ಸಾರ್ವಜನಿಕರೊಟ್ಟಿಗೆ ಸಮಸ್ಯೆಗಳನ್ನು ಆಲಿಸಿದರು.

ಶಿಕ್ಷಕಿಯಾದ ಡಿಸಿ

ತರೀಕಲ್‌ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಅಲ್ಲಿನ ಮಕ್ಕಳಿಗೆ ಪಾಠ ಕಲಿಸಿದರು. ವಿದ್ಯಾರ್ಥಿ ಮಹೇಶ್‌ನನ್ನು ಕರೆದು ಭಾಗಾಕಾರ ಲೆಕ್ಕ ಮಾಡಿಸಿದರು. ಕೆಲ ವಿದ್ಯಾರ್ಥಿಗಳಿಗೆ ಕನ್ನಡ ಪಾಠ, ಇಂಗ್ಲೀಷ್‌ ಪಾಠ ಓದಿಸಿದರು. ನಿಮಗ್ಯಾವ ಸಬ್ಜೆಕ್ಟ್ ಇಷ್ಟಎಂದು ಕೇಳಿದರು. ಮನೆಯಲ್ಲಿ ಅಜ್ಜಿಯಿದ್ದರೆ ದಿನ ಅವರ ಬಳಿ ಕಥೆ ಕೇಳಿರಿ. ಮೊಬೈಲ್‌, ಟಿವಿ ವೀಕ್ಷಣೆಯಲ್ಲೇ ಮುಳುಗಬೇಡಿರೆಂದು ಕಿವಿಮಾತು ಹೇಳಿದರು. ಜೊತೆಗೆ ಈ ಶಾಲೆಗೆ ತಮ್ಮ ವೈಯಕ್ತಿಕವಾಗಿ 25 ಪುಸ್ತಕಗಳನ್ನು ಗ್ರಂಥಾಲಯಕ್ಕೆ ನೀಡಿದರು.

ಮೈಸೂರು ಡೀಸಿ ರೋಹಿಣಿ ವಿರುದ್ಧ ಕೇಸ್‌ ...

ನಾನು ಡಿಸಿ ಆಗಬೇಕು ಏನು ಮಾಡಬೇಕು ಮೇಡಂ - ಮೊರಾರ್ಜಿ ವಸತಿ ಶಾಲೆಗೆ ಭೇಟಿ ನೀಡಿದ್ದ ವೇಳೆ ವಿದ್ಯಾರ್ಥಿಗಳೊಂದಿಗೆ ಒಂದು ಗಂಟೆ ಕಾಲ ವಿವಿಧ ವಿಷಯಗಳ ಕುರಿತು ಚರ್ಚಿಸಿದರು. ವಿದ್ಯಾರ್ಥಿನಿ ನಿಖಿತಾ ನಿಮ್ಮಂತೆ ನಾವು ಡಿಸಿ ಆಗಬೇಕು, ಅಂದರೆ ಹೇಗೆ ಓದಬೇಕು ಮೇಡಂ ಎಂದು ಪ್ರಶ್ನಿಸಿದಳು. ಎಲ್ಲರೂ ಸರ್ಕಾರಿ ಅಧಿಕಾರಿಗಳಾದರೆ ರೈತರಾಗುವುದು ಯಾರು ಮೇಡಂ ಎನ್ನುವ ವಿದ್ಯಾರ್ಥಿ ಧನುಷ್‌ನ ಪ್ರಶ್ನೆಗೆ ಜಿಲ್ಲಾಧಿಕಾರಿ ಆಶ್ಚರ್ಯದೊಂದಿಗೆ ಸಂತಸ ವ್ಯಕ್ತಪಡಿಸಿದರು.

ಶಿಕ್ಷಣದ ಜೊತೆಗೆ ಜ್ಙಾನ ಮತ್ತು ಅನುಭವ ಮುಖ್ಯ - ನಿರ್ಧಿಷ್ಟಗುರಿಯೊಂದಿಗೆ ಪ್ರತಿದಿನ ಕನಿಷ್ಟ4 ಗಂಟೆಗಳ ಸತತ ಅಭ್ಯಾಸ ಮಾಡಿದಲ್ಲಿ ಮಾತ್ರ ಸಾಧನೆ ಸಾಧ್ಯ. ರಾಜಕಾರಣ ಕೇವಲ ಶಿಕ್ಷಣ ಮಾತ್ರವಲ್ಲ ಅನುಭವವೂ ಮುಖ್ಯ. ವಿದ್ಯೆ ಮತ್ತು ಬುದ್ಧಿಗೆ ಸಂಬಂಧ ಕಲ್ಪಿಸಬೇಡಿ. ನೀವು ಅಭ್ಯಾಸ ಮಾಡುವ ವಿಷಯದ ಬಗ್ಗೆ ಹೆಚ್ಚಿನ ಅರಿವು ಮೂಡಿಸಿಕೊಳ್ಳಿರಿ.

ತಾಲೂಕು ಆಡಳಿತಕ್ಕೆ ಶ್ಲಾಘನೆ - ರಾಜ್ಯ ಸರ್ಕಾರದ ಕಂದಾಯ ಇಲಾಖೆಯ ಕ್ರಾಂತಿಕಾರಿ ಯೋಜನೆ ಜಿಲ್ಲಾಧಿಕಾರಿ ನಡೆ ಹಳ್ಳಿಯಡೆ ಕಾರ್ಯಕ್ರಮ ಜನ ಸಾಮಾನ್ಯರಿಗೆ ತಲುಪುವ ಮತ್ತು ಸಮಸ್ಯೆಗಳ ಇತ್ಯಾರ್ಥ ಮಾಡುವಲ್ಲಿ ಯಶಸ್ವಿಯಾಗಿ ನಡೆಸಿದ ತಾಲೂಕು ಆಡಳಿತ ಹಾಗೂ ಎಸಿ ವೀಣಾ ಮತ್ತು ತಹಸೀಲ್ದಾರ್‌ ಬಸವರಾಜ್‌ ಅವರ ಬಗ್ಗೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮೆಚ್ಚುಗೆ ವ್ಯಕ್ತಪಡಿಸಿದರು.

ಶಾಸಕರ ಪ್ರಸ್ತಾವಾನೆಗೆ ಕ್ರಮವಹಿಸಿ- ತಾಲೂಕಿನ ಸಮಸ್ಯೆಗಳನ್ನು ಕುರಿತು ಶಾಸಕ ಎಚ್‌.ಪಿ. ಮಂಜುನಾಥ್‌ ನೀಡಿದ ಪ್ರಸ್ತಾವಾನೆಗೆ ತಾಲೂಕು ಆಡಳಿತಕ್ಕೆ ಶೀಘ್ರವೇ ಕ್ರಮವಹಿಸಿ ಬಗೆಹರಿಸಬೇಕೆಂದು ಸೂಚಿಸಿದರು.