ಮೈಸೂರು ಜಿಲ್ಲಾಧಿಕಾರಿ ಬಗಾದಿ ಗೌತಮ್ ಪ್ರಕಟಣೆ, ಸರಳ ಸಪ್ತಪದಿ ತುಳಿಯಲು ಬನ್ನಿ
* ಸರಳ ಸಪ್ತಪದಿ ಸಾಮೂಹಿಕ ವಿವಾಹಕ್ಕೆ ಅರ್ಜಿ ಆಹ್ವಾನ
* ಮೈಸೂರು ಜಿಲ್ಲಾಧಿಕಾರಿ ಬಗಾದಿ ಗೌತಮ್ ಪ್ರಕಟಣೆ
* ನಂಜನಗೂಡಿನ ಶ್ರಿಕಂಠೇಶ್ವರ ಹಾಗೂ ಚಾಮುಂಡೇಶ್ವರಿ ದೇವಾಲಯದಲ್ಲಿ ನಡೆಯಲಿರುವ ಸಾಮೂಹಿಕ ವಿವಾಹ
ವರದಿ : ಮಧು.ಎಂ.ಚಿನಕುರಳಿ
ಮೈಸೂರು, (ಏ.25): ಸರಳ ಸಪ್ತಪದಿ ಸಾಮೂಹಿಕ ವಿವಾಹ ಯೋಜನೆಯಡಿ ಧಾರ್ಮಿಕ ದತ್ತಿ ಇಲಾಖೆ ನಡೆಸುವ ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಸರಳ ಸಪ್ತಪದಿ ಸಾಮೂಹಿಕ ವಿವಾಹ ಯೋಜನೆಯಡಿ 2022 ನೇ ಸಾಲಿನಲ್ಲಿ ಮೈಸೂರು ಜಿಲ್ಲಾ ವ್ಯಾಪ್ತಿಗೆ ಬರುವ ನಂಜನಗೂಡಿನ ಶ್ರಿ ಕಂಠೇಶ್ವರ ದೇವಸ್ಥಾನ ಹಾಗೂ ಚಾಮುಂಡೇಶ್ವರಿ ದೇವಾಲಯದಲ್ಲಿ ಸಾಮೂಹಿಕ ವಿವಾಹವನ್ನು ಹಮ್ಮಿಕೊಳ್ಳಲಾಗಿದೆ. ಇದಕ್ಕಾಗಿ ಅರ್ಜಿಯನ್ನು ಆಹ್ವಾನಿಸಿದ್ದು, ಈ ಸಂಬಂಧ ಮೈಸೂರು ಜಿಲ್ಲಾಧಿಕಾರಿ ಬಗಾದಿ ಗೌತಮ್ ಪ್ರಕಟಣೆ ಹೊರಡಿಸಿದ್ದಾರೆ.
ಶ್ರೀ ಕಂಠೇಶ್ವರ ದೇವಸ್ಥಾನದಲ್ಲಿ 2022ರ ಮೇ 11 ರಂದು ಜರುಗುವ ವಿವಾಹಕ್ಕೆ ಅರ್ಜಿಯನ್ನು 2022ರ ಮೇ 6 ರೊಳಗಾಗಿ ಸಲ್ಲಸಬಹುದು. ಅದೇ ರೀತಿ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿರುವ ಚಾಮುಂಡೇಶ್ವರಿ ದೇವಾಲಯದಲ್ಲಿ 2022ರ ಮೇ 25ರಂದು ಜರುಗುವ ವಿವಾಹಕ್ಕೆ ಮೇ 18ರೊಳಗಾಗಿ ಅರ್ಜಿ ಸಲ್ಲಿಸಲು ತಿಳಿಸಲಾಗಿದೆ.
ಸರ್ಕಾರವೇ ನಿಮ್ಮ ಮದುವೆ ಮಾಡುತ್ತೆ ! ಅರ್ಜಿ ಸಲ್ಲಿಸುವುದು ಹೇಗೆ ?
ಅರ್ಜಿ ಸಲ್ಲಿಸುವವರು ವಧುವರರ ಫೋಟೋ, ಜನನ ಪ್ರಮಾಣ ಪತ್ರ, ಎಸ್‌ಎಸ್‌ಎಲ್‌ಸಿ ಅಂಕ ಪಟ್ಟಿ, ಆಧಾರ್ ಕಾರ್ಡ್, ಪಂಚಾಯತ್, ನಗರಸಭೆ, ಪುರಸಭೆ, ಮಹಾನಗರ ಪಾಲಿಕೆ ಅವರಿಂದ ಅವಿವಹಿತ ದೃಡೀಕರಣ ಪತ, ವಧುವರರ ಕುಟುಂಬದ ಪಡಿತರ ಚೀಟಿ ಹಾಗೂ ವಧುವರರ ಬ್ಯಾಂಕ್ ಪುಸ್ತಕದ ಪ್ರತಿಯನ್ನು ಸಲ್ಲಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಸರಳ ವಿವಾಹದ ಆಶಯವನ್ನು ಎತ್ತಿ ಹಿಡಿಯುವ ಹಾಗೂ ಈ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಧಾರ್ಮಿಕ ದತ್ತಿ ಇಲಾಖೆ ಆರಂಭಿಸಿದ್ದ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾದ 'ಸಪ್ತಪದಿ' ಉಚಿತ ಸರಳ ಸಾಮೂಹಿಕ ವಿವಾಹ. ಇಲಾಖೆಯ 200ಕ್ಕೂ ಹೆಚ್ಚು 'ಎ' ದರ್ಜೆಯ ದೇವಾಲಯಗಳ ಪೈಕಿ, ರಾಜ್ಯದ ಆಯ್ದ 101 ದೇವಾಲಯಗಳಲ್ಲಿ ಉಚಿತ ಸರಳ ಸಾಮೂಹಿಕ ವಿವಾಹಗಳನ್ನು ನಡೆಸಲು ಸೂಚಿಸಿದೆ.
ಏನಿದು ಯೋಜನೆ?: ಮದುವೆಗೆ ದುಂದು ವೆಚ್ಚ ಮಾಡಿ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಒಳಗಾಗುತ್ತಿರುವುದನ್ನು ತಪ್ಪಿಸಲು ಸರಕಾರ 2019ನೇ ಸಾಲಿನಲ್ಲಿ ಸಪ್ತಪದಿ ಉಚಿತ ಸರಳ ಸಾಮೂಹಿಕ ವಿವಾಹ ಯೋಜನೆಯನ್ನು ಜಾರಿಗೊಳಿಸುವುದಾಗಿ ಪ್ರಕಟಿಸಿತು.
ಆಯ್ದ 'ಎ' ದರ್ಜೆಯ ದೇವಾಲಯಗಳಿಗೆ ಬರುವ ಆದಾಯದಲ್ಲಿ ಮದುವೆಗಳನ್ನು ನಡೆಸಲು ತೀರ್ಮಾನಿಸಲಾಯಿತು. 2020ರ ಏಪ್ರಿಲ್‌ನಲ್ಲಿ ವಿವಾಹ ನಡೆಸಲು ವಧು-ವರರಿಂದ ಅರ್ಜಿಗಳನ್ನು ಆಹ್ವಾನಿಸಿತು. ಈ ಯೋಜನೆಯಡಿ ಮದುವೆಯಾಗುವ ವಧು-ವರನಿಗೆ ಉಡುಗೆ, ವಧುವಿಗೆ ಬಂಗಾರದ ಉಡುಗೊರೆ (8 ಗ್ರಾಂ ತೂಕದ ಮಾಂಗಲ್ಯ, ಬಂಗಾರದ ಗುಂಡುಗಳು) ನೀಡುವ ಜತೆಗೆ, ಎರಡೂ ಕಡೆಯ ಬಂಧುಗಳಿಗೆ ಊಟೋಪಚಾರದ ವ್ಯವಸ್ಥೆ ಮಾಡಿ ಸರಳ ವಿವಾಹದ ಆಶಯ ಬಿತ್ತುವುದು ಸಾಮೂಹಿಕ ವಿವಾಹದ ಉದ್ದೇಶವಾಗಿತ್ತು.